ಪದ್ಯ ೯: ಕುದುರೆಗಳು ಹೇಗೆ ಮಲಗಿದ್ದವು?

ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ (ದ್ರೋಣ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಾಯಿಂದ ನೊರೆಯಿಳಿಯುತ್ತಿರಲು, ಮೈ ಬೆಂಡಾಗಿ ತುದಿಗೊರಸನ್ನೂರಿ ಕಣ್ಣನ್ನು ಅರೆತೆರೆದು ಲಾಯದಲ್ಲಿ ಮಲಗಿದಂತೆ ಕುದುರೆಗಳ ಸಾಲು ಮಲಗಿತ್ತು. ರಾವುತರ ಕಿರೀಟಗಳು ಮರಗೋಡಿನ ಮೇಲಿದ್ದವು.

ಅರ್ಥ:
ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಇಳಿ: ಕೆಳಕ್ಕೆ ಬೀಳು; ಮೈ: ತನು; ಹಳುವ: ಕಾಡು; ಮಿಗೆ: ಅಧಿಕ; ತುದಿ: ಕೊನೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಊರು: ಮೆಟ್ಟು; ನವಾಯಿ: ಹೊಸರೀತಿ, ಠೀವಿ; ಮಿಗಲು: ಹೆಚ್ಚು; ಅರೆ: ಅರ್ಧ; ನೋಟ: ದೃಷ್ಥಿ; ಆಲಿ: ಕಣ್ಣು; ಮಿಡುಕು: ಅಲುಗಾಟ, ಚಲನೆ; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ಲಂಬಿಸು: ತೂಗಾಡು, ಜೋಲಾಡು; ವಾನಾಯುಜ: ಕುದುರೆ; ಸಾಲು: ಆವಳಿ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಮರಗೋಡು: ಕುದುರೆಯ ನೆತ್ತಿಗೆ ಕಟ್ಟಿದ ಲೋಹದ ರಕ್ಷೆ; ಓಲೈಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಾಯ +ಲೋಳೆಗಳ್+ಇಳಿಯೆ +ಮೈಹಳು
ವಾಯಿ +ಮಿಗೆ +ತುದಿ +ಖುರವನ್+ಊರಿ +ನ
ವಾಯಿ +ಮಿಗಲ್+ಅರೆನೋಟದ್+ಆಲಿಯ +ಮಿಡುಕದವಿಲಣದ
ಲಾಯದಲಿ +ಲಂಬಿಸಿದವೊಲು+ ವಾ
ನಾಯುಜದ +ಸಾಲೆಸೆದುದ್+ಒರಗಿದ
ರಾಯ +ರಾವ್ತರ+ ಮಣಿಮಕುಟ+ ಮರಗೋಡನ್+ಓಲೈಸೆ

ಅಚ್ಚರಿ:

(೧) ವಾನಾಯುಜ – ಕುದುರೆಗಳನ್ನು ಕರೆದ ಪರಿ
(೨) ಲಾಯ, ಬಾಯ, ರಾಯ – ಪ್ರಾಸ ಪದಗಳು
(೩) ಕುದುರೆಗಳು ಮಲಗಿದ ಪರಿ – ವಾನಾಯುಜದ ಸಾಲೆಸೆದುದೊರಗಿದ ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ

ಪದ್ಯ ೨೨: ಕರ್ಣನ ವೇಗವನ್ನು ಯಾವುದು ನಿಲ್ಲಿಸಿದವು?

ರಾಯದಳದೊಳು ಮಡಿವ ಕರಿ ವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ (ಕರ್ಣ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧರ್ಮರಾಯನ ಸೈನ್ಯದಲ್ಲಿ ಸತ್ತ ಆನೆ, ಕುದುರೆಗಳಿಗೆ ಕಡೆಯಿರಲಿಲ್ಲ. ರಥಗಳು ಎಷ್ಟು ನಾಶವಾದವೋ, ಎಷ್ಟು ಮಂದಿ ಕಾಲಾಳುಗಳು ಮಡಿದರೋ ಹೇಳಲಾಗುವುದಿಲ್ಲ. ಕರ್ಣನನ್ನು ತಡೆಯುವವರೇ ಇಲ್ಲವೆಂದು ವೈರಿ ಸೈನ್ಯ ಬಾಯ ಬಿಟ್ಟಿತು, ಆದರೆ ಕರ್ಣನು ಕೆಳಗುರುಳಿಸಿದ ಹೆಣಗಳು, ಆಯುಧಗಳೇ ಅವನ ವೇಗವನ್ನು ತಡೆಯುತ್ತಿದ್ದವು.

ಅರ್ಥ:
ರಾಯ: ರಾಜ,ನೃಪ; ದಳ: ಸೈನ್ಯ; ಮಡಿ: ಸಾವು; ಕರಿ: ಆನೆ; ವಾನಾಯುಜ: ಕುದುರೆ; ಕಡೆ: ಕೊನೆ; ರಥಿಕ: ರಥದಲ್ಲಿ ಯುದ್ಧ ಮಾಡುವವ; ಪಾಯದಳ: ಕಾಲಾಳು, ಸೈನಿಕ; ಅಳಿ: ಸಾವು; ಅರಿ: ತಿಳಿ; ಬಾಯಬಿಟ್ಟು: ಆಶ್ಚರ್ಯದ ಸೂಚಕ; ಸೇನೆ: ಸೈನ್ಯ; ಕಡಿಖಂಡ: ಕತ್ತರಿಸಿದ ಭಾಗ; ಆಯತ: ವಿಶಾಲವಾದ; ಹೆಣ: ಶವ; ಒಟ್ಟು: ಸೇರಿ; ಮುರಿದ: ಸೀಳು; ಆಯುಧ: ಶಸ್ತ್ರ; ಸಂದಣಿ: ಗುಂಪು, ರಾಶಿ; ನಿಲಿಸು: ತಡೆ; ಬಳಿಕ: ನಂತರ; ರವಿಸುತ: ಕರ್ಣ;

ಪದವಿಂಗಡಣೆ:
ರಾಯದಳದೊಳು+ ಮಡಿವ +ಕರಿ +ವಾ
ನಾಯುಜಕೆ+ ಕಡೆಯಿಲ್ಲ +ರಥಿಕರು
ಪಾಯದಳವ್+ಎನಿತ್+ಅಳಿದುದೋ+ ನಾನರಿಯೆನ್+ಅದರೊಳಗೆ
ಬಾಯಬಿಟ್ಟುದು +ಸೇನೆ +ಕಡಿಖಂಡ
ಆಯತದ +ಹೆಣನೊಟ್ಟಲಿನ +ಮುರಿದ್
ಆಯುಧದ +ಸಂದಣಿಯೆ +ನಿಲಿಸಿತು +ಬಳಿಕ +ರವಿಸುತನ

ಅಚ್ಚರಿ:
(೧) ಆಶ್ಚರ್ಯಪಟ್ಟರು ಎಂದು ತಿಳಿಸಲು – ಬಾಯಬಿಟ್ಟುದು ಸೇನೆ
(೨) ಕರ್ಣನಿಗೆ ತಡೆಯುಂಟು ಮಾಡಿದ್ದು – ಹೆಣನೊಟ್ಟಲಿನ ಮುರಿದಾಯುಧದ ಸಂದಣಿಯೆ ನಿಲಿಸಿತು

ಪದ್ಯ ೪: ಘಾಯಗೊಂಡ ಆನೆ, ಕುದುರೆ, ಸೈನಿಕರ ಸ್ಥಿತಿ ಏನಾಯಿತು?

ಘಾಯವಡೆದಾನೆಗಳು ಗುಳವನು
ಹಾಯಿಕಲು ನೆಲಕುರುಳಿದವು ವಾ
ನಾಯುಜಂಗಳು ಬಿಗುಹ ಬಿಡೆದೊಪ್ಪೆಂದವಾಚೆಯಲಿ
ಘಾಯದಲಿ ಮುರಿದಂಬನುಗುಳಿದು
ಸಾಯದಿಹರೇ ಭಟರು ಗಜ ಹಯ
ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ (ಕರ್ಣ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಯುದ್ಧವಾದ ಮೇಲೆ ಎಲ್ಲರೂ ಬಿಡಾರಕ್ಕೆ ಬರಲು, ಘಾಯವಾದ ಆನೆಗಳ ಗುಳವನ್ನು ತೆಗೆದೊಡನೆ ಆನೆಗಳು ನೆಲಕ್ಕೆ ಬಿದ್ದವು, ಹಲ್ಲಣವನ್ನು ತೆಗೆಯಲು ಕುದುರೆಗಳು ದೊಪ್ಪೆಂದು ಬಿದ್ದವು, ಮೈಯಲ್ಲಿ ನೆಟ್ಟ ಬಾಣಗಳನ್ನು ಕೀಳಲು ಸೈನಿಕರು ಮಡಿದರು. ಆನೆ ಕುದುರೆಗಳು ಲಾಯದಲ್ಲಿ ಹತ್ತು ಕಟ್ಟಿದ್ದ ಜಾಗದಲ್ಲಿ ಮಾತ್ರ ಉಳಿದವು.

ಅರ್ಥ:
ಘಾಯ: ನೋವು, ಹುಣ್ಣು; ಆನೆ: ಗಜ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಹಾಯಿಕು: ಹಾಕು; ನೆಲ: ಭೂಮಿ; ಉರುಳು: ಬೀಳು; ವಾನಾಯುಜ: ಕುದುರೆ; ಬಿಗುಹು: ಬಿಗಿ, ಗಟ್ಟಿ; ಬಿಡು: ಕಟ್ಟಿನಿಂದ ಸಡಿಲಗೊಳಿಸು; ದೊಪ್ಪು: ಒಮ್ಮೆಲೆ; ಆಚೆ: ಹೊರಗಡೆ; ಮುರಿ: ಸೀಳು; ಅಂಬು: ಬಾಣ; ಉಗುಳು: ಹೊರಹಾಕು; ಸಾಯ: ಸಾವು, ಮರಣ; ಭಟ: ಸೈನಿಕ; ಹಯ: ಕುದುರೆ; ಲಾಯ: ಅಶ್ವಶಾಲೆ; ಹೆಚ್ಚು: ಏರಿತು;

ಪದವಿಂಗಡಣೆ:
ಘಾಯವಡೆದ್+ಆನೆಗಳು +ಗುಳವನು
ಹಾಯಿಕಲು +ನೆಲಕ್+ಉರುಳಿದವು +ವಾ
ನಾಯುಜಂಗಳು+ ಬಿಗುಹ+ ಬಿಡೆ+ದೊಪ್ಪೆಂದವ್+ಆಚೆಯಲಿ
ಘಾಯದಲಿ +ಮುರಿದ್+ಅಂಬನ್+ಉಗುಳಿದು
ಸಾಯದಿಹರೇ+ ಭಟರು+ ಗಜ+ ಹಯ
ಲಾಯ +ಹತ್ತೊಂದಾಗಿ +ಹೆಚ್ಚಿತು +ಕೌರವೇಶ್ವರನ

ಅಚ್ಚರಿ:
(೧) ಘಾಯ – ೧, ೪ ಸಾಲಿನ ಮೊದಲ ಪದ
(೨) ಆನೆ, ಗಜ; ಹಯ, ವಾನಾಯುಜ – ಸಮನಾರ್ಥಕ ಪದ
(೩) ಹ ಕಾರದ ತ್ರಿವಳಿ ಪದ – ಹಯಲಾಯ ಹತ್ತೊಂದಾಗಿ ಹೆಚ್ಚಿತು
(೪) ಕೆಳಕ್ಕೆ ಬಿದ್ದವು ಎಂದು ಹೇಳುವ ಪದಗಳು – ಉರುಳು, ದೊಪ್ಪೆಂದವು, ಉಗುಳು