ಪದ್ಯ ೪೯: ಅರ್ಜುನನು ದ್ರೋಣರಲ್ಲಿ ಏನು ಬೇಡಿದನು?

ಆ ಶಿಶುತ್ವದಲೆಮ್ಮ ಬೊಪ್ಪನು
ವಾಸವನ ಪುರಕೈದಿದನು ನಿ
ಮ್ಮಾಸೆಯಲಿ ಗಾಂಗೇಯರಿಂದವೆ ಹಿರಿದು ಬದುಕಿದೆವು
ಘಾಸಿಯಾದೆವು ಜೂಜಿನಲಿ ವನ
ವಾಸವನು ನೂಕಿದೆವು ಮೈಮರೆ
ದೀಸನೇರಿಸಿ ನುಡಿದ ನುಡಿಗಳ ಕಾಯಬೇಕೆಂದ (ದ್ರೋಣ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಾವಿನ್ನೂ ಶಿಶುಗಳಾಗಿದ್ದಾಗ ನಮ್ಮ ತಂದೆಯು ಸ್ವರ್ಗಸ್ಥನಾದನು. ನಾವು ಹಸ್ತಿನಾವತಿಗೆ ಬಂದು ನಿಮ್ಮ ಮತ್ತು ಭೀಷ್ಮರ ಮೇಲೆಯೇ ಭರವಸೆಯನ್ನಿಟ್ಟುಕೊಂಡು ಬದುಕಿ ದೊಡ್ಡವರಾದೆವು. ಜೂಜಿನಿಂದ ಪಡಬಾರದ ಭಂಗವನ್ನು ಅನುಭವಿಸಿ ವನವಾಸವನ್ನು ಕಳೆದೆವು. ದುಃಖದಿಂದ ಮೈಮರೆತು ಏನೋ ಪ್ರತಿಜ್ಞೆಯನ್ನು ಮಾಡಿದೆನು, ನನ್ನ ಮಾತನ್ನು ನೀವು ಉಳಿಸಿಕೊಡಬೇಕು ಎಂದು ಬೇಡಿದನು.

ಅರ್ಥ:
ಶಿಶು: ಚಿಕ್ಕವ; ಬೊಪ್ಪ: ತಂದೆ; ವಾಸವ: ಇಂದ್ರ; ಪುರ: ಊರು; ಐದು: ಬಂದು ಸೇರು; ಆಸೆ: ಇಚ್ಛೆ; ಗಾಂಗೇಯ: ಭೀಷ್ಮ; ಹಿರಿ: ದೊಡ್ಡವ; ಬದುಕು: ಜೀವಿಸು; ಘಾಸಿ: ಆಯಾಸ, ದಣಿವು; ಜೂಜು: ಜುಗಾರಿ, ಸಟ್ಟ; ವನವಾಸ: ಕಾಡು ಜೀವನ; ನೂಕು: ತಳ್ಳು; ಮೈಮರೆ: ಎಚ್ಚರವಿಲ್ಲದ ಸ್ಥಿತಿ; ನುಡಿ: ಮಾತು; ಕಾಯು: ರಕ್ಷಿಸು; ಈಸು: ಇಷ್ಟು; ಏರು: ಹೆಚ್ಚು;

ಪದವಿಂಗಡಣೆ:
ಆ+ ಶಿಶುತ್ವದಲ್+ಎಮ್ಮ +ಬೊಪ್ಪನು
ವಾಸವನ +ಪುರಕೈದಿದನು +ನಿ
ಮ್ಮಾಸೆಯಲಿ +ಗಾಂಗೇಯರಿಂದವೆ+ ಹಿರಿದು +ಬದುಕಿದೆವು
ಘಾಸಿಯಾದೆವು +ಜೂಜಿನಲಿ +ವನ
ವಾಸವನು +ನೂಕಿದೆವು +ಮೈಮರೆದ್
ಈಸನೇರಿಸಿ +ನುಡಿದ +ನುಡಿಗಳ+ ಕಾಯಬೇಕೆಂದ

ಅಚ್ಚರಿ:
(೧) ಮರಣಹೊಂದಿದನು ಎಂದು ಹೇಳುವ ಪರಿ – ಬೊಪ್ಪನು ವಾಸವನ ಪುರಕೈದಿದನು
(೨) ವಾಸವ, ವನವಾಸ – ಪದಗಳ ಬಳಕೆ

ಪದ್ಯ ೨೨: ಧರ್ಮಜನು ಯಾವುದಕ್ಕೆ ಅಪ್ಪಣೆಯನ್ನು ಬೇಡಿದನು?

ತೀದುದೆಮ್ಮಯ ಸೇನೆ ನಸು ಸೊ
ಪ್ಪಾದುದಿಲ್ಲರಿಸೇನೆ ನಿಮ್ಮನು
ಕಾದಿ ಗೆಲುವರೆ ಮೊಲೆಯನೂಡಿದ ತಾಯಿ ಜಾಹ್ನವಿಯೆ
ಕಾದಿದೆವು ಕಟ್ಟಿದೆವು ಗೆಲಿದೆವು
ಮೇದಿನಿಯ ನಾವಿನ್ನು ಮುನ್ನಿನ
ತೀದ ವನವಾಸಕ್ಕೆ ನೇಮವ ಕೊಟ್ಟು ಕಳುಹೆಂದ (ಭೀಷ್ಮ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಮುಂದುವರೆಸುತ್ತಾ, ನಮ್ಮ ಸೈನ್ಯವು ಸವೆದು ಹೋಯಿತು. ಶತ್ರು ಸೈನ್ಯವು ಸ್ವಲ್ಪವೂ ಮುಕ್ಕಾಗಲಿಲ್ಲ. ಯುದ್ಧದಲ್ಲಿ ನಿಮ್ಮೊಡನೆ ಹೋರಾಡಿ ಗೆಲ್ಲೋಣವೆಂದರೆ ನಾವೇನು ತಾಯಿ ಗಂಗೆಯ ಮೊಲೆಯನ್ನು ಕುಡಿದವರೇ ಯುದ್ಧಮಾಡಿದೆವು, ಶತ್ರುಗಳನ್ನು ಕಟ್ಟಿ ಯುದ್ಧದಲ್ಲಿ ರಾಜ್ಯವನ್ನು ಗೆದ್ದುಕೊಂಡೆವು, ಇನ್ನು ಮೊದಲಿದ್ದ ಕಾಡಿಗೆ ಹೋಗುತ್ತೇವೆ, ಅಪ್ಪಣೆಯನ್ನು ನೀಡಿ ಎಂದು ಭೀಷ್ಮರಿಗೆ ಧರ್ಮಜನು ಹೇಳಿದನು.

ಅರ್ಥ:
ತೀದು: ತುಂಬಿ, ಮುಗಿಸಿ; ಸೇನೆ: ಸೈನ್ಯ; ನಸು: ಕೊಂಚ, ಸ್ವಲ್ಪ; ಸೊಪ್ಪು: ಸದೆಬಡಿ, ನಾಶಗೊಳಿಸು; ಅರಿ: ವೈರಿ; ಕಾದು: ಹೋರಾಡು; ಗೆಲುವು: ಜಯ; ಮೊಲೆ: ಸ್ತನ; ಊಡು: ಉಂಡು; ತಾಯಿ: ಮಾತೆ; ಜಾಹ್ನವಿ: ಗಂಗೆ; ಕಾದು: ಹೋರಾಡು; ಕಟ್ಟು: ಬಂಧಿಸು; ಮೇದಿನಿ: ಭೂಮಿ; ಮುನ್ನ: ಮೊದಲಿನ; ವನವಾಸ: ಅರಣ್ಯ ಜೀವನ; ನೇಮ: ಅಪ್ಪಣೆ; ಕೊಡು: ನೀಡು; ಕಳುಹು: ಬೀಳ್ಕೊಡು;

ಪದವಿಂಗಡಣೆ:
ತೀದುದ್+ಎಮ್ಮಯ +ಸೇನೆ +ನಸು +ಸೊ
ಪ್ಪಾದುದ್+ಇಲ್ಲ್+ಅರಿಸೇನೆ +ನಿಮ್ಮನು
ಕಾದಿ + ಗೆಲುವರೆ +ಮೊಲೆಯನೂಡಿದ +ತಾಯಿ +ಜಾಹ್ನವಿಯೆ
ಕಾದಿದೆವು+ ಕಟ್ಟಿದೆವು+ ಗೆಲಿದೆವು
ಮೇದಿನಿಯ +ನಾವಿನ್ನು +ಮುನ್ನಿನ
ತೀದ +ವನವಾಸಕ್ಕೆ+ ನೇಮವ +ಕೊಟ್ಟು +ಕಳುಹೆಂದ

ಅಚ್ಚರಿ:
(೧) ನಿಮ್ಮಷ್ಟು ಬಲಶಾಲಿಗಳಲ್ಲ ಎಂದು ಹೇಳುವ ಪರಿ – ನಿಮ್ಮನು ಕಾದಿ ಗೆಲುವರೆ ಮೊಲೆಯನೂಡಿದ ತಾಯಿ ಜಾಹ್ನವಿಯೆ
(೨) ವುಕಾರಾಂತ್ಯ ಪ್ರಾಸ ಪದಗಳು – ಕಾದಿದೆವು, ಕಟ್ಟಿದೆವು, ಗೆಲಿದೆವು

ಪದ್ಯ ೧೧: ಧರ್ಮಜನು ಕೃಷ್ಣನಲ್ಲಿ ಏನು ಕೇಳಿದ?

ಹರಿದುದಿಂದಿನ ದಿನಕೆ ಶತ ಸಾ
ವಿರ ಮಹೀಶರು ಯಮನ ನಗರಿಗೆ
ಸರಿದುದುಳಿದರ ದಿಟ್ಟತನ ಗಾಂಗೇಯನುಪಟಳಕೆ
ಅರಿಪಯೋನಿಧಿ ಬಡಬನನು ಗೆಲ
ಲರಿದು ಜೀಯ ಮುಕುಂದ ನೀನೇ
ಕರುಣಿಸೈ ವನವಾಸವೋ ನಮಗೇನು ಗತಿಯೆಂದ (ಭೀಷ್ಮ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಇಲ್ಲಿಯವರೆಗೆ ಒಂದು ಲಕ್ಷ ರಾಜರು ಯಮನಗರಕ್ಕೆ ಹೋದರು. ಉಳಿದವರ ಪರಾಕ್ರಮವು ಶತ್ರುಸಾಗರ ಬಡಬಾನಲನಾದ ಭೀಷ್ಮನನ್ನು ಗೆಲ್ಲಲಾರದು. ಒಡೆಯ ಅಪ್ಪಣೆಕೊಡಿಸು, ನಾವು ಮತ್ತೆ ವನವಾಸಕ್ಕೆ ಹೋಗಬೇಕೇ ಹೇಗೆ, ನಮ್ಮ ಗತಿಯೇನು ಎಂದು ಧರ್ಮಜನು ಶ್ರೀಕೃಷ್ಣನನ್ನು ಕೇಳಿದನು.

ಅರ್ಥ:
ಹರಿ: ಕಳೆ, ಸಾಗು; ದಿನ: ದಿವಸ; ಶತ: ನೂರು; ಸಾವಿರ: ಸರಸ್ರ; ಮಹೀಶ: ರಾಜ; ಯಮ: ಕಾಲ; ನಗರ: ಊರು; ಸರಿ: ಹೋಗು, ಗಮಿಸು; ಉಳಿದ: ಮಿಕ್ಕ; ದಿಟ್ಟ: ಧೀರ; ಗಾಂಗೇಯ: ಭೀಷ್ಮ; ಉಪಟಳ: ತೊಂದರೆ, ಹಿಂಸೆ; ಅರಿ: ಶತ್ರು; ಪಯೋನಿಧಿ: ಸಾಗರ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡಬಾಗ್ನಿ; ಗೆಲುವು: ಜಯ; ಜೀಯ: ಒಡೆಯ; ಮುಕುಂದ: ಕೃಷ್ಣ; ಕರುಣಿಸು: ದಯೆ ತೋರು; ವನವಾಸ: ಕಾಡಿನ ಜೀವನ; ಗತಿ: ಸ್ಥಿತಿ;

ಪದವಿಂಗಡಣೆ:
ಹರಿದುದ್+ಇಂದಿನ +ದಿನಕೆ+ ಶತ+ ಸಾ
ವಿರ +ಮಹೀಶರು +ಯಮನ +ನಗರಿಗೆ
ಸರಿದುದ್+ಉಳಿದರ +ದಿಟ್ಟತನ +ಗಾಂಗೇಯನ್+ಉಪಟಳಕೆ
ಅರಿ+ಪಯೋನಿಧಿ+ ಬಡಬನನು +ಗೆಲಲ್
ಅರಿದು +ಜೀಯ +ಮುಕುಂದ +ನೀನೇ
ಕರುಣಿಸೈ +ವನವಾಸವೋ +ನಮಗೇನು +ಗತಿಯೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಜೀಯ, ಮುಕುಂದ
(೨) ಸತ್ತರು ಎಂದು ಹೇಳುವ ಪರಿ – ಶತ ಸಾವಿರ ಮಹೀಶರು ಯಮನ ನಗರಿಗೆ ಸರಿದುದ್

ಪದ್ಯ ೩೭: ಧರ್ಮಜನು ಪತ್ರದಲ್ಲಿ ಏನು ಬೇಡಿದನು?

ಮದುವೆಯೆಂಬುದು ನೆವ ನಿಜ ಶ್ರೀ
ಪದವ ತೋರಿಸಬೇಕು ವನವಾ
ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ
ಕದಡು ಹೋಗಲು ಕಾಣಬೇಹುದು
ಹದುಳವಿಟ್ಟೆಮಗುಚಿತವಚನದ
ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು (ವಿರಾಟ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ದೇವ, ಮದುವೆಯೆಂಬುದೊಂದು ನೆಪ ಮಾತ್ರ, ನಿಮ್ಮ ಶ್ರೀಪಾದಗಳ ದರ್ಶನವನ್ನು ನೀಡಬೇಕು. ವನವಾಸ ಅಜ್ಞಾತವಾಸಗಳ ಕ್ಲೇಶದಿಂದಾಗಿರುವ ಸಂತಾಪವನ್ನು ಹೋಗಲಾಡಿಸಬೇಕು, ನಮ್ಮ ಮನಸ್ಸನ್ನು ಸಮಾಧಾನ ಪಡಿಸಬೇಕು, ಉಚಿತವಾದ ಮಾತುಗಳ ಹದಮಳೆಯನ್ನು ಕರೆದು ನಮ್ಮ ಉತ್ಸಾಹ ಸಸಿಯನ್ನು ಕಾಪಾಡಬೇಕು ಎಂದು ಧರ್ಮಜನು ಪತ್ರದಲ್ಲಿ ಬರೆದಿದ್ದನು.

ಅರ್ಥ:
ಮದುವೆ: ವಿವಾಹ; ನೆವ: ನೆಪ; ನಿಜ: ದಿಟ; ಶ್ರೀ: ಶ್ರೇಷ್ಠ; ಪದ: ಪಾದ; ತೋರಿಸು: ನೋಡು; ವನ: ಕಾಡು; ಪರಿ: ರೀತಿ; ಕ್ಲೇಶ: ದುಃಖ, ಸಂಕಟ; ಸಂತಾಪ: ವ್ಯಥೆ, ಅಳಲು; ಬೀಳ್ಕೊಡು: ತೆರಳು; ಕದಡು: ಕಲಕು, ಕಳವಳ; ಕಾಣು: ತೋರು; ಹದುಳ: ಸೌಖ್ಯ, ಕ್ಷೇಮ; ಹದವಳೆ: ಹದವಾದ ಮಳೆ; ಉಚಿತ: ಸರಿಯಾದ; ವಚನ: ಮಾತು; ಉತ್ಸಾಹ: ಹುರುಪು; ಸಸಿ: ಮೊಳಕೆ, ಅಂಕುರ; ಸಲುಹು: ಕಾಪಾಡು;

ಪದವಿಂಗಡಣೆ:
ಮದುವೆಯೆಂಬುದು+ ನೆವ +ನಿಜ +ಶ್ರೀ
ಪದವ +ತೋರಿಸಬೇಕು +ವನವಾ
ಸದ +ಪರಿಕ್ಲೇಶಾನು+ ಸಂತಾಪವನು+ ಬೀಳ್ಕೊಡಿಸಿ
ಕದಡು +ಹೋಗಲು +ಕಾಣಬೇಹುದು
ಹದುಳವಿಟ್ಟ್+ಎಮಗ್+ಉಚಿತ+ವಚನದ
ಹದವಳೆಯಲ್+ಉತ್ಸಾಹ +ಸಸಿಯನು +ದೇವ +ಸಲಹುವುದು

ಅಚ್ಚರಿ:
(೧) ಧರ್ಮಜನ ಬೇಡಿಕೆ – ಹದುಳವಿಟ್ಟೆಮಗುಚಿತವಚನದ ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು

ಪದ್ಯ ೧೩೦: ರಾಜಪುತ್ರರಾದರು ಪಾಂಡವರಿಗೆ ಯಾವ ಗತಿ ಬಂತು?

ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೦ ಪದ್ಯ)

ತಾತ್ಪರ್ಯ:
ಶಂಕರನ ಕೊರಳಲ್ಲಿ ಆಭರಣವಾಗಿದ್ದರೂ ಹಾವಿಗೆ ಗಾಳಿಯೇ ಆಹಾರವಾದ ಹಾಗೆ, ನಿನ್ನ ಮಕ್ಕಳಾದರೂ ಪಾಂಡವರಿಗೆ ಯಾವ ಗತಿ ಬಂದದ್ದು ನೀನು ಕಾಣೆಯ? ಮನುಷ್ಯ ರೂಪದಲ್ಲಿರುವ ಪಶುಗಳಂತೆ ಅವರು ವನವಾಸದಲ್ಲಿರುವಾಗ ಸೊಪ್ಪು ತಿನ್ನಲಿಲ್ಲವೆ ಎಂದು ವಿದುರ ಹೇಳಿದ.

ಅರ್ಥ:
ಹರ: ಶಿವ, ಶಂಕರ; ಕೊರಳು: ಕತ್ತು; ಆಭರಣ: ಒಡವೆ; ಉರಗ: ಹಾವು; ಪವನ: ಗಾಳಿ; ಅಶನ: ಅನ್ನ, ಆಹಾರ, ಊಟ; ಅರಸ: ರಾಜ; ಬಸುರು: ಹೊಟ್ಟೆ; ಬಂದು: ಆಗಮನ; ನರ: ರಾಜ; ಪಶು: ಪ್ರಾಣಿ; ವನವಾಸ: ಕಾಡಿನಲ್ಲಿರುವುದು; ಸೊಪ್ಪು: ಎಲೆ, ಪರ್ಣ; ಮೆಲು:ತಿನ್ನು, ಕಬಳಿಸು, ಜಗಿ; ರಾಯ: ರಾಜ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಹರನ +ಕೊರಳಿಂಗ್+ಆಭರಣವಾದ್
ಉರಗ +ಪವನ+ಅಶನವೆನಿಸುವಂತ್
ಅರಸ +ನಿನ್ನಯ +ಬಸುರ +ಬಂದೇನಹರು +ಪಾಂಡವರು
ನರ+ಪಶುಗಳಾದರು +ಕಣಾ +ನೀ
ನಿರಲು +ವನವಾಸದಲಿ +ಸೊಪ್ಪನ
ವರತ+ ಮೆಲುವುದೆ +ರಾಯ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಹರನ, ನರ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ಹರನ ಕೊರಳಿಂಗಾಭರಣವಾ ದುರಗ ಪವನಾಶನವೆನಿಸುವಂತ್
(೩) ಅರಸ, ರಾಯ – ಸಮಾನಾರ್ಥಕ ಪದ