ಪದ್ಯ ೭: ಘಟೋತ್ಕಚನು ಯುದ್ಧದಲ್ಲಿ ಯಾವ ತಂತ್ರವನ್ನು ಉಪಯೋಗಿಸಿದನು?

ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ (ದ್ರೋಣ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಘಟೋತ್ಕಚನು, ಭಲೇ ಕುರು ಸೈನ್ಯವು ಬಹಳ ವಿಶಾಲವಾಗಿದೆ. ಎಂದಿಗೆ ನಾನು ಇವರನ್ನು ಕೊಲ್ಲಲಾದೀತು, ನನ್ನ ಕೈಸೋತವು ಆದರೂ ಇವರನ್ನು ಕೊಲ್ಲಲು ಒಂದು ಮದ್ದನ್ನು ಬಲ್ಲೆ, ಎಂದು ಮಾಯಾಯುದ್ಧದಿಂದ ಬೆದರಿಕೆ ಹಾಕಿದನು, ಅದನ್ನು ನಾನು ಹೇಗೆ ತಾನೆ ವರ್ಣಿಸಲಿ.

ಅರ್ಥ:
ಪೂತು: ಭಲೇ; ಸೈನಿಕ: ಭಟ; ಅಸಂಖ್ಯಾತ: ಅಗಣಿತ; ಸವೆ: ನಾಶ; ಸೋತು: ಪರಾಭವ; ಹರ: ಶಿವ; ಕೊಲು: ಸಾಯಿಸು; ಅಮರಾರಿ: ದಾನವ, ರಾಕ್ಷಸ; ಅಮರ: ದೇವತೆ; ಅರಿ: ವೈರಿ; ಚಿಂತಿಸು: ಯೋಚಿಸು; ಅಳಿ: ನಾಶ; ಮದ್ದು: ಔಷಧಿ; ಮಾಯ: ಇಂದ್ರಜಾಲ; ಅತಿಶಯ: ಹೆಚ್ಚು; ಯುದ್ಧ: ರಣರಂಗ; ಸಂಘಾತ: ಗುಂಪು, ಸಮೂಹ; ಬೆದರಿಸು: ಹೆದರಿಸು; ವಣ್ಣಿಸು: ವಿವರಿಸು;

ಪದವಿಂಗಡಣೆ:
ಪೂತುರೇ +ಕುರುಸೈನಿಕವ್+ಅಸಂ
ಖ್ಯಾತವ್+ಎಂದಿಗೆ +ಸವೆವುದೋ +ಕೈ
ಸೋತವೇ +ಹರ +ಕೊಲುವೆನ್+ಎನುತ್+ಅಮರಾರಿ +ಚಿಂತಿಸಿದ
ಈತಗ್+ಅಳಿಗಿದು +ಮದ್ದೆನುತ +ಮಾ
ಯಾತಿಶಯ +ಯುದ್ಧದಲಿ +ಬಲ+ಸಂ
ಘಾತವನು +ಬೆದರಿಸಿದನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೬೯: ಅರ್ಜುನನೇಕೆ ಬೆರಗಾದನು?

ಉಬ್ಬಿದನು ಹರುಷದಲಿ ಕಂಗಳ
ಗಬ್ಬ ಮುರಿದುದು ಮದದ ನಿಗುರಿನ
ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ
ಸಬ್ಬಗತನೈ ಶಿವಶಿವಾ ಬಲು
ಮಬ್ಬಿನಲಿ ಮುಂದರಿಯದೆನ್ನಯ
ಕೊಬ್ಬನೆವಣ್ಣಿಸುವೆನೆನುತಡಿಗಡಿಗೆ ಬೆರಗಾದ (ಭೀಷ್ಮ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ವಿಶ್ವರೂಪವನ್ನು ನೋಡಿದ ಅರ್ಜುನನು ಹರ್ಷದಿಂದ ಉಬ್ಬಿದನು. ಅವನ ನೋಟದ ಗರ್ವ ಉಡುಗಿತು. ಆವರಿಸಿದ ಮಾಡವು ಹಾದಿ ತಪ್ಪಿತು. ತನಗೆ ತಿಳುವಳಿಕೆಯಿದೆ ನಾನು ತಿಳಿದವನೆಂಬ ಹಮ್ಮುಗಳು ಹಾರಿಹೋದವು. ನಾಲಗೆ ಹಿಂದಕ್ಕೆ ಸೇದಿತು, ಶಿವ ಶಿವಾ ಶ್ರೀಕೃಷ್ಣನು ಸರ್ವವ್ಯಾಪಿ,
ಅಜ್ಞಾನದಿಂದ ಮುಂದುಗೆಟ್ಟ ನನ್ನ ಕೊಬ್ಬನ್ನು ಏನೆಂದು ಬಣ್ಣಿಸಬೇಕು ಎಂದುಕೊಂಡು ಹೆಜ್ಜೆಹೆಜ್ಜೆಗೂ ಬೆರಗಾದನು.

ಅರ್ಥ:
ಉಬ್ಬು: ಹಿಗ್ಗು; ಹರುಷ: ಸಂತಸ; ಕಂಗಳು: ನಯನ; ಗಬ್ಬ: ಅಹಂಕಾರ; ಮುರಿ: ಸೀಳು; ಮದ: ಅಹಂಕಾರ; ನಿಗುರು: ಚಾಚಿರುವಿಕೆ, ಹೆಚ್ಚಳ; ಹಬ್ಬುಗೆ: ಹರವು, ವಿಸ್ತಾರ; ಹೊಲಬಳಿ: ದಾರಿಕೆಡು; ನಾಲಗೆ: ಜಿಹ್ವೆ; ಉಡುಗು: ಸಂಕೋಚ ಹೊಂದು, ಕುಗ್ಗು; ಹೆಡತಲೆ: ಹಿಂದಲೆ; ಸಬ್ಬಗತ: ಸರ್ವಗತ; ಮಬ್ಬು: ಮಂಕು, ಅಜ್ಞಾನ; ಮುಂದೆ: ನಡೆಯುವ; ಅರಿ: ತಿಳಿ; ಕೊಬ್ಬು: ಆಧಿಕ್ಯ, ಸಮೃದ್ಧಿ; ವಣ್ಣಿಸು: ವರ್ಣಿಸು; ಅಡಿಗಡಿಗೆ: ಹೆಜ್ಜೆಹೆಜ್ಜೆಗೂ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಉಬ್ಬಿದನು +ಹರುಷದಲಿ +ಕಂಗಳ
ಗಬ್ಬ+ ಮುರಿದುದು +ಮದದ +ನಿಗುರಿನ
ಹಬ್ಬುಗೆಯ +ಹೊಲಬಳಿಯೆ+ ನಾಲಗೆಯುಡುಗೆ +ಹೆಡತಲೆಗೆ
ಸಬ್ಬಗತನೈ+ ಶಿವಶಿವಾ+ ಬಲು
ಮಬ್ಬಿನಲಿ +ಮುಂದ್ +ಅರಿಯದ್ +ಎನ್ನಯ
ಕೊಬ್ಬನೇ+ವಣ್ಣಿಸುವೆನ್+ಎನುತ್ +ಅಡಿಗಡಿಗೆ +ಬೆರಗಾದ

ಅಚ್ಚರಿ:
(೧) ಅಹಂಕಾರ ಅಡಗಿತು ಎಂದು ಹೇಳುವ ಪರಿ – ಕಂಗಳಗಬ್ಬ ಮುರಿದುದು ಮದದ ನಿಗುರಿನ ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ