ಪದ್ಯ ೪೦: ಭೀಮನು ರಾಜತೇಜಸ್ಸಿನ ಬಗ್ಗೆ ಏನು ಹೇಳಿದ?

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇರು ಬಿಕ್ಕೆಯ
ನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು
ಉರುಕುಗೊಂಡೊಡೆ ರಾಜತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯಬಿಡಿ ಸಾಕೆಂದನಾ ಭೀಮ (ವಿರಾಟ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಹದಿಮೂರು ವರ್ಷಗಳ ಕಾಲ ಧರ್ಮವೆಂಬ ಜಾಡ್ಯದಿಂದ ನರಳಿ ಗೆಡ್ಡೆಗೆಣಸು ಬೇರುಗಳನ್ನು ಹುಡುಕುತ್ತಾ ತೊಳಲಿದುದು ಸಾಕಾಗಲಿಲ್ಲವೇ? ಇದನ್ನೇ ಮುಂದುವರಿಸುತ್ತಾ ಹೋದರೆ ನಮ್ಮ ರಾಜ ತೇಜಸ್ಸನ್ನು ನಾವು ಮೆರೆಯುವುದು ಯಾವಾಗ? ನಮ್ಮ ಮನಸ್ಸು ನಿಮಗೆ ತಿಳಿಯುವುದಿಲ್ಲ ನನ್ನ ಕೈಬಿಡಿ ಎಂದು ಭೀಮನು ಹೇಳಿದನು.

ಅರ್ಥ:
ಬರಿ: ವ್ಯರ್ಥವಾದುದು; ಧರ್ಮ: ಧಾರಣ ಮಾಡಿದುದು; ಜಾಡ್ಯ: ನಿರುತ್ಸಾಹ; ಮರೆ: ನೆನಪಿನಿಂದ ದೂರ ಮಾಡು; ವನ: ಕಾದು; ಬೇರು: ಮರ, ಗಿಡಗಳ ಅಡಿಭಾಗ; ಬಿಕ್ಕೆ: ತಿರುಪೆ, ಭಿಕ್ಷೆ; ಅರಸು: ಹುಡುಕು; ತೊಳಲು: ಬವಣೆ, ಸಂಕಟ; ಸಾಲದು: ಸಾಕು; ವತ್ಸರ: ವರ್ಷ; ಉರುಕು: ಭಯ; ತೇಜ: ಪ್ರಕಾಶ; ದಿನ: ದಿವಸ; ಅರಿ: ತಿಳಿ; ಹರಿ: ಚಲಿಸು; ಸಾಕು: ನಿಲ್ಲಿಸು;

ಪದವಿಂಗಡಣೆ:
ಬರಿಯ +ಧರ್ಮದ +ಜಾಡ್ಯದಲಿ +ಮೈ
ಮರೆದು +ವನದಲಿ +ಬೇರು +ಬಿಕ್ಕೆಯನ್
ಅರಸಿ +ತೊಳಲ್ದುದು +ಸಾಲದೇ +ಹದಿಮೂರು +ವತ್ಸರವು
ಉರುಕುಗೊಂಡೊಡೆ+ ರಾಜ+ತೇಜವ
ಮೆರೆವ+ ದಿನವೆಂದ್+ಇಹುದು +ನೀವಿನ್
ಅರಿಯಿರ್+ಎಮ್ಮನು +ಹರಿಯಬಿಡಿ+ ಸಾಕೆಂದನಾ +ಭೀಮ

ಅಚ್ಚರಿ:
(೧) ಪಾಂಡವರು ಪಟ್ಟ ಕಷ್ಟ: ವನದಲಿ ಬೇರು ಬಿಕ್ಕೆಯನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು

ಪದ್ಯ ೨೨: ಭೀಷ್ಮರು ಹೇಗೆ ಲೆಕ್ಕವನ್ನು ವಿವರಿಸಿದರು?

ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಪ್ರಶ್ನೆಗೆ ಭೀಷ್ಮರು ಉತ್ತರಿಸುತ್ತಾ, ಮಗನೇ ಹತ್ತು ವರ್ಷಗಳ ಅವಧಿಯಲ್ಲಿ ಎರಡು ಅಧಿಕಮಾಸಗಳು ಬರುತ್ತವೆ, ಅವನ್ನೂ ಸೇರಿಸಿ ಅವರು ವನವಾಸ ಅಜ್ಞಾತವಾಸಗಳನ್ನು ಮುಗಿಸಿದರು. ತಿಳಿದವರ ಲೆಕ್ಕದಂತೆ ನಿನ್ನೆಯ ಹಗಲು ನಿನ್ನದು, ಈ ಹಗಲು ಪಾಂಡವರದು ಎಂದು ಭೀಷ್ಮರು ಹೇಳಿದರು.

ಅರ್ಥ:
ಮಗ: ಸುತ, ಪುತ್ರ; ಕೇಳು: ಆಲಿಸು; ಈರೈದು: ಹತ್ತು; ವರುಷ: ಸಂವತ್ಸರ; ಮಿಗು: ಹೆಚ್ಚಾಗು, ಅಧಿಕವಾಗು; ಮಾಸ: ತಿಂಅಳು; ಅನುಭವಿಸು: ಕಷ್ಟಪಡು; ಆದಿ: ಪೂರ್ವ ಕಾಲ; ವತ್ಸರ: ವರ್ಷ; ಮಿಗು: ಹೆಚ್ಚಾಗು, ಅಧಿಕವಾಗು; ಬುಧ: ವಿದ್ವಾಂಸ; ಅರಿ: ತಿಳಿ; ಹಗಲು: ದಿನ; ತನಯ: ಮಕ್ಕಳು; ಕಂದ: ಮಗು; ಹೊಗು: ಮುಟ್ಟು, ಪ್ರವೇಶಿಸು;

ಪದವಿಂಗಡಣೆ:
ಮಗನೆ +ಕೇಳ್+ಈರೈದು +ವರುಷಕೆ
ಮಿಗುವವ್+ಎರಡೇ +ಮಾಸ +ಮಾಸಾ
ದಿಗಳನ್+ಅವರ್+ಅನುಭವಿಸಿದರು+ ಹದಿಮೂರು +ವತ್ಸರವ
ಮಿಗುವ್+ಅವಧಿ +ಬುಧರ್+ಅರಿಯೆ +ನಿನ್ನಿನ
ಹಗಲು +ನಿನ್ನದು +ಪಾಂಡು+ತನಯರು
ಹೊಗುವಡ್+ಇಂದಿನ +ದಿವಸವ್+ಅವರದು +ಕಂದ +ಕೇಳೆಂದ

ಅಚ್ಚರಿ:
(೧) ವರುಷ, ವತ್ಸರ; ತನಯ, ಮಗ, ಕಂದ – ಸಮಾನಾರ್ಥಕ ಪದಗಳು

ಪದ್ಯ ೫೦: ಅರ್ಜುನನು ಬೃಹನ್ನಳೆಯಾಗಲು ಕಾರಣವೇನು?

ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಲ್ಜೋಡಾಯ್ತು ನಿರ್ವಿ
ಘ್ನದಲಿ ದಾಂಟಿದೆವವಧಿಯನು ನ
ಮ್ಮೆದಟತನವನು ಭೀತಿಯಿಲ್ಲದೆ ನೋಡು ನೀನೆಂದ (ವಿರಾಟ ಪರ್ವ, ೭ ಸಂಧಿ, ೫೦ ಪದ್ಯ)

ತಾತ್ಪರ್ಯ:
ಉತ್ತರಕುಮಾರ, ಧರ್ಮಜನ ಸತ್ಯದ ಹೆಚ್ಚಳಕ್ಕಾಗಿ, ಊರ್ವಶಿಯು ಕೊಟ್ಟ ಶಾಪದಿಂದ ಈ ನಪುಂಸಕತನವು ಒಂದು ವರ್ಷಕಾಲ ಬಂದಿತು, ಅಜ್ಞಾತವಾಸಕ್ಕೆ ಈ ಬೃಹನ್ನಳೆ ವೇಷವನ್ನು ಜೋಡಿಸಿಕೊಂಡು ಕಳೆದೆನು. ಇನ್ನು ನೀನು ನನ್ನ ಪರಾಕ್ರಮವನ್ನು ಭಯಗೊಳ್ಳದೆ ನೋಡು ಎಂದು ಅರ್ಜುನನು ಹೇಳಿದನು.

ಅರ್ಥ:
ಅಭ್ಯುದಯ: ಅಭಿವೃದ್ಧಿ; ಓಸುಗ: ಓಸ್ಕರ; ಶಾಪ: ನಿಷ್ಠುರದ ನುಡಿ; ಹೊತ್ತು: ಧರಿಸು; ನೂಕು: ತಳ್ಳು; ವತ್ಸರ: ವರ್ಷ; ಜೋಡು: ಜೊತೆ; ನಿರ್ವಿಘ್ನ: ಅಡಚಣೆಗಳಿಲ್ಲದೆ; ಅವಧಿ: ಕಾಲ; ಎದಟತನ: ಪರಾಕ್ರಮ; ಭೀತಿ: ಭಯ; ನೋಡು: ವೀಕ್ಷಿಸು;

ಪದವಿಂಗಡಣೆ:
ಇದು +ಕಣಾ +ಧರ್ಮಜನ +ಸತ್ಯ
ಅಭ್ಯುದಯಕ್+ಓಸುಗ +ಊರ್ವಶಿಯ+ ಶಾ
ಪದಲಿ +ಬಂದುದು +ಹೊತ್ತು +ನೂಕಿದೆನ್+ಒಂದು +ವತ್ಸರವ
ಇದಕೆ +ನಲ್ಜೋಡಾಯ್ತು+ ನಿರ್ವಿ
ಘ್ನದಲಿ +ದಾಂಟಿದೆವ್+ಅವಧಿಯನು +ನಮ್ಮ್
ಎದಟತನವನು+ ಭೀತಿಯಿಲ್ಲದೆ +ನೋಡು +ನೀನೆಂದ

ಅಚ್ಚರಿ:
(೧) ಅರ್ಜುನನ ಪರಾಕ್ರಮ – ನಮ್ಮೆದಟತನವನು ಭೀತಿಯಿಲ್ಲದೆ ನೋಡು

ಪದ್ಯ ೫: ಧರ್ಮಜನು ತನ್ನ ತಮ್ಮಂದಿರ ಬಗ್ಗೆ ಏನು ಯೋಚಿಸಿದ?

ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು (ವಿರಾಟ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನು ಮತ್ಸ್ಯನಗರದಲ್ಲಿ ವಿರಾಟನ ಆಶ್ರಯದಲ್ಲಿ ಒಂದು ವರ್ಷ ದೈನ್ಯದಿಂದಿರುವುದನ್ನು ನಿಶ್ಚಯಿಸಿ ತಮ್ಮಂದಿರಿಗೆ ನಾವು ಗುಪ್ತವಾಗಿರುವುದಾದರೂ ಹೇಗೆ? ನಿಮ್ಮಂತಹ ವೀರರು ಇನ್ನೊಬ್ಬರ ಆಶ್ರಯದಲ್ಲಿರುವ ಅಪದೆಸೆಯನ್ನು ಹೇಗೆ ಸೈರಿಸೀರಿ? ಕರುಣೆಯಿಲ್ಲದೆ ಹೀಗಿರಬೇಕೆಂದು ನಾನು ನಿಮಗೆ ಹೇಗೆ ತಾನೆ ಅಪ್ಪಣೆನೀಡಲಿ ಎಂದನು.

ಅರ್ಥ:
ನೃಪತಿ: ರಾಜ; ನಿಶ್ಚೈಸು: ನಿರ್ಧರಿಸು; ಅಧಿಪ: ರಾಜ; ನಗರ: ಊರು; ಸೈರಿಸು: ತಾಳು, ಸಹಿಸು; ಕೃಪಣ: ದೀನ, ದೈನ್ಯದಿಂದ ಕೂಡಿದುದು; ನೂಕು: ತಳ್ಳು; ನುಡಿ: ಮಾತು; ವತ್ಸರ: ವರ್ಷ; ಗುಪಿತ: ಗುಪ್ತ; ಆಶ್ರಯ: ಆಸರೆ, ಅವಲಂಬನ; ಅಪದೆಸೆ: ದುರ್ವಿಧಿ, ದುರದೃಷ್ಟ; ನಿಷ್ಕೃಪೆ: ಕರುಣೆ ಇಲ್ಲದ; ನಂದನ: ಮಗ;

ಪದವಿಂಗಡಣೆ:
ನೃಪತಿ +ನಿಶ್ಚೈಸಿದನು+ ಮತ್ಸ್ಯಾ
ಧಿಪನ +ನಗರಿಯೊಳಲ್ಲಿ+ ಸೈರಿಸಿ
ಕೃಪಣ+ತನದಲಿ +ನೂಕಬೇಹುದು +ನುಡಿದ +ವತ್ಸರವ
ಗುಪಿತವೆಂತ್+ಅಳವಡುವುದ್+ಆಶ್ರಯದ್
ಅಪದೆಸೆಯನ್+ಎಂತಾನುವಿರಿ+ ನಿ
ಷ್ಕೃಪೆಯೊಳ್+ಎಂತಾನೆಂಬೆನ್+ಎಂದನು +ಧರ್ಮ+ನಂದನನು

ಅಚ್ಚರಿ:
(೧) ಒಂದು ವರ್ಷವನ್ನು ಕಳೆಯುವ ಪರಿ – ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ

ಪದ್ಯ ೩೨: ನಾರದರು ಪಾಂಡವರಿಗೆ ಯಾವ ಮಾರ್ಗ ಸೂಚಿಸಿದರು?

ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿ ಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದರೆ ಬಳಿಕದಕೆ ಪ್ರಾಯಶ್ಚಿತ್ತವಿಧಿಯುಂಟು (ಆದಿ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ನಾರದರು ಎಚ್ಚರಿಸಿದ ನಂತರ ಧರ್ಮರಾಯನಿಗೆ ಒಂದು ಮಾರ್ಗವನ್ನು ಸೂಚಿಸಿದರು. ದ್ರೌಪದಿಯು ಒಂದು ವರುಷ ಒಬ್ಬರ ಜೊತೆಯಿರಲಿ, ಬಳಿಕ ಮತ್ತೊಂದು ವರುಷ ಇನ್ನೊಬ್ಬರ ಜೊತೆ ಇರಲಿ, ಹೀಗೆ ಐವರೊಡನೆ ಐದು ವರುಷ ಕಳೆಯಲಿ. ದ್ರೌಪದಿಯು ಮಂಚದಲ್ಲಿ ಪತಿಯೊಡನಿದ್ದಾಗ ಅವರನ್ನು ಉಳಿದವರು ನೋಡಬಾರದು, ಹಾಗೆ ನೋಡಿದರೆ ಅದಕ್ಕೆ ಪ್ರಾಯಶ್ಚಿತ್ತವುಂಟು.

ಅರ್ಥ:
ಅರಸ: ರಾಜ; ಚಿತ್ತ: ಮನಸ್ಸು; ಚಿತ್ತೈಸು: ಗಮನವಿಟ್ಟು ಕೇಳು; ಒಂದು: ಏಕ; ವತ್ಸರ: ವರುಷ; ಸತಿ: ಪತ್ನಿ; ಪಂಚ: ಐದು; ಅರಸಿ: ರಾಣಿ; ಪತಿ: ಗಂಡ; ಸಹಿತ: ಜೊತೆ; ಕಾಬುದು: ಕಾಣಬೇಕು; ಸಲ್ಲದು: ಸರಿಯಲ್ಲ; ಗೋಚರಿಸು: ಕಾಣು; ಬಳಿಕ: ನಂತರ; ಪಾಯಶ್ಚಿತ್ತ: ತಪ್ಪಿಗಾಗಿ ವ್ಯಥೆ ಪಟ್ಟು ಪರಿಹಾರ ಮಾಡಿಕೊಳ್ಳುವ ಕರ್ಮ ವಿಧಿ;

ಪದವಿಂಗಡಣೆ:
ಅರಸ +ಚಿತ್ತೈಸ್+ಒಂದು +ವತ್ಸರ
ವಿರಲಿ +ನಿಮ್ಮೊಬ್ಬರಲಿ+ ಸತಿ+ ಮರು
ವರುಷಕ್+ಒಬ್ಬನೊಳ್+ಇಂತು+ ಪಂಚಕಕ್+ಐದು +ವರುಷದಲಿ
ಅರಸಿಯನು +ಪತಿ +ಸಹಿತ +ಮಂಚದೊಳ್
ಇರಲು +ಕಾಬುದು +ಸಲ್ಲದ್+ಅದು+ ಗೋ
ಚರಿಸಿದರೆ +ಬಳಿಕ್+ಅದಕೆ +ಪ್ರಾಯಶ್ಚಿತ್ತ+ವಿಧಿಯುಂಟು

ಅಚ್ಚರಿ:
(೧) ಅರಸ, ಅರಸಿ – ೧,೩ ಸಾಲಿನ ಮೊದಲ ಪದ, ಪುಲ್ಲಿಂಗ, ಸ್ತ್ರೀಲಿಂಗ ಪದ
(೨) ವರುಷ, ವತ್ಸರ – ಸಮನಾರ್ಥಕ ಪದ
(೩) ವರುಷ – ೩ ಸಾಲಿನ ಮೊದಲನೆ ಹಾಗು ಕೊನೆ ಪದ