ಪದ್ಯ ೧೪: ಸುಜನರು ದುಷ್ಟರ ವಿಷವನ್ನು ಅರಿಯಲು ಸಾಧ್ಯವೇ?

ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳುಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ (ಸಭಾ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾನ್ಯರಾದವರು, ಸುಜನರು ದುಷ್ಟರ ಹೃದಯದ ಕಾಳಕೂಟ ವಿಷವನ್ನು ತಿಳಿಯಲು ಸಾಧ್ಯವೇ? ಕೌರವರ ಲಲಿತವೂ ಮಧುರವೂ ಆದ ಮಾತುಗಳಿಗೆ ಮೋಸಹೋದರು. ಬೊಬ್ಬುಲಿಯ ವನವನ್ನು ಮರಿದುಂಬಿಯು ಹೊಕ್ಕರೆ ಅದಕ್ಕೇನು ಪ್ರಯೋಜನ? ಪಾಂಡವರು ತಮಗಾಗಿ ರಚಿಸಿದ ಬೇರೊಂದು ರಾಜಭವನದಲ್ಲಿದ್ದರು.

ಅರ್ಥ:
ಖಳ: ದುಷ್ಟ; ಹೃದಯ: ಎದೆ; ಕಾಳಕೂಟ: ಘೋರವಿಷ; ಹುಳುಕ: ಕ್ಷುದ್ರ ವ್ಯಕ್ತಿ, ನೀಚ; ಬಲ್ಲರು: ತಿಳಿದವರು; ಮಾನ್ಯರು: ಉತ್ತಮ, ಶ್ರೇಷ್ಠ; ಅವದಿರ: ಅವರ; ಲಲಿತ: ಚೆಲುವಾದ; ಮಧುರ: ಸಿಹಿಯಾದ, ಸವಿಯಾದ; ವಚೋವಿಳಾಸ: ಮಾತಿನ ಸೌಂದರ್ಯ; ಮರುಳು: ಬುದ್ಧಿಭ್ರಮೆ; ಅಳುಕು: ಹೆದರು; ಮಧುಕರ: ಜೇನು; ಮರಿ: ಚಿಕ್ಕ; ಬೊಬ್ಬುಲಿ: ದೊಡ್ಡ ಹುಲಿ; ವನ: ಕಾಡು; ನೃಪತಿಲಕ: ರಾಜಶ್ರೇಷ್ಠ; ಬೇರೆ: ಅನ್ಯ; ರಚಿಸು: ನಿರ್ಮಿಸು; ರಾಜಭವನ: ಅರಮನೆ;

ಪದವಿಂಗಡಣೆ:
ಖಳರ+ ಹೃದಯದ +ಕಾಳಕೂಟದ
ಹುಳುಕ +ಬಲ್ಲರೆ +ಮಾನ್ಯರ್+ಅವದಿರ
ಲಲಿತ +ಮಧುರ+ ವಚೋವಿಳಾಸಕೆ+ ಮರುಳುಗೊಂಡರಲೈ
ಅಳುಪಿದರೆ+ ಮಧುಕರನ+ ಮರಿ +ಬೊ
ಬ್ಬುಲಿಯ +ವನದೊಳಗ್+ಏನಹುದು +ನೃಪ
ತಿಲಕರಿದ್ದರು +ಬೇರೆ +ರಚಿಸಿದ +ರಾಜಭವನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು

ಪದ್ಯ ೮: ಅರ್ಜುನನೇಕೆ ಧರ್ಮಜನನನ್ನು ಸಾಯಿಸಲು ಹೊರಟನು?

ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನು ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ಈ ಹಿಂದೆ ನಿನಗೆ ಈ ದೇವತೆಗಳ ಬಿಲ್ಲೇಕೆ, ತೆಗೆ ಎಂದು ಯಾರು ಹೇಳುವರೋ ಅವರ ಪ್ರಾಣವನ್ನು ತೆಗೆಯುತ್ತೇನೆ ಎಂದು ಶಪಥಮಾಡಿದ್ದೆ. ಈಗ ಧರ್ಮಜನು ಈ ಮಾತನ್ನು ಹೇಳಿದ್ದಾನೆ, ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ತನ್ನನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವ: ಭಗವಂತ; ಪೂರ್ವ: ಈ ಹಿಂದೆ; ನುಡಿ: ಮಾತು; ಧನು: ಬಿಲ್ಲು; ಸಾದೃಶ್ಯ:ಹೋಲಿಕೆ; ತೆಗೆ: ಈಚೆಗೆ ತರು, ಹೊರತರು; ರೋಷ: ಕೋಪ; ನುಡಿ: ಮಾತು; ಜೀವ: ಬದುಕು, ಉಸಿರು; ಜಕ್ಕುಲಿಸು: ಗೇಲಿ, ಹಾಸ್ಯಮಾಡು; ವಚೋವಿಳಾಸ: ಮಾತಿನ ಸೌಂದರ್ಯ; ಕಾಯುವೆ: ಕಾಪಾಡು;

ಪದವಿಂಗಡಣೆ:
ದೇವ +ಪೂರ್ವದಲ್+ಎನ್ನ +ನುಡಿ +ಗಾಂ
ಡೀವವ್+ಏತಕೆ +ನಿನಗೆ +ನಿನಗೀ
ದೇವ+ಧನು+ ಸಾದೃಶ್ಯವೇ +ತೆಗೆ+ಯೆಂದು +ರೋಷದಲಿ
ಆವನೊಬ್ಬನು +ನುಡಿದನ್+ಆತನ
ಜೀವನವ+ ಜಕ್ಕುಲಿಸಿ+ ಎನ್ನ +ವ
ಚೋವಿಳಾಸವ +ಕಾಯ್ವೆನ್+ಎಂದೆನು +ಕೃಷ್ಣ +ಕೇಳೆಂದ

ಅಚ್ಚರಿ:
(೧) ಜೀವವನ್ನು ತೆಗೆಯುತ್ತೇನೆ ಎಂದು ಹೇಳಲು – ಜೀವನವ ಜಕ್ಕುಲಿಸಿ
(೨) ವಚೋವಿಳಾಸ – ಮಾತಿನ ಹಿರಿಮೆ – ಪದಬಳಕೆ