ಪದ್ಯ ೮: ಧರ್ಮಜನು ಯಾರನ್ನು ಸನ್ಮಾನಿಸಿದನು?

ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ (ಗದಾ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಮುನೀಂದ್ರರು, ಎಲ್ಲಾ ದೇಶಗಲ ಬ್ರಾಹ್ಮಣರು, ಇವರೆಲ್ಲರಿಗೆ ಗೋ, ಭೂಮಿ, ವಸ್ತ್ರ, ಬಂಗಾರಗಲ ದಾನವನ್ನು ಕೊಟ್ಟು ಧರ್ಮಜನು ಸತ್ಕರಿಸಿದನು. ಪರಿಜನರು ಪುರಜನರು, ಸಮಸ್ತ ದೇಶಗಳ ಜನರನ್ನು ಧರ್ಮಜನು ವಿಹಿತವಾಗಿ ವೈಭವದಿಂದ ಸನ್ಮಾನಿಸಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ನಿಖಿಳ: ಎಲ್ಲಾ; ದೇಶ: ರಾಷ್ಟ್ರ; ಭೂಸುರ: ಬ್ರಾಹ್ಮಣ; ವರ್ಗ: ಗುಂಪು; ಸತ್ಕರಿಸು: ಆದರಿಸು; ಗೋ: ಆಕಳು; ಭೂಮಿ: ಅವನಿ; ವಸನ: ವಸ್ತ; ಹಿರಣ್ಯ: ಚಿನ್ನ; ದಾನ: ನೀಡುವ ಪದಾರ್ಥ; ಪರಿಜನ: ಬಂಧುಜನ; ಪುರಜನ: ಊರಿನ ಜನ; ರತ್ನಾಕರ: ಸಮುದ್ರ; ರತ್ನಾಕರಪರೀತ: ಸಮುದ್ರದಿಂದ ಸುತ್ತವರಿಯಲ್ಪಟ್ಟ; ಮಹೀ: ಭೂಮಿ; ಜನ: ಗುಂಪು; ಆದರಿಸು: ಗೌರವಿಸು; ವೈಭವ: ಶಕ್ತಿ, ಸಾಮರ್ಥ್ಯ; ಸನ್ಮಾನ: ಗೌರವ;

ಪದವಿಂಗಡಣೆ:
ವರ +ಮುನೀಂದ್ರರ+ ನಿಖಿಳ +ದೇಶಾಂ
ತರದ +ಭೂಸುರ+ವರ್ಗವನು +ಸ
ತ್ಕರಿಸಿದನು +ಗೋ +ಭೂಮಿ +ವಸನ +ಹಿರಣ್ಯ+ದಾನದಲಿ
ಪರಿಜನವ +ಪುರಜನವ +ರತ್ನಾ
ಕರಪರೀತ +ಮಹೀ+ಜನವನ್
ಆದರಿಸಿದನು +ವೈಭವವಿಹಿತ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕರಿಸು, ಆದರಿಸು- ಸಾಮ್ಯಾರ್ಥ ಪದ

ಪದ್ಯ ೪೮: ಧರ್ಮಜನು ಹೇಗೆ ಚೇತರಿಸಿಕೊಂಡನು?

ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಂಹನವ (ಶಲ್ಯ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧರ್ಮಜನು ಒಂದು ಕ್ಷಣದಲ್ಲಿ ಮತ್ತೆ ಎಚ್ಚೆತ್ತನು. ಅವನ ಗಾಯಗಳನ್ನು ತೊಳೆದು ದಿವ್ಯೌಷಧಿಗಳನ್ನು ಲೇಪಿಸಿದರು. ಸುಗಂಧವನ್ನು ಪೂಸಿದರು. ಹೊಸ ಬಟ್ಟೆಗಳನ್ನು ಮಣಿ ಭೂಷಣಗಳನ್ನು ತೊಟ್ಟು, ದೇಹವನ್ನು ಸಾವರಿಸಿಕೊಂಡು ಧರ್ಮಜನು ಬಿಲ್ಲನು ನೇವರಿಸಿದನು

ಅರ್ಥ:
ಕ್ಷಣ: ಅಲ್ಪ ಸಮಯ; ಮರಳು:ಹಿಂದಕ್ಕೆ ಬರು; ಎಚ್ಚು: ಬಾಣ ಪ್ರಯೋಗ ಮಾದು; ಅಸ್ತ್ರ: ಶಸ್ತ್ರ; ವ್ರಣ: ಗಾಯ; ತೊಳೆ: ಸ್ವಚ್ಛ ಮಾದು; ಘಾಯ: ಪೆಟ್ಟು; ಕೇವಣ: ಕೂಡಿಸುವುದು, ಕೆಚ್ಚುವುದು; ದಿವ್ಯ: ಶ್ರೇಷ್ಠ; ಔಷಧಿ: ಮದ್ದು; ಗಂಧ: ಸುಗಂಧ ದ್ರವ್ಯ; ಅನುಲೇಪ: ಬಳಿಯುವಿಕೆ; ರಣ: ಯುದ್ಧ; ವಿಜಯ: ಗೆಲುವು; ನವ: ಹೊಸ; ವಸನ: ವಸ್ತ್ರ; ಮಣಿ: ಬೆಲೆಬಾಳುವ ರತ್ನ; ಭೂಷಣ: ಅಲಂಕರಿಸುವುದು; ಪರಿಷ್ಕೃತ: ಶೋಧಿಸಿದ; ತಿರುವು: ತಿರುಗು, ಬಾಗು; ಗೊಣೆ: ಬಿಲ್ಲನ ಹೆದೆ, ಮೌರ್ವಿ; ನೇವರಿಸು: ಸವರು, ಉಗುರಿಸು; ಸಂತೈಸು: ಸಾಂತ್ವನಗೊಳಿಸು; ಸಂಹನನ: ನಾಶ;

ಪದವಿಂಗಡಣೆ:
ಕ್ಷಣಕೆ+ ಮರಳ್+ಎಚ್ಚತ್+ ತನ್+ಅಸ್ತ್ರ
ವ್ರಣವ +ತೊಳೆದರು +ಘಾಯದಲಿ +ಕೇ
ವಣಿಸಿದರು +ದಿವ್ಯೌಷಧಿಯ +ಗಂಧಾನುಲೇಪದಲಿ
ರಣ+ವಿಜಯ +ನವ +ವಸನ +ಮಣಿ+ಭೂ
ಷಣ +ಪರಿಷ್ಕೃತನಾಗಿ +ತಿರುವಿನ
ಗೊಣೆಯವನು +ನೇವರಿಸಿದನು +ಸಂತೈಸಿ +ಸಂಹನವ

ಪದ್ಯ ೨೦: ಕೃಷ್ಣನು ಯಾವ ರೀತಿಯಲ್ಲಿ ಅರ್ಜುನನ ಜೊತೆ ಇಂದ್ರಪ್ರಸ್ಥಕ್ಕೆ ಬಂದನು?

ಕರೆಸಿ ಯಾದವ ನಾಯಕರ ಸಂ
ವರಣೆಯನು ನಿಜಪುರದ ಕಾ
ಹಿಂಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣೆಯ
ತರಿಸಿ ಭಂಡಾರದಲಿ ವಿವಿಧಾ
ಭರಣ ವಸನಾದಿಗಳ ಹೇರಿಸಿ
ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ (ಸಭಾ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯಾದವ ನಾಯಕರನ್ನು ದ್ವಾರಕೆಯ ಕಾವಲಿಗೆ ಇಟ್ಟು, ಬಲರಾಮನಿಗೆ ಎಲ್ಲವನ್ನೂ ರಕ್ಷಿಸುವ ಹೊಣೆಯನ್ನು ಕೊಟ್ಟು, ಭಂಡಾರದಿಂದ ವಿವಿಧ ಆಭರಣ, ವಸ್ತ್ರಗಳನ್ನು ಗಾಡಿಯಲ್ಲಿ ಹೇರಿಸಿ, ಶ್ರೀಕೃಷ್ಣನು ಬಂಧುಗಳೊಡನೆ ಅರ್ಜುನನ ಜೊತೆಗೆ ಬಂದನು.

ಅರ್ಥ:
ಕರೆಸಿ: ಬರೆಮಾಡಿ; ನಾಯಕ: ಮುಖಂಡ; ಸಂವರಣೆ:ರಕ್ಷಣೆ; ನಿಜ: ನೈಜ, ಸ್ವಂತ; ಪುರ: ಊರು; ನೇಮಿಸು: ಗೊತ್ತು ಮಾಡು, ನಿಯಮಿಸು; ಸಕಲ: ಎಲ್ಲಾ; ರಕ್ಷಣೆ: ಸಂರಕ್ಷಿಸುವಿಕೆ; ತರಿಸು: ಬರೆಮಾಡು; ಭಂಡಾರ: ಬೊಕ್ಕಸ, ಖಜಾನೆ; ವಿವಿಧ: ಹಲವಾರು; ಆಭರಣ; ಒಡವೆ; ವಸನ: ಬಟ್ಟೆ; ಆದಿ: ಮುಂತಾದ; ಹೇರಿಸಿ: ಸೇರಿಸಿ; ಬಂಧುಜನ: ಸಂಬಂಧಿಕರು; ಸಹಿತ; ಜೊತೆ;

ಪದವಿಂಗಡಣೆ:
ಕರೆಸಿ +ಯಾದವ +ನಾಯಕರ+ ಸಂ
ವರಣೆಯನು +ನಿಜಪುರದ+ ಕಾ
ಹಿಂಗಿರಿಸಿ+ ಬಲದೇವಂಗೆ +ನೇಮಿಸಿ +ಸಕಲ+ ರಕ್ಷಣೆಯ
ತರಿಸಿ +ಭಂಡಾರದಲಿ+ ವಿವಿಧಾ
ಭರಣ +ವಸನಾದಿಗಳ +ಹೇರಿಸಿ
ಹರಿ +ಧನಂಜಯನೊಡನೆ +ಬಂದನು +ಬಂಧುಜನ+ ಸಹಿತ

ಅಚ್ಚರಿ:
(೧) ಕರೆಸಿ, ಹಿಂಗಿರಿಸಿ, ತರಿಸಿ – “ಸಿ” ಕಾರದಿಂದ ಕೊನೆಗೊಳ್ಳುವ ಪದ
(೨) ಬಂದನು ಬಂಧುಜನ – ಬಂ ದಿಂದ ಜೋಡಿಪದಗಳು