ಪದ್ಯ ೯೭: ಯಾರು ಮಲ್ಲನೆನಿಸಿಕೊಳ್ಳುವನು?

ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪ ಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೭ ಪದ್ಯ)

ತಾತ್ಪರ್ಯ:
ಪೆಟ್ಟು ವರಸೆ ಮತ್ತು ಮರುವರಸೆಗಳಲ್ಲಿ ದೇಹವನ್ನು ಹಿಡಿದು ಹೊಸ ರೀತಿಯ ಪಟ್ಟುಗಳನ್ನು ಹಾಕಿ ಬೇಸರವಿಲ್ಲದೆ ನೆಲಹಿಡಿದೋ, ಹಿಂದು ಮುಂದೆ ಓಡಾಡಿಯೋ ಹಲವು ಚಮತ್ಕಾರಗಳ ವಿನೋದವನ್ನೂ, ಯಾವುದಕ್ಕೆ ಇನ್ನಾವುದು ಎದುರು ಎಂಬ ಲೆಕ್ಕಾಚಾರವನ್ನೂ ಬಲ್ಲವನು ಮಲ್ಲನೆನಿಸಿಕೊಳ್ಳುತ್ತಾನೆ ಎಂದು ವಿದುರ ಹೇಳಿದನು.

ಅರ್ಥ:
ಗಾಯ:ಪೆಟ್ಟು; ಮೇಣ್: ಅಥವ; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಕಾಯ: ದೇಹ; ನವಾಯಿ:ಹೊಸತನ, ಚೆಲುವು; ಬಿನ್ನಾಣ: ವಿಶೇಷವಾದ ಜ್ಞಾನ, ಕೌಶಲ್ಯ; ಬಳಿ: ಹತ್ತಿರ; ಸಂದು: ಮೂಲೆ, ಕೋನ; ಬೇಸರ: ಆಸಕ್ತಿಯಿಲ್ಲದಿರುವಿಕೆ, ಬೇಜಾರು; ಸ್ಥಾಯಿ: ಸ್ಥಿರವಾದ, ನೆಲೆಗೊಂಡ; ಸಂಚಾರ: ಚಲನೆ, ಅಡ್ಡಾಡುವುದು; ಸಮಗೈ: ಒಂದೆ ಸಮನಾದ ಶಕ್ತಿ, ಸಮಾನತೆ; ನಾನಾ: ಹಲವಾರು; ವಿನೋದ: ಹಾಸ್ಯ, ತಮಾಷೆ; ದಾಯ: ಸಮಯ, ಅವಕಾಶ, ಉಪಾಯ; ಅರಿ: ತಿಳಿ; ಮಲ್ಲ: ಜಟ್ಟಿ; ರಾಯ: ರಾಜ;

ಪದವಿಂಗಡಣೆ:
ಗಾಯದಲಿ +ಮೇಣ್ +ಚೊಕ್ಕೆಯದಲ್+ಅಡು
ಪಾಯಿಗಳಲುಪ +ಕಾಯದೊಳಗೆ +ನ
ವಾಯಿಗಳ +ಬಿನ್ನಾಣದಲಿ +ಬಳಿಸಂದು +ಬೇಸರದೆ
ಸ್ಥಾಯಿಯಲಿ +ಸಂಚಾರದಲಿ +ಸಮ
ಗೈಯೆನಿಸಿ +ನಾನಾ +ವಿನೋದದ
ದಾಯವರಿವವನ್+ಅವನೆ +ಮಲ್ಲನು +ರಾಯ +ಕೇಳೆಂದ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬಿನ್ನಾಣದಲಿ ಬಳಿಸಂದು ಬೇಸರದೆ
(೨) ‘ಸ’ಕಾರದ ತ್ರಿವಳಿ ಪದ – ಸ್ಥಾಯಿಯಲಿ ಸಂಚಾರದಲಿ ಸಮಗೈಯೆನಿಸಿ
(೩) ಪಾಯಿ, ವಾಯಿ, ಸ್ಥಾಯಿ – ಪ್ರಾಸ ಪದಗಳು ೨,೩,೪ ಸಾಲಿನ ಮೊದಲ ಪದ