ಪದ್ಯ ೮೧: ಕೃಷ್ಣನು ಜರಾಸಂಧನನ್ನು ಯುದ್ಧಕ್ಕೆ ಹೇಗೆ ಕೆಣಕಿದನು?

ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ (ಸಭಾ ಪರ್ವ, ೨ ಸಂಧಿ, ೮೧ ಪದ್ಯ)

ತಾತ್ಪರ್ಯ:
ಜರಾಸಂಧನ ಮಾತಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ಕೃಷ್ಣ, ಎಲೋ ನೀನೇನು ಪಿತ್ತವೇರಿ ಬಡಬದಿಸುತ್ತಿದ್ದಿಯೆ? ಮದ್ಯಸೇವನೆಯಿಂದ ತಲೆಕೆಟ್ಟು ಮಾತಾಡುತ್ತಿದ್ದೀಯಾ? ಭಂಗಿಯನ್ನು ಸೇದಿದ್ದು ತಲೆಗೇರಿತೋ? ವೀರನಾದರೆ ನಮ್ಮೆದುರಾಗಿ ಯುದ್ಧಕ್ಕೇಳು. ಇದು ನಿನ್ನ ಮನೆ ಹಾಗೆಂದು ನಿನ್ನ ದಾಸಿಯರ ಮುಂದೆ ಒದರಿ ಏನು ಪ್ರಯೋಜನ? ಯುದ್ಧಕ್ಕೆ ಬಾ ನಿನ್ನ ಹಣೆಬರಹವನ್ನು ತೊಡೆದು ಹಾಕುತ್ತೇನೆ, ಎಂದನು.

ಅರ್ಥ:
ಪಿತ್ತ: ಕೋಪ, ಸಿಟ್ಟು, ಮರುಳುತನ; ವಿಕಳ: ಭ್ರಮೆ, ಭ್ರಾಂತಿ; ಮದ್ಯ: ಹೆಂಡ, ಮಾದಕ ಪಾನೀಯ; ವಿಕಾರ: ಮನಸ್ಸಿನ ವಿಕೃತಿ, ಕುರೂಪ; ಭಂಗಿ: ಅಮಲೇರಿಸುವ ಒಂದು ವನಸ್ಪತಿ, ಗಾಂಜಾ; ತಲೆ: ಶಿರಸ್ಸು; ಏರು: ಹೆಚ್ಚಾಗು; ಭಟ: ಶೂರ, ಪರಾಕ್ರಮಿ; ವಿಘಾತ: ನಾಶ, ಧ್ವಂಸ; ಕಾಳಗ: ಯುದ್ಧ; ಸದನ: ಮನೆ; ಸೂಳೆ: ದಾಸಿ; ಒದರು: ಹೇಳು; ಫಲ: ಪರಿಣಾಮ, ಫಲಿತಾಂಶ; ಭಾಳ: ಹಣೆ; ತೊಡೆ: ಒರಸು,ಅಳಿಸು; ದಾನವ: ರಾಕ್ಷಸ; ಧ್ವಂಸ: ನಾಶಮಾಡು;

ಪದವಿಂಗಡಣೆ:
ಇದುವೆ+ ಪಿತ್ತದ +ವಿಕಳವೋ +ಮ+
ದ್ಯದ +ವಿಕಾರವೊ +ಭಂಗಿ +ತಲೆಗೇ
ರಿದುದೊ +ಭಟನಾದರೆ +ವಿಘಾತದಲ್+ಏಳು +ಕಾಳಗಕೆ
ಸದನ +ನಿನ್ನದು +ಸೂಳೆಯರ+ಮುಂದ್
ಒದರಿ +ಫಲವೇನ್+ಎದ್ದು +ಬಾ +ಭಾ
ಳದಲಿ+ ಬರೆದುದ +ತೊಡೆವೆ+ನೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ವಿಕಳವೋ, ವಿಕಾರವೊ, ವಿಘಾತ – “ವಿ” ಕಾರದ ಪದಗಳ ಬಳಕೆ
(೨) ಶೂರನನ್ನು ಕೆಣಕುವ ಬಗೆ – ಸೂಳೆಯರಮುಂದೊದರಿ ಫಲವೇನು
(೩) ತನ್ನ ಪೌರುಷವನ್ನು ತೋರುವ ಬಗೆ – ಭಾಳದಲಿ ಬರೆದುದ ತೊಡೆವೆ