ಪದ್ಯ ೮: ಧೃತರಾಷ್ಟ್ರನು ಹೇಗೆ ದುಃಖಿಸಿದನು?

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ (ದ್ರೋಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಂಜಯ, ನಾನು ಬಹಳವಾಗಿ ನೊಂದಿದ್ದೇನೆ, ದುರ್ಯೋಧನನು ಉದ್ಧಾರವಾಗಬಹುದೆಂಬ ಆಶೆ ಬಿಟ್ಟುಹೋಗಿದೆ, ಸುಟ್ಟಗಾಯದ ಮೇಲೆ ಸಾಸಿವೆಯ ಪುಡಿಯನ್ನು ಬಳಿಯಬೇಡ, ನಿನಗೆ ದಯೆಯಿಲ್ಲ, ನಿಮಗೆ ಎಷ್ಟು ಬಲವಿದ್ದರೂ ಶ್ರೀಕೃಷ್ಣನ ವಿರೋಧಿಗಳಾಗಿದ್ದೀರಿ ಎಂದು ಎಷ್ಟು ಬಾರಿ ಎಷ್ಟು ಬಗೆಯಿಂದ ಹೇಳಿದರು ಕೇಳದೇ ಹೋದ ನನ್ನ ಮಗ, ನಾನೇನು ಮಾಡಲಿ ಎಂದು ನೊಂದುಕೊಂಡನು.

ಅರ್ಥ:
ಘಾಸಿ: ದಣಿವು, ಆಯಾಸ; ಮಗ: ಸುತ; ಆಸೆ: ಇಚ್ಛೆ; ಬೀತು: ಕಡಿಮೆಯಾಗು, ಬತ್ತು; ಬೆಂದು: ಪಕ್ವ; ಹುಣ್ಣು: ಗಾಯ; ಬಳಿ: ಹರಡು; ದಯೆ: ಕರುಣೆ; ಬಲುಹು: ಶಕ್ತಿ; ಹಗೆ: ವೈರ; ಹರಿಬ: ಕಾಳಗ; ಏಸು: ಎಷ್ಟು; ಒರಲು: ಹೇಳು ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಘಾಸಿಯಾದೆನು +ಮಗನ +ಮೇಲಿನ್
ಆಸೆ +ಬೀತುದು +ಬೆಂದ +ಹುಣ್ಣಲಿ
ಸಾಸಿವೆಯ +ಬಳಿಯದಿರು +ಸಂಜಯ +ನಿನಗೆ +ದಯವಿಲ್ಲ
ಏಸು+ ಬಲುಹುಂಟಾದರೆಯು+ ಹಗೆ
ವಾಸುದೇವನ +ಹರಿಬವ್+ಎಂದಾನ್
ಏಸನ್+ಒರಲಿದೆನ್+ಏನ +ಮಾಡುವೆನ್+ಎಂದನ್+ಅಂಧನೃಪ

ಅಚ್ಚರಿ:
(೧) ಲೋಕ ನುಡಿ – ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು

ಪದ್ಯ ೪: ಮುನಿವರ್ಯರು ಭೀಷ್ಮನ ಮಾತಿಗೆ ಏನು ಹೇಳಿದರು?

ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿನಿಕರ (ಸಭಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರಿಸುತ್ತಾ, ಮುನಿಶ್ರೇಷ್ಠರಲ್ಲಿ ಹಿರಿಯರಾದ ವ್ಯಾಸ, ನಾರದ, ರೋಮಶ ಮೊದಲಾದವರು ಇಲ್ಲೇ ಇರುವರು, ಅವರಲ್ಲೇ ಕೇಳು ಶ್ರೀಕೃಷ್ಣನು ಪೂಜಾರ್ಹನೇ ಎಂದು ಹೇಳಲು, ಅಲ್ಲಿ ನೆರೆದಿದ್ದ ಸಮಸ್ತ ಮುನಿಸಮೂಹವು, ಭೀಷ್ಮನು ಆಡಿದ ಮಾತು ಸಮಂಜಸವಾಗಿದೆ, ಈ ಸಮಸ್ತ ಚರಾಚರವಸ್ತುಗಳಲ್ಲೂ ವಾಸುದೇವನೇ ಪೂಜೆಗೆ ಅರ್ಹನಾದವನು ಎಂದರು.

ಅರ್ಥ:
ಆದಿ: ಮೊದಲಾದ; ಸಮಸ್ತ: ಎಲ್ಲಾ; ಮುನಿ: ಋಷಿ; ಅರುಹ: ಅರ್ಹ, ಯೋಗ್ಯ; ಬೆಸ: ಕೇಳುವುದು, ಅಪ್ಪಣೆ; ಲೇಸ: ಸರಿ; ಆಡಿದೆ: ಮಾತಾಡಿದೆ; ಬಳಿಕ: ನಂತರ; ಚರ: ಚಲಿಸುವವನು; ಅಚರ: ಚಲಿಸದಲ್ಲದ; ಪೂಜ್ಯ: ಅದರಣೀಯವಾದುದು; ಸಕಲ: ಎಲ್ಲಾ; ನಿಕರ: ಗುಂಪು;

ಪದವಿಂಗಡಣೆ:
ವ್ಯಾಸ +ನಾರದ +ರೋಮಶ+ಆದಿಗಳ್
ಈ+ ಸಮಸ್ತ+ ಮುನೀಂದ್ರರಿದೆ+ಯೀ
ಕೇಶವನು +ಪೂಜಾರುಹನೆ+ಯೆಂದ್+ಇವರ+ ಬೆಸಗೊಳ್ಳೈ
ಲೇಸನಾಡಿದೆ+ ಭೀಷ್ಮ +ಬಳಿಕ+ಏನ್
ಈ +ಸಮಸ್ತ +ಚರಾಚರದೊಳ್+ಈ
ವಾಸುದೇವನೆ +ಪೂಜ್ಯನೆಂದುದು +ಸಕಲ+ ಮುನಿನಿಕರ

ಅಚ್ಚರಿ:
(೧) ಈ ಕಾರದಿಂದ ಶುರು ಮತ್ತು ಕೊನೆಗೊಳ್ಳುವ ೨, ೫ ಸಾಲು
(೨) ವ್ಯಾಸ, ವಾಸುದೇವ – ೧, ೬ ಸಾಲಿನ ಮೊದಲ ಪದ
(೩) ಸಮಸ್ತ, ಸಕಲ – ಸಮನಾರ್ಥಕ ಪದ
(೪) ಸಮಸ್ತ – ೨, ೫ ಸಾಲಿನ ೨ ಪದ