ಪದ್ಯ ೫: ಗಣಿಕೆಯರು ಯಾರಮೇಲೆ ದಾಳಿ ಮಾಡಿದರು?

ಪಾರಿವದುಪಾಧ್ಯರನು ನಮಿಸುತೆ
ವಾರನಾರಿಯರಾನನದಲಿ ಚ
ಕೋರಗಳ ಚಾಲೈಸಿದರು ಕೆಲರಂಗಪರಿಮಳಕೆ
ಸಾರಿದರೆ ಮರಿದುಂಬಿಗಳ ಸುಖ
ಪಾರಣೆಯ ಬೆಸಗೊಳುತ ನಗುತ ವಿ
ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ (ಅರಣ್ಯ ಪರ್ವ, ೧೯ ಸಂಧಿ, ೫ ಪದ್ಯ)

ತಾತ್ಪರ್ಯ:
ಗಣಿಕೆಯರು ಪಾರಿವಾಳದ ಉಪಾಧ್ಯಾರರಿಗೆ ಕೈಮುಗಿದು, ಮುಖದಿಂದ ಚಕೋರ ಪಕ್ಷಿಗಳ ಅನುಕರಣ ಮಾಡಿದರು. ಅವರ ಅಂಗ ಪರಿಮಳಕ್ಕೆ ಬಂದ ದುಂಬಿಗಳನ್ನು ಊಟವಾಯಿತೇ ಎಂದು ಕೇಳಿದರು. ಇಂತಹ ಸುಂದರ ಗಣಿಕೆಯರು ರಾಜಾ ಮತ್ತು ಮುನಿಗಳ ಆಶ್ರಯಕ್ಕೆ ದಾಳಿಯಿಟ್ಟರು.

ಅರ್ಥ:
ಪಾರಿವ: ಪಾರಿವಾಳ; ಉಪಾಧ್ಯ: ಉಪಾಧ್ಯಾಯ; ನಮಿಸು: ಎರಗು, ಗೌರವಿಸು; ವಾರನಾರಿ: ಗಣಿಕೆ, ವೇಶ್ಯೆ; ಆನನ: ಮುಖ; ಚಕೋರ: ಜೊನ್ನ ವಕ್ಕಿ, ಬೆಳದಿಂಗಳನ್ನೇ ಸೇವಿಸಿ ಬದುಕುವುದೆಂದು ನಂಬಲಾದ ಒಂದು ಪಕ್ಷಿ; ಚಾಳೈಸು: ಚಲಿಸುವಂತೆ ಮಾಡು; ಕೆಲರು: ಕೆಲವರು; ಅಂಗ: ದೇಹದ ಭಾಗ; ಪರಿಮಳ: ಸುಗಂಧ; ಸಾರು: ಹರಡು; ಮರಿದುಂಬಿ: ಚಿಕ್ಕ ಭ್ರಮರ; ಸುಖ: ನೆಮ್ಮದಿ; ಪಾರಣೆ: ತೃಪ್ತಿ, ಸಂತೋಷ; ಬೆಸ: ಕೆಲಸ, ಕಾರ್ಯ; ನಗುತ: ಹರ್ಷ; ವಿಕಾರ: ಬದಲಾವಣೆ, ಮಾರ್ಪಾಟು; ವೇಡೈಸು: ಸುತ್ತುವರಿ; ನೃಪ: ರಾಜ; ಮುನಿ: ಋಷಿ; ಆಶ್ರಮ: ಕುಟೀರ;

ಪದವಿಂಗಡಣೆ:
ಪಾರಿವದ್+ಉಪಾಧ್ಯರನು +ನಮಿಸುತೆ
ವಾರನಾರಿಯರ್+ಆನನದಲಿ +ಚ
ಕೋರಗಳ+ ಚಾಲೈಸಿದರು+ ಕೆಲರ್+ಅಂಗ+ಪರಿಮಳಕೆ
ಸಾರಿದರೆ +ಮರಿದುಂಬಿಗಳ +ಸುಖ
ಪಾರಣೆಯ +ಬೆಸಗೊಳುತ +ನಗುತ +ವಿ
ಕಾರಿಗಳು +ವೇಡೈಸಿದರು +ನೃಪ +ಮುನಿ +ನಿಜಾಶ್ರಮವ

ಅಚ್ಚರಿ:
(೧) ಗಣಿಕೆಯರ ಸೌಂದರ್ಯ – ಅಂಗಪರಿಮಳಕೆ ಸಾರಿದರೆ ಮರಿದುಂಬಿಗಳ ಸುಖಪಾರಣೆಯ ಬೆಸಗೊಳುತ

ಪದ್ಯ ೮೮: ಅಪ್ಸರೆಯರ ಸೌಂದರ್ಯ ಹೇಗಿತ್ತು?

ತೊಲಗಿಸೋ ಮಂದಿಯನು ತೆಗೆ ಬಾ
ಗಿಲನೆನಲು ಕವಿದುದುಸುರೇಂದ್ರನ
ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ
ಸುಳಿಗುರುಳ ನಿಟ್ಟೆಸಳುಗಂಗಳ
ಹೊಳೆವ ಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ (ಅರಣ್ಯ ಪರ್ವ, ೮ ಸಂಧಿ, ೮೮ ಪದ್ಯ)

ತಾತ್ಪರ್ಯ:
ಗುಂಪುಗಳನ್ನು ಓಡಿಸ್, ಅವರು ಹೋದ ಮೇಲೆ ಬಾಗಿಲು ತೆಗೆಯೆನ್ನಲು ದ್ವಾರಪಾಲಕರು ಹಾಗೆಯೇ ಮಾಡಿದರು. ಬಾಗಿಲು ತೆಗೆದೊಡನೆ ಸ್ವರ್ಗದ ವಿಲಾಸಿನಿಯರು ಆಸ್ಥಾನಕ್ಕೆ ಬಂದರು. ಲಾವಣ್ಯ ತರಂಗದಂತೆ ಸುಂದರವಾಗಿ ಭ್ರಾಂತಿಯನ್ನುಂಟು ಮಾಡುವ ಬೆಡಗಿಯರು ಆಗಮಿಸಿದರು. ಅವರ ಗುಂಗುರು ಕೂದಲು, ನಿಡಿದಾದಾ ಹೂವಿನ ದಳದಂತಿರುವ ಕಣ್ಣುಗಳು, ಹೊಳೆವ ಕೆನ್ನೆಗಳು, ನುಣುಪಾದ ಕೊರಳು, ಉಬ್ಬಿದ ಸ್ತನಗಳು, ದೇವತೆಗಳನ್ನು ಆ ಅಪ್ಸರೆಯರತ್ತ ನೂಕಿತು.

ಅರ್ಥ:
ತೊಲಗು: ಹೊರನೂಕು; ಮಂದಿ: ಜನರು; ತೆಗೆ: ಈಚೆಗೆ ತರು, ಹೊರತರು; ಬಾಗಿಲು: ಕದ; ಕವಿ: ಮುಸುಕು; ಸುರೇಂದ್ರ: ಇಂದ್ರ; ಲಲನೆ: ಹೆಣ್ಣು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಲಲಿತ: ಚೆಲುವಾದ, ಸುಂದರವಾದ; ವಿಭ್ರಮ: ಭ್ರಮೆ, ಭ್ರಾಂತಿ; ಸುಳಿ:ಗುಂಡಾಗಿ ಸುತ್ತು; ಕುರುಳು: ಗುಂಗುರು ಕೂದಲು; ಎಸಳು: ಹೂವಿನ ದಳ; ಕಂಗಳು: ಕಣ್ಣು; ಹೊಳೆ: ಕಾಂತಿ; ಕದಪು: ಕೆನ್ನೆ; ನುಣುಪು: ನಯ, ಒರಟಲ್ಲದುದು; ಕೊರಳು: ಗಂಟಲು; ಬಲು: ದೊಡ್ಡ ಮೊಲೆ: ಸ್ತನ; ಮೋಹರ: ಗುಂಪು; ನೂಕು: ತಳ್ಳು; ಅಮರ: ದೇವತೆ; ವಾರನಾರಿ: ವೇಶ್ಯೆ;

ಪದವಿಂಗಡಣೆ:
ತೊಲಗಿಸೋ+ ಮಂದಿಯನು +ತೆಗೆ +ಬಾ
ಗಿಲನ್+ಎನಲು +ಕವಿದುದು+ಸುರೇಂದ್ರನ
ಲಲನೆಯರು +ಲಾವಣ್ಯ +ಲಹರಿಯ +ಲಲಿತ +ವಿಭ್ರಮದ
ಸುಳಿಗುರುಳ+ ನಿಟ್ಟೆಸಳುಗಂಗಳ
ಹೊಳೆವ +ಕದಪಿನ +ನುಣ್ಗೊರಳ+ ಬಲು
ಮೊಲೆಯ +ಮೋಹರ +ನೂಕಿತ್+ಅಮರೀ + ವಾರನಾರಿಯರ

ಅಚ್ಚರಿ:
(೧) ಲ ಕಾರದ ಸಾಲು ಪದಗಳು – ಲಲನೆಯರು ಲಾವಣ್ಯ ಲಹರಿಯ ಲಲಿತ

ಪದ್ಯ ೫೫: ಧರ್ಮರಾಯನು ಯಾರನ್ನು ಪಣಕ್ಕೆ ಹೂಡಲು ಯೋಚಿಸಿದ?

ಫಡ ದರಿದ್ರನೆ ತಾನು ತನ್ನೆಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಶಕುನಿಯ ಹಂಗಿಸುವ ಮಾತಿಗೆ ಪ್ರತಿಕ್ರಯಿಸುತ್ತಾ, ನಾನು ದರಿದ್ರನೇ, ನನ್ನ ರಾಣಿಯರ ಸಖಿಯರು, ದುರ್ಯೋಧನನ ಅಂತಃಪುರದ ವಾರನಾರಿಯರು ಸಾವಿರದಷ್ಟಿದ್ದಾರೆ ಎಂದನು, ಇದಕ್ಕೆ ಶಕುನಿಯು, ಅಲ್ಲವೇ ನಿಮ್ಮಪಾದ, ಪಣವನ್ನೊಡ್ಡಿದ ಮೇಲೆ ಅವರು ಗೆದ್ದವರ ಆಸ್ತಿಯಾಗುತ್ತಾರೆ, ದಾಳವನ್ನು ಹಾಕು ಎಂದು ಕೂಗಿದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದರಿದ್ರ: ಹೀನವಾದ, ಕೆಟ್ಟ; ಮಡದಿ: ಹೆಂಡತಿ; ಕೆಳದಿ: ಗೆಳತಿ, ಸ್ನೇಹಿತೆ; ಸಾವಿರ: ಸಹಸ್ರ; ಮಡಿ: ಪಟ್ಟು; ರಾಜಭವನ: ಅರಮನೆ; ವಾರನಾರಿ: ವೇಶ್ಯೆ; ನಾರಿ: ಹೆಣ್ಣು; ನುಡಿ: ಮಾತು; ನಿಮ್ಮಡಿ: ನಿಮ್ಮ ಪಾದ; ಒಡ್ಡು: ಪಣಕ್ಕೆ ಹಾಕು; ಬಳಿಕ: ನಂತರ; ಗೆಲಿ: ಗೆಲುವು, ಜಯ; ಒಡವೆ: ಆಭರಣ; ಐಸಲೆ: ಅಲ್ಲವೇ; ಹಾಯ್ಕು: ಹೂಡು; ಒದರು: ಹೇಳು;

ಪದವಿಂಗಡಣೆ:
ಫಡ +ದರಿದ್ರನೆ +ತಾನು +ತನ್ನೆಯ
ಮಡದಿಯರ+ ಕೆಳದಿಯರು +ಸಾವಿರ
ಮಡಿ +ಸುಯೋಧನ+ ರಾಜಭವನದ+ ವಾರನಾರಿಯರ
ನುಡಿಯಬೇಕೇ+ ಧರ್ಮಸುತ +ನಿ
ಮ್ಮಡಿಗಳ್+ಒಡ್ಡಿದ +ಬಳಿಕ +ಗೆಲಿದವರ್
ಒಡವೆ+ಐಸಲೆ +ಹಾಯ್ಕು +ಹಾಯ್ಕೆಂದ್+ಒದರಿದನು +ಶಕುನಿ

ಅಚ್ಚರಿ:
(೧) ನುಡಿ, ನಿಮ್ಮಡಿ – ಪ್ರಾಸ ಪದ
(೨) ಗೆದ್ದವರ ಸ್ವತ್ತು ಎಂದು ಹೇಳಲು – ಗೆಲಿದವರೊಡವೆ ಪದದ ಬಳಕೆ