ಪದ್ಯ ೪: ಪಾಂಡವರಿಗೆ ಎಷ್ಟು ವರ್ಷಗಳಾದವು?

ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ (ಆದಿ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಜನಿಗೆ ಹದಿನಾರು ವರ್ಷಗಳು ತುಂಬಿದವು. ಭೀಮನಿಗೆ ಹದಿನೈದು ವರ್ಷ, ಅರ್ಜುನನಿಗೆ ಹದಿನಾಲ್ಕು, ನಕುಲ ಸಹದೇವರಿಗೆ ಹದಿಮೂರು ವರ್ಷಗಳು ತುಂಬಿದವು. ಅವರೆಲ್ಲರಿಗೂ ಋಷಿಗಳಿಂದ ವಿದ್ಯಾಭ್ಯಾಸವು ನಡೆಯುತ್ತಿತ್ತು. ಹೀಗೆ ಪಾಂಡವರು ವಿದ್ಯಾಭ್ಯಾಸದಲ್ಲಿ ಮಗ್ನರಾಗಿರಲು ವಸಂತ ಋತುವು ಬಂದಿತು.

ಅರ್ಥ:
ವರುಷ: ಸಂವತ್ಸರ; ಧರಣೀಶ್ವರ: ರಾಜ; ಹಿರಿಯ: ದೊಡ್ಡ, ಜೇಷ್ಠ; ಮಗ: ಪುತ್ರ; ಕಿರಿಯ: ಚಿಕ್ಕವ; ಮುನಿ: ಋಷಿ; ವರ: ಶ್ರೇಷ್ಠ; ಅಧ್ಯಯನ: ಓದುವುದು; ವಿದ್ಯ: ಜ್ಞಾನ; ನಿರತ: ಆಸಕ್ತನಾದ; ಬಂದು: ಆಗಮಿಸು; ವಸಂತ: ಆರು ಋತುಗಳಲ್ಲಿ ಒಂದು; ಸಮಯ: ಕಾಲ;

ಪದವಿಂಗಡಣೆ:
ವರುಷ +ಹದಿನಾರಾಯ್ತು+ ಧರಣೀ
ಶ್ವರನ +ಹಿರಿಯ +ಮಗಂಗೆ +ಭೀಮಗೆ
ವರುಷ +ಹದಿನೈದ್+ಅರ್ಜುನಗೆ +ಹದಿನಾಲ್ಕು +ಹದಿಮೂರು
ಕಿರಿಯರಿಬ್ಬರಿಗ್+ಅನಿಬರಾ +ಮುನಿ
ವರರಿನ್+ಅಧ್ಯಯನಾದಿ +ವಿದ್ಯಾ
ನಿರತರಾದರು +ಬಂದುದೊಂದು +ವಸಂತಮಯ +ಸಮಯ

ಅಚ್ಚರಿ:
(೧) ಹಿರಿಯ, ಕಿರಿಯ – ವಿರುದ್ಧ ಪದಗಳು
(೨) ವರುಷ – ೧, ೩ ಸಾಲಿನ ಮೊದಲ ಪದ

ಪದ್ಯ ೩೧: ದ್ರೌಪದಿಯನ್ನು ಕೀಚಕ ಹೇಗೆ ಬಯ್ದನು?

ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತರ
ಬಲುಹು ಮಾನ್ಯರ ನಿರಿಯವೇ ತಂಗಾಳಿ ಧಾರ್ಮಿಕನೇ
ಖಳನಲಾ ಮಾಕಂದ ಲೋಕದ
ಕೊಲೆಗಡಿಕನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇ ಎಂದ (ವಿರಾಟ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸೈರಂಧ್ರಿ, ದುಂಬಿಯು ಕ್ಷುದ್ರಕೀಟವಲ್ಲವೇ? ಕೋಗಿಲೆಯು ಬಾಯ್ಬಡುಕನಲ್ಲವೇ? ವಸಂತ ಚಂದ್ರರು ಇವನು ಸಜ್ಜನ ಎಂದು ಬಿಡುವರೇ? ಅವರನ್ನು ಪೀಡಿಸುವುದಿಲ್ಲವೇ? ತಂಗಾಳಿಯು ಧಾರ್ಮಿಕ ಮನೋಭಾವವನ್ನು ಹೊಂದಿದೆಯೇ? ಇವರೆಲ್ಲರ ಸಹಾಯ ಪಡೆದ ಮನ್ಮಥನು ಕೊಲೆಗಡಿಕನಲ್ಲವೇ? ಅವನನ್ನು ತಿರಸ್ಕರಿಸಲು ಆಗುವುದೇ? ಪಾಪೀ ನನಗೆ ಒಲಿಯದೆ ನನ್ನನ್ನು ಕೊಲ್ಲಬಹುದೇ ಎಂದು ಕೀಚಕನು ಕೇಳಿದನು.

ಅರ್ಥ:
ಹುಳುಕು: ಕ್ಷುದ್ರವಾದ, ನೀಚವಾದ; ತುಂಬಿ: ದುಂಬಿ, ಜೇನು ನೊಣ; ಕೋಗಿಲೆ: ಪಿಕ; ಗಳಹ: ಮಾತಾಳಿ; ಶಶಿ: ಚಂದ್ರ; ಬಲುಹು: ಬಲ, ಶಕ್ತಿ; ಮಾನ್ಯ: ಸಜ್ಜನ; ನಿರಿ: ಕೊಲ್ಲು, ಸಾಯಿಸು; ತಂಗಾಳಿ: ತಂಪಾದ ವಾಯು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಮಾಕಂದ: ಮಾವಿನಮರ; ಲೋಕ: ಜಗತ್ತು; ಕೊಲೆ: ಸಾಯಿಸು; ಮನೋಭವ: ಕಾಮ, ಮನ್ಮಥ; ಇಳಿಕೆ: ತಿರಸ್ಕಾರ, ತಾತ್ಸಾರ; ಪಾಪಿ: ದುಷ್ಟ; ಒಲಿ: ಪ್ರೀತಿ; ಕೊಲು: ಸಾಯಿಸು;

ಪದವಿಂಗಡಣೆ:
ಹುಳುಕನಲ್ಲಾ+ ತುಂಬಿ +ಕೋಗಿಲೆ
ಗಳಹನಲ್ಲಾ+ ಶಶಿ+ ವಸಂತರ
ಬಲುಹು+ ಮಾನ್ಯರ+ ನಿರಿಯವೇ+ ತಂಗಾಳಿ +ಧಾರ್ಮಿಕನೇ
ಖಳನಲಾ +ಮಾಕಂದ +ಲೋಕದ
ಕೊಲೆಗಡಿಕನಲ್ಲಾ +ಮನೋಭವನ್
ಇಳಿಕೆ+ಕೊಂಬರೆ +ಪಾಪಿ+ಒಲಿಯದೆ+ ಕೊಲುವರೇ +ಎಂದ

ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಲೋಕದ ಕೊಲೆಗಡಿಕನಲ್ಲಾ ಮನೋಭವ ನಿಳಿಕೆಗೊಂಬರೆ

ಪದ್ಯ ೧೯: ಸುರವಿಮಾನದಲ್ಲಿ ಯಾರು ಬಂದರು?

ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ (ಅರಣ್ಯ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮವರ್ಷದಿಂದ ನಲುಗಿದ ಕಮಲಕ್ಕೆ ಸೂರ್ಯನು ಗೋಚರವಾದಮ್ತೆ, ಶಿಶಿರದ ಚಳಿಯಿಂದ ನಲುಗಿದ ವನಕ್ಕೆ ವಸಂತ ಋತುವು ಬಂದಂತೆ, ದೇವತೆಗಳ ವಿಮಾನದ ಸುಗಂಧವು ಎಲ್ಲೆಡೆ ವ್ಯಾಪಿಸುತ್ತಿರಲು, ಅರ್ಜುನನು ಭಾರತ ವರ್ಷಕ್ಕಿಳಿದು ಧರ್ಮಜನ ಬಳಿಗೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹಿಮ: ಮಂಜಿನ ಹನಿ; ಹೊಯ್ಲು: ಹೊಡೆತ; ಸರಸಿಜ: ಕಮಲ; ರವಿ: ಭಾನು; ಶಿಶಿರ: ಹಿಮ, ಮಂಜು, ಚಳಿಗಾಲ; ಸರಿ: ಹೋಗು, ಗಮಿಸು; ವನ: ಕಾಡು; ಬರವು: ಆಗಮನ; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ಶ್ರೇಣಿ: ಪಂಕ್ತಿ, ಸಾಲು; ನವ: ಹೊಸ; ಪರಿಮಳ: ಸುಗಂಧ; ಪೂರ: ಪೂರ್ಣ, ತುಂಬ; ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಇಳಿ: ಕೆಳಕ್ಕೆ ಬಾ; ಬಂದನು: ಆಗಮಿಸು; ಹೊರೆ: ಸಮೀಪ;

ಪದವಿಂಗಡಣೆ:
ಅರಸ +ಕೇಳೈ + ಹಿಮದ +ಹೊಯ್ಲಿನ
ಸರಸಿಜಕೆ+ ರವಿಯಂತೆ +ಶಿಶಿರದ
ಸರಿದಲೆಯ +ವನದಲಿ+ ವಸಂತನ+ ಬರವಿನಂದದಲಿ
ಸುರ+ವಿಮಾನ +ಶ್ರೇಣಿಗಳ +ನವ
ಪರಿಮಳದ +ಪೂರದಲಿ +ಭಾರತ
ವರುಷಕಿಳಿದನು +ಪಾರ್ಥ +ಬಂದನು +ಧರ್ಮಜನ +ಹೊರೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ; ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ

ಪದ್ಯ ೬೫: ಯಾವುವು ಸರ್ವಶ್ರೇಷ್ಠವಾದವು?

ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರ ಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನುಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಯಾವುದು ಶ್ರೇಷ್ಠ ಎಂದು ವಿದುರ ಇಲ್ಲಿ ವಿವರಿಸಿದ್ದಾರೆ. ಕಾಲದೊಳಗೆ ವಸಂತಕಾಲ ಶ್ರೇಷ್ಠವಾದುದು, ಹಾಗೆಯೆ ವಿದ್ಯೆಗಳಲ್ಲಿ ಕವಿತ್ವವು, ಕಾವ್ಯರಚನೆಯು ಶ್ರೇಷ್ಠ, ಆನೆಯ ವಿಹಾರದಲ್ಲಿ ಇಂದ್ರನು, ಸ್ನೇಹಿತರಲ್ಲಿ ಸರಸ್ವತಿಯು (ತಾನಾಡುವ ಮಾತುಗಳು), ದೇವತೆಗಳಲ್ಲಿ ಶಿವನು, ಧನುರ್ಧಾರಿಗಳಲ್ಲಿ ಮನ್ಮಥನು ಹಾಗೂ ಧನದಲ್ಲಿ ಅಭಿಮಾನವು, ಇವೇ ಸರ್ವಶ್ರೇಷ್ಠವಾದವುಗಳು ಎಂದು ವಿದುರ ತಿಳಿಸಿದ.

ಅರ್ಥ:
ಕಾಲ: ಸಮಯ, ಋತು; ವಸಂತ: ಒಂದು ಋತುವಿನ ಹೆಸರು, ಋತುಗಳ ರಾಜ; ವಿದ್ಯ: ಜ್ಞಾನ; ಜಾಲ: ಸಮೂಹ; ಕವಿತ್ವ: ಕಾವ್ಯ ರಚನೆ; ಗಜ: ಆನೆ; ವೈಹಾಳಿ: ವಿಹಾರ; ದೇವೇಂದ್ರ: ಇಂದ್ರ; ಮಿತ್ರ: ಸ್ನೇಹಿತ; ಶ್ರೇಣಿ: ಗುಂಪು, ಸಮೂಹ; ವಾಣಿ: ಸರಸ್ವತಿ; ಭಾಳ: ಹಣೆ, ಲಲಾಟ; ನೇತ್ರ: ನಯನ; ದೈವ: ಸುರ, ದೇವತೆ; ಬಿಲ್ಲು:ಧನುಸ್ಸು, ಚಾಪ; ಮನ್ಮಥ:ಕಾಮ, ಅನಂಗ; ಧನ: ಐಶ್ವರ್ಯ; ಅಭಿಮಾನ:ಹೆಮ್ಮೆ, ಅಹಂಕಾರ, ಆತ್ಮಗೌರವ;

ಪದವಿಂಗಡಣೆ:
ಕಾಲದೊಳಗೆ +ವಸಂತ+ ವಿದ್ಯಾ
ಜಾಲದೊಳಗೆ+ ಕವಿತ್ವ+ ಗಜ+ ವೈ
ಹಾಳಿಯಲಿ +ದೇವೇಂದ್ರ +ಮಿತ್ರ +ಶ್ರೇಣಿಯೊಳು +ವಾಣಿ
ಭಾಳನೇತ್ರನು+ ದೈವದಲಿ+ ಬಿ
ಲ್ಲಾಳಿನಲಿ+ ಮನುಮಥನು+ ಧನದಲಿ
ಹೇಳಲೇನ್+ಅಭಿಮಾನವೇ+ ಧನವೆಂದನಾ +ವಿದುರ

ಅಚ್ಚರಿ:
(೧) ಧನದಲಿ ಅಭಿಮಾನವೇ ಧನ – ಧನ ಪದದ ಬಳಕೆ
(೨) ವೈಹಾಳಿ, ಬಿಲ್ಲಾಳಿ; ಜಾಲ, ಕಾಲ – ಪ್ರಾಸ ಪದ

ಪದ್ಯ ೨೬: ಯಾವ ಕಾರಣಕ್ಕಾಗಿ ದ್ರೌಪದಿಯು ಜನರ ಆಕರ್ಷಣೆಗೆ ಪಾತ್ರವಾಗಿದ್ದಳು?

ವರವಸಂತನ ಬರವು ಜಾಜಿಯ
ಬರಿಮುಗುಳು ಮರಿದುಂಬಿಗಳ ನಯ
ಸರದ ದನಿ ಕರಿಕಳಭಲೀಲೆ ನವೇಕ್ಷುರಸಧಾರೆ
ಮೆರೆವ ವೋಲ್ ಹೊಸ ಹೊಗರಜವ್ವನ
ಸಿರಿಯಜೋಡಣೆ ಜನಮನವನಾ
ವರಿಸಿದುದು ನಿಪ್ಪಸರದಲಿ ಪಾಂಚಾಲನಂದನೆಯ (ಆದಿ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಯೌವನ ಭರಿತ ಸೊಬಗು ಆಕರ್ಷಿಸಲು ಕಾರಣವಾದರು ಏನು ಎಂಬ ಪ್ರಶ್ನೆಗೆ ಈ ಉಪಮಾನಗಳನ್ನು ಕವಿ ನೀಡಿದ್ದಾರೆ. ಚಳಿಗಾಳಿಯಿಂದ ಹೊರಹೊಮ್ಮುವ ಸಕಲ ಜೀವರಾಶಿಗಳ ಚೆಲುವನ್ನು ಹೆಚ್ಚಿಸುವ ವಸಂತಮಾಸದ ಹಾಗೆ, ಪರಿಮಳಯುಕ್ತ ಜಾಜಿಯ ಮೊಗ್ಗಿನಹಾಗೆ, ಮರಿದುಂಬಿಗಳ ಝೇಂಕಾರದಹಾಗೆ, ಮರಿಯಾನೆಗಳ ಆಟ, ಹೊಸದಾಗಿ ಮುರಿದ ಕಬ್ಬಿನ ಜೆಲ್ಲಿಯ ಹಾಲಿನ ಹಾಗೆ, ದ್ರೌಪದಿಯ ನೂತನ ಯೌವನದ ಸಂಪತ್ತು ಜನರ ಮನಸ್ಸನ್ನು ಅತಿಶಯವಾಗಿ ಆಕರ್ಷಿಸಿತ್ತು.

ಅರ್ಥ:
ವರ: ಶ್ರೇಷ್ಠ; ವಸಂತ: ಋತುವಿನ ಹೆಸರು;ಬರವು: ಆಗಮನ; ಜಾಜಿ: ಹೂವಿನ ಹೆಸರು; ಬಿರಿಮುಗುಳು: ಅರಳುಮೊಗ್ಗು; ಮರಿ: ಚಿಕ್ಕ; ದುಂಬಿ: ಭ್ರಮರ; ನಯಸರದ: ಇಂಪಾದ; ದನಿ: ಕೂಗು, ಶಬ್ದ; ಕರಿಕಳಭ: ಆನೆಮರಿ; ಲೀಲೆ:ಆಟ; ನವ: ಹೊಸ, ನವೀನ; ಇಕ್ಷು: ಕಬ್ಬು; ರಸಧಾರೆ: ಸಾರ, ಕಬ್ಬಿನ ಹಾಲು; ಮೆರೆ: ಹೊಳೆ, ಪ್ರಕಾಶಿಸು; ವೋಲ್: ರೀತಿ; ಹೊಸ: ನವೀನ; ಜವ್ವನ: ಯೌವನ; ಹೊಗರು: ಪ್ರಕಾಶಿಸು, ಹೊಳೆ; ಸಿರಿ: ಸಂಪತ್ತು; ಜೋಡಣೆ: ಕೂಡು; ಜನ: ಜನರು, ಮನುಷ್ಯರು; ಮನ: ಚಿತ್ತ, ಮನಸ್ಸು; ಆವರಿಸು: ಸುತ್ತುವರೆ; ನಿಪ್ಪಸರ: ಅತಿಶಯ, ಹೆಚ್ಚಳ, ವೇಗ; ನಂದನೆ: ಹುಡುಗಿ, ಸ್ತ್ರೀ;

ಪದವಿಂಗಡಣೆ:
ವರ+ವಸಂತನ+ ಬರವು +ಜಾಜಿಯ
ಬರಿಮುಗುಳು +ಮರಿದುಂಬಿಗಳ+ ನಯ
ಸರದ +ದನಿ +ಕರಿಕಳಭಲೀಲೆ +ನವ+ಇಕ್ಷು+ರಸಧಾರೆ
ಮೆರೆವ +ವೋಲ್ +ಹೊಸ +ಹೊಗರ+ಜವ್ವನ
ಸಿರಿಯ+ಜೋಡಣೆ +ಜನಮನವನ್+
ಆವರಿಸಿದುದು +ನಿಪ್ಪಸರದಲಿ+ ಪಾಂಚಾಲ+ನಂದನೆಯ

ಅಚ್ಚರಿ:
(೧) ನವ, ಹೊಸ – ಸಮಾನಾರ್ಥಕ ಪದ
(೨) ೫ ಉಪಮಾನಗಳಿಂದ ದ್ರೌಪದಿಯ ಸೌಂದರ್ಯದ ವರ್ಣನೆ – ವಸಂತ, ಜಾಜಿಯ ಬಿರಿಮೊಗ್ಗು, ಮರಿದುಂಬಿ, ಮರಿ ಆನೆ, ಇಕ್ಷುರಸ;

ಪದ್ಯ ೧೧: ಆ ವಸಂತ ಸಮಯದಲ್ಲಿ ಮಾದ್ರಿ ದೇವಿಯು ಪಾಂಡುವಿಗೆ ಹೇಗೆ ಕಂಡಳು?

ಆ ವಸಂತದೊಳೊಮ್ಮೆ ಮಾದ್ರಿ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ
ಆವಳಿವಳೂರ್ವಶಿಯೊ ರಂಭೆಯೊ
ದೇವವಧುಗಳ ಸುಳಿವೊ ತಾನೇನ
ಲಾವ ಚೆಳುವಿಕೆ ಶಿವಶಿವಾಯೆಂದರಸ ಬೆರಗಾದ (ಆದಿ ಪರ್ವ, ೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ವಸಂತದ ಸಮಯ ಎಲ್ಲರಲ್ಲಿಯೂ ಸೊಬಗನ್ನು ಆಹ್ಲಾದಿಸುವಂತೆ ಪ್ರೇರೇಪಿಸುತಿತ್ತು. ಒಮ್ಮೆ ಇಂತಹ ವಸಂತ ಸಮಯದಲ್ಲಿ ಮಾದ್ರಿಯು ವನದಲ್ಲಿ ವಿಹಾರ ಚಲನದಲ್ಲಿ ಒಬ್ಬಳೆ ಆಡುತಿರ್ದಳು. ಇವಳ ಆ ನಡೆಯನ್ನು ಗಮನಿಸಿದ ಪಾಂಡು ಒಮ್ಮೆಲೇ ಆಹಾ ಇವಳಾರು ದೇವಲೋಕದ ರಂಭೆಯೋ, ಊರ್ವಶಿಯೋ, ದೆವಾಂಗನೆಯೋ, ಶಿವ ಶಿವ ಎಂತ ಚೆಲುವೆ ಎಂದು ಬೆರೆಗಾದ.

ಅರ್ಥ:
ವಿಲಾಸ: ವಿಹಾರ, ಅಂದ, ಸೊಬಗು;ಶೃಂಗಾರ: ಅಲಂಕಾರ, ಭೂಷಣ
ಹೂವು: ಪುಷ್ಪ; ಚೆಲುವಿಕೆ: ಸುಂದರಿ

ಪದವಿಂಗಡನೆ:
ವಸಂತದೊಳ್+ಒಮ್ಮೆ; ವನದೊಳಗ್+ಆಡುತಿರ್ದಳು; ಆವಳ್+ಇವಳ್+ಉರ್ವಶಿಯೋ;ತಾನ್+ಏನಲ್+ಆವ

ಅಚ್ಚರಿ:
(೧) ೧ ಮತ್ತು ೪ ಸಾಲಿನ ಮೊದಲ ಪದ “ಆ”
(೨) ೨ ಸಾಲಿನ ಮೊದಲ ಪದ “ದೇವಿ”, ೫ ಸಾಲಿನ ಮೊದಲ ಪದ “ದೇವ”

ಪದ್ಯ ೧೦: ವಸಂತಮಾಸವು ವಿರಹಿಗಳು ಮತ್ತು ಮುನಿಗಳ ಮೇಲೆ ಯಾವ ಪ್ರಭಾವ ಬೀರಿತು?

ಜಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನವೀ
ಧಿಗಳ ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಮ್ಬೆನು ನೃಪತಿ ಕೇಳೆಂದ (ಆದಿ ಪರ್ವ ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ವಸಂತ ಮಾಸದಲ್ಲಿ ಪರಿಸರವು ಸುಗಂಧಮಾಯವಾಗಿತ್ತು. ಈ ಸುಗಂಧದ ತಂಗಾಳಿಯು ಎಲ್ಲೆಲ್ಲಿಯೂ ಹರಡಿತ್ತು. ವಿರಹಿಗಳು ಈ ತಂಗಾಳಿಯಲ್ಲಿ ತೇಲಿ ಮತ್ತೆ ಹಿಂದಿರುಗುವುದನ್ನೇ ಮರೆತರು. ಇಂತಹ ಸಮಯದಲ್ಲಿ ಕಾಮನ (ಮನ್ಮಥನ) ಸೈನ್ಯವು ಮುಂಚೂನಿಯಲ್ಲಿ ಮುನಿಗಳ ಮೇಲೆ ಆಯುಧವನ್ನು (ಆಸೆ) ಬೀರಿದವು. ಆ ಮುನಿಗಳು ಎಂತಹ ಸಿಮಿತದಲ್ಲಿದ್ದರು, ಈ ದಾಳಿಗೆ ಅಧೀನರಾದರು.

ಅರ್ಥ:
ಹೊರೆ: ಲೇಪಿಸು, ಹೊಂದು; ಪರಿಮಳ: ಸುಗಂಧ; ತಂಗಾಳಿ: ತಂಪಾದ ಗಾಳಿ
ಒಗುಮಿಗೆ: ಹೆಚ್ಚಳ, ಅಧಿಕ; ವೀಧಿ: ಬೀದಿ, ರಸ್ತೆ
ವಲಯ: ಪ್ರದೇಶ, ವಿಭಾಗ; ಮರಳು: ಹಿಂದಿರುಗು
ವಿರಹಿ: ಪ್ರಿಯರನ್ನು ಅಗಲಿದ ವ್ಯಕ್ತಿ, ವಿಯೋಗಿ
ಹೊಗು: ಆಕ್ರಮಿಸು, ಮೇಲೆಬೀಳು
ಕಾಮ: ಬಯಕೆ, ಇಚ್ಛೆ; ಚೂಣಿಯ: ಮುಂಬಾಗ
ಸೊಗಸು: ಚೆಲುವು; ಕೈದು: ಕೈಸೆರೆ, ಬಂಧನ; ವಿಗಡ: ಶೌರ್ಯ, ಪರಾಕ್ರಮ

ಪದವಿಂಗಡನೆ:
ಪರಿಮಳದ+ಒಗುಮಿಗೆಯ; ಮುನಿಜನವನ್+ಏನನೆಂಬೆನು

ಪದ್ಯ ೯:ದುಂಬಿಗಳು ಮತ್ತು ಇತರೆ ಪಕ್ಷಿಗಳು ವಸಂತ ಮಾಸದಲ್ಲಿ ಹೇಗೆ ನಲಿದಾಡಿದವು?

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು (ಆದಿ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ವಸಂತ ಮಾಸವು ಮುಂದುವರೆಯಿತು. ನೀರಿನ ಮೇಲೆ ದೋಣಿ ತೇಲುವ ಹಾಗೆ ತಾವರೆ ಹೂವಿನ (ತಾವರೆಯನ್ನೇ ದೋಣಿಯಾಗಿ ವಿಶ್ಲೆಸಿಸಲಾಗಿದೆ) ಮೇಲೆ ದುಂಬಿಗಳು ಮಕರಂದವನ್ನು ಹೀರಲು ಸೇರಿದವು. ಜಿನುಗುತಿರುವ ಹೂಗಳ ಮಕರಂದದ ತುಂತುರಿನಲ್ಲಿ ಕ್ರೌಂಚಪಕ್ಷಿ, ಚಕ್ರವಾಕ, ರಾಜಹಂಸಗಳು ತೋಯ್ದು ಹೋದವು.

ಅರ್ಥ:
ಪಸರಿಸು: ಹರಡು; ಮಧು: ಜೇನು, ಮಕರಂದ; ಮಾಸ: ತಿಂಗಳು
ಮಧುಮಾಸ: ವಸಂತ ಮಾಸ; ತಾವರೆ: ಕಮಲ, ಸರಸಿಜ,
ಯೆಸಳ: ಹೂವಿನ ದಳ; ದೋಣಿಯ: ನಾವೆ; ಹಾಯ್ದು: ಹರಡು,ಹೊಮ್ಮು
ಕುಸುಮ: ಹೂವು; ರಸ: ತಿರುಳು; ಉಬ್ಬರ: ಹೆಚ್ಚು, ಅತಿಶಯ, ಆಡಂಬರ
ತೊರೆ: ಹರಿ, ಪ್ರವಹಿಸು, ಹರಡು; ಒಸರ್: ಜಿನುಗು, ಸೋರು
ತುಷಾರ: ಹಿಮ, ಮಂಜು; ದಂಪತಿವಕ್ಕಿ: ಚಕ್ರವಾಕ ಪಕ್ಷಿ
ಸಾರಸ: ಕೊಳ, ಸರೋವರ

ಪದವಿಂಗಡಣೆ:
ಪಸರಿಸಿತು +ಮಧುಮಾಸ +ತಾವರೆ
ಯೆಸಳ+ ದೋಣಿಯ +ಮೇಲೆ +ಹಾಯ್ದವು
ಕುಸುಮ +ರಸದ್+ಉಬ್ಬರದ +ತೊರೆಯನು +ಕೂಡೆ +ತುಂಬಿಗಳು
ಒಸರ್ವ +ಮಕರಂದದ+ ತುಷಾರದ
ಕೆಸರೊಳ್+ಅದ್ದವು+ ಕೊಂಚೆಗಳು+ ಹಗಲ್
ಎಸೆವ +ದಂಪತಿವಕ್ಕಿ+ ಸಾರಸ+ ರಾಜಹಂಸಗಳು

ಅಚ್ಚರಿ:
ವಸಂತದಲ್ಲಿ ಹೂವಿನ ಕಂಪು, ಎಷ್ಟು ಸವಿಯಾಗಿರುತ್ತದೆ ಎಂದು ಅತ್ಯಂತ ಸುಂದರವಾಗಿ ವರ್ಣಿಸಿರುವುದು.

ಪದ್ಯ ೮: ವಸಂತದ ಆಗಮನ ಮರಗಳಲ್ಲದ ಬದಲಾವಣೆಗಳೇನು?

ಫಲಿತ ಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ (ಆದಿ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ವಸಂತ ಋತುವು ಎಲ್ಲ ಮರಗಿಡಗಳಲ್ಲಿ ತನ್ನ ಆಗಮನದ ಸೂಚನೆ ನೀಡಿತ್ತು. ಮಾವಿನ ಮರಗಳಲ್ಲಿ ಹಣ್ಣುಗಳು ಭಾರವಾಗಿ ತೂಗಾಡುತ್ತಿದ್ದವು. ಅಶೋಕ ವೃಕ್ಷದಲ್ಲಿ ಕೆಂಪಾದ ಚಿಗುರುಗಳು ಕಾಣಿಸಿಕೊಂಡವು. ಅರಳಿದ ಕಮಲಗಳ ಸುವಾಸನೆ ಹರಡುತ್ತಿತ್ತು. ಚಿಗುರಿದ, ಫಲಿಸಿದ, ಹೂಬಿಟ್ಟ ವನಗಳು ಮನೋಹರವಾಗಿದ್ದವು. ಕೋಮಲವಾದ ಲತೆಗಳ ಎಲ್ಲ ಕಡೆಯೂ ಚಿಗುರಿ ಬೆಳೆದಿದ್ದವು. ಗಾಳಿಯಲ್ಲಿ ಸುಗಂಧವು ತೇಲಿ ಬಂತು. ವಸಂತಋತುವಿನ ಈ ಹೆಗ್ಗಳಿಕೆಯಿಂದ ಜನರ ಕಣ್ಮನಗಳು ಸೂರೆಹೋದವು.

ಅರ್ಥ:
ಫಲಿತ: ಹಣ್ಣಾದ; ಮಾಗಿದ; ಚೂತ: ಮಾವು
ಬಿಣ್ಪು: ಭಾರ; ನೆರೆ: ಗುಂಪುಗೂಡಿಸು; ತಳಿ: ಮರದ ದಿಮ್ಮಿ; ಕೊರಡು
ಕಂಪು: ಸುಗಂಧ; ನುಣ್ಪು: ನಯವಾದುದು; ಮೃದುತ್ವ
ಸೊಂಪು:ಸೊಗಸು; ಕಾಂತಿ; ಹೊಳಪು
ಝಳಪಿಸು: ಅಲ್ಲಾಡಿಸು; ಬೀಸು; ವೆಗ್ಗಳ: ಹಿರಿಮೆ, ಶ್ರೆಷ್ಠತೆ

ಅಚ್ಚರಿ:
(೧) ಬಿಣ್ಪುಗಳ, ಕೆಂಪುಗಳ, ಕಂಪುಗಳ,ಗುಂಪುಗಳ, ನುಣ್ಪುಗಳ, ಸೊಂಪುಗಳ – ಪದದ ರಚನೆ

ಪದ್ಯ ೭: ವಸಂತನ ಪರಿವಾರದ ಗಾಯಕರು, ಸೈನ್ಯ, ಪಂಡಿತರು ಯಾರು?

ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ (ಆದಿ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ವಸಂತ ಋತುವು ಪ್ರಕೃತಿಯಲ್ಲಿ ಎಲ್ಲರನ್ನು ಮುದಗೋಳಿಸುತ್ತದೆ. ಅಂತಹ ವಸಂತನಿಗೆ ದುಂಬಿಯೆ ಗಾಯಕರು, ಸೊಗಸಾಗಿ ಹಾಡುವ ಕೋಗಿಲೆಗಳೇ ವಾಚಕರು,ಅರಗಿಳಿಗಳೇ ಪಂಡಿತರು ಮಾವಿನ ಮರಗಳೇ ಅವನ ಸೈನ್ಯದ ಆನೆಗಳು, ಅರಳಿದ ಕಮಲಗಳೇ ಅವನ ಚತ್ರಿಗಳು, ಹೂಗುಚ್ಛ ಗಳೇ ಅವನಿಗೆ ಬೀಸುವ ಚಾಮರಗಳು, ಇಂತಹ ವೈಭೋಗದಿಂದ ಕೂಡಿದ ವಸಂತ ಋತುವು ಪಾಂಡುವಿನ ಮೇಲೆ ದಾಳಿಮಾಡಿದನು.

ಅರ್ಥ:
ಮೊರೆ:ಝೇಂಕರಿಸು; ತುಂಬಿ: ದುಂಬಿ, ಜೇನು; ನಯ: ನುಣುಪು, ಸೌಮ್ಯತೆ, ಸೊಗಸು
ಕೋಕಿಲ: ಕೋಗಿಲೆ; ಪಾಠಕ: ಓದುವವನು, ವಾಚಕ; ಬಂಧುರ: ಚೆಲುವಾದ
ಕರಿ:ಆನೆ; ಘಟೆ: ಗುಂಪು; ಅರಳು: ಅಗಲವಾಗು
ಅಂಬುಜ: ಕಮಲ; ಮಂಜರಿ: ಗುಚ್ಛ; ಸತ್ತಿಗೆ: ಛತ್ರಿ, ಚಾಮರ
ಚಾತುರ: ಜಾಣತನ, ಹೊಗಳುವಿಕೆ; ಚಾಮರ: ಚರೀಮೃಗದ ಕೂದಲಿನಿಂದ ಮಾಡಿದ ಬೀಸಣಿಗೆ

ಪದವಿಂಗಡಣೆ
ಮೊರೆವ+ ತುಂಬಿಯ +ಗಾಯಕರ +ನಯ
ಸರದ +ಕೋಕಿಲ+ ಪಾಠಕರ+ ಬಂ
ಧುರದ+ ಗಿಳಿಗಳ+ ಪಂಡಿತರ +ಮಾಮರದ +ಕರಿ+ಘಟೆಯ
ಅರಳಿದ್+ಅಂಬುಜ+ ಸತ್ತಿಗೆಯ +ಮಂ
ಜರಿಯ +ಕುಸುಮದ +ಚಾಮರದ +ಚಾ
ತುರ +ವಸಂತ+ನೃಪಾಲ +ನಡೆದನು +ಪಾಂಡುವಿನ +ಮೇಲೆ

ಅಚ್ಚರಿ:
(೧) ಮೊದಲ ಮೂರು ಸಾಲಲ್ಲಿ ಹಕ್ಕಿ/ಕ್ರಿಮಿ ಗಳನ್ನು ಉಪಮಾನಕ್ಕೆ ಬಳಸಿರುವುದು: ದುಂಬಿ, ಕೋಕಿಲೆ, ಗಿಳಿ
(೨) ಕೊನೆಯ ೩ ಸಾಲಲ್ಲಿ ಗಿಡಗಳನ್ನು ಬಳಸಿರುವುದು: ಮಾಮರ, ಅಂಬುಜ, ಕುಸುಮದ ಮಂಜರಿ