ಪದ್ಯ ೩೬: ಚಿತ್ರಸೇನನು ಕರ್ಣನ ಮೇಲೆ ಏನು ಹೇಳಿ ಅಸ್ತ್ರವನ್ನು ಪ್ರಯೋಗ ಮಾಡಿದನು?

ನೈರುತಕ್ಕಾಗ್ನೇಯ ಯಾಮ್ಯಕ
ವಾರುಣಕೆ ಸುರರೊಡೆಯರೆಮ್ಮಲಿ
ವೈರಬಂಧವಿದುಂಟೆ ಸಾಧನ ನಿನಗೆ ದಿವ್ಯಶರ
ಸೇರಿದರೆ ನಿನಗಾದರಿದೆಕೋ
ವಾರುಣ ಪ್ರತಿಕಾರ ಪಾವಕ
ನೈರುತಾದಿಗೆ ಕೊಳ್ಳೆನುತ ಗಂಧರ್ವಪತಿಯೆಚ್ಚ (ಅರಣ್ಯ ಪರ್ವ, ೨೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಿರಋತಿ, ಅಗ್ನಿ, ಯಮ, ವರುಣ ಇವರ ಅಸ್ತ್ರಗಳನ್ನು ನಮ್ಮ ಮೇಲೆ ನೀನು ಪ್ರಯೋಗಿಸುವುದು ವ್ಯರ್ಥ. ದೇವತೆಗಳಿಗೂ ನಮಗೂ ವೈರವಿಲ್ಲ. ನಾನೂ ಗಂಧರ್ವರೊಡೆಯ, ನಿನಗೆ ಈ ಅಸ್ತ್ರಗಳು ತಿಳಿದಿದ್ದರೆ, ನಿನ್ನ ವಶವಾದರೆ ಇವಕ್ಕೆಲ್ಲಾ ನೀರು ತಿದ್ದುವ, ಎಲ್ಲ ಅಸ್ತ್ರಗಳಿಗೂ ಪ್ರತಿಕಾರವಾದ ಈ ದಿವ್ಯಾಸ್ತ್ರಗಳನ್ನು ಎದುರಿಸು ಎಂದು ಚಿತ್ರಸೇನನು ಅಸ್ತ್ರ ಪ್ರಯೋಗ ಮಾಡಿದನು.

ಅರ್ಥ:
ನಿರುತಿ: ನೈಋತ್ಯದಿಕ್ಕಿನ ಒಡೆಯ; ಸುರರೊಡೆಯ: ಇಂದ್ರ; ಸುರ: ದೇವತೆ; ವೈರ: ಶತ್ರು; ಬಂಧ: ಕಟ್ಟು, ಬಂಧನ; ಸಾಧನ: ಸಾಧಿಸುವಿಕೆ; ದಿವ್ಯ: ಶ್ರೇಷ್ಠ; ಶರ: ಬಾಣ; ಸೇರು: ತಲುಪು, ಮುಟ್ಟು; ವಾರುಣ: ನೀರು; ಪ್ರತೀಕಾರ: ಪರಿಹಾರ, ನಿವಾರಣೆ; ಪಾವಕ: ಅಗ್ನಿ; ಆದಿ: ಮೊದಲಾದ; ಗಂಧರ್ವಪತಿ: ಗಂಧರ್ವರ ರಾಜ; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ನೈರುತಕ್+ಆಗ್ನೇಯ +ಯಾಮ್ಯಕ
ವಾರುಣಕೆ +ಸುರರ್+ಒಡೆಯರ್+ಎಮ್ಮಲಿ
ವೈರಬಂಧವಿದುಂಟೆ+ ಸಾಧನ+ ನಿನಗೆ+ ದಿವ್ಯಶರ
ಸೇರಿದರೆ+ ನಿನಗಾದರಿದೆ+ಕೋ
ವಾರುಣ+ ಪ್ರತಿಕಾರ+ ಪಾವಕ
ನೈರುತಾದಿಗೆ+ ಕೊಳ್ಳೆನುತ+ ಗಂಧರ್ವಪತಿ+ಎಚ್ಚ

ಪದ್ಯ ೩೫: ಕರ್ಣನು ಯಾವ ಬಾಣವನ್ನು ಹೂಡಿದನು?

ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯನಟ್ಟವಿಗಳಿಗೆ ಪಾಡಹಿರಿ ತುಡುಕುವೊಡೆ
ಅರಸು ಪರಿಯಂತೇಕೆ ನಿಮಗೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ (ಅರಣ್ಯ ಪರ್ವ, ೨೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕರ್ಣನು ಗಂಧರ್ವರ ಸೈನ್ಯವನ್ನು ಎದುರಿಸುತ್ತಾ, ಎಲೈ ಶೂರರೇ, ನೀವು ಅಮರಾವತಿಯ ನಟುವರಲ್ಲವೇ, ನೀವು ದುರ್ಯೋಧನನ ಅರಮನೆಯ ನಾಟ್ಯ ಮಾಡುವವರೊಡನೆ ಯುದ್ಧ ಮಾಡಲು ಸಾಧ್ಯ, ನಿಮಗೆ ರಾಜನವರೆಗೆ ಮಾತೇಕೆ, ಎನ್ನುತ್ತಾ ಆಗ್ನೇಯ, ವಾರುಣ, ನಿರಋತಿ ಮೊದಲಾದ ಮಂತ್ರಾಸ್ತ್ರಗಳನ್ನು ಕವಿಸಿದನು.

ಅರ್ಥ:
ಗರುವ: ಬಲಶಾಲಿ, ಶೂರ; ಸುರಪ: ಇಂದ್ರ; ಪುರ: ಊರು; ನಟುವ: ನರ್ತನ ಮಾಡುವವನು; ಅರಮನೆ: ರಾಜರ ಆಲಯ; ತುಡುಕು: ಹೋರಾಡು, ಸೆಣಸು; ಅರಸು: ರಾಜ; ಪರಿ: ಚಲಿಸು, ನಡೆ; ಅರಿಭಟ: ಶತ್ರುಸೈನ್ಯ; ಅಸ್ತ್ರ: ಆಯುಧ, ಶಸ್ತ್ರ; ಚಯ: ಸಮೂಹ, ರಾಶಿ; ಕವಿಸು: ಆವರಿಸು;

ಪದವಿಂಗಡಣೆ:
ಗರುವರೇ +ನೀವ್+ಎಲವೊ +ಸುರಪನ
ಪುರದ +ನಟ್ಟವಿಗರು +ಸುಯೋಧನನ್
ಅರಮನೆಯನ್+ಅಟ್ಟವಿಗಳಿಗೆ+ ಪಾಡಹಿರಿ +ತುಡುಕುವೊಡೆ
ಅರಸು+ ಪರಿಯಂತೇಕೆ+ ನಿಮಗೆನುತ್
ಅರಿ+ಭಟರಿಗ್+ಆಗ್ನೇಯ +ವಾರುಣ
ನಿರುತಿ+ ಮೊದಲಾದ್+ಅಸ್ತ್ರಚಯವನು +ಕವಿಸಿದನು +ಕರ್ಣ

ಅಚ್ಚರಿ:
(೧) ಕರ್ಣನು ಬಿಟ್ಟ ಬಾಣ – ಆಗ್ನೇಯ, ವಾರುಣ, ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ

ಪದ್ಯ ೪೬: ರಾಕ್ಷಸರು ಹೇಗೆ ನಿರ್ನಾಮವಾದರು?

ತೊಡಚಿದೆನು ಬ್ರಹ್ಮಾಸ್ತ್ರವನು ಹುರಿ
ಹೊಡೆದುದಸುರರು ಮಲೆತವರ ನಿ
ಕ್ಕಡಿಯ ಮಾಡಿತು ಬಂದುದಳಿವು ನಿವಾತ ಕವಚರಿಗೆ
ಕಡುಹಿನಿಂದ್ರಾಗ್ನೇಯ ವಾರುಣ
ದಡ ಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟಂತೆ ಕಳಚಿದವಸುರಬಲದಸುವ (ಅರಣ್ಯ ಪರ್ವ, ೧೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ಆಗ ನಾನು ಬ್ರಹ್ಮಾಸ್ತ್ರವನ್ನು ಹೂಡಿ ಪ್ರಯೋಗಿಸಿದೆನು. ಎದುರಾಗಿ ನಿಂತವರನ್ನು ಅದು ಕತ್ತರಿಸಿ ಹಾಕಿತು. ಇಂದ್ರ ಆಗ್ನೇಯ, ವಾರುಣ ಮುಂತಾದ ಅಸ್ತ್ರಗಳನ್ನು ಹೂಡಿದನು. ಆ ಅಸ್ತ್ರವು ಬಾಚಿ ಎಲ್ಲರನ್ನು ಆಹುತಿಗೊಂಡಿತು. ಬರ ಸಿಡಿಲನ್ನು ಸೆರೆಯಿಂದ ಬಿಟ್ಟಂತೆ ಅಪ್ಪಳಿಸಿ ರಾಕ್ಷಸರನ್ನು ನಿರ್ನಾಮ ಮಾಡಿತು. ನಿವಾತಕವಚರು ನಿರ್ನಾಮವಾದರು.

ಅರ್ಥ:
ತೊಡಚು: ಕಟ್ಟು, ಬಂಧಿಸು; ಅಸ್ತ್ರ: ಶಸ್ತ್ರ; ಹುರಿ: ಕೆಚ್ಚು, ಬಲ, ಗಟ್ಟಿತನ; ಅಸುರ: ದಾನವ; ಮಲೆ: ಎದುರಿಸು, ಪ್ರತಿಭಟಿಸು; ಬಂದು: ಆಗಮಿಸು; ಉಳಿ: ಬಿಡು, ತೊರೆ; ಕಡುಹು: ಸಾಹಸ, ಹುರುಪು; ಇಂದ್ರ: ಶಕ್ರ; ದಡ: ತೀರ, ಅಂಚು; ಬಳಿಕ: ಹತ್ತಿರ; ಬಾಚು: ಎಳೆದುಕೊಳ್ಳು, ಸೆಳೆ; ಬರಸಿಡಿಲ: ಅನಿರೀಕ್ಷಿತವಾದ ಆಘಾತ, ಅಕಾಲದಲ್ಲಿ ಬೀಳುವ ಸಿಡಿಲು; ಸೆರೆ: ಒಂದು ಕೈಯ ಬೊಗಸೆ; ಬಿಡು: ತೊರೆ; ಕಳಚು: ಬೇರ್ಪಡಿಸು; ಬಲ: ಸೈನ್ಯ; ಅಸು: ಪ್ರಾಣ; ಅಳಿ: ಸಾವು;

ಪದವಿಂಗಡಣೆ:
ತೊಡಚಿದೆನು +ಬ್ರಹ್ಮಾಸ್ತ್ರವನು +ಹುರಿ
ಹೊಡೆದುದ್+ಅಸುರರು +ಮಲೆತವರನ್
ಇಕ್ಕಡಿಯ +ಮಾಡಿತು +ಬಂದುದ್+ಅಳಿವು +ನಿವಾತ +ಕವಚರಿಗೆ
ಕಡುಹಿನ್+ಇಂದ್ರ+ಆಗ್ನೇಯ +ವಾರುಣ
ದಡ +ಬಳಿಗರನು +ಬಾಚಿದವು+ ಬರ
ಸಿಡಿಲ+ ಸೆರೆ +ಬಿಟ್ಟಂತೆ +ಕಳಚಿದವ್+ಅಸುರಬಲದ್+ಅಸುವ

ಅಚ್ಚರಿ:
(೧) ಬ ಕಾರದ ಪದಗಳ ಬಳಕೆ/ ಉಪಮಾನದ ಪ್ರಯೋಗ – ಬಳಿಗರನು ಬಾಚಿದವು ಬರಸಿಡಿಲ ಸೆರೆ ಬಿಟ್ಟಂತೆ

ಪದ್ಯ ೭: ದೇವತೆಗಳು ಯಾವ ಅಸ್ತ್ರಗಳನ್ನು ನೀಡಿದರು?

ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀಮದೀಯಾಸ್ತ್ರವನೆನುತ ಸು
ತಾಮನಿತ್ತನು ದಿವ್ಯ ಬಾಣವನಿಂದ್ರ ಸಂಜ್ಞಿಕವ
ಸಾಮವರ್ತಿಕ ದಂಡ ವಾರುಣ
ತಾಮಸದ ಸಮ್ಮೋಹನವಿದೆಂ
ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ (ಅರಣ್ಯ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ಆ ಪಾಶುಪತಾಸ್ತ್ರಕ್ಕೆ ಬಳುವಳಿಯಾಗಿ ನನ್ನ ಐಂದ್ರಾಸ್ತ್ರವನ್ನು ತೆಗೆದುಕೋ ಎಂದು ಇಂದ್ರನು ತನ್ನ ಅಸ್ತ್ರವನ್ನು ಅರ್ಜುನನಿಗೆ ನೀಡಿದನು. ಯಮನು ಯಮದಂಡಾಸ್ತ್ರವನ್ನು ವರುಣನು ಅಮ್ಮೋಹನಾಸ್ತ್ರವನ್ನು, ಕುಬೇರನು ಅಂತರ್ಧನಾಸ್ತ್ರವನ್ನು ನೀಡಿದರು.

ಅರ್ಥ:
ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಳುವಳಿ: ಕಾಣಿಕೆ, ಕೊಡುಗೆ; ಕೊಡು: ನೀಡು; ಬಾಣ: ಶರ; ಸುತ್ರಾಮ: ಇಂದ್ರ, ದೇವೇಂದ್ರ; ಸಂಜ್ಞಿಕ: ಗುರುತು; ಸಾಮವರ್ತಿಕ: ಯಮ; ದಂಡ: ಕೋಲು; ತಾಮಸ: ಕತ್ತಲೆ, ಅಂಧಕಾರ; ಸಮ್ಮೋಹ: ಮೋಹ, ಆಕರ್ಷಣೆ; ಅಂತಕ: ಯಮ; ವರುಣ: ನೀರಿನ ಅಧಿದೇವತೆ; ಧನದರು: ಕುಬೇರ; ಕೊಟ್ಟರು: ನೀಡಿದರು; ಅಂಬು: ಬಾಣ;

ಪದವಿಂಗಡಣೆ:
ಆ+ ಮಹಾಸ್ತ್ರಕೆ+ ಬಳುವಳಿಯ +ಕೊಳ್
ಈ+ಮದೀಯಾಸ್ತ್ರವನ್+ಎನುತ+ ಸು
ತ್ರಾಮನ್+ಇತ್ತನು +ದಿವ್ಯ +ಬಾಣವನ್+ಇಂದ್ರ+ ಸಂಜ್ಞಿಕವ
ಸಾಮವರ್ತಿಕ+ ದಂಡ +ವಾರುಣ
ತಾಮಸದ+ ಸಮ್ಮೋಹನನ್+ಇದೆಂದ್
ಆ+ ಮಹಾಂತಕ+ ವರುಣ+ ಧನದರು+ ಕೊಟ್ಟರ್+ಅಂಬುಗಳ

ಅಚ್ಚರಿ:
(೧) ಮಹಾಸ್ತ್ರ, ಮಹಾಂತಕ – ಮಹಾ ಪದದ ಬಳಕೆ
(೨) ಸುತ್ರಾಮ, ಇಂದ್ರ – ಸಮನಾರ್ಥಕ ಪದ