ಪದ್ಯ ೭೩: ರಾಜರು ಯಾವ ಆಸನದ ಮೇಲೆ ಕುಳಿತರು?

ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ (ಭೀಷ್ಮ ಪರ್ವ, ೪ ಸಂಧಿ, ೭೩ ಪದ್ಯ)

ತಾತ್ಪರ್ಯ:
ಮೇರು, ವಿಂಧ್ಯ, ಅಂಜನ, ಮಲಯ ಪರ್ವತಗಳಲ್ಲಿ ಹುಟ್ಟಿದ್ ಆನೆಗಳಿಗೆ ಚೌರಿಯನ್ನು ಬೀಸಿ, ಕಾಳಗಕ್ಕೆ ಅಪ್ಪಣೆ ಕೊಟ್ಟರು. ಬಂಗಾರದ ಗಂಟೆಗಳು ಸದ್ದು ಮಾಡುತ್ತಿರಲು ಹಗ್ಗಗಳನ್ನು ಹಿಡಿದು ಮೇಲೆ ಹತ್ತಿ ಮೊದಲೇ ತಮಗಾಗಿ ಸಿದ್ಧಪಡಿಸಿದ ಆಸನಗಳಲ್ಲಿ ಮಾವುತರು ಕುಳಿತರು.

ಅರ್ಥ:
ಕನಕ: ಚಿನ್ನ; ಗಿರಿ: ಬೆಟ್ಟ; ಕನಕಗಿರಿ: ಮೇರು ಪರ್ವತ; ಅದ್ರಿ: ಬೆಟ್ಟ; ಸಂಜನಿಸು: ಹುಟ್ಟು; ಆನೆ: ಕರಿ; ಸೇನೆ: ಸೈನ್ಯ; ಬೀಸು: ತೂಗುವಿಕೆ, ಸಂಚಾರ; ಚೌರಿ: ಚಾಮರ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಉಲಿ: ಶಬ್ದ; ಹೊರಜೆ: ದಪ್ಪವಾದ ಹಗ್ಗ; ಹಿಡಿ: ಬಂಧಿಸು; ಅಡರು: ಮೇಲಕ್ಕೆ ಹತ್ತು; ಪೂರ್ವಾಸನ: ಮೊದಲೇ ವೆಂಠಣಿಸು: ಮುತ್ತಿಗೆ ಹಾಕು, ಬಳಸು; ರಾಜರೋಹಕ: ವಾಹವನ್ನೇರಿದ ರಾಜ; ವ್ರಾತ: ಗುಂಪು;

ಪದವಿಂಗಡಣೆ:
ಕನಕಗಿರಿಯಲಿ +ವಿಂಧ್ಯಗಿರಿ
ಅಂಜನಗಿರಿಯ +ಮಲಯ+ಅದ್ರಿಯಲಿ +ಸಂ
ಜನಿಸಿದ್+ಆನೆಯ +ಸೇನೆಯಲಿ +ಬೀಸಿದರು +ಚೌರಿಗಳ
ಕನಕ+ಘಂಟೆಗಳ್+ಉಲಿಯೆ +ಹೊರಜೆಯ
ತನತನಗೆ+ ಹಿಡಿದ್+ಅಡರಿ+ ಪೂರ್ವಾ
ಸನವ +ವೆಂಠಣಿಸಿದರು+ ರಾಜಾರೋಹಕವ್ರಾತ

ಅಚ್ಚರಿ:
(೧) ಬೆಟ್ಟಗಳ ಹೆಸರುಗಳಿಂದ ಹೋಲಿಸುವ ಪರಿ – ಕನಕಗಿರಿ, ವಿಂಧ್ಯಗಿರಿ, ಅಂಜನಗಿರಿ, ಮಲಯಾದ್ರಿ

ಪದ್ಯ ೧೩: ಸಗರನ ಮಕ್ಕಳನ್ನು ಯಾರು ದಹಿಸಿದರು?

ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತವ ಮುನಿಪ ವರ್ಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲೋಮಶನು ಯುಧಿಷ್ಠಿರನಿಗೆ ಸಗರ ಚರ್ಕ್ರವರ್ತಿಯ ಮಕ್ಕಳು ಕಪಿಲನ ನೋಟದುರಿಯಲ್ಲಿ ಸುಟ್ಟು ಹೋದುದನ್ನೂ, ಭಗೀರಥನು ಗಂಗೆಯನ್ನು ಹರಿಸಿದ ಕಥೆಯನ್ನು ಹೇಳಿದನು. ಬಳಿಕ ಅಗಸ್ತ್ಯರು ವಾತಾಪಿ ಮತ್ತು ಇಲ್ವಲರೆಂಬ ರಾಕ್ಷಸರನ್ನು ಸಂಹರಿಸಿ, ವಿಂಧ್ಯಗಿರಿಯು ಎತ್ತರಕ್ಕೆ ಬೆಳೆಯುತ್ತಿದ್ದುದನ್ನು ತಪ್ಪಿಸಿದುದನ್ನೂ ವಿವರಿಸಿದರು.

ಅರ್ಥ:
ಸುತ: ಮಗ; ಚರಿತ: ಕಥೆ; ದೃಗು: ದೃಕ್ಕು, ದೃಶ್; ಶಿಖಿ: ಅಗ್ನಿ; ಉರಿ: ದಹನ; ಬಳಿಕ: ನಂತರ; ಅಮರನದಿ: ಗಂಗೆ; ವಿಗಡ: ಉಗ್ರ, ಭೀಕರ; ಮುನಿ: ಋಷಿ; ಮರ್ದಿಸು: ಸಾಯಿಸು; ಗಿರಿ: ಬೆಟ್ಟ; ಹಬ್ಬುಗೆ: ಹರಡು, ವ್ಯಾಪಿಸು; ವರ್ಣಿಸು: ಬಣ್ಣಿಸು; ಇಳುಹು: ಕೆಳಕ್ಕೆ ತರು;

ಪದವಿಂಗಡಣೆ:
ಸಗರಸುತ +ಚರಿತವನು +ಕಪಿಲನ
ದೃಗು+ಶಿಖಿಯಲ್+ಉರಿದುದನು +ಬಳಿಕ್
ಅವರಿಗೆ +ಭಗೀರಥನ್+ಇಳುಹಿದ್+ಅಮರನದೀ+ ಕಥಾಂತರವ
ವಿಗಡಮುನಿ +ಇಲ್ವಲನ+ ವಾತಾ
ಪಿಗಳ +ಮರ್ದಿಸಿ +ವಿಂಧ್ಯಗಿರಿ+ ಹ
ಬ್ಬುಗೆಯ+ ನಿಲಿಸಿದ್+ಅಗಸ್ತ್ಯ +ಚರಿತವ +ಮುನಿಪ +ವರ್ಣಿಸಿದ

ಅಚ್ಚರಿ:
(೧) ಸಗರನ ಮಕ್ಕಳನ್ನು ಕೊಂದನು ಎಂದು ಹೇಳುವ ಪರಿ – ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು