ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೪೨: ಯಕ್ಷ ಧರ್ಮಜನ ಸಂವಾದ – ೬

ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಚೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆಣಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ಯಾರಕೌಂತೇಯ (ಅರಣ್ಯ ಪರ್ವ, ೨೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಪರರನ್ನು ನಿಂದಿಸುವವನು ನೀಮ್ದೆಗೆ ಅರ್ಹ, ಪರರಿಗೆ ಹಿತವನ್ನು ಮಾಡುವವನು ಅಭಿವಂದನೆಗೆ ಅರ್ಹ, ತನ್ನ ಮನಸ್ಸಿಗೆ ಬಂದಂತೆ ನಡೆಯುವ ರಾಜನಿಂದ ದೇಶ ಹಾಳಾಗುತ್ತದೆ. ದರಿದ್ರನೇ ನಡೆಯುವ ಹೆಣ. ಕೊಡ ಬೇಕಾದಷ್ಟು ದಕ್ಷಿಣೆಯನ್ನು ಕೊಡದಿದ್ದರೆ ಯಜ್ಞವು ನಿಷ್ಫಲವಾಗುತ್ತದೆ ಎಂದು ಧರ್ಮಜನು ಹೇಳಿದನು.

ಅರ್ಥ:
ಪರ: ಬೇರೆಯವರು; ನಿಂದಕ: ಬಯ್ಯುವ; ನಿಂದೆ: ದೂಷಣೆ; ಹೇಳು: ತಿಳಿಸು; ಹಿತ: ಪ್ರಿಯಕರವಾದುದು; ವಂದ್ಯ: ಹೊಗಳಲು ಅರ್ಹವಾದ; ಇಚ್ಛೆ: ಆಸೆ; ನಡೆವ: ಚಲಿಸು; ನೃಪ: ರಾಜ; ಅಳಿ: ನಾಶ; ದೇಶ: ರಾಷ್ಟ್ರ; ನಡೆ: ಚಲಿಸುವ; ಹೆಣ: ಜೀವವಿಲ್ಲದ ಶರೀರ; ದರಿದ್ರ: ಬಡವ, ಧನಹೀನ; ಸಾಲ: ಎರವು; ಎಣಿಸು: ಲೆಕ್ಕ ಹಾಕು; ದಕ್ಷಿಣೆ: ಸಂಭಾವನೆ; ಯಜ್ಞ: ಕ್ರತು, ಯಾಗ; ನಿಷ್ಫಲ: ಪ್ರಯೋಜನವಿಲ್ಲದ; ನುಡಿ: ಹೇಳು; ರಾಯ: ರಾಜ;

ಪದವಿಂಗಡಣೆ:
ಕೇಳು +ಪರ+ನಿಂದಕನೆ+ ನಿಂದ್ಯನು
ಹೇಳಲೇಂ +ಪರಹಿತನೆ+ ವಂದ್ಯನು
ಹೇಳಿದ್+ಇಚ್ಚೆಗೆ +ನಡೆವ +ನೃಪನಿಂದ್+ಅಳಿವುದಾ+ ದೇಶ
ಕೇಳು +ನಡೆ+ಹೆಣನೇ+ ದರಿದ್ರನು
ಸಾಲದ್+ಎಣಿಸಿದ +ದಕ್ಷಿಣೆಯ +ಯ
ಜ್ಞಾಳಿ +ನಿಷ್ಫಲವೆಂದು +ನುಡಿದನು +ರಾಯ+ಕೌಂತೇಯ

ಅಚ್ಚರಿ:
(೧) ನಿಂದ್ಯ, ವಂದ್ಯ – ಪ್ರಾಸ ಪದಗಳು

ಪದ್ಯ ೪೧: ಸಹದೇವನು ಮುಕುಂದನ ಗುಣಗಾನ ಹೇಗೆ ಮಾಡಿದ?

ಧರಣಿಪತಿಯೇ ಸಕಲ ಧರ್ಮದ
ಪರಮ ಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ (ಸಭಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಹದೇವನು ತನ್ನ ಮಾತನ್ನು ಮುಂದುವರಿಸುತ್ತಾ, ಯುಧಿಷ್ಠಿರನು ಸಕಲ ಧರ್ಮದ ಎಲ್ಲೆಯನ್ನು ಬಲ್ಲವನು, ಶ್ರೀಕೃಷ್ಣನು ಮಾನ್ಯರಿಗೆ ಮಾನ್ಯನು, ಪೂಜ್ಯಗೊಳ್ಳುವವರಲ್ಲಿ ಅಗ್ರಗಣ್ಯನು, ದೇವರಲ್ಲಿ ಆದಿ ದೇವನು, ಗಂಗಾಪುತ್ರ ಭೀಷ್ಮರು ಸಾಕ್ಷಾತ್ ಪರಮಶಿವ, ಇಂತಹ ಯಜ್ಞ ಲೋಕದಲ್ಲಿ ಎಂದು ಆಗಿರಲಿಲ್ಲ ಇದು ಲೋಕಕಲ್ಯಾಣಕ್ಕಾಗಿದೆ. ಜರಾಸಂಧ, ನಿನ್ನಂತಹ ದುರ್ಬುದ್ಧಿಯುಳ್ಳವರಿಗೆ ಇದು ತಿಳಿಯಲಾಗುವುದಿಲ್ಲ ಎಂದು ಹೇಳಿದನು.

ಅರ್ಥ:
ಧರಣಿ: ಭೂಮಿ; ಧರಣೀಪತಿ: ರಾಜ; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು, ಆಚಾರ; ಪರಮ: ಶ್ರೇಷ್ಠ; ಸೀಮೆ: ಎಲ್ಲೆ; ಮಾನ್ಯ: ಮನ್ನಣೆ, ಪೂಜ್ಯ; ಗುರು: ಆಚಾರ್ಯ; ವಂದ್ಯ: ಪೂಜನೀಯ; ದೈವ: ಭಗವಂತ; ಅಧಿದೈವ: ಶ್ರೇಷ್ಠವಾದ, ಮುಖ್ಯವಾದ ದೈವ; ಸುರನದಿ: ಗಂಗೆ; ನಂದನ: ಮಗ; ಸಾಕ್ಷಾತ್: ಪ್ರತ್ಯಕ್ಷವಾಗಿ; ಪರಮಶಿವ: ಶಂಕರ; ಯಜ್ಞ: ಯಾಗ; ಲೋಕ: ಜಗತ್ತು; ಲೋಕೋತ್ತರ: ಜಗತ್ತಿನ್ನು ಅಭಿವೃದ್ಧಿಯತ್ತ ಒಯ್ಯುವ, ಒಳಿತಾದ; ಉತ್ತರ: ಅಭಿವೃದ್ಧಿ, ಉತ್ತಮ; ಮಖ: ಯಜ್ಞ; ಕುಮತಿ: ದುಷ್ಟಬುದ್ಧಿ; ಸಾಧ್ಯ: ಲಭ್ಯವಾಗುವ;

ಪದವಿಂಗಡಣೆ:
ಧರಣಿಪತಿಯೇ+ ಸಕಲ+ ಧರ್ಮದ
ಪರಮ +ಸೀಮೆ +ಮುಕುಂದನೇ+ ಮಾ
ನ್ಯರಿಗೆ+ ಗುರು +ವಂದ್ಯರಿಗೆ+ ವಂದ್ಯನು +ದೈವಕ್+ಅಧಿದೈವ
ಸುರನದೀನಂದನನು+ ಸಾಕ್ಷಾತ್
ಪರಮಶಿವನ್+ಈ+ ಯಜ್ಞ+ಲೋಕೋ
ತ್ತರದ+ ಮಖವಿದು+ ನಿನ್ನ +ಕುಮತಿಗೆ+ ಸಾಧ್ಯವಲ್ಲೆಂದ

ಅಚ್ಚರಿ:
(೧) ಯಜ್ಞ, ಮಖ – ಸಮನಾರ್ಥಕ ಪದ
(೨) ಕೃಷ್ಣನ ಗುಣಗಾನ – ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ