ಪದ್ಯ ೨೪: ಅರ್ಜುನನು ಊರ್ವಶಿಗೆ ಏನುತ್ತರ ನೀಡಿದನು?

ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗೆ ಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ (ಅರಣ್ಯ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಿವ ಶಿವಾ ಈ ಮಾತುಗಳನ್ನು ನೀವೀಕೆ ಆಡುತ್ತಿದ್ದೀರಿ, ಕಾಮಾಕರ್ಷಣೆಯಿಂದ ನಿಮಗೆ ತಿಳಿವಿಲ್ಲದಿದ್ದರೆ, ನನಗೂ ಇಲ್ಲವೆಂದು ತಿಳಿದಿರಾ? ಇಂದ್ರನ ಆಜ್ಞೆ, ಚಿತ್ರಸೇನನ ಮಾತುಗಳು ಬದಿಗೊತ್ತಿರಿ, ನನಗೆ ನೀವು ಬಂದಿರುವ ಕರ್ತವ್ಯದಲ್ಲಿ ಮನಸ್ಸು ಹೇಗೆತಾನೆ ಒಗ್ಗೀತು? ನಮ್ಮ ಭರತವಂಶಕ್ಕೆ ನೀವು ಜನನಿಯಲ್ಲವೇ ಎಂದು ಅರ್ಜುನನು ವಿನಯದಿಂದ ಊರ್ವಶಿಗೆ ಹೇಳಿದನು.

ಅರ್ಥ:
ಮಾತು: ನುಡಿ; ಕಾಮ: ಮನ್ಮಥ; ಬವಣೆ: ಕಷ್ಟ, ತೊಂದರೆ; ಅರಿ: ತಿಳಿ; ವಾಸವ: ಇಂದ್ರ; ನೇಮ: ನಿಯಮ; ನುಡಿ: ಮಾತು; ಕರ್ತವ್ಯ: ಮಾಡಬೇಕಾದುದ ಕೆಲಸ; ಮನ: ಮನಸ್ಸು; ಸಂಭವಿಸು: ಹುಟ್ಟು; ವಂಶ: ಕುಲ; ಉದ್ಭವ: ಹುಟ್ಟು; ಜನನಿ: ತಾಯಿ; ವಿನಯ: ಸೌಜನ್ಯ, ಆದರ; ನರ: ಅರ್ಜುನ; ನುಡಿ: ಮಾತಾಡು;

ಪದವಿಂಗಡಣೆ:
ಶಿವ +ಶಿವ+ಈ+ಮಾತೇಕೆ +ಕಾಮನ
ಬವಣೆಯಲಿ +ನೀವ್+ಅರಿಯದಿರೆ+ ವಾ
ಸವನ+ ನೇಮವು +ಚಿತ್ರಸೇನನ+ ನುಡಿಗಳ್+ಅಂತಿರಲಿ
ಎವಗೆ+ ಕರ್ತವ್ಯದಲಿ+ ಮನ ಸಂ
ಭವಿಸುವುದೆ +ನೀವ್+ಎಮ್ಮ +ವಂಶೋ
ದ್ಭವಕೆ +ಜನನಿಯಲಾ+ಎನುತ +ವಿನಯದಲಿ +ನರ+ ನುಡಿದ

ಅಚ್ಚರಿ:
(೧) ಅರ್ಜುನ ಊರ್ವಶಿಯನ್ನು ಕಂಡ ಬಗೆ – ಎವಗೆ ಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ