ಪದ್ಯ ೮: ಪಾಂಡವರ ಸೇನೆಯಲ್ಲಿ ಏನು ಉಳಿದಿತ್ತು?

ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು (ಶಲ್ಯ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯಲ್ಲಿ ಆರುಸಾವಿರ ರಥಗಳು, ಮೂರು ಸಾವಿರ ಆನೆಗಳು, ಹತ್ತು ಸಾವಿರ ಕುದುರೆಗಳು, ಒಂದು ಕೋಟಿ ಕಾಲಾಳುಗಳು, ಉಳಿದಿದ್ದರು. ಎರಡೂ ಸೇನೆಗಳಲ್ಲಿ ಆರಂಭದಲ್ಲಿದ್ದ ಹದಿನೆಂಟು ಅಕ್ಷೋಹಿಣಿಗಳಲ್ಲಿ ಉಳಿದುದು ಇಷ್ಟೆ.

ಅರ್ಥ:
ವೈರಿ: ಶತ್ರು; ಬಲ: ಸೈನ್ಯ; ಸಾವಿರ: ಸಹಸ್ರ; ತೇರು: ಬಂಡಿ; ಗಜಘಟೆ: ಆನೆಯ ಗುಂಪು; ವಾರುವ: ಕುದುರೆ; ಅಂಗಳ: ಬಯಲು; ಎಣಿಸು: ಲೆಕ್ಕ ಹಾಕು; ತೆಗೆ: ಹೊರತರು; ವೀರ: ಶೂರ; ಭಟ: ಸೈನಿಕ; ಮಹೀರಮಣ: ರಾಜ; ಉಭಯ: ಎರಡು; ವಿಸ್ತಾರ: ವಿಶಾಲ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ;

ಪದವಿಂಗಡಣೆ:
ವೈರಿಬಲದೊಳಗ್+ಆರು +ಸಾವಿರ
ತೇರು +ಗಜಘಟೆ +ಮೂರು +ಸಾವಿರ
ವಾರುವಂಗಳನ್+ಎಣಿಸಿ +ತೆಗೆದರು +ಹತ್ತು +ಸಾವಿರವ
ವೀರಭಟರಾಯ್ತೊಂದು+ ಕೋಟಿ +ಮ
ಹೀರಮಣ +ಕೇಳ್+ಉಭಯಬಲ +ವಿ
ಸ್ತಾರ +ಹದಿನೆಂಟೆನಿಸಿದ್+ಅಕ್ಷೋಹಿಣಿಯ +ಶೇಷವಿದು

ಅಚ್ಚರಿ:
(೧) ಸಾವಿರ – ೧-೩ ಸಾಲಿನ ಕೊನೆಯ ಪದ

ಪದ್ಯ ೪೫: ದ್ರೋಣನನ್ನು ಸೈನ್ಯವು ಹೇಗೆ ಆವರಿಸಿತು?

ಸಾರಥಿಯ ತುಡುಕಿದರು ತಿವಿದರು
ತೇರ ಕುದುರೆಯನಿಭದ ಬರಿಕೈ
ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
ಭಾರಿಯೀಚಿನ ಮೇಲೆ ಬಿದ್ದವು
ವಾರುವಂಗಳ ಖುರನಿಕರವಸಿ
ಧಾರೆ ಮೊಗದಲಿ ಮೀಂಚಿದವು ಮುತ್ತಿದವು ಕಳಶಜನ (ದ್ರೋಣ ಪರ್ವ, ೧೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಾರಥಿಯನ್ನು ಹಿಡಿದರು, ತೇರಿನ ಕುದುರೆಯನ್ನು ಇರಿದರು, ಆನೆಗಳು ಸೊಂಡಿಲಿನಿಂದ ರಥದ ಅಚ್ಚನ್ನೂ, ಮೂಕಿಯನ್ನೂ ಅಲುಗಿಸಿದವು. ಈಚಿನ ಮೇಲೆ ಕುದುರೆಗಳು ಗೊರಸನ್ನಪ್ಪಳಿಸಿದವು. ಕತ್ತಿಗಳ ಅಲುಗುಗಳು ದ್ರೋಣನ ಮುಖದ ಬಳಿ ಮಿಂಚಿದವು.

ಅರ್ಥ:
ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ತಿವಿ: ಚುಚ್ಚು; ತೇರು: ಬಂಡಿ, ರಥ; ಕುದುರೆ: ಅಶ್ವ; ಇಭ: ಆನೆ; ಬರಿ: ಕೇವಲ; ಕೈ: ಹಸ್ತ; ಹಿಡಿ: ಬಂಧಿಸು, ಗ್ರಹಿಸು; ಘಲ್ಲಿಸು: ಘಲ್ ಎಂಬ ಶಬ್ದ; ಕೂಬರ: ಬಂಡಿಯ ಈಸು; ಭಾರಿ: ದೊಡ್ಡ; ಬಿದ್ದು: ಬೀಳು; ವಾರುವ: ಕುದುರೆ, ಅಶ್ವ; ಖುರ: ಕುದುರೆ ದನಕರು ಮುಂ.ವುಗಳ ಕಾಲಿನ ಗೊರಸು; ನಿಕರ: ಗುಂಪು; ಅಸಿ: ಕತ್ತಿ; ಧಾರೆ: ವರ್ಷ; ಮೊಗ: ಮುಖ; ಮಿಂಚು: ಹೊಳಪು; ಕಳಶಜ: ದ್ರೋಣ;

ಪದವಿಂಗಡಣೆ:
ಸಾರಥಿಯ+ ತುಡುಕಿದರು +ತಿವಿದರು
ತೇರ +ಕುದುರೆಯನ್+ಇಭದ +ಬರಿಕೈ
ತೇರ +ಹಿಡಿದವು+ ಘಲ್ಲಿಸಿದವ್+ಅನುಕರುಷ +ಕೂಬರವ
ಭಾರಿ+ಈಚಿನ +ಮೇಲೆ +ಬಿದ್ದವು
ವಾರುವಂಗಳ +ಖುರನಿಕರವ್+ಅಸಿ
ಧಾರೆ+ ಮೊಗದಲಿ +ಮಿಂಚಿದವು +ಮುತ್ತಿದವು +ಕಳಶಜನ

ಅಚ್ಚರಿ:
(೧) ಆನೆ ಸೊಂಡಿಲು ಎಂದು ಹೇಳಲು – ಇಭದ ಬರಿಕೈ ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
(೨) ಕುದುರೆ, ವಾರುವ – ಸಮಾನಾರ್ಥಕ ಪದಗಳು

ಪದ್ಯ ೬೦: ರಥವನ್ನು ಸೋತ ಬಳಿಕ ಧರ್ಮರಾಯ ಏನನ್ನು ಪಣಕ್ಕೆ ಇಟ್ಟನು?

ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದುದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಹತ್ತು ಸಾವಿರ ರಥಗಳನ್ನು ಸೋತ ಬಳಿಕ, ಧರ್ಮರಾಯನು ಈ ಹತ್ತು ಸಾವಿರ ರಥಗಳಿಗೆ ಕಟ್ಟಿದ ನಲವತ್ತು ಸಾವಿರ ಕುದುರೆಗಳೂ, ಅವನ್ನು ರಕ್ಷಿಸುವ ಪರಿವಾರ, ಸಹಾಯ ಸಾಮಗ್ರಿಗಳೇ ನನ್ನ ಪಣ ಎಂದನು ಧರ್ಮಜನು. ಶಕುನಿಯು, ಭಲೇ ಯುಧಿಷ್ಠಿರ ನೀನು ವೀರನೇ ಸರಿ, ಕಾಯಿಗಳನ್ನು ನಡೆಸು ಎಂದು ಆಟವಾರಂಭಿಸಿ ಕ್ಷಿಪ್ರಗತಿಯಲ್ಲಿ ಶಕುನಿಯು ಗೆದ್ದನು.

ಅರ್ಥ:
ರಥ: ಬಂಡಿ; ಸಾವಿರ: ಸಹಸ್ರ; ವಾರುವ: ಕುದುರೆ; ಕೂಟ: ಗುಂಪು; ಪರಿವಾರ: ಸುತ್ತಲಿನವರು, ಪರಿಜನ; ರಪಣ: ಆಸ್ತಿ, ಐಶ್ವರ್ಯ; ಸುಬಲತನಯ: ಶಕುನಿ; ವೀರ: ಪರಾಕ್ರಮಿ; ಧರಣಿಪತಿ: ರಾಜ; ಧರಣಿ: ಭೂಮಿ; ತೆಗೆ: ಈಚೆಗೆ ತರು, ಹೊರತರು; ಸಾರಿ:ಈಚೆಗೆ ತರು, ಹೊರತರು; ಬಿಡು: ತೊರೆ; ಬಿಗಿ: ಭದ್ರವಾಗಿರುವುದು, ಗಟ್ಟಿಯಾಗಿರುವುದು; ಹಾರು: ನೋಡು, ಅವಲೋ ಕಿಸು; ಸೋತು: ಪರಾಭವ; ಒದರು: ಕೊಡಹು, ಜಾಡಿಸು; ಹೋಗು: ತೆರಳು;

ಪದವಿಂಗಡಣೆ:
ಈ +ರಥಕೆ +ನಾಲ್ವತ್ತು +ಸಾವಿರ
ವಾರುವಂಗಳ+ ಕೂಟವಾ +ಪರಿ
ವಾರವ್+ಇದೆಲಾ +ರಪಣವೆಂದನು +ಸುಬಲತನಯಂಗೆ
ವೀರನಹೆಯೈ+ ಧರಣಿಪತಿ+ ತೆಗೆ
ಸಾರಿಗಳ +ಬಿಡು +ಸೆರೆಯ +ಬಿಗಿದುದು
ಹಾರದಲಿ+ ನೀ +ಸೋತೆ +ಹೋಗೆಂದ್+ಒದರಿದನು+ ಶಕುನಿ

ಅಚ್ಚರಿ:
(೧) ಶಕುನಿ ಧರ್ಮಜನನ್ನು ಹೊಗಳುವ ಪರಿ – ವೀರನಹೆಯೈ ಧರಣಿಪತಿ ತೆಗೆ ಸಾರಿಗಳ ಬಿಡು
(೨) ಶಕುನಿಯನ್ನು ಸುಬಲತನಯ ಎಂದು ಕರೆದಿರುವುದು