ಪದ್ಯ ೨೮: ಧೃತರಾಷ್ಟ್ರನು ದುರ್ಯೋಧನನನ್ನು ಹೇಗೆ ವಿಚಾರಿಸಿದನು?

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸ ಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ (ಸಭಾ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಮಗನೇ ನಿನಗೇಕೆ ಇಂತಹ ಗೊಂದಲ, ಹೇಳು. ನೀನು ನಿನ್ನ ಮನಸ್ಥಿತಿಯನ್ನು ಏಕೆ ಕದಡಿಕೊಂಡಿದ್ದೀಯ? ನಿನ್ನ ಸಂತೋಷಕ್ಕೆ ಏನು ಕೊರತೆ? ನೀನು ಏನನ್ನು ಬಯಸುವೆ ಹೇಳು ನಿನ್ನ ಹಿರಿಮೆಯು ಛಲವು ಪಂಥವು ಏಕೆ ಜಾರಿಹೋಗಿವೆ? ಅದನ್ನು ನನಗೆ ಹೇಳಬಾರದೆ ನಿನ್ನ ಸಂತೋಷವು ಜಾರಿಹೋಗಲು ಕಾರಣವಾದರು ಏನು ಎಂದು ತನ್ನ ಮಗನನ್ನು ಕೇಳಿದನು.

ಅರ್ಥ:
ಕಳವಳ: ಗೊಂದಲ, ತೊಂದರೆ; ಚಿತ್ತ: ಮನಸ್ಸು; ಬೈಸಿಕೆ: ಅಚಲತೆ, ದೃಢತೆ; ಡೊಳ್ಳಾಸ: ಮೋಸ, ಕಪಟ; ವಿಳಾಸ: ವಿಹಾರ, ಚೆಲುವು; ಕೂಣೆ: ಕೊರತೆ; ಹೇಳು: ತಿಳಿಸು; ನೆನಹು: ನೆನಪು; ಅಭಿರುಚಿ: ಆಸಕ್ತಿ, ಒಲವು, ಪ್ರೀತಿ; ವಾಸಿ:ಕೀರ್ತಿ; ಪೈಸರ: ವಿಸ್ತಾರ, ವ್ಯಾಪ್ತಿ, ಹರಹು; ಸೂಸು: ಎರಚುವಿಕೆ, ಚಲ್ಲುವಿಕೆ; ಹರುಷ: ಸಂತೋಷ; ಪೈಸರ: ಹಿಂದಕ್ಕೆ ಸರಿಯುವುದು, ಸೋಲು, ಭಂಗ; ಬೆಸ: ಕೇಳುವುದು;

ಪದವಿಂಗಡಣೆ:
ಈಸು +ಕಳವಳವೇನು +ಚಿತ್ತದ
ಬೈಸಿಕೆಗೆ+ ಡೊಳ್ಳಾಸವೇಕೆ+ ವಿ
ಳಾಸ+ ಕೂಣೆಯವೇನು+ ಹೇಳಾ+ ನೆನಹಿನ್+ಅಭಿರುಚಿಯ
ವಾಸಿಗಳ+ ಪೈಸರವನ್+ಎನ್ನಲಿ
ಸೂಸಬಾರದೆ+ ನಿನ್ನ +ಹರುಷಕೆ
ಪೈಸರವದೇನೆಂದು+ ಬೆಸಗೊಂಡನು+ ಸುಯೋಧನನ

ಅಚ್ಚರಿ:
(೧) ಹೇಳು ಎನ್ನಲು ಬಳಸಿದ ಪದಗಳು – ಸೂಸಬಾರದೆ, ಬೆಸಗೊಂಡು, ಹೇಳಾ

ಪದ್ಯ ೪೧: ರಾಜರ ಸಮೂಹವು ಏನೆಂದು ಗರ್ಜಿಸಿತು?

ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇ ಯೆನುತೊಡನೊಡನೆ ಗರ್ಜಿಸಿತು ನೃಪನಿಕರ (ಆದಿ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಮ್ಮ ಹಠ, ಸ್ಪರ್ಧೆಯನ್ನು ಅರಸುವುದಾದರೆ, ಈ ದ್ರುಪದನ ಮಾಂಸವನ್ನು ಹದ್ದು ಕಾಗಿಗೆ ಹಾಕಿ ಆ ವಿಪ್ರನನ್ನು ಸದೆಬಡೆದು ಪುನ: ಆ ವಿಪ್ರನು ಭಿಕ್ಷೆಬೇಡಿ ಊಟಮಾಡುವಂತೆ ಮಾಡಿ, ಈ ದ್ರೌಪದಿಯನ್ನು ನಮ್ಮ ವಿಲಾಸಿನಿಯರ ಮನೆಗಳಲ್ಲಿ ಕೂಡಿ ಹಾಕಬೇಕು ಎಂದು ಅಲ್ಲಿ ನೆರೆದಿದ್ದ ರಾಜರು ಮತ್ತೆ ಮತ್ತೆ ಗರ್ಜಿಸಿದರು.

ಅರ್ಥ:
ವಾಸಿ: ಸ್ಪರ್ಧೆ, ಹಠ, ಕೆಚ್ಚು; ಅರಸು:ಹುಡುಕು, ಅನ್ವೇಷಣೆ; ಮೀಸಲು: ಕಾಯ್ದಿರಿಸು; ಅಡಗು: ಮಾಂಸ; ಸೂಸಿ: ಸೋಕಿಸಿ; ವಿಪ್ರ: ಬ್ರಾಹ್ಮಣ; ಬಡಿ: ಹೊಡೆದು; ತಿರಿದು: ಭಿಕ್ಷೆಬೇಡಿ; ಉಣಲಿ: ಊಟಮಾಡಲಿ; ಸರೋಜ: ಕಮಲ; ಆನನ: ಮುಖ; ವಿಲಾಸಿನಿ: ದಾಸಿ; ವೀಧಿ: ಬೀದಿ; ಐಸಲೆ: ಅಷ್ಟೆ, ಅಲ್ಲವೆ; ಒಡನೊಡನೆ; ಮತ್ತೆ ಮತ್ತೆ; ಗರ್ಜಿಸು: ಜೋರಾಗಿ ಕೂಗು; ನೃಪ: ರಾಜ; ನಿಕರ: ಗುಂಪು;

ಪದವಿಂಗಡಣೆ:
ವಾಸಿಗಳನ್+ಅರಸುವಡೆ +ದ್ರುಪದನ
ಮೀಸಲ್+ಅಡಗನು +ಹದ್ದು +ಕಾಗೆಗೆ
ಸೂಸಿ +ವಿಪ್ರನ +ಬಡಿದು +ಬಿಡುವುದು +ಮತ್ತೆ +ತಿರಿದ್+ಉಣಲಿ
ಆ +ಸರೋಜಾನನೆಯ+ ನಮ್ಮ +ವಿ
ಲಾಸಿನಿಯ +ವೀಧಿಯಲಿ +ಕೂಡುವದ್
ಐಸಲೇ +ಯೆನುತ+ಒಡನೊಡನೆ +ಗರ್ಜಿಸಿತು +ನೃಪನಿಕರ

ಅಚ್ಚರಿ:
(೧) ವಾಸಿ, ಸೂಸಿ, ವಿಲಾಸಿ – ಪ್ರಾಸ ಪದಗಳು