ಪದ್ಯ ೬೨: ಧೃತರಾಷ್ಟ್ರನು ಧರ್ಮಜನಿಗೆ ಏನು ಹೇಳಿದನು?

ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲದೇಶಾಗಮನದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆಕಂದಯೆಂದನು ಮರಳಿ ತೆಗೆದಪ್ಪಿ (ಸಭಾ ಪರ್ವ, ೧೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ನನ್ನ ಮಕ್ಕಳ ನೀಚತನವನ್ನು ಮರೆತು ಭೂಮಿಯನ್ನು ಪಾಲಿಸು. ಅಪರಾಧಿಗಳು ಬಾಯಿಬಡಿಕರೂ ಆದವರ ಮಾತನ್ನು ಕೇಳಬೇಡ. ಕಾಲ, ದೇಶ, ಆಗಮ, ವೇದಗಳ ರೀತಿ ಕ್ರಮಗಳಿಗನುಸಾರವಾಗಿ, ಈ ಲೋಕ ಪರಲೋಕಗಳ ಸೌಖ್ಯಕ್ಕೆ ತೊಂದರೆಯಾಗದಂತೆ ನಡೆ, ಎಂದು ಹೇಳಿ ಧರ್ಮಜನನ್ನು ಮತ್ತೆ ಆಲಿಂಗಿಸಿಕೊಂಡನು.

ಅರ್ಥ:
ಪಾಲಿಸು: ರಕ್ಷಿಸು, ಕಾಪಾಡು; ಅವನಿ: ಭೂಮಿ; ಮಕ್ಕಳು: ಸುತರು; ಖೂಳ: ದುಷ್ಟ, ದುರುಳ; ಮನ: ಮನಸ್ಸು; ತರು: ತೆಗೆದುಕೊಂಡು ಬರು; ಆಲಿಸು: ಮನಸ್ಸಿಟ್ಟು ಕೇಳು; ಅಪರಾಧ: ತಪ್ಪು; ವಾಚಾಳ: ಅತಿ ಮಾತಾಡುವವ; ವಚೋತ್ತರ: ಶ್ರೇಷ್ಠವಾದ ಮಾತು; ಕಾಲ: ಸಮಯ; ದೇಶ: ರಾಷ್ಟ್ರ; ಆಗಮ: ಸೇರುವುದು, ಬರುವುದು; ನಿಗಮ: ವೇದ, ಶ್ರುತಿ; ಡಾಳ: ಹೊಳಪು, ಪ್ರಭೆ; ದೈಹಿಕ: ಶರೀರಕ್ಕೆ ಸಂಬಂಧಿಸಿದ; ಪರತ್ರ: ಮುಕ್ತಿ; ವಿಟಾಳಿಸು: ಹರಡು; ನಡೆ: ಮುಂದೆಹೋಗು; ಕಂದ: ಮಗು; ಮರಳಿ: ಪುನಃ; ಅಪ್ಪು: ತಬ್ಬಿಕೋ;

ಪದವಿಂಗಡಣೆ:
ಪಾಲಿಸ್+ಅವನಿಯನ್+ಎನ್ನ +ಮಕ್ಕಳ
ಖೂಳತನವನು +ಮನಕೆ +ತಾರದಿರ್
ಆಲಿಸದಿರ್+ಅಪರಾಧಿ +ವಾಚಾಳರ +ವಚೋತ್ತರವ
ಕಾಲ+ದೇಶ+ಆಗಮನದ+ ನಿಗಮದ
ಡಾಳವರಿ+ದೈಹಿಕ+ ಪರತ್ರ+ ವಿ
ಟಾಳಿಸದೆ +ನಡೆ+ಕಂದಯೆಂದನು+ ಮರಳಿ+ ತೆಗೆದಪ್ಪಿ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಆಲಿಸದಿರಪರಾಧಿ ವಾಚಾಳರ ವಚೋತ್ತರವ