ಪದ್ಯ ೧೦: ಯುದ್ಧದ ಘೋರತರ ದೃಶ್ಯ ಹೇಗೆ ಕಂಡಿತು?

ಜೋಡನೊಡೆದವಯವದ ರಕುತವ
ತೋಡಿದವು ಕೂರಂಬು ಸಬಳದ
ನೀಡುಮೊನೆ ನಿರಿಗರುಳನೆಂಜಲಿಸಿದವು ಪಟುಭಟರ
ಖೇಡರಸು ಬೆನ್ನೀಯೆ ನೆತ್ತಿಯ
ಬೀಡೆ ಬರಿಯಲು ಬಿದ್ದ ಲೌಡಿಗ
ಳೀಡಿರಿದವರಿ ಚಾತುರಂಗದ ಚಪಳ ಚೂಣಿಯಲಿ (ಕರ್ಣ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇಬ್ಬರು ಸೇನೆಯವರು ಯುದ್ಧಮಾಡಲು ಶುರುಮಾಡಿದರು. ಸೇನೆಯು ಮುಂಭಾಗದಲ್ಲಿದ್ದ ದಳಗಳಲ್ಲಿ ಬಾಣಗಳು ರಕ್ತವನ್ನು ತೋಡಿದವು. ಸಬಳಗಳ ಮೊನೆಗಳು ಕರುಳುಗಳ ರುಚಿ ನೋಡಿ ಎಂಜಲಿಸಿದವು. ಹೇಡಿಗಳ ಪ್ರಾಣಗಳು ಬೆನ್ನು ತೋರಿಸಿ ಹಾರಿ ಹೋದವು. ನೆತ್ತಿಗೆ ಲೌಡಿಗಳ ಹೊಡೆತ ಬಿದ್ದು ಸೀಳು ಬಿಟ್ಟಿತು.

ಅರ್ಥ:
ಜೋಡು: ಜೋಡಿ, ಸಮಾನ, ಕವಚ; ಒಡೆ: ಸೀಳು; ಅವಯವ:ದೇಹದ ಒಂದು ಭಾಗ; ರಕುತ: ರಕ್ತ, ನೆತ್ತರು; ತೋಡು: ತಿವಿ, ನಾಟು; ಕೂರಂಬು: ಹರಿತವಾದ ಬಾಣ; ಸಬಳ:ಈಟಿ, ಭರ್ಜಿ; ಮೊನೆ: ತುದಿ, ಕೊನೆ; ನಿರಿ:ಚುಚ್ಚು; ಕರುಳು: ಪಚನಾಂಗ; ಎಂಜಲು: ತಿಂದಮೇಲೆ ಉಳಿದದ್ದು, ಉಚ್ಛಿಷ್ಟ; ಪಟು: ಕುಶಲನಾದವನು, ಚತುರ; ಭಟ: ಸೈನಿಕ; ಖೇಡ:ಭಯಗ್ರಸ್ತ; ಬೆನ್ನು: ಹಿಂಬಾಗ; ನೆತ್ತಿ: ಶಿರ; ಬೀಡೆ: ಬಿರುಕು, ಸಂದು, ಸೀಳು; ಬಿರಿ:ಬಿರುಕು, ಸೀಳು; ಬಿದ್ದ: ಜಾರು, ಕೆಳಗೆಬೀಳು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಇರಿ: ಚುಚ್ಚು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಚಪಳ: ತೀವ್ರವಾದ ಆಸೆ; ಚೂಣಿ:ಮುಂದಿನ ಸಾಲು, ಮುಂಭಾಗ;ಆರಿ: ವೈರಿ; ಈಡು: ಬಲಿಯಾಗು, ಗುರಿ;

ಪದವಿಂಗಡಣೆ:
ಜೋಡನ್+ಒಡೆದ್ +ಅವಯವದ +ರಕುತವ
ತೋಡಿದವು+ ಕೂರಂಬು +ಸಬಳದ
ನೀಡು+ಮೊನೆ+ ನಿರಿ+ ಕರುಳನ್+ಎಂಜಲಿಸಿದವು +ಪಟುಭಟರ
ಖೇಡರಸು+ ಬೆನ್ನೀಯೆ +ನೆತ್ತಿಯ
ಬೀಡೆ+ ಬರಿಯಲು +ಬಿದ್ದ +ಲೌಡಿಗಳ್
ಈಡ್+ಇರಿದವ್+ಅರಿ +ಚಾತುರಂಗದ +ಚಪಳ +ಚೂಣಿಯಲಿ

ಅಚ್ಚರಿ:
(೧) ಯುದ್ಧದ ರೌದ್ರತೆಯನ್ನು ವಿವರಿಸುವ ಪದಗಳು: ರಕುತವ ತೋಡಿದವು, ಕರುಳನೆಂಜಲಿಸಿದವು, ಖೇಡರಸು ಬೆನ್ನೀಯೆ, ನೆತ್ತಿಯ ಬೀಡೆ ಬರಿಯಲು