ಪದ್ಯ ೧೦: ಅಭಿಮನ್ಯುವು ಷಡುರಥರನ್ನು ಹೇಗೆ ಹಂಗಿಸಿದನು?

ಪಾರ್ಥ ಪರಿಯಂತೇಕೆ ಸಮರ
ವ್ಯರ್ಥಜೀವರು ನೀವು ಕೌರವ
ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ
ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ
ಮರ್ಥರಾದರೆ ಬಾಣಧಾರಾ
ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಅರ್ಜುನನ ತನಕ ಏಕೆ ಹೋಗಬೇಕು? ನೀವು ಯುದ್ಧದಲ್ಲಿ ವ್ಯರ್ಥಜೀವಿಗಳು. ಕೌರವನ ಹಣವನ್ನು ತಿನ್ನುವುದೊಂದೇ ನಿಮಗೆ ಗೊತ್ತು, ನಿಮಗೆ ಯುದ್ಧವೇಕೆ? ಸ್ವಾರ್ಥ ಸಾಧಿಸಲೆಂದು ಯುದ್ಧಕ್ಕೆ ನಿಲ್ಲುವವರಾದರೆ, ನಿಮ್ಮನ್ನು ಬಾಣಗಳ ಧಾರೆಯ ತೀರ್ಥದೊಳಗೆ ಮುಳುಗಿಸಿ ಸದ್ಗತಿಯನ್ನು ಕೊಡುತ್ತೇನೆ ಎಂದು ಬಾಣ ಪ್ರಯೋಗ ಮಾಡಿದನು.

ಅರ್ಥ:
ಪರಿ: ನಡೆ, ಪ್ರವಹಿಸು; ಸಮರ: ಯುದ್ಧ; ವ್ಯರ್ಥ: ನಿರುಪಯುಕ್ತತೆ; ಜೀವರು: ಬದುಕಿರುವವರು; ಅರ್ಥ: ಹಣ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ತಿಂಬು: ತಿನ್ನು; ಸ್ವಾರ್ಥ: ತನ್ನ ಪ್ರಯೋಜನ, ಸ್ವಹಿತ; ಲೋಲುಪ್ತಿ: ಸುಖ, ಸಂತೋಷ; ನಿಲು: ಚಲಿಸದಿರು; ಸಮರ್ಥ: ಬಲಶಾಲಿ; ಬಾಣ: ಸರಳ, ಅಂಬು; ಧಾರಾ: ವರ್ಷ; ತೀರ್ಥ: ಪವಿತ್ರವಾದ ಜಲ, ನೀರು; ಓಲಾಡು: ಹಾರಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಪಾರ್ಥ +ಪರಿಯಂತೇಕೆ+ ಸಮರ
ವ್ಯರ್ಥ+ಜೀವರು+ ನೀವು +ಕೌರವನ್
ಅರ್ಥವನು +ಸಲೆ +ತಿಂಬುದಲ್ಲದೆ +ಸಮರ +ನಿಮಗೇಕೆ
ಸ್ವಾರ್ಥ +ಲೋಲುಪ್ತಿಯಲಿ +ನಿಲುವ +ಸ
ಮರ್ಥರಾದರೆ+ ಬಾಣ+ಧಾರಾ
ತೀರ್ಥದೊಳಗ್+ಓಲಾಡಿಸುವೆನೆಂದ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಹಂಗಿಸುವ ಪರಿ – ಸಮರ ವ್ಯರ್ಥಜೀವರು ನೀವು ಕೌರವನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ

ಪದ್ಯ ೩೯: ಭೀಷ್ಮನು ಧರ್ಮಜನಿಗೆ ಏನೆಂದು ಆಶೀರ್ವದಿಸಿದನು?

ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಹೇಳಿದ ಮಾತು ಸರಿಯಾಗಿದೆ, ರಾಜ ಧರ್ಮಜ ನೀನಿನ್ನು ತೆರಳು, ದ್ರುಪದನೇ ಮೊದಲಾದವರಿಗೆ ಹೊರಡಲು ಅಪ್ಪಣೆಕೊಟ್ಟಿದ್ದೇನೆ, ಅಪ್ಪ ಅರ್ಜುನ ಇನ್ನು ಪಾಳೆಯಕ್ಕೆ ಹೋಗು, ಭೂಮಿಯ ಆಶೆಯಿಂದ ನನ್ನಲ್ಲಿ ತಪ್ಪಿದೆವೆಂದು ಎಂದೂ ಬಗೆಯ ಬೇಡಿರಿ, ನೀವು ಜಯಶಾಲಿಗಳಾಗಿರಿ ಎಂದು ಹರಸಿದನು.

ಅರ್ಥ:
ಮುರಹರ: ಕೃಷ್ಣ; ಮಾತು: ನುಡಿ; ಸಾಕು: ನಿಲ್ಲಿಸು; ಅರಸ: ರಾಜ; ಧರ್ಮಜ: ಯುಧಿಷ್ಠಿರ; ಹೋಗು: ತೆರಳು; ಆದಿ: ಮುಂತಾದ; ಮರಳು: ಹಿಂದಿರುಗು; ತಂದೆ: ಪಿತ; ಪಾಳಯ: ಸೀಮೆ; ಧರೆ: ಭೂಮಿ; ಲೋಲುಪ್ತಿ: ಸುಖ, ಸಂತೋಷ; ಸಲೆ: ಸದಾ, ಸರಿಯಾಗಿ; ಕಾತರಿಸು: ತವಕಗೊಳ್ಳು; ತಪ್ಪು: ಸುಳ್ಳಾಗು; ಧರಧುರ: ಆರ್ಭಟ, ಕೋಲಾಹಲ; ನೆನೆ: ಜ್ಞಾಪಿಸು; ವಿಜಯಿ: ಗೆಲುವು; ಅಹುದು: ಸರಿಯಾದುದು;

ಪದವಿಂಗಡಣೆ:
ಮುರಹರನ +ಮಾತ್+ಅಹುದು +ಸಾಕಿನ್ನ್
ಅರಸ +ಧರ್ಮಜ +ಹೋಗು +ದ್ರುಪದ
ಆದ್ಯರಿಗೆ+ ನೇಮವು +ಪಾರ್ಥ +ಮರಳೈ +ತಂದೆ +ಪಾಳಯಕೆ
ಧರೆಯ +ಲೋಲುಪ್ತಿಯಲಿ +ಸಲೆ +ಕಾ
ತರಿಸಿ +ತಪ್ಪಿದೆವ್+ಎಮ್ಮೊಳ್+ಎಂಬೀ
ಧರಧುರವ +ನೆನೆಯದಿರಿ +ವಿಜಯಿಗಳಾಗಿ +ನೀವೆಂದ

ಅಚ್ಚರಿ:
(೧) ಹೋಗು, ಮರಳು – ಸಮಾನಾರ್ಥಕ ಪದ