ಪದ್ಯ ೩೯: ನಾರಾಯಣಾಸ್ತ್ರವು ಯಾರನ್ನು ಹುಡುಕಿಕೊಂಡು ಹೋಯಿತು?

ಭೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ (ದ್ರೋಣ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿ ಆಯುಧವನ್ನೆಸೆದು ನಿಮ್ತ ಎಲ್ಲರನ್ನೂ ಬಾಣಾಗ್ನಿ ಆವರಿಸಿ ಭಲೇ ಭಂಡರಿರಾ ಎನ್ನುತ್ತಾ ಅವರನ್ನು ಕೈ ಬಿಟ್ಟಿತು, ಆ ಧರ್ಮಜನೆಲ್ಲಿ, ಅರ್ಜುನನೆಲ್ಲಿ, ಭೀಮನೆಲ್ಲಿ, ಮಾದ್ರಿಯ ಮಕ್ಕಳೆಲ್ಲಿ ಎನ್ನುತ್ತಾ ನಾರಾಯಣಾಸ್ತ್ರವು ಅವರನ್ನು ಹುಡುಕಿಕೊಂಡು ಹೋಯಿತು.

ಅರ್ಥ:
ಭೀತ: ಭಯ; ಕೈದು: ಆಯುಧ; ಅಖಿಳ: ಎಲ್ಲಾ; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಬಾಣ: ಸರಳು; ಅಗ್ನಿ: ಬೆಂಕಿ; ಬೆರಸು: ಕಲಸು; ಪೂತು: ಭಲೇ; ಭಂಡ: ನಾಚಿಕೆ, ಲಜ್ಜೆ; ಬಿಟ್ಟು: ತೊರೆ; ಬಾಣ: ಸರಳು; ಅರಿ: ವೈರಿ; ಭಟ: ಸೈನ್ಯ; ವಿಖ್ಯಾತ: ಪ್ರಸಿದ್ಧ; ಅನಿಲಸುತ: ಭೀಮ; ಸುತ: ಪುತ್ರ; ತನುಜ: ಮಗ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಭೀತ +ಕೈದುಗಳ್+ಅಖಿಳ+ದಳ +ಸಂ
ಘಾತವನು +ಬಾಣಾಗ್ನಿ +ಬೆರಸಿತು
ಪೂತು+ ಭಂಡರಿರ್+ಎನುತ +ಬಿಟ್ಟುದು +ಬಾಣವ್+ಅರಿ+ಭಟರ
ಆತನಾವೆಡೆ +ಧರ್ಮಜನು +ವಿ
ಖ್ಯಾತನ್+ಅರ್ಜುನನ್+ಅನಿಲಸುತ +ಮಾ
ದ್ರೀತನುಜರ್+ಎಂದೆನುತ +ಹೊಕ್ಕುದು +ರಾಜ +ಮೋಹರವ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ

ಪದ್ಯ ೧೪: ಕೃಷ್ಣನು ಮತ್ತಾರನ್ನು ಅರ್ಜುನನಿಗೆ ತೋರಿಸಿದನು?

ಈತನೊಡ್ಡಿನ ಸಾರೆ ಸಂಗರ
ಕಾತು ಕೊಂಡದೆ ಕೃಪನ ದಳಸಂ
ಘಾತವೊಂದಕ್ಷೋಣಿ ಸುಭಟರ ಸಾಲ ಮಧ್ಯದಲಿ
ಆತ ಗೌತಮನವನ ಬಳಿಯಲ
ಭೀತ ಬಾಹ್ಲಿಕ ವಿಂಧ್ಯರದೆ ವಿ
ಖ್ಯಾತರೊಂದಕ್ಷೋಹಿಣಿ ಕೌರವ ಸೈನ್ಯಶರಧಿಯಲಿ (ಭೀಷ್ಮ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಸೈನ್ಯ ಯುದ್ಧಕ್ಕೆ ಸಿದ್ಧವಾಗಿದೆ, ಅಲ್ಲೇ ಪಕ್ಕದಲ್ಲಿ ಒಂದು ಅಕ್ಷೋಹಿಣಿ ವೀರರ ನಡುವೆ ನಿಂತವರು ಕೃಪಾಚಾರ್ಯರು, ಅವನ ಹತ್ತಿರದಲ್ಲಿಯೇ ಬಾಹ್ಲಿಕ, ವಿಂಧ್ಯರು ಒಂದಕ್ಷೋಹಿಣಿ ಸೈನ್ಯದೊಡನೆ ನಿಂತಿದ್ದಾರೆ.

ಅರ್ಥ:
ಒಡ್ಡು: ಸೈನ್ಯ, ಪಡೆ; ಸಾರೆ: ಹತ್ತಿರ, ಸಮೀಪ; ಸಂಗರ: ಯುದ್ಧ; ಆತು: ಹೊಂದಿಕೊಂಡು; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಸುಭಟ: ಪರಾಕ್ರಮಿ, ಸೈನಿಕ; ಸಾಲ: ಸುತ್ತು; ಮಧ್ಯ: ನಡುವೆ; ಗೌತಮ: ಕೃಪಾಚಾರ್ಯ; ಬಳಿ: ಹತ್ತಿರ; ಭೀತ: ಅಂಜಿದ; ವಿಖ್ಯಾತ: ಪ್ರಸಿದ್ಧ; ಶರಧಿ: ಸಾಗರ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ;

ಪದವಿಂಗಡಣೆ:
ಈತನ್+ಒಡ್ಡಿನ +ಸಾರೆ +ಸಂಗರಕ್
ಆತು +ಕೊಂಡದೆ +ಕೃಪನ +ದಳ+ಸಂ
ಘಾತವ್+ಒಂದಕ್ಷೋಣಿ+ ಸುಭಟರ+ ಸಾಲ +ಮಧ್ಯದಲಿ
ಆತ+ ಗೌತಮನ್+ಅವನ +ಬಳಿಯಲ್
ಅಭೀತ +ಬಾಹ್ಲಿಕ+ ವಿಂಧ್ಯರ್+ಅದೆ+ ವಿ
ಖ್ಯಾತರ್+ಒಂದಕ್ಷೋಹಿಣಿ+ ಕೌರವ+ ಸೈನ್ಯ+ಶರಧಿಯಲಿ

ಅಚ್ಚರಿ:
(೧) ಕೌರವ ಸೈನ್ಯವನ್ನು ಸಾಗರಕ್ಕೆ ಹೋಲಿಸುವ ಪರಿ – ಕೌರವ ಸೈನ್ಯಶರಧಿಯಲಿ
(೨) ಒಂದಕ್ಷೋಣಿ – ಪದದ ಬಳಕೆ, ೩,೬ ಸಾಲಿನಲ್ಲಿ

ಪದ್ಯ ೧೫: ವಿರಾಟನೇಕೆ ಬೆರಗಾದ?

ಈತನೇ ಧರ್ಮಜನು ದಿಟ ತಾ
ನೀತನೇ ಪವನಜನು ನಿಶ್ಚಯ
ವೀತನೇ ಫಲುಗುಣನು ಮಾದ್ರೀ ತನುಜರೇ ಇವರು
ಈ ತಳೋದರಿ ದ್ರುಪದ ಸುತೆಯೇ
ಕೌತುಕವಲೇ ಭುವನಜನ ವಿ
ಖ್ಯಾತರೆಲ್ಲಿಂದೆಲ್ಲಿ ಮೂಡಿದರೆಂದು ಬೆರಗಾದ (ವಿರಾಟ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ನಿಜವಾಗಿಯೂ ಇವನೇ ಧರ್ಮಜನು, ಇವನೇ ಭೀಮ, ಇವನೇ ಅರ್ಜುನ, ಇವರೇ ಮಾದ್ರೀಯ ಮಕ್ಕಳಾದ ನಕುಲ ಸಹದೇವರು, ಇವಳೇ ದ್ರುಪದ ನಂದನೆಯಾದ ದ್ರೌಪದಿ. ಲೋಕ ಪ್ರಸಿದ್ಧರಾದ ಇವರು ಎಲ್ಲಿಂದ ಬಂದು ಇಲ್ಲಿ ಮೂಡಿದರು ಎಂದು ವಿರಾಟನು ಬೆರಗಾದ.

ಅರ್ಥ:
ದಿಟ: ಸತ್ಯ; ಪವನಜ: ವಾಯುಪುತ್ರ; ನಿಶ್ಚಯ: ಖಂಡಿತ; ತನುಜ: ಮಕ್ಕಳು; ತಳೋದರಿ: ಹೆಂಡತಿ; ಸುತೆ: ಮಗಳು; ಕೌತುಕ: ಆಶ್ಚರ್ಯ; ಭುವನ: ಭೂಮಿ; ಜನ: ಮನುಷ್ಯ; ವಿಖ್ಯಾತ: ಪ್ರಸಿದ್ಧ; ಮೂಡು: ತೋರು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಈತನೇ +ಧರ್ಮಜನು +ದಿಟ +ತಾನ್
ಈತನೇ +ಪವನಜನು +ನಿಶ್ಚಯವ್
ಈತನೇ+ ಫಲುಗುಣನು+ ಮಾದ್ರೀ +ತನುಜರೇ +ಇವರು
ಈ +ತಳೋದರಿ +ದ್ರುಪದ +ಸುತೆಯೇ
ಕೌತುಕವಲೇ +ಭುವನ+ಜನ +ವಿ
ಖ್ಯಾತರ್+ಎಲ್ಲಿಂದೆಲ್ಲಿ+ ಮೂಡಿದರೆಂದು +ಬೆರಗಾದ

ಅಚ್ಚರಿ:
(೧) ಈತನೇ – ೧-೩ ಸಾಲಿನ ಮೊದಲ ಪದ
(೨) ಧರ್ಮಜ, ಪವನಜ, ತನುಜ – ಪ್ರಾಸಪದಗಳು

ಪದ್ಯ ೫೭: ದುಶ್ಯಾಸನನು ವಿಧಿಯಾಟದ ಬಗ್ಗೆ ಏನು ಹೇಳಿದನು?

ಧಾತುಗೆಡಲೇಕೀಸು ಕಾತೊಡೆ
ಬೀತುಹೋಹುದು ಬೀತಮರನೇ
ಕಾತಿಹುದಲೈ ಹತವಿಧಿಗೆ ವಿಪರೀತ ಕೃತಿ ಸಹಜ
ಆತಗಳು ನಮಗುಪಕರಿಸಿ ವಿ
ಖ್ಯಾತರಾದರು ಮರಳಿ ತಾವಿ
ನ್ನಾತಗಳನಳಲಿಸುವುಪಾಯವ ಕಂಡೊಡೇನೆಂದ (ಅರಣ್ಯ ಪರ್ವ, ೨೨ ಸಂಧಿ, ೫೭ ಪದ್ಯ)

ತಾತ್ಪರ್ಯ:
ಆ ಹಾಳು ವಿಧಿಯ ಮನಸ್ಸಿಗೆ ಬಂದರೆ ಕಾಯಿಬಿಟ್ಟ ಮರವೇ ಹಾಳಾಗಿ ಹೋಗುತ್ತದೆ. ಬರಡಾದ ಮರವೇ ಕಾಯಿ ಬಿಡುತ್ತದೆ. ವಿಧಿಯ ಈ ಸಹಜ ರೀತಿಗೆ ನೀನು ಧೈರ್ಯಗೆಡುವುದೇಕೆ? ಅವರು ನಮಗೆ ಉಪಕಾರ ಮಾಡಿ ಕೀರ್ತಿವಂತರಾದರು. ನಾವು ಅವರನ್ನು ಅಳಲಿಸುವ ಉಪಾಯವನ್ನು ಕಂಡರೆ ತಪ್ಪೇನು ಎಂದು ಹೇಳಿದನು.

ಅರ್ಥ:
ಧಾತು: ಮೂಲ ವಸ್ತು; ಕೆಡು: ಹಾಳು; ಕಾತು: ಕಾಯಿಬಿಟ್ಟು; ಈಸು: ಇಷ್ಟು; ಬೀತುದು: ಒಣಗಿದ; ಮರ: ವೃಕ್ಷ; ವಿಧಿ: ಆಜ್ಞೆ, ಆದೇಶ; ಹತ: ಕೊಲ್ಲಲ್ಪಟ್ಟವನು; ಕೃತಿ: ಕೆಲಸ; ಸಹಜ: ಸ್ವಾಭಾವಿಕವಾದುದು; ಉಪಕಾರ: ಸಹಾಯ, ನೆರವು; ವಿಖ್ಯಾತ: ಪ್ರಸಿದ್ಧ; ಮರಳಿ: ಮತ್ತೆ; ಅಳಲು: ಕಣ್ಣೀರು; ಉಪಾಯ: ಯುಕ್ತಿ; ಕಂಡು: ನೋಡು;

ಪದವಿಂಗಡಣೆ:
ಧಾತು+ಕೆಡಲ್+ಏಕೀಸು +ಕಾತೊಡೆ
ಬೀತು+ಹೋಹುದು +ಬೀತ+ಮರನೇ
ಕಾತಿಹುದಲೈ+ ಹತವಿಧಿಗೆ+ ವಿಪರೀತ+ ಕೃತಿ +ಸಹಜ
ಆತಗಳು+ ನಮಗ್+ಉಪಕರಿಸಿ +ವಿ
ಖ್ಯಾತರಾದರು +ಮರಳಿ +ತಾವಿ
ನ್ನಾತಗಳನ್+ಅಳಲಿಸುವ್+ಉಪಾಯವ +ಕಂಡೊಡೇನೆಂದ

ಅಚ್ಚರಿ:
(೧) ವಿಧಿಯ ರೀತಿ – ಹತವಿಧಿಗೆ ವಿಪರೀತ ಕೃತಿ ಸಹಜ

ಪದ್ಯ ೮: ಯುಧಿಷ್ಠಿರನನ್ನು ಯಾರು ಸಮಾಧಾನ ಪಡಿಸಿದರು?

ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ನಳನಿಗೆ ಅಂತಹ ಆಪತ್ತು ಬಂತು, ಧರ್ಮನಂದನ, ನೀನಾದರೋ ನಿನ್ನ ಪತ್ನಿ ಸಹೋದರಉ ಮತ್ತು ಮಹರ್ಷಿಗಳೊಡನೆ ಇದ್ದರೂ ಕಾತರಿಸುತ್ತಿರುವೆ, ರಾಜ, ನಿನ್ನಂತಹ ಪ್ರಖ್ಯಾತರು ಯಾರಿದ್ದಾರೆ ಎಂದು ಬೃಹದಶ್ವನು ಯುಧಿಷ್ಠಿರನನ್ನು ಸಮಾಧಾನ ಪಡಿಸಿದನು.

ಅರ್ಥ:
ಆಪತ್ತು: ತೊಂದರೆ; ಮಹೀಪತಿ: ರಾಜ; ತಳೋದರಿ: ಹೆಂಡತಿ; ಸಹಿತ: ಜೊತೆ; ಭ್ರಾತೃ: ಸಹೋದರ; ಮಹಾಮುನಿ: ಶ್ರೇಷ್ಠನಾದ ಋಷಿ; ಮುಖ್ಯ: ಪ್ರಮುಖ; ಕಾತರ: ಕಳವಳ, ಉತ್ಸುಕತೆ; ವಿಖ್ಯಾತ: ಪ್ರಸಿದ್ಧ; ಪುಣ್ಯ: ಸದಾಚಾರ; ತಪೋನಿಧಿ: ಋಷಿ; ಸಂತವಿಡು: ಸಂತೋಷಿಸು; ನಂದನ: ಮಗ;

ಪದವಿಂಗಡಣೆ:
ಆತನ್+ಆಪತ್ತದು +ಮಹೀಪತಿ
ನೀ +ತಳೋದರಿ +ಸಹಿತ+ ನಿನ್ನೀ
ಭ್ರಾತೃಜನ +ಸಹಿತ್+ಈ +ಮಹಾಮುನಿ +ಮುಖ್ಯಜನ +ಸಹಿತ
ಕಾತರಿಸುತಿಹೆ +ನಿನ್ನವೊಲು +ವಿ
ಖ್ಯಾತರಾರೈ+ ಪುಣ್ಯತರರ್+ಎಂದ್
ಆ+ ತಪೋನಿಧಿ+ ಸಂತವಿಟ್ಟನು +ಧರ್ಮನಂದನನ

ಅಚ್ಚರಿ:
(೧) ಮಹಾಮುನಿ, ತಪೋನಿಧಿ – ಸಮನಾರ್ಥಕ ಪದ

ಪದ್ಯ ೨೬: ಶಂಕರನು ಪಾರ್ವತಿಗೆ ಅರ್ಜುನನ ಬಗ್ಗೆ ಏನು ಹೇಳಿದನು?

ಈತ ನರನೆಂಬುವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ನೀತಗಳು ಹರಿಯಂಶ ಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಪ್ರಿಯೆ ಪಾರ್ವತಿ ಕೇಳು, ಇವನು ನರನೆಂಬ ಋಷಿ, ಇವನು ನಾರಾಯಣ ಋಷಿಯ ಸ್ನೇಹಿತ, ಇವರು ವಿಷ್ಣುವಿನ ಅಂಶ ಸಂಭೂತರು, ಇವನು ನಮ್ಮ ಭಕ್ತನು, ಇವನು ತಪಸ್ಸು ಮಾಡಿ ಪಾಶ್ಪತಾಸ್ತ್ರವನ್ನು ಬೇಡಿಕೊಂಡು ರಾಗ ದ್ವೇಷಗಳನ್ನು ಕಳೆದುಕೊಂಡವನು ಎಂದು ಹೇಳಿದನು.

ಅರ್ಥ:
ನರ: ಅರ್ಜುನ; ಸಂಗಾತಿ: ಜೊತೆ; ಋಷಿ: ಮುನಿ; ಅಂಶ: ಭಾಗ, ಅವತಾರ ರೂಪ; ಭೂತ:ಪರಮಾತ್ಮ; ಭಕ್ತ: ಆರಾಧಕ; ವಿಖ್ಯಾತ: ಪ್ರಸಿದ್ಧ; ಬಾಣ: ಶರ; ಬೇಡು: ಕೇಳು; ತಪ: ಧ್ಯಾನ; ವೀತ: ಕಳೆದ, ಬಿಟ್ಟ; ರಾಗ:ಪ್ರೀತಿ, ಮೋಹ; ದ್ವೇಷ: ಹಗೆ, ವೈರತ್ವ; ಕಾಂತೆ: ಪ್ರಿಯತಮೆ; ಕೇಳು: ಆಲಿಸು;

ಪದವಿಂಗಡಣೆ:
ಈತ +ನರನ್+ಎಂಬುವ +ಕಣಾ+ ಸಂ
ಗಾತಿ+ ನಾರಾಯಣ+ ಋಷಿಗೆ+ ತಾನ್
ಈತಗಳು+ ಹರಿಯಂಶ +ಭೂತರು +ಭಕ್ತರ್+ಇವರ್+ಎಮಗೆ
ಈತನ್+ಎಮ್ಮಯ +ಪಾಶುಪತ+ ವಿ
ಖ್ಯಾತ +ಬಾಣವ +ಬೇಡಿ +ತಪದಲಿ
ವೀತ+ರಾಗ+ದ್ವೇಷನಾದನು+ ಕಾಂತೆ +ಕೇಳೆಂದ

ಅಚ್ಚರಿ:
(೧) ಈತ, ಖ್ಯಾತ, ವೀತ – ಪ್ರಾಸ ಪದಗಳು
(೨) ನರ, ನಾರಾಯಣರ ಪರಿಚಯ ಮಾಡುವ ಪದ್ಯ

ಪದ್ಯ ೩೩:ಶಿಶುಪಾಲನು ಯಾರಿಂದ ಸಾವನಪ್ಪುತ್ತಾನೆ ಎಂದು ನಾರದರು ಹೇಳಿದರು?

ಆತನೆಂದನು ತಾಯೆ ಶಿಶುವಿ
ಖ್ಯಾತನಹ ನೀನಾರ ಹಸ್ತದೊ
ಳೀತನನು ಕೊಟ್ಟಾಗಲಡಗುವವಕ್ಷಿ ಭುಜಯುಗಳ
ಆತನೀತನ ಮೃತ್ಯುವಿದು ಸಂ
ಭೂತ ನಿಶ್ಚಯವೆಂದು ಶಿಶುವಿನ
ಮಾತೆಯನು ಸಂತೈಸಿ ನಾರದನಡರಿದನು ನಭವ (ಸಭಾ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾರದನು ಶಿಶುಪಾಲನ ತಾಯಿಗೆ, ಈ ಮಗುವು ಕೀರ್ತಿಶಾಲಿಯಾಗುತ್ತಾನೆ. ಯಾರ ಕೈಯಲ್ಲಿ ಇವನನ್ನು ಕೊಟ್ಟಾಗ ಹಣೆಗಣ್ಣು ಎರಡು ಹೆಚ್ಚಿನ ಭುಜಗಳು ಅಡಗುತ್ತವೆಯೋ ಅವನೇ ಇವನನ್ನು ಕೊಲ್ಲುತ್ತಾನೆ, ಇವನು ಹುಟ್ಟುವಾಗಲೇ ಇದು ನಿಶ್ಚಿತವಾಯಿತು ಎಂದು ಹೇಳಿ ಆಕಾಶಮಾರ್ಗವಾಗಿ ಚಲಿಸಿದನು.

ಅರ್ಥ:
ತಾಯೆ: ಮಾತೆ; ವಿಖ್ಯಾತ: ಪ್ರಸಿದ್ಧ; ಶಿಶು: ಮಗು; ಹಸ್ತ: ಕೈ; ಕೊಟ್ಟು: ನೀಡು; ಅಡಗು: ಕೊನೆಗೊಳ್ಳು, ಮರೆಯಾಗು; ಅಕ್ಷಿ: ಕಣ್ಣು; ಭುಜ: ಬಾಹು; ಮೃತ್ಯು: ಸಾವು; ಸಂಭೂತ: ಹುಟ್ಟಿದವನು, ಯುಕ್ತವಾದ; ನಿಶ್ಚಯ: ನಿರ್ಣಯ; ಸಂತೈಸು: ಸಮಾಧಾನಪಡಿಸು; ಅಡರು: ಮೇಲಕ್ಕೆ ಹತ್ತು; ನಭ: ಆಗಸ;

ಪದವಿಂಗಡಣೆ:
ಆತನ್+ಎಂದನು +ತಾಯೆ +ಶಿಶು+ವಿ
ಖ್ಯಾತನಹ +ನೀನ್+ಆರ+ ಹಸ್ತದೊಳ್
ಈತನನು +ಕೊಟ್ಟಾಗಲ್+ಅಡಗುವವ್+ಅಕ್ಷಿ +ಭುಜಯುಗಳ
ಆತನ್+ಈತನ +ಮೃತ್ಯುವ್+ಇದು+ ಸಂ
ಭೂತ +ನಿಶ್ಚಯವೆಂದು +ಶಿಶುವಿನ
ಮಾತೆಯನು +ಸಂತೈಸಿ +ನಾರದನ್+ಅಡರಿದನು +ನಭವ

ಅಚ್ಚರಿ:
(೧) ತಾಯೆ, ಮಾತೆ – ಸಮನಾರ್ಥಕ ಪದ
(೨) ಆತನ, ಈತನ – ಪ್ರಾಸ ಪದಗಳು