ಪದ್ಯ ೧೪: ಭೀಮನು ದುರ್ಯೋಧನನ ಹಲ್ಲನ್ನು ಹೇಗೆ ಮುರಿದನು?

ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೈ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದುಮುಖಿಯನು ಬೂತುಗೆಡೆದುದ
ಕೊಂದು ಘಾಯವ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ (ಗದಾ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಎಲೈ ಕೌರವ, ಹಿಂದೆ ನೀನು ಮಾಡಿದ ಅಪರಾಧಗಳನ್ನು ಹೇಳಿ, ಒಂದು ಎರಡು ಮೂರು ನಾಲ್ಕು, ಐದು ಎಂದು ಎಣಿಸಿ ಕೌರವನ ಕಿರೀಟ ಖಚಿತವಾದ ತಲೆಯನ್ನು ಭೀಮನು ಮೆಟ್ಟಿದನು. ದ್ರೌಪದಿಯನ್ನು ಅಪಮಾನಿಸಿದ್ದಕ್ಕೆ ಈ ಒಂದು ಹೊಡೆತವನ್ನು ತೆಗೆದುಕೋ ಎಂದು ಅವನ ಮುಖಕ್ಕೆ ಹೊಡೆದು ಹಲ್ಲುಗಲನ್ನುದುರಿಸಿದನು.

ಅರ್ಥ:
ಹಿಂದಣ: ಹಿಂದೆ ನಡೆದ; ಅಪರಾಧ: ತಪ್ಪು; ಲೆಕ್ಕಿಸು: ಎಣಿಕೆಮಾಡು; ಮೆಟ್ಟು: ತುಳಿ; ಅವನಿಪಾಲ: ರಾಜ; ಮಕುಟ: ಕಿರೀಟ; ಮಸ್ತಕ: ಶಿರ; ಇಂದುಮುಖಿ: ಸ್ತ್ರಿ (ದ್ರೌಪದಿ); ಬೂತು: ಕುಚೋದ್ಯ, ಕುಚೇಷ್ಟೆ; ಘಾಯ: ಪೆಟ್ಟು; ಮಡ:ಪಾದದ ಹಿಂಭಾಗ, ಹರಡು, ಹಿಮ್ಮಡಿ; ವದನ: ಮುಖ; ಒದೆ: ತಳ್ಳು, ನೂಕು; ಹಲು: ದಂತ; ಕಲಚು: ಬೀಳಿಸು, ಸಡಲಿಸು;

ಪದವಿಂಗಡಣೆ:
ಹಿಂದಣ್+ಅಪರಾಧವನು +ಲೆಕ್ಕಿಸುತ್
ಒಂದೆರಡು +ಮೂರಾಯ್ತು +ನಾಲ್ಕೈದ್
ಎಂದು +ಮೆಟ್ಟಿದನ್+ಅವನಿಪಾಲನ +ಮಕುಟ+ಮಸ್ತಕವ
ಇಂದುಮುಖಿಯನು +ಬೂತುಗೆಡೆದುದಕ್
ಒಂದು +ಘಾಯವ +ಕೊಳ್ಳೆನುತ +ಮಡ
ದಿಂದ +ವದನವನ್+ಒದೆದು +ಹಲುಗಳ +ಕಳಚಿದನು +ಭೀಮ

ಅಚ್ಚರಿ:
(೧) ೨ ಸಾಲುಗಳಲ್ಲಿ ಅಂಕಿಗಳನ್ನು ಬರೆದ ಪರಿ – ಒಂದೆರಡು ಮೂರಾಯ್ತು ನಾಲ್ಕೈ
(೨) ಭೀಮನ ಕೋಪವನ್ನು ತೋರುವ ಪರಿ – ಇಂದುಮುಖಿಯನು ಬೂತುಗೆಡೆದುದಕೊಂದು ಘಾಯವ ಕೊಳ್ಳೆನುತ ಮಡದಿಂದ ವದನವನೊದೆದು ಹಲುಗಳ ಕಳಚಿದನು

ಪದ್ಯ ೩೫: ಕೌರವನನ್ನು ಕಂಡ ಪಾಂಡವರ ಸ್ಥಿತಿ ಹೇಗಾಯಿತು?

ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ (ಗದಾ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನನ್ನು ಕಂಡು ಧರ್ಮಜನ ಮುಖವರಳಿತು, ಭೀಮನಿಗೆ ಹರ್ಷವುಕ್ಕಿತು, ಅರ್ಜುನ, ನಕುಲ, ಸಹದೇವರು ಅತೀವ ಸಂತಸಗೊಂಡರು. ಉಪಪಾಂಡವರು, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿಗಳು ಹರಕೆ ಕಟ್ಟಿಕೋಂಡಕ್ಕೆ ದೇವತೆಗಳು ವರವನ್ನು ಕೊಟ್ಟರು ಎಂದುಕೊಂಡರು.

ಅರ್ಥ:
ಅರಳು: ವಿಕಸಿಸು; ಅರಸ: ರಾಜ; ವದನ: ಮುಖ; ಹರುಷ: ಸಮ್ತಸ; ಉಕ್ಕು: ಹೆಚ್ಚಾಗು; ಉಬ್ಬು: ಹಿಗ್ಗು; ಉರು: ಎದೆ; ಮುದ: ಸಂತಸ; ಉಬ್ಬರಿಸು: ಉತ್ಸಾಹಿತನಾಗು; ಹರಕೆ: ಮೀಸಲು, ಮುಡಿಪು, ಸಂಕಲ್ಪ; ದೈವ: ಭಗವಂತ; ವರ: ಆಶೀರ್ವಾದ; ಸುತ: ಮಗ; ಒಲವು: ಪ್ರೀತಿ; ಉರೆ: ಅತಿಶಯವಾಗಿ; ಉರು: ವಿಶೇಷವಾದ;

ಪದವಿಂಗಡಣೆ:
ಅರಳಿತ್+ಅರಸನ+ ವದನ+ ಭೀಮನ
ಹರುಷವ್+ಉಕ್ಕಿತು +ಪಾರ್ಥನ್+ಉಬ್ಬಿದನ್
ಉರು+ಮುದದಿನ್+ಉರೆ+ ನಕುಲನ್+ಉಬ್ಬರಿಸಿದನು+ ಸಹದೇವ
ಹರಕೆಯಲಿ +ದೈವಂಗಳ್+ಇತ್ತವು
ವರವನೆಂದರು +ದ್ರೌಪದೀಸುತರ್
ಉರು +ಶಿಖಂಡಿ +ದ್ರುಪದಸುತ +ಸಾತ್ಯಕಿಗಳ್+ಒಲವಿನಲಿ

ಅಚ್ಚರಿ:
(೧) ಉಬ್ಬು, ಉರು, ಉರೆ, ಉಬ್ಬರಿಸು – ಪದಗಳ ಬಳಕೆ
(೨) ಸಂತೋಷಗೊಂಡನು ಎಂದು ಹೇಳಲು – ಅರಳಿತರಸನ ವದನ

ಪದ್ಯ ೪೩: ಕೌರವನ ಸಂಭಾಷಣೆಯನ್ನು ಯಾರು ಆಲಿಸಿದರು?

ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು (ಗದಾ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೈಕಾಲುಗಳನ್ನು ತೊಳೆದು ಒಳ್ಳೆಯ ನಿರ್ಮಲ ಜಲವನ್ನು ಕುಡಿದರು. ಕೃಪ ಅಶ್ವತ್ಥಾಮರ ಮಾತುಗಳನ್ನೂ, ನೀರಿನ ನದುವೆ ಇದ್ದ ದುರ್ಯೋಧನನ ಮಾತುಗಳನ್ನು ಕೇಳಿದರು. ಇದೇನು ಕೌರವನ ಮತ್ತು ಅವನ ಸುಭಟರು ವಾದ ಮಾಡುತ್ತಿದ್ದ ಹಾಗಿದೆಯೆಲ್ಲಾ ಎಂದು ಮರೆಯಲ್ಲಿ ನಿಂತು ಸಂಭಾಷಣೆಯನ್ನ್ ಕೇಳಿದರು.

ಅರ್ಥ:
ಚರಣ: ಪಾದ; ವದನ: ಮುಖ; ತೊಳೆ: ಸ್ವಚ್ಛಮಾಡು; ನಿರ್ಮಳ: ಶುದ್ಧ; ಅಂಬು: ನೀರು; ಈಂಟು: ಕುಡಿ; ಸುತ: ಮಗ; ಗುರು: ಆಚಾರ್ಯ; ನುಡಿ: ಮಾತು; ನಡು: ಮಧ್ಯ; ನೀರು: ಜಲ; ಧ್ವನಿ: ಶಬ್ದ; ನೃಪ: ರಾಜ; ಅರಿ: ತಿಳಿ; ಆಲಿಸು: ಕೇಳು; ಸುಭಟ: ಪರಾಕ್ರಮಿ; ಉತ್ತರ: ಪರಿಹಾರ; ಲೇಸು: ಒಳಿತು; ಕೇಳು: ಆಲಿಸು; ಮರೆ: ಗುಟ್ಟು, ರಹಸ್ಯ;

ಪದವಿಂಗಡಣೆ:
ಚರಣ+ ವದನವ +ತೊಳೆದು +ನಿರ್ಮಳ
ತರವರ್+ಅಂಬುವನ್+ಈಂಟಿದರು +ಕೃಪ
ಗುರುಸುತರ +ನುಡಿಗಳನು +ನಡುನೀರಲಿ+ ನೃಪಧ್ವನಿಯ
ಅರಿದರ್+ಇವರ್+ಆಲಿಸಿದರ್+ಏನಿದು
ಕುರುಪತಿಯ +ತತ್ಸುಭಟ+ವಾದ
ಉತ್ತರವಲಾ +ಲೇಸಾಯ್ತೆನುತ +ಕೇಳಿದರು +ಮರೆವಿಡಿದು

ಅಚ್ಚರಿ:
(೧) ನ ಕಾರದ ತ್ರಿವಳಿ ಪದಗಳು – ನುಡಿಗಳನು ನಡುನೀರಲಿ ನೃಪಧ್ವನಿಯ

ಪದ್ಯ ೩೭: ಭೀಮನು ಹೇಗೆ ಧರ್ಮಜನ ರಕ್ಷಣೆಗೆ ಬಂದನು?

ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರನಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ (ಗದಾ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ನೂರು ಆನೆಗಳು ಅಣ್ಣನೆದುರು ಬಂದು ನಿಂತವು. ಅಣ್ಣನು ಕಡಿಯುವ ಕಾಡಿನಲ್ಲಿ ಬಾಳೆಯೇ ಹೆಮ್ಮರ. ರಥವನ್ನು ಬೇಗ ಬಿಡು, ಎನ್ನುತ್ತಾ ಕಣ್ಣುಗಳು ಕಿಡಿಯನ್ನುಗುಳಲು, ಮೀಸೆ ಕುಣೀಯುತ್ತಿರಲು, ಹುಬ್ಬುಗಳು ಗಂಟಿಡಲು, ಮುಖ ಕಪ್ಪೇರಲು, ಕೋಪವೇರಲು, ಭೀಮನು ಅತಿವೇಗವಾಗಿ ಅಲ್ಲಿಗೆ ಬಂದನು.

ಅರ್ಥ:
ತುಳಿ: ಮೆಟ್ಟು; ನೂರು: ಶತ; ಗಜ: ಆನೆ; ಭೂಪಾಲ: ರಾಜ; ನೆರೆ: ಗುಂಪು; ಕಡಿ: ಕತ್ತರಿಸು; ಅಡವಿ: ಕಾದು; ಬಾಳೆ: ಕದಳಿ; ಹೆಮ್ಮರ: ದೊಡ್ಡ ಮರ; ಗಡ: ಬೇಗನೆ, ಅಲ್ಲವೆ; ಫಡ: ತಿರಸ್ಕಾರದ ಮಾತು; ನೂಕು: ತಳ್ಳು; ಆಲಿ: ಕಣ್ಣು; ಕಿಡಿ: ಬೆಂಕಿ; ಕುಣಿ: ನರ್ತಿಸು; ಕರಾಳ: ಭಯಂಕರ; ವದನ: ಮುಖ; ಬಿಗಿ: ಭದ್ರ, ಗಟ್ಟಿ; ಕೋಪ: ರೋಷ, ಖತಿ; ಬಂದ: ಆಗಮಿಸು; ಬಿಟ್ಟ: ತೆರಳು; ಸೂಠಿ: ಬೇಗ;

ಪದವಿಂಗಡಣೆ:
ತೂಳಿ +ತುಳಿದವು +ನೂರು +ಗಜ+ ಭೂ
ಪಾಲಕನ +ನೆರೆ+ಕಡಿತದ್+ಅಡವಿಗೆ
ಬಾಳೆ +ಹೆಮ್ಮರನಾಯ್ತು +ಗಡ +ಫಡ +ನೂಕು +ನೂಕೆನುತ
ಆಲಿ +ಕಿಡಿಯಿಡೆ +ಕುಣಿವ +ಮೀಸೆ +ಕ
ರಾಳ +ವದನದ +ಬಿಗಿದ +ಹುಬ್ಬಿನ
ಮೇಲುಗೋಪದ +ಭೀಮ +ಬಂದನು +ಬಿಟ್ಟ +ಸೂಠಿಯಲಿ

ಅಚ್ಚರಿ:
(೧) ಧರ್ಮಜನ ಶಕ್ತಿಯನ್ನು ಹೇಳುವ ಪರಿ – ಭೂಪಾಲಕನ ನೆರೆಗಡಿತದಡವಿಗೆ ಬಾಳೆ ಹೆಮ್ಮರನಾಯ್ತು
(೨) ಭೀಮನ ಮುಖವನ್ನು ಚಿತ್ರಿಸುವ ಪರಿ – ಆಲಿ ಕಿಡಿಯಿಡೆ ಕುಣಿವ ಮೀಸೆ ಕರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು

ಪದ್ಯ ೨: ಧರ್ಮಜನು ಚಿಂತೆಗೊಂಡು ಯಾರ ಮುಖವನ್ನು ನೋಡಿದನು?

ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ (ದ್ರೋಣ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಏನಾಯಿತೋ ನೋಡಿಕೊಂಡು ಬಾ ಎಂದು ಸಾತ್ಯಕಿಯನ್ನು ಕಳಿಸಿದರೆ, ಅವನು ಇನ್ನೂ ಮರಳಿಬರಲಿಲ್ಲ. ಅರ್ಜುನನು ಅಳಿದನೋ, ಉಳಿದನೋ, ಅಥವ ಶತ್ರುಗಳ ಹೊಡೆತದಿಂದ ಬಳಲಿರುವನೋ ಎನ್ನುವುದನ್ನು ತಿಳಿದು ಹಿಂದಿರುಗಿ ಬಂದು ಹೇಳುವಷ್ಟು ಸಮರ್ಥರು ನಮ್ಮ ರಾಜರಲ್ಲಿ ಯಾರಿದ್ದಾರೆ ಎಂದು ಧರ್ಮಜನು ಹಂಬಲಿಸಿ ಭೀಮನ ಮುಖವನ್ನು ನೋಡಿದನು.

ಅರ್ಥ:
ಕಳುಹು: ತೆರಳು, ಬೀಳ್ಕೊಡು; ಹೋಗು: ತೆರಳು; ತಿಳಿ: ಅರಿ; ಮರಳು: ಹಿಂದಿರುಗು; ಅಳಿ: ಸಾವು, ನಾಶ; ಮೇಣ್: ಅಥವ; ಉಳಿ: ಜೀವಿಸು; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಬಳಲು: ಆಯಸಗೊಳ್ಳು; ತಿಳಿ: ಅರಿ; ಹೇಳು: ತಿಳಿಸು; ಪಟುಭಟ: ಪರಾಕ್ರಮಿ; ಮಕುಟ: ಕಿರೀಟ; ಮಹಿಮ: ಸಮರ್ಥ; ಅಳವಳಿ: ಶಕ್ತಿಗುಂದು; ನೋಡು: ವೀಕ್ಷಿಸು; ಭೂಪಾಲ: ರಾಜ;

ಪದವಿಂಗಡಣೆ:
ಕಳುಹಲ್+ಅತ್ತಲು +ಹೋಗಿ +ಸಾತ್ಯಕಿ
ತಿಳಿದು +ಮರಳಿದುದಿಲ್ಲ+ ಫಲುಗುಣನ್
ಅಳಿದನೋ +ಮೇನ್+ಉಳಿದನೋ +ಶರಹತಿಗೆ+ ಬಳಲಿದನೊ
ತಿಳಿದು +ಹೇಳುವರಾರು+ ಪಟುಭಟ
ರೊಳಗೆ +ಮಕುಟದ +ಮಹಿಮರ್+ಎನುತ್+ಅಳ
ವಳಿದು +ಭೀಮನ +ವದನವನು +ನೋಡಿದನು +ಭೂಪಾಲ

ಅಚ್ಚರಿ:
(೧) ಸಮರ್ಥರು ಎಂದು ಹೇಳುವ ಪರಿ – ಪಟುಭಟರೊಳಗೆ ಮಕುಟದ ಮಹಿಮರ್

ಪದ್ಯ ೩೭: ಕೃಷ್ಣಾರ್ಜುನರು ಆಯಾಸವನ್ನು ಹೇಗೆ ನಿವಾರಿಸಿಕೊಂಡರು?

ಚರಣ ವದನವ ತೊಳೆದು ನಿರ್ಮಳ
ವರಜಲವನೀಂಟಿದರು ನಿರುಪಮ
ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ
ಪರಿಹೃತಶ್ರಮನಾಗಿ ಹರುಷೋ
ತ್ಕರುಷದಲಿ ಹರಿ ಕಳೆದುಕೊಂಡನು
ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ (ದ್ರೋಣ ಪರ್ವ, ೧೦ ಸಂಧಿ, ೩೭ ಪದ್ಯ
)

ತಾತ್ಪರ್ಯ:
ಅವರಿಬ್ಬರೂ ನೀರಿನಲ್ಲಿ ಕಾಲು ಮುಖಗಳನ್ನು ತೊಳೆದು ನಿರ್ಮಲ ಜಲವನ್ನು ಕುಡಿದು ಶ್ರಮವನ್ನು ಕಳೆದುಕೊಂಡರು ಬಳಿಕ ಶ್ರೀಕೃಷ್ಣನು ಸಂತೋಷದಿಂದ ಕರ್ಪೂರ ತಾಂಬೂಲವನ್ನು ತೆಗೆದುಕೊಂಡು ಅರ್ಜುನನಿಗೆ ಕೊಟ್ಟನು.

ಅರ್ಥ:
ಚರಣ: ಪಾದ; ವದನ: ಮುಖ; ತೊಳೆದು: ಸ್ವಚ್ಛಗೊಳಿಸು; ನಿರ್ಮಳ: ಶುದ್ಧ; ವರ: ಶ್ರೇಷ್ಠ; ಜಲ: ನೀರು; ಈಂಟು: ಕುಡಿ, ಪಾನಮಾಡು; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಪರಮ: ಶ್ರೇಷ್ಠ; ಕರುಣ: ದಯೆ; ಅರ್ಣವ: ಸಾಗರ; ಮೈದುನ: ತಂಗಿಯ ಗಂಡ; ಸರಸಿ: ನೀರು, ಸರೋವರ; ಪರಿಹೃತ: ನಿವಾರಿಸಲ್ಪಟ್ಟ; ಶ್ರಮ: ದಣಿವು, ಆಯಾಸ; ಹರುಷ: ಸಂತೋಷ; ಉತ್ಕರುಷ: ಹೆಚ್ಚಳ, ಮೇಲ್ಮೆ; ಹರಿ: ಕೃಷ್ಣ; ನರ: ಅರ್ಜುನ; ಕೊಟ್ಟು: ನೀಡು; ಹೋಳಿಸು: ಎರಡು ಭಾಗ ಮಾಡು, ಸೀಳು; ವೀಳೆ: ತಾಂಬೂಲ;

ಪದವಿಂಗಡಣೆ:
ಚರಣ +ವದನವ +ತೊಳೆದು +ನಿರ್ಮಳ
ವರ+ಜಲವನ್+ಈಂಟಿದರು +ನಿರುಪಮ
ಪರಮ+ ಕರುಣ+ಅರ್ಣವನು +ಮೈದುನ+ಸಹಿತ +ಸರಸಿಯಲಿ
ಪರಿಹೃತ+ಶ್ರಮನಾಗಿ +ಹರುಷೋ
ತ್ಕರುಷದಲಿ +ಹರಿ +ಕಳೆದುಕೊಂಡನು
ನರಗೆ +ಕೊಟ್ಟನು +ಹೋಳಿಸಿದ+ ಕರ್ಪುರದ+ ವೀಳೆಯವ

ಅಚ್ಚರಿ:
(೧) ಜಲ, ಸರಸಿ; ವರ, ಪರಮ; – ಸಮಾನಾರ್ಥಕ ಪದ