ಪದ್ಯ ೫೫: ದ್ವಾಪರದಲ್ಲಿ ಕಾಲನೇಮಿ ಯಾವ ರೂಪದಲ್ಲಿ ಕಾಣಿಸಿಕೊಂಡಿದ್ದನು?

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ (ಸಭಾ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಮಹಾದೈತ್ಯನಾದ ಕಾಲನೇಮಿಯು ದ್ವಾಪರ ಯುಗದಲ್ಲಿ ಯಾದವರ ಸೀಮೆಯಲ್ಲಿ ಕಂಸನೆಂಬ ಹೆಸರಿನಿಂದ ಹುಟ್ಟಿದನು. ಅವನ ದುಷ್ಟ ಪರಿವಾರದಲ್ಲಿ ಧೇನುಕ, ಕೇಶಿ, ವತ್ಸ, ತೃಣಾವರ್ತ ಮೊದಲಾದ ಹಲವರಿದ್ದರು. ಈ ಮೂಢನಾದ ಶಿಶುಪಾಲನು ಅವರಿಗೆ ಯಾವವಿಧದಲ್ಲೂ ಸಮಾನನಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಮಹ: ಹಿರಿಯ, ದೊಡ್ಡ; ಅಸುರ: ದಾನವ; ಸನಾಮ: ಹೆಸರಿನಿಂದ ಪ್ರಸಿದ್ಧವಾದ; ಕಾಲ: ಸಮಯ; ಭೂಮಿ: ಧರಣಿ; ಜನಿಸು: ಹುಟ್ಟು; ಅಭಿಧಾನ: ಹೆಸರು; ಮರುಳು: ಮೂಢ; ಹವಣು: ಅಳತೆ, ಪ್ರಮಾಣ; ತದೀಯ: ಅದಕ್ಕೆ ಸಂಬಂಧಪಟ್ಟ; ಸ್ತೋಮ: ಗುಂಪು; ಹಲರು: ಬಹಳ, ಮುಂತಾದ; ಇಹರು: ಇರುವರು; ದುಷ್ಪರಿವಾರ: ಕೆಟ್ಟ ಪರಿಜನ;

ಪದವಿಂಗಡಣೆ:
ಆ +ಮಹಾಸುರ+ ಕಾಲನೇಮಿ +ಸ
ನಾಮನ್+ಈ+ ಕಾಲದಲಿ +ಯಾದವ
ಭೂಮಿಯಲಿ +ಜನಿಸಿದನಲೇ+ ಕಂಸಾಭಿಧಾನದಲಿ
ಈ+ ಮರುಳು +ಹವಣೇ +ತದೀಯ
ಸ್ತೋಮ +ಧೇನುಕ +ಕೇಶಿ +ವತ್ಸ +ತೃ
ಣಾಮಯರು +ಹಲರಿಹರು+ ದುಷ್ಪರಿವಾರ+ ಕಂಸನಲಿ

ಅಚ್ಚರಿ:
(೧) ಕಂಸನ ಪರಿವಾರದವರು – ಕಂಸ, ಧೇನುಕ, ಕೇಶಿ, ವತ್ಸ, ತೃಣಾವರ್ತ
(೨) ಸನಾಮ, ಅಭಿಧಾನ – ಸಾಮ್ಯಾರ್ಥ ಪದಗಳು

ಪದ್ಯ ೩೭: ಶ್ರೀಕೃಷ್ಣನು ಯಾರನ್ನು ನಾಶಮಾಡಿದ್ದನು?

ಮೊಲೆಯನುಂಬಂದೊಬ್ಬದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕ ವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿಕೈ
ದಳಿಸಿದೆವು ದಾನವರ ಹೆಂಡಿರನಾಹವಾಗ್ರದೊಳು (ಉದ್ಯೋಗ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ನಾನಿನ್ನು ಹಾಲುಕುಡಿಯುವ ಪುಟ್ಟ ಮಗುವಾಗಿದ್ದಾಗ, ಹಾಲನ್ನುಣಿಸಲು ಬಂದ ಪೂತನಿಯೆಂಬ ರಾಕ್ಷಸಿಯ ಪ್ರಾಣವನ್ನು ಹೀರಿದೆ. ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಳಿಂಗ ಮೊದಲಾದ ರಾಕ್ಷಸರನ್ನು ಸಂಹರಿಸಿದೆ. ಕುವಲಾಪೀಡವೆಂಬ ಆನೆಯನ್ನು ಕೊಂದೆ. ಚಾಣೂರ ಮುಷ್ಟಿಕರೆಂಬ ಮಲ್ಲರನ್ನು ಅಪ್ಪಳಿಸಿ ಕೊಂದೆ. ಮಾವನಾದ ಕಂಸನನ್ನು ಕೊಂದೆ, ಜರಾಸಂಧನ ಸೈನ್ಯವನ್ನು ಹದಿನೆಂಟು ಬಾರಿ ನಾಶ ಮಾಡಿದೆ, ಹೀಗೆ ನನ್ನೊಡನೆ ಯುದ್ಧ ಮಾಡಿದ ರಾಕ್ಷಸರೆಲ್ಲರ ಮಡದಿಯರು ಯುದ್ಧವಾದ ಮೇಲೆ ದುಃಖಿಸಿದರು ಎಂದು ಕೃಷ್ಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮೊಲೆ:ಸ್ತನ, ಕುಚ; ಉಂಬು: ಉಣ್ಣು; ಬಂದ: ಆಗಮಿಸಿದ; ಅನುಜೆ: ತಂಗಿ; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಒದೆ: ದೂಕು; ತನು: ದೇಹ; ಎಳೆ: ತನ್ನ ಕಡೆಗೆ ಸೆಳೆದುಕೊ; ಬಲು: ಹೆಚ್ಚು; ಗಜ: ಆನೆ; ಮಲ್ಲ: ಜಟ್ಟಿ; ದಾನವ: ರಾಕ್ಷಸ; ಹೆಂಡಿರು: ಮಡದಿ; ಆಹವ: ಯುದ್ಧ; ಭುಜಗ: ಹಾವು;

ಪದವಿಂಗಡಣೆ:
ಮೊಲೆಯನ್+ಉಂ+ಬಂದ್+ಒಬ್ಬದ್+ಅನುಜೆಯ
ಹಿಳಿದೆವ್+ಒದೆದೆವು+ ಶಕಟನನು +ತನು
ಗಳೆದೆ +ಧೇನುಕ +ವತ್ಸ +ನಗ+ ಹಯ+ ವೃಷಭ +ಭುಜಗರನು
ಬಲುಗಜವ+ ಮಲ್ಲರನು +ಮಾವನನ್
ಎಳೆದು +ಮಾಗಧ +ಬಲವ +ಬರಿಕೈದ್
ಅಳಿಸಿದೆವು +ದಾನವರ +ಹೆಂಡಿರನ್+ಆಹವಾಗ್ರದೊಳು

ಅಚ್ಚರಿ:
(೧) ಒದೆ, ಹಿಳಿ, ಎಳೆ ಅಳಿಸು – ಕೊಲ್ಲು, ನಾಶಮಾಡಲು ವಿವರಿಸುವ ಪದಗಳು
(೨) ಕಾಳಿಂಗನನ್ನು ಭುಜಗ ಎಂದು ಕರೆದಿರುವುದು
(೩) ಎಲ್ಲರ ಹೆಸರುಗಳನ್ನು ಒಂದೆ ಪದ್ಯದಲ್ಲಿ ತಂದಿರುವುದು