ಪದ್ಯ ೧೭: ಪರಿವಾರದವರು ಕರ್ಣನ ಬಗ್ಗೆ ಏನೆಂದು ಕೂಗಿದರು?

ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟಮ
ಹಾರ್ಣವಕೆ ಬಿಡು ನಿನ್ನ ವಿಕ್ರಮ ಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವ ವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ (ದ್ರೋಣ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪರಿವಾರದವರು ಕಠೋರ ಸಾಹಸಿಯಾದ ಕರ್ಣ, ಯುದ್ಧವನ್ನು ಕೌರವನ ಪರವಾಗಿ ನಿರ್ಣಯಿಸು, ನಿನ್ನ ಪರಾಕ್ರಮ ವಡಬಾನಲದಿಂದ ಪಾಂಡವ ಸೈನ್ಯಸಾಗರವನ್ನು ಶೋಷಿಸು, ಕುರುಕುಲಕ್ಕೆ ನೀನು ನಾವಿಕ. ಬಯಸಿದುದನ್ನು ಸಾಧಿಸುವ ಶಕ್ತಿಯುಳ್ಳವನು, ವಿಶ್ವವನ್ನೇ ಗೆಲ್ಲಬಲ್ಲ ಬಾಣಗಲನ್ನು ಪಡೆದವನು, ನೀನೇ ನಮ್ಮನ್ನು ರಕ್ಷಿಸು ಎಂದು ಪರಿವಾರದವರು ಕೂಗಿದರು.

ಅರ್ಥ:
ಕರ್ಣ: ಕಿವಿ; ಕಠೋರ: ಬಿರುಸು, ಉಗ್ರ; ಸಾಹಸ: ಪರಾಕ್ರಮ; ನಿರ್ಣಯ: ನಿರ್ಧಾರ; ಪರಸೈನ್ಯ: ಶತ್ರು ಸೈನ್ಯ; ಸುಭಟ: ಶೂರ; ಮಹಾರ್ಣವ: ದೊಡ್ಡ ಯುದ್ಧ; ಬಿಡು: ತ್ಯಜಿಸು; ವಿಕ್ರಮ: ಶಕ್ತಿ, ಪರಾಕ್ರಮ; ಬಾಡಬಾನಳ: ವಡಬಾನಳ: ವಡಬ, ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಪೂರ್ಣಕಾಮ: ಬಯಸಿದುದನ್ನು ಸಾಧಿಸುವ ಶಕ್ತಿಯುಳ್ಳವ; ಕರ್ಣಧಾರ: ನಾವಿಕ; ವಿಶ್ವ: ಜಗತ್ತು; ವಿಕರ್ಣ: ಒಂದು ಬಗೆಯ ಬಾಣ; ರಕ್ಷಿಸು: ಕಾಪಾಡು; ನಿಖಿಳ: ಎಲ್ಲಾ; ಪರಿವಾರ: ಬಂಧು ಬಳಗ;

ಪದವಿಂಗಡಣೆ:
ಕರ್ಣ +ಕರ್ಣಕಠೋರ +ಸಾಹಸ
ನಿರ್ಣಯಿಸು +ಪರಸೈನ್ಯ+ ಸುಭಟ+ಮ
ಹಾರ್ಣವಕೆ +ಬಿಡು +ನಿನ್ನ +ವಿಕ್ರಮ +ಬಾಡಬಾನಳನ
ಪೂರ್ಣಕಾಮನು+ ನೀನು +ಕುರುಬಲ
ಕರ್ಣಧಾರನು+ ನೀನು +ವಿಶ್ವ +ವಿ
ಕರ್ಣ +ನೀನೇ +ರಕ್ಷಿಸೆಂದುದು +ನಿಖಿಳ +ಪರಿವಾರ

ಅಚ್ಚರಿ:
(೧) ಕರ್ಣನನ್ನು ಹೊಗಳಿದ ಪರಿ – ಪೂರ್ಣಕಾಮನು ನೀನು ಕುರುಬಲ ಕರ್ಣಧಾರನು ನೀನು ವಿಶ್ವ ವಿ
ಕರ್ಣ ನೀನೇ
(೨) ಕರ್ಣ, ಕರ್ಣಕಠೋರ, ವಿಕರ್ಣ, ಕರ್ಣಧಾರ – ಕರ್ಣ ಪದದ ಬಳಕೆ

ಪದ್ಯ ೧೩: ಓಲಗಕ್ಕೆ ಯಾವ ರಾಜರು ಬಂದರು?

ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ವೃಷಸೇನ, ಶಲ್ಯ, ಕಳಿಂಗರಾಜ, ವಿಕರ್ಣ, ದುಸ್ಸಹ, ಶಕುನಿ, ಸುಕೇತು, ಭೂರಿಶ್ರವ, ಜಯದ್ರಥ, ಸುಲೋಚನ, ಮಹಾಮಂತ್ರಿಗಳೂ ಓಲಗಕ್ಕೆ ಬಂದರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ವರ: ಶ್ರೇಷ್ಠ; ಮಂತ್ರಿ: ಸಚಿವ; ಬಂದರು: ಆಗಮಿಸು; ರಾಯ: ರಾಜ; ಓಲಗ: ದರ್ಬಾರು; ದುರುಳ: ದುಷ್ಟ;

ಪದವಿಂಗಡಣೆ:
ಗುರು+ತನುಜ+ ವೃಷಸೇನ+ ಮಾದ್ರೇ
ಶ್ವರ +ಕಳಿಂಗ +ವಿಕರ್ಣ +ದುಸ್ಸಹ
ದುರುಳ +ಶಕುನಿ +ಸುಕೇತು +ಭೂರಿಶ್ರವ +ಜಯದ್ರಥರು
ವರ +ಸುಲೋಚನ +ವಿಂದ್ಯ +ಯವನೇ
ಶ್ವರರು +ಕೃಪ +ಕೃತವರ್ಮ +ಭಗದ
ತ್ತರು +ಮಹಾಮಂತ್ರಿಗಳು+ ಬಂದರು +ರಾಯನ್+ಓಲಗಕೆ

ಅಚ್ಚರಿ:
(೧) ಮಾದ್ರೇಶ್ವರ, ಯವನೇಶ್ವರ – ಪ್ರಾಸ ಪದಗಳು

ಪದ್ಯ ೪೦: ಭೀಷ್ಮರು ಎಷ್ಟು ಜನರನ್ನು ಸಾಯಿಸುವೆನೆಂದು ಮಾತು ನೀಡಿದರು?

ಕೇಳು ನೃಪ ಕೇಳೈ ಜಯದ್ರಥ
ಕೇಳು ಗುರುಸುತ ಶಲ್ಯ ಕುಂಭಜ
ಕೇಳಿ ದುಶ್ಯಾಸನ ವಿಕರ್ಣ ಸುಲೋಚನಾದಿಗಳು
ಕಾಳೆಗದೊಳರಿ ದಶಸಹಸ್ರ ನೃ
ಪಾಲಕರ ಮಣಿ ಖಚಿತ ನಿರ್ಮಲ
ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ (ಭೀಷ್ಮ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಕೌರವರಾಯ ದುರ್ಯೋಧನ, ಕೇಳು, ಜಯದ್ರಥ, ಅಶ್ವತ್ಥಾಮ, ಶಲ್ಯ, ದ್ರೋಣ, ದುಶ್ಯಾಸನ, ವಿಕರ್ಣ, ಸುಲೋಚನ ಮುಂತಾದವರೆ ಕೇಳಿ, ಶತ್ರು ರಾಜರ ಸೈನ್ಯದಲ್ಲಿ ಪ್ರತಿದಿನವೂ ಹತ್ತು ಸಾವಿರ ಮಕುಟವರ್ಧನರನ್ನು ದಿಗ್ಬಲಿ ಕೊಡುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಕೇಳು: ಆಲಿಸು; ನೃಪ: ರಾಜ; ಸುತ: ಪುತ್ರ; ಕುಂಭಜ: ದ್ರೋಣ; ಆದಿ: ಮುಂತಾದ; ಕಾಳೆಗ: ಯುದ್ಧ; ಅರಿ: ವೈರಿ; ದಶ: ಹತ್ತು; ಸಹಸ್ರ: ಸಾವಿರ; ನೃಪಾಲಕ: ರಾಜ; ಮಣಿ: ಬೆಲೆಬಾಳುವ ರತ್ನ; ಖಚಿತ: ಕೂಡಿದ; ನಿರ್ಮಲ: ಶುದ್ಧ; ಮೌಳಿ: ಮಕುಟ; ದಿಗುಬಲಿ: ಕಾಣಿಕೆ; ದಿಗು: ದಿಕ್ಕು; ಕೊಡು: ನೀಡು; ದಿವಸ: ದಿನ;

ಪದವಿಂಗಡಣೆ:
ಕೇಳು +ನೃಪ +ಕೇಳೈ +ಜಯದ್ರಥ
ಕೇಳು +ಗುರುಸುತ +ಶಲ್ಯ +ಕುಂಭಜ
ಕೇಳಿ +ದುಶ್ಯಾಸನ +ವಿಕರ್ಣ +ಸುಲೋಚನ್+ಆದಿಗಳು
ಕಾಳೆಗದೊಳ್+ಅರಿ +ದಶ+ಸಹಸ್ರ+ ನೃ
ಪಾಲಕರ +ಮಣಿ +ಖಚಿತ +ನಿರ್ಮಲ
ಮೌಳಿಗಳ+ ದಿಗುಬಲಿಯ +ಕೊಡುವೆನು +ದಿವಸ +ದಿವಸದಲಿ

ಅಚ್ಚರಿ:
(೧) ರಾಜರನ್ನು ಸಾಯಿಸುವೆ ಎಂದು ಹೇಳುವ ಪರಿ – ಕಾಳೆಗದೊಳರಿ ದಶಸಹಸ್ರ ನೃಪಾಲಕರ ಮಣಿ ಖಚಿತ ನಿರ್ಮಲ ಮೌಳಿಗಳ ದಿಗುಬಲಿಯ ಕೊಡುವೆನು

ಪದ್ಯ ೭೮: ಅರ್ಜುನನನ್ನು ಯಾರು ಆವರಿಸಿದರು?

ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಶಕುನಿ ವಿಕರ್ಣ ದುಸ್ಸಹರು
ನರನ ಮುಸುಕಿದರೊಂದು ಕಡೆಯೊಳು
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ (ವಿರಾಟ ಪರ್ವ, ೯ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೋಣನು ಒಂದು ಕಡೆ ಅತಿ ವೇಗದಿಂದ ಬಂದನು. ಬಾಹ್ಲಿಕ, ಕಳಿಂಗ, ಸುಕೇತು, ಶಕುನಿ, ವಿಕರ್ಣ, ದುಸ್ಸಹನೇ ಮೊದಲಾದ ರಥಿಕರು ಅರ್ಜುನನನ್ನು ಮುತ್ತಿದರು.

ಅರ್ಥ:
ಗುರು: ಆಚಾರ್ಯ; ಚಡಾಳಿಸು: ಉಗ್ರವಾಗು, ಅಧಿಕವಾಗು; ಹೊಕ್ಕು: ಸೇರು; ಉರವಣಿಸು: ಆತುರಿಸು; ಭಾಸುರ: ಅಂದ, ಸೊಗಸು; ನರ: ಅರ್ಜುನ; ಮುಸುಕು: ಹೊದಿಕೆ; ಕಡೆ: ಬದಿ; ತೆರಳು: ಹೋಗು, ನಡೆ; ತೇರು: ಬಂಡಿ; ಬಲ: ಸೈನ್ಯ; ಮೋಹರ: ಯುದ್ಧ, ಕಾಳಗ; ಕವಿ: ಆವರಿಸು; ಸುತ್ತ: ಎಲ್ಲೆಡೆ; ಮುತ್ತು: ಆವರಿಸು; ಕಲಿ: ಶೂರ;

ಪದವಿಂಗಡಣೆ:
ಗುರು+ ಚಡಾಳಿಸಿ +ಹೊಕ್ಕನ್+ಒಮ್ಮಿಂಗ್
ಉರವಣಿಸಿದನು +ಬಾಹ್ಲಿಕನು+ ಭಾ
ಸುರ +ಕಳಿಂಗ +ಸುಕೇತು +ಶಕುನಿ +ವಿಕರ್ಣ +ದುಸ್ಸಹರು
ನರನ +ಮುಸುಕಿದರೊಂದು +ಕಡೆಯೊಳು
ತೆರಳಿಕೆಯ +ತೇರಿನಲಿ +ಬಲ +ಮೋ
ಹರಿಸಿ +ಕವಿದುದು +ಸುತ್ತ +ಮುತ್ತಿತು +ಕಲಿ +ಧನಂಜಯನ

ಅಚ್ಚರಿ:
(೧) ಸುಭಟರ ಹೆಸರನ್ನು ಹೇಳಿರುವ ಪರಿ – ಬಾಹ್ಲಿಕನು ಭಾಸುರ ಕಳಿಂಗ ಸುಕೇತು ಶಕುನಿ ವಿಕರ್ಣ ದುಸ್ಸಹರು

ಪದ್ಯ ೫೬: ಚಿತ್ರಸೇನನು ಯಾರನ್ನು ತನ್ನ ರಥದಲ್ಲಿ ಕೂರಿಸಿದನು?

ಹಯದ ಪಡಿವಾಘೆಯಲಿ ಬಾಹು
ದ್ವಯವ ಬಿಗಿದನು ತನ್ನ ರಥದಲಿ
ಜಯ ವಿಹೀನನ ನಿರಿಸಿದನು ಕುರುರಾಯ ವಲ್ಲಭನ
ಭಯ ಭರಿತ ದುಶ್ಯಾಸನನ ದು
ರ್ಜಯನ ಚಿತ್ರಾಂಗದ ವಿಕರ್ಣನ
ನಯವಿದೂರರ ತಂದರಿಪ್ಪತ್ತೈದು ಸಹಭವರ (ಅರಣ್ಯ ಪರ್ವ, ೨೦ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕುದುರೆಯ ಲಗಾಮಿನಿಂದ ಎರಡು ಕೈಗಳನ್ನು ಕಟ್ಟಿ, ಚಿತ್ರಸೇನನು ಸೋತ ಕೌರವನನ್ನು ತನ್ನ ರಥದಲಿ ಕೂರಿಸಿದನು. ಭಯದಿಂದ ಕೂಡಿದ ದುಶ್ಯಾಸನ, ವಿಕರ್ಣ, ದುರ್ಜಯ ಮೊದಲಾದ ಇಪ್ಪತ್ತೈದು ಮಂದಿ ನೀತಿಗೆಟ್ಟ ಕೌರವನ ತಮ್ಮಂದಿರನ್ನು ಎಳೆತಂದನು.

ಅರ್ಥ:
ಹಯ: ಕುದುರೆ; ಪಡಿ: ಪ್ರತಿಯಾದುದು, ಬದಲು; ವಾಘೆ: ಲಗಾಮು; ಬಾಹು: ಭುಜ; ದ್ವಯ: ಎರಡು; ಬಿಗಿ: ಬಂಧ; ರಥ: ಬಂಡಿ; ಜಯ: ಗೆಲುವು; ವಿಹೀನ: ತೊರೆದ, ತ್ಯಜಿಸಿದ; ವಲ್ಲಭ: ಒಡೆಯ; ಭಯ: ಅಂಜಿಕೆ; ಭರಿತ: ತುಂಬಿದ; ದುರ್ಜಯ: ದುರ್ಯೋಧನನ ತಮ್ಮ; ನಯ: ನುಣುಪು, ಮೃದುತ್ವ; ವಿದೂರ: ಇಲ್ಲವಾದುದು; ಸಹ: ಜೊತೆ; ಭವ: ಹುಟ್ಟು; ಸಹಭವ: ಜೊತೆಯಲ್ಲಿ ಹುಟ್ಟಿದ;

ಪದವಿಂಗಡಣೆ:
ಹಯದ+ ಪಡಿ+ವಾಘೆಯಲಿ +ಬಾಹು
ದ್ವಯವ +ಬಿಗಿದನು +ತನ್ನ +ರಥದಲಿ
ಜಯ +ವಿಹೀನನನ್ + ಇರಿಸಿದನು +ಕುರುರಾಯ +ವಲ್ಲಭನ
ಭಯ +ಭರಿತ +ದುಶ್ಯಾಸನನ +ದು
ರ್ಜಯನ +ಚಿತ್ರಾಂಗದ +ವಿಕರ್ಣನ
ನಯವಿದೂರರ +ತಂದರ್+ಇಪ್ಪತ್ತೈದು +ಸಹಭವರ

ಅಚ್ಚರಿ:
(೧) ಜಯವಿಹೀನ, ನಯವಿದೂರ – ಪದಗಳ ಬಳಕೆ

ಪದ್ಯ ೪೮: ಚಿತ್ರಸೇನನ ಯುದ್ಧದ ಧಾಟಿ ಹೇಗಿತ್ತು?

ಗಾಯವಡೆಯದರಿಲ್ಲ ಸಾಯದೆ
ನೋಯದವರಿಲ್ಲೆರಡು ಬಲದಲಿ
ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು
ರಾಯನನುಜರನಟ್ಟಿದನು ದೀ
ರ್ಘಾಯುವನು ಹಿಡಿದನು ವಿಕರ್ಣನ
ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ (ಅರಣ್ಯ ಪರ್ವ, ೨೦ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳಲ್ಲಿ ಗಾಯಗೊಳ್ಳದವರಿರಲಿಲ್ಲ. ಸಾಯದೆ ನೋಯದೆ ಇರುವವರೇ ಇರಲಿಲ್ಲ. ಅನೇಕ ಪರಾಕ್ರಮಿಗಳು ಸಾವನಪ್ಪಿದರು. ಇದನ್ನು ನೋಡಿದ ಚಿತ್ರಸೇನನು ಕೋಪಗೊಂಡನು. ಕೌರವರನ್ನು ಅಟ್ಟಿಸಿಕೊಂಡು ಹೋದನು. ವಿಕರ್ಣನು ಗಂಧರ್ವ ಹೊಡೆತದಿಂದ ನೊಂದನು. ದೀರ್ಘಾಯುವು ಸೆರೆಸಿಕ್ಕಿದನು. ಚಿತ್ರಸೇನನ ಹೊಡೆತದಿಂದ ಕೌರವ ಬಲವು ದಿಕ್ಕು ಪಾಲಾಯಿತು.

ಅರ್ಥ:
ಗಾಯ: ಪೆಟ್ಟು; ಸಾವು: ಮರಣ; ನೋವು: ಪೆಟ್ಟು; ಬಲ: ಸೈನ್ಯ, ಶಕ್ತಿ; ಬೀಯ: ವ್ಯಯ, ನಷ್ಟ; ಸುಭಟ: ಸೈನಿಕರು; ಗಂಧರ್ವ: ಖಚರ; ಪತಿ: ಒಡೆಯ; ಮುಳಿ: ಸಿಟ್ಟು, ಕೋಪ; ರಾಯ: ರಾಜ; ಅನುಜ: ತಮ್ಮ; ಅಟ್ಟು: ಬೆನ್ನುಹತ್ತಿ ಹೋಗು; ಆಯುಷ್ಯ; ಹಿಡಿ: ಗ್ರಹಿಸು; ಎಚ್ಚು: ಬಾಣ ಪ್ರಯೋಗ ಮಾಡು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಕೆದರು: ಹರಡು;

ಪದವಿಂಗಡಣೆ:
ಗಾಯವ್+ಅಡೆಯದರಿಲ್ಲ+ ಸಾಯದೆ
ನೋಯದವರಿಲ್+ಎರಡು +ಬಲದಲಿ
ಬೀಯವಾದರು+ ಸುಭಟರ್+ಎನೆ +ಗಂಧರ್ವಪತಿ +ಮುಳಿದು
ರಾಯನ್+ಅನುಜರನ್+ಅಟ್ಟಿದನು +ದೀ
ರ್ಘಾಯುವನು+ ಹಿಡಿದನು +ವಿಕರ್ಣನ
ನೋಯಲ್+ಎಚ್ಚನು +ಕೆದರಿದನು +ಕೌರವ +ಚತುರ್ಬಲವ

ಅಚ್ಚರಿ:
(೧) ದೀರ್ಘಾಯು, ವಿಕರ್ಣ, ಗಂಧರ್ವಪತಿ, ಕೌರವ – ಹೆಸರುಗಳನ್ನು ಹೇಳುವ ಪರಿ

ಪದ್ಯ ೪೨: ಕರ್ಣನನ್ನು ಯಾರು ಸಂತೈಸಿದರು?

ವಿರಥನಾದನು ಹಲಗೆ ಖಡ್ಗದ
ಲರಿಭಟನ ಪಡಿಮುಖಕೆ ಚಿಮ್ಮಿದ
ನೆರಡನೊಂದಂಬಿನಲಿ ಕಡಿದನು ಜಡಿದನಿನಸುತನ
ತಿರುಗಿ ಹಾಯ್ದನು ಕರ್ಣನಾತನ
ಮುರಿವ ಕಂಡು ವಿಕರ್ಣ ತನ್ನಯ
ವರ ರಥವ ಚಾಚಿದನು ಬೋಳೈಸಿದನು ಭಾನುಜನ (ಅರಣ್ಯ ಪರ್ವ, ೨೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕರ್ಣನ ರಥವು ಹಾಳಾಗಲು ಅವನು ರಥವಿಲ್ಲದವನಾಗಿ ಶತ್ರುವಿನ ಮೇಲೆ ಕತ್ತಿ ಗುರಾಣಿಗಳನ್ನು ಹಿಡಿದು ಆಕ್ರಮಣ ಮಾಡಿದನು. ಗಂಧರ್ವನು ಒಂದೇ ಬಾಣದಿಂದ ಕರ್ಣನ ಕತ್ತಿಗುರಾಣಿಗಳನ್ನು ಕತ್ತರಿಸಿ, ಕರ್ಣನನ್ನು ಘಾತಿಸಿದನು. ಕರ್ಣನು ನಿರಾಯುಧನಾಗಿ ಓಡಲು, ಅದನ್ನು ಕಂಡ ವಿಕರ್ಣನು ಕರ್ಣನನ್ನು ಸಂತೈಸಿ ತನ್ನ ರಥವನ್ನು ಚಿತ್ರಸೇನನ ಎದುರಿಗೆ ತಂದನು.

ಅರ್ಥ:
ವಿರಥ: ರಥವಿಲ್ಲದೆ; ಹಲಗೆ: ಒಂದು ಬಗೆಯ ಗುರಾಣಿ; ಖಡ್ಗ: ಕತ್ತಿ; ಅರಿ: ವೈರಿ; ಭಟ: ಸೈನಿಕ; ಪಡಿಮುಖ: ಎದುರು; ಚಿಮ್ಮು: ಸೂಸು, ಹಾರು; ಅಂಬು: ಬಾಣ; ಕಡಿ: ಸೀಳು; ಜಡಿ: ಹೊಡೆ; ಇನಸುತ: ಸೂರ್ಯನ ಮಗ; ತಿರುಗು: ಮರುಳು; ಹಾಯ್ದು: ಹೊಡೆ; ಮುರಿ: ಸೀಳು; ವರ: ಶ್ರೇಷ್ಠ; ರಥ; ಬಂಡಿ; ಚಾಚು: ಮುಂದೆ ತರು; ಬೋಳೈಸು: ಸಂತೈಸು, ಸಮಾಧಾನ ಮಾಡು; ಭಾನುಜ: ಸೂರ್ಯನ ಮಗ (ಕರ್ಣ)

ಪದವಿಂಗಡಣೆ:
ವಿರಥನಾದನು +ಹಲಗೆ +ಖಡ್ಗದಲ್
ಅರಿಭಟನ +ಪಡಿಮುಖಕೆ +ಚಿಮ್ಮಿದನ್
ಎರಡನ್+ಒಂದ್+ಅಂಬಿನಲಿ+ ಕಡಿದನು +ಜಡಿದನ್+ಇನಸುತನ
ತಿರುಗಿ+ ಹಾಯ್ದನು +ಕರ್ಣನ್+ಆತನ
ಮುರಿವ +ಕಂಡು +ವಿಕರ್ಣ+ ತನ್ನಯ
ವರ+ ರಥವ+ ಚಾಚಿದನು+ ಬೋಳೈಸಿದನು +ಭಾನುಜನ

ಅಚ್ಚರಿ:
(೧) ಇನಸುತ, ಭಾನುಜ, ಕರ್ಣ – ಕರ್ಣನನ್ನು ಕರೆದ ಪರಿ
(೨) ಚಿತ್ರಸೇನನ ಪರಾಕ್ರಮ – ಎರಡನೊಂದಂಬಿನಲಿ ಕಡಿದನು ಜಡಿದನಿನಸುತನ

ಪದ್ಯ ೯೮: ವಿಕರ್ಣನು ದ್ರೌಪದಿಯ ಪ್ರಶ್ನೆಗೆ ಹೇಗೆ ಉತ್ತರಿಸಿದನು?

ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ (ಸಭಾ ಪರ್ವ, ೧೫ ಸಂಧಿ, ೯೮ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನನ್ನು ಯಾವಾಗ ಸೋತನೋ ಆಗಲೇ ಅವನು ತನ್ನ ಪತ್ನಿಗೆ ಬೇರೆಯವನಾದನು. ಮೊದಲು ಅವಳನ್ನು ಸೋತಿದ್ದರೆ ಆಗ ಅವಳು ಅವನ ಧನವಾಗುತ್ತಿದ್ದಳು, ಬೇರೆಯವನು ಬೇರೆಯವಳೊಬ್ಬನನ್ನು ಸೋತು, ಅವಳು ತನ್ನ ಧನವೆಂದು ಧರ್ಮರಾಯನು ಶಕುನಿಯ ತಿಳುವಳಿಕೆಗೆ ತಿಳಿಗೇಡಿಯಂತೆ ವರ್ತಿಸುತ್ತಿದ್ದಾನೆ ಎಂದು ವಿಕರ್ಣನು ಕೋಪಗೊಂಡು ದ್ರೌಪದಿಯ ಪ್ರಶ್ನೆಗೆ ಉತ್ತರವನ್ನಿತ್ತನು.

ಅರ್ಥ:
ಸೋತು: ಪರಾಭವ; ಮಹೀಪತಿ: ರಾಜ; ಮಹೀ: ಭೂಮಿ; ಅನ್ಯ: ಬೇರೆ; ಸತಿ: ಹೆಂಡತಿ; ಮುನ್ನ: ಮೊದಲು; ಧನ: ಐಶ್ವರ್ಯ; ಐಸಲೆ: ಅಲ್ಲವೇ; ವಿಚಾರ: ವಿಮರ್ಶೆ; ಗಡ: ಅಲ್ಲವೆ, ಆಶ್ಚರ್ಯ ಮುಂತಾದುವನ್ನು ಸೂಚಿಸುವ ಶಬ್ದ; ಅರಸ: ರಾಜ; ಬಿನ್ನಾಣ: ಗಾಢವಾದ ತಿಳುವಳಿಕೆ; ಬೆಳ್ಳಾದ: ಬೆಪ್ಪನಾದ; ಖತಿ: ಕೋಪ;

ಪದವಿಂಗಡಣೆ:
ತನ್ನ +ಸೋತಾಗಲೆ+ ಮಹೀಪತಿ
ಅನ್ಯನಾದನು+ ಸತಿಗೆ+ ತನ್ನಿಂ
ಮುನ್ನ+ ಸೋತರೆ +ತನ್ನ +ಧನವ್+ಐಸಲೆ+ ವಿಚಾರಿಸಲು
ಅನ್ಯನ್+ಅನ್ಯಳ +ಸೋತ +ಗಡ+ ತಾ
ತನ್ನ +ಧನವೆಂದ್+ಅರಸ+ ಶಕುನಿಯ
ಬಿನ್ನಣಕೆ +ಬೆಳ್ಳಾದನೆಂದು +ವಿಕರ್ಣ +ಖತಿಗೊಂಡ

ಅಚ್ಚರಿ:
(೧) ವಿಕರ್ಣನ ವಿಚಾರ – ತನ್ನಿಂ ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
(೨) ತನ್ನ, ಮುನ್ನ – ಪ್ರಾಸ ಪದ

ಪದ್ಯ ೯೭: ವಿಕರ್ಣನು ಭೀಷ್ಮರ ಮೇಲೆ ಏಕೆ ಗರ್ಜಿಸಿದನು?

ಹುಸಿವಚನ ಪಾರುಷ್ಯ ಲಲನಾ
ವಿಷಯ ಮೃಗತೃಷ್ಣಾ ಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯ ನಿಶ್ಚಯವ
ಉಸುರಲಮ್ಮಿರೆ ವೈದಿಕದಿ ತನಿ
ರಸದ ಸವಿ ನಿಮಗಲ್ಲದಾರಿಗೆ
ಬಸಿದು ಬೀಳ್ವುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ (ಸಭಾ ಪರ್ವ, ೧೫ ಸಂಧಿ, ೯೭ ಪದ್ಯ)

ತಾತ್ಪರ್ಯ:
ವಿಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಸುಳ್ಳು, ಕಠೋರವಾಕ್ಯ, ಸ್ತ್ರೀಲಂಪಟತ್ವ, ಬೇಟೆ ಮೊದಲಾದವುಗಳ ವ್ಯಸನಕ್ಕೊಳಗಾದವನು ಧರ್ಮರಹಸ್ಯವನ್ನು ತಿಳಿದು ನಿಶ್ಚಯಿಸಲಾರ, ಆದರೆ ವೇದದ ಸಾರವನ್ನೇ ಅರಿತಿರುವೆ ನೀವು ಹೇಳಲು ಏಕೆ ಹಿಂಜರಿಯುತ್ತಿದ್ದೀರಿ ಎಂದು ವಿಕರ್ಣನು ಭೀಷ್ಮರನ್ನು ನೋಡಿ ಜೋರಾಗಿ ಕೇಳಿದನು.

ಅರ್ಥ:
ಹುಸಿ: ಸುಳ್ಳು; ವಚನ: ಮಾತು, ನುಡಿ; ಪಾರುಷ್ಯ: ಕಾಠಿಣ್ಯ; ಲಲನೆ: ಹೆಣ್ಣು; ಮೃಗ: ಪ್ರಾಣಿ; ತೃಷ್ಣ: ತೃಷೆ, ನೀರಡಿಕೆ; ಪಿಪಾಸ: ಕುಡಿಯುವ; ವ್ಯಸನ: ಚಟ, ಗೀಳು; ಬಲ್ಲನು: ತಿಳಿ; ಧರಂಅ: ಧಾರಣೆ ಮಾಡಿದುದು, ನಿಯಮ; ತತ್ವ: ಸಾರ, ತಿರುಳು; ರಹಸ್ಯ: ಗುಟ್ಟು, ಗೋಪ್ಯ, ಮರ್ಮ; ನಿಶ್ಚಯ: ನಿರ್ಣಯ; ಉಸುರು: ಮಾತಾಡು; ವೈದಿಕ: ವೇದಗಳನ್ನು ಬಲ್ಲವನು; ತನಿ:ಅತಿಶಯ, ಚೆನ್ನಾಗಿ ಬೆಳೆದ; ರಸ: ಸಾರ; ಸವಿ: ಸಿಹಿ; ಬಸಿ:ಸ್ರವಿಸು, ಜಿನುಗು; ಬೀಳು: ಕೆಳಗೆ ಇಳಿ; ಗರ್ಜಿಸು: ಕೂಗು;

ಪದವಿಂಗಡಣೆ:
ಹುಸಿವಚನ +ಪಾರುಷ್ಯ +ಲಲನಾ
ವಿಷಯ +ಮೃಗತೃಷ್ಣಾ+ ಪಿಪಾಸಾ
ವ್ಯಸನಿ+ ಬಲ್ಲನೆ+ ಧರ್ಮ+ತತ್ವ+ರಹಸ್ಯ+ ನಿಶ್ಚಯವ
ಉಸುರಲಮ್ಮಿರೆ +ವೈದಿಕದಿ+ ತನಿ
ರಸದ +ಸವಿ +ನಿಮಗಲ್ಲದ್+ಆರಿಗೆ
ಬಸಿದು +ಬೀಳ್ವುದು+ ಭೀಷ್ಮಯೆಂದು +ವಿಕರ್ಣ +ಗರ್ಜಿಸಿದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಸಿದು ಬೀಳ್ವುದು ಭೀಷ್ಮಯೆಂದು
(೨) ವ್ಯಸನಗಳ ವಿವರ – ಹುಸಿವಚನ, ಪಾರುಷ್ಯ, ಲಲನಾವಿಷಯ, ಮೃಗತೃಷ್ಣಾ, ಪಿಪಾಸಾ
ವ್ಯಸನಿ

ಪದ್ಯ ೯೬: ವಿಕರ್ಣನು ಸಭಾಸದರನ್ನು ಏಕೆ ಜರೆದನು?

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿ ದೂತರ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ (ಸಭಾ ಪರ್ವ, ೧೫ ಸಂಧಿ, ೯೬ ಪದ್ಯ)

ತಾತ್ಪರ್ಯ:
ಎಲ್ಲರ ಭೀತಿಯಿಂದ ಮೌನವಾಗಿರುವುದನ್ನು ಕಂಡು, ಕೌರವರಲ್ಲೊಬ್ಬನಾದ ವಿಕರ್ಣನು ಎದ್ದು ನಿಂತು, ಇದೇನು ತಿಳಿದು ಎಲ್ಲರೂ ಮೌನವಾಗಿದ್ದೀರಿ, ಹೆಣ್ಣೊಬ್ಬಳು ಪ್ರಶ್ನೆ ಕೇಳಿದಳೆಂದ ಅಲಕ್ಷವೋ? ನೇರವಾಗಿ ಕಡ್ಡಿ ಮುರಿದಹಾಗೆ ಸಮಸ್ಯೆಗೆ ಉತ್ತರವನ್ನು ಕೊಡಲು ನಿಮಗೆ ಸಾಧ್ಯವಿಲ್ಲವೋ? ಏತಕ್ಕಾಗಿ ಸುಮ್ಮನಿರುವಿರಿ? ತಿಳಿಯದೇ ನಿಮಗೆ ಪಾಂಡವರಿಗಾದ ನಾಶವು, ನಿಮ್ಮ ವಿವೇಕವನ್ನು ನೀವೇಕೆ ಮರೆತಿರಿ ಎಂದು ವಿಕರ್ಣನು ಕೇಳಿದನು.

ಅರ್ಥ:
ಅರಿ: ತಿಳಿ; ಮೌನ: ನೀರವತೆ, ಮಾತಿಲ್ಲದ ಸ್ಥಿತಿ; ಮೇಣು: ಮತ್ತು, ಅಥವಾ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ಉಪೇಕ್ಷೆ:ಅಲಕ್ಷ್ಯ, ಕಡೆಗಣಿಸುವಿಕೆ; ಮುರಿ: ತುಂಡು, ಸೀಳು; ನುಡಿ: ಮಾತಾಡು; ಅಸಾಧ್ಯ: ಸಾಧ್ಯವಲ್ಲದ; ಸಮವರ್ತಿ: ತಾರತಮ್ಯ ಭಾವವಿಲ್ಲದವನು; ದೂತ: ಸೇವಕ; ಮುರುಕ: ಬಿಂಕ, ಬಿನ್ನಾಣ; ಮರೆ: ನೆನಪಿನಿಂದ ದೂರ ಮಾಡು; ಜರೆ: ಬಯ್ಯು; ಸಭೆ: ಓಲಗ;

ಪದವಿಂಗಡಣೆ:
ಅರಿದು +ಮೌನವೊ +ಮೇಣು +ಮಾನಿನಿ
ಒರಲುತಿರಲ್+ಎಂದಾದ್+ಉಪೇಕ್ಷೆಯೊ
ಮುರಿದು+ ನುಡಿವುದ್+ಅಸಾಧ್ಯವೋ +ಮೇಣ್+ಆವುದ್+ಇದರೊಳಗೆ
ಅರಿಯಿರೇ+ ಸಮವರ್ತಿ +ದೂತರ
ಮುರುಕವನು +ನೀವೇಕೆ +ನಿಮ್ಮನು
ಮರೆದಿರೆಂದು +ವಿಕರ್ಣ +ಜರೆದನು +ತತ್ಸಭಾಸದರ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೌನವೊ ಮೇಣು ಮಾನಿನಿ