ಪದ್ಯ ೧೪: ಪಾಂಡವರ ಪಡೆಯಲ್ಲಿ ಯಾವ ಸ್ಥಿತಿಯಿತ್ತು?

ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದಳು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ (ಭೀಷ್ಮ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂಡವರಿಗಾದರೋ ಭೀತಿ ಬಿಟ್ಟುಹೋಯಿತು. ಹರ್ಷದ ಬಳ್ಳಿಯು ಹೂಬಿಟ್ಟಿತು, ವಿಜಯ ಸ್ತ್ರೀಯು ಕೆಳೆಯನ್ನು ಬೇಡಿ ತನ್ನ ಸೇವಕರನ್ನು ಅವರ ಬಳಿಗೆ ಕಳುಹಿಸಿದಳು. ಉತ್ಸಾಹವು ತಾನೇ ತಾನಾಗಿ ಹೊಳೆಯಿತು. ಯುದ್ಧದ ಚಿಂತೆ ಬಿಟ್ಟಿತು, ಕಾತರವು ಜಾರಿಹೋಯಿತು. ಮಾತೇ ಇಲ್ಲದ ಸುಮ್ಮಾನದ ಭಾವವು ಪಾಂಡವ ಬಲದ ಭಟರಿಗೆ ಉಕ್ಕೇರಿತು.

ಅರ್ಥ:
ಭೀತಿ: ಹೆದರಿಕೆ; ಬೀತುದು: ಹೋಯಿತು; ಹರುಷ: ಸಂತಸ; ವಲ್ಲರಿ: ಬಳ್ಳಿ; ಹೂತು: ಹೂವು ಬಿಡು; ವಿಜಯ: ಗೆಲುವು; ಕಾಮಿನಿ: ಹೆಣ್ಣು; ದೂತಿ: ಸೇವಕಳು; ಕಳುಹು: ಬೀಳ್ಕೊಡು; ತನಿ: ಚೆನ್ನಾಗಿ ಬೆಳೆದುದು; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ಉತ್ಸಾಹ: ಶಕ್ತಿ, ಬಲ; ಸೋತು: ಪರಾಭವ; ಆಹವ: ಯುದ್ಧ; ಚಿಂತೆ: ಯೋಚನೆ; ಜರಿ: ಬಯ್ಯು; ಕಾತರತೆ: ಉತ್ಸುಕತೆ; ನುಡಿ: ಮಾತು; ಕೆಡೆ: ಹಾಳು; ಭಾವ: ಭಾವನೆ, ಚಿತ್ತವೃತ್ತಿ; ಅತಿಶಯ: ಹೆಚ್ಚು; ಬಲ: ಸೈನ್ಯ; ಸುಭಟ: ಪರಾಕ್ರಮಿ, ಸೈನಿಕ;

ಪದವಿಂಗಡಣೆ:
ಭೀತಿ +ಬೀತುದು +ಹರುಷ+ ವಲ್ಲರಿ
ಹೂತುದ್+ಅವರಿಗೆ +ವಿಜಯ +ಕಾಮಿನಿ
ದೂತಿಯರ +ಕಳುಹಿದಳು +ತನಿ +ಹೊಗರ್+ಏರಿತ್+ಉತ್ಸಾಹ
ಸೋತುದ್+ಆಹವ +ಚಿಂತೆ +ಜರಿದುದು
ಕಾತರತೆ+ ನುಡಿ+ಕೆಡೆಗುಡದೆ +ಭಾವ
ಅತಿಶಯವ್+ಒಂದಾಯ್ತು +ಪಾಂಡವ +ಬಲದ +ಸುಭಟರಿಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಹರುಷವಲ್ಲರಿಹೂತುದವರಿಗೆ
(೨) ವಿಜಯವು ಹತ್ತಿರವಾಯಿತು ಎಂದು ಹೇಳುವ ಪರಿ – ವಿಜಯ ಕಾಮಿನಿ ದೂತಿಯರ ಕಳುಹಿದಳು