ಪದ್ಯ ೫: ಭೋಜನದ ಪ್ರಮಾಣ ಹೇಗಿತ್ತು?

ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರ ಪ್ರಸ್ಥ ನಗರಿಯಲಿ (ಸಭಾ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ಎಷ್ಟು ಲಕ್ಷ, ಕೋಟಿ, ನಿರ್ಬುದ, ಖರ್ವ, ಪದ್ಮಗಳಷ್ಟು ಬ್ರಾಹ್ಮಣರು ಊಟ ಮಾಡಿದರೋ ಲೆಕ್ಕವಿಲ್ಲ. ಭಕ್ಷ್ಯ, ಅನ್ನಗಳ ಪರ್ವತರಾಶಿಗಳು ಕಂಡವು. ಎಷ್ಟು ಹಾಲು, ಮೊಸರು, ಜೇನುತುಪ್ಪಗಳ ಸಮುದ್ರಗಳಿದ್ದವೋ ತಿಳಿಯದು.

ಅರ್ಥ:
ಏಸು: ಎಷ್ಟು; ನಿರ್ಬುದ: ದೊಡ್ಡ ಸಂಖ್ಯೆ; ಖರ್ವ: ಮುರಿದ, ಕುಳ್ಳನಾದ, ಕುಬ್ಜನಾದ; ಪದ್ಮ: ಕಮಲ; ದ್ವಿಜ: ಬ್ರಾಹ್ಮಣ; ಗಣನೆ: ಎಣಿಕೆ; ಅರಿ: ತಿಳಿ; ಭಕ್ಷ: ತಿಂಡಿ, ಭಕ್ಷ್ಯ, ಆಹಾರ, ಉಣಿಸು; ಪರ್ವತ: ಬೆಟ್ಟ; ರಾಶಿ: ಗುಪ್ಪೆ, ಬಟ್ಟಲು; ದಧಿ: ಮೊಸರು; ಘೃತ: ತುಪ್ಪ; ದುಗ್ಧ: ಹಾಲು; ಮಧು: ಜೇನುತುಪ್ಪ; ವಾರಾಸಿ: ಸಮುದ್ರ; ಒಡ್ಡಣ: ಗುಂಪು, ಸಮೂಹ; ಮೆರೆ: ಹೊಳೆ, ಪ್ರಕಾಶಿಸು; ನಗರ: ಊರು;

ಪದವಿಂಗಡಣೆ:
ಏಸು+ ಲಕ್ಷವದ್+ಏಸು +ಕೋಟಿಯದ್
ಏಸು +ನಿರ್ಬುದವ್+ಏಸು +ಖರ್ವವದ್
ಏಸು +ಪದ್ಮ+ದ್ವಿಜರ+ ಗಣನೆಯನ್+ಅರಿವರ್+ಆರದನು
ಏಸು+ ಭಕ್ಷ್ಯೋದನದ +ಪರ್ವತ
ರಾಶಿ +ದಧಿ +ಘೃತ +ದುಗ್ಧ +ಮಧು +ವಾ
ರಾಸಿಯೊಡ್ಡಣೆ+ ಮೆರೆದುದ್+ಇಂದ್ರಪ್ರಸ್ಥ+ ನಗರಿಯಲಿ

ಅಚ್ಚರಿ:
(೧) ಏಸು – ೧-೪ ಸಾಲಿನ ಮೊದಲ ಪದ
(೨) ಪರ್ವತ, ವಾರಾಸಿ ಎಂಬ ಉಪಮಾನಗಳ ಪ್ರಯೋಗ

ಪದ್ಯ ೬: ಧರ್ಮರಾಯನು ಭೀಷ್ಮಂಗೆ ಏನೆಂದು ಬಿನ್ನವಿಸಿದನು?

ಈಸು ಪೌರುಷ ದೈವಘಟನೆಯೊ
ಳೀಸು ಪರಿಯಂತಾಯ್ತು ಯಜ್ಞವು
ಮೀಸಲಳಿಯದೆ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಸಿ ಮೇರೆಯನೊದೆವುತಿದೆ ನಿಮ
ಗೇಸುಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ (ಸಭಾ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಆಶ್ಚರ್ಯ ಚಕಿತನಾದ ಧರ್ಮರಾಯನು ಭೀಷರಿಗೆ, ಯಜ್ಞವು ನಿಮ್ಮ ಆಶೀರ್ವಾದದಿಮ್ದ ಸ್ವಲ್ಪವೂ ವ್ಯತ್ಯಾಸವಾಗದೆ ಇಷ್ಟುದಿನ ಸಾಂಗವಾಗಿ ನಡೆದಿದೆ, ಆದರೀಗ ದೈವವಶದಿಮ್ದ ಪೌರುಷ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ, ಈ ರಾಜ ಸಮೂಹ ಸಮುದ್ರವು ಮೇರೆ ತಪ್ಪುವುದರಲ್ಲಿದೆ ನಿಮ್ಮ ಮೇಲೆ ಎಂತಹ ಭಾರ ಬಿದ್ದಿತು ಎಂದು ಧರ್ಮನಂದನನು ಭೀಷಂಗೆ ಬಿನ್ನವಿಸಿದನು.

ಅರ್ಥ:
ಪೌರುಷ: ಪರಾಕ್ರಮ; ದೈವ: ಭಗವಂತ; ಘಟೆ: ಗುಂಪು; ಪರಿ: ರೀತಿ; ಯಜ್ಞ: ಯಾಗ; ಮೀಸಲು: ಮುಡಿಪು, ಪ್ರತ್ಯೇಕ; ನಡೆದುದು: ಆಚರಣೆ; ಕರುಣ: ದಯೆ; ಸಮಸ್ತ: ಎಲ್ಲಾ; ನೃಪಾಲ: ರಾಜ; ವಾರಾಸಿ: ಸಮುದ್ರ; ಮೇರೆ: ಎಲ್ಲೆ, ಗಡಿ; ಒದೆ: ತಳ್ಳು; ಭಾರ: ಹೊರೆ; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಈಸು +ಪೌರುಷ +ದೈವ+ಘಟನೆಯೊಳ್
ಈಸು +ಪರಿಯಂತ್+ಆಯ್ತು +ಯಜ್ಞವು
ಮೀಸಲ್+ಅಳಿಯದೆ +ನಡೆದುದಿನ್ನೆಗ+ ನಿಮ್ಮ +ಕರುಣದಲಿ
ಈ +ಸಮಸ್ತ +ನೃಪಾಲಜನ +ವಾ
ರಾಸಿ +ಮೇರೆಯನ್+ಒದೆವುತಿದೆ +ನಿಮಗ್
ಏಸು+ಭಾರವಿದೆಂದು +ಬಿನ್ನವಿಸಿದನು +ಭೀಷ್ಮಂಗೆ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದಗಳು – ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ
(೨) ಬಹಳ ರಾಜರು ಎಂದು ಹೇಳಲು – ನೃಪಾಲಜನ ವಾರಾಸಿ ಮೇರೆಯನೊದೆವುತಿದೆ

ಪದ್ಯ ೧೬: ಅರ್ಜುನನು ಧರ್ಮಜನ ಬಳಿ ಏನು ಮಾಡುವೆನೆಂದು ಹೇಳಿದನು?

ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇವಮ ಕೊಂಡೆ ನಾನೆಂದ (ಕರ್ಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಡೆಯ ನಿಮ್ಮ ಮನಸ್ಸಿಗೆ ಇಷ್ಟೊಂದು ಬೇಸರವಾಯಿತೇ? ನಿಮಗೆ ಹೀಗಾದ ಮೇಲೆ ನಾನು ಇದ್ದೂ ಏನು ಬಂತು. ಇದೆಲ್ಲಾ ಪಾಪಕರ್ಮಗಳ ವಾಸನೆಯ ಫಲ. ಕುರುಸೇನೆಯ ವೀರರ ಸಮುದ್ರವನ್ನೇ ಮುಕ್ಕಳಿಸಿ ಉಗುಳುತ್ತೇನೆ, ನಿಮ್ಮಾಣೆ, ನನಗೆ ಅಪ್ಪಣೆ ನೀಡಿ ಎಂದು ಅರ್ಜುನನು ಹೇಳಿದನು.

ಅರ್ಥ:
ಈಸು: ಇಷ್ಟು; ಪರಿ: ರೀತಿ; ಚಿತ್ತ: ಮನಸ್ಸು; ಆಸರಾಗು: ಆಶ್ರಯವಾಗು; ದುಷ್ಕೃತ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಫಲ: ಪ್ರಯೋಜನ; ಐಸಲೇ:ಅಲ್ಲವೇ; ಇದ್ದು: ಉಳಿದು; ವಿಗಡ: ಶೌರ್ಯ, ಪರಾಕ್ರಮ; ಭಟ: ಸೈನಿಕ; ವಾರಾಸಿ: ಸಮುದ್ರ; ಮುಕ್ಕುಳಿಸು: ಚೆಲ್ಲು; ಧರಣೀಶ: ರಾಜ; ಆಣೆ: ಪ್ರಮಾಣ; ನೇಮ: ನಿಯಮ; ಕೊಂಡೆ: ತೆಗೆದುಕೊ;

ಪದವಿಂಗಡಣೆ:
ಈಸು+ ಪರಿಯಲಿ +ನಿಮ್ಮ +ಚಿತ್ತದೊಳ್
ಆಸರಾಯಿತೆ +ನಮ್ಮ +ದುಷ್ಕೃತ
ವಾಸನಾ+ ಫಲವೈಸಲೇ +ತಾನಿದ್ದು +ಫಲವೇನು
ಆ +ಸುಯೋಧನ +ವಿಗಡ +ಭಟ +ವಾ
ರಾಸಿಯನು +ಮುಕ್ಕುಳಿಸುವೆನು +ಧರ
ಣೀಶ +ನಿಮ್ಮಡಿಯಾಣೆ+ ನೇವಮ+ ಕೊಂಡೆ +ನಾನೆಂದ

ಅಚ್ಚರಿ:
(೧) ಅರ್ಜುನನು ಕುರುಸೇನೆಯನ್ನು ಸಂಹರಿಸುವ ಬಗೆ (ನೀರನ್ನು ಮುಕ್ಕುಳಿಸಿ ಹೊರಹಾಕುವ ಹಾಗೆ) ಉಪಮಾನದ ಪ್ರಯೋಗ – ಆ ಸುಯೋಧನ ವಿಗಡ ಭಟ ವಾರಾಸಿಯನು ಮುಕ್ಕುಳಿಸುವೆನು