ಪದ್ಯ ೩೧: ಪಾಂಡುವು ಕುಂತಿಗೆ ಯಾವ ಮಾರ್ಗವನ್ನು ಸೂಚಿಸಿದನು?

ಲೋಲಲೋಚನೆ ದೃಢಪತಿವ್ರತೆ
ಏಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಪ್ಪಾಳೆಯವು ಬಳಿಕಹುದು ಮಂತ್ರ ವಿ
ಶಾಲ ಬೀಜದಿನಹುದು ಸಂತತಿ ಕಾಂತೆ ಕೇಳೆಂದ (ಆದಿ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಆಗ ಪಾಂಡುವು ಕುಂತಿಗೆ ಹೇಳುತ್ತಾ, ಸುಂದರಿ ನೀನು ಮಹಾ ಪತಿವ್ರತೆ, ದುಃಖಿಸದೇ ಮೇಲೇಳು. ಭೃಗು, ಜಾಬಾಲಿ, ಜಮದಗ್ನಿ ಹೀಗೆ ಮೊದಲಾದ ಋಷಿಶ್ರೇಷ್ಠರ ಗಣವು ಇಲ್ಲಿದೆ. ಅವರು ದುಷ್ಕರ್ಮಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಸಿದರೆ, ಪಾಪದ ಪಾಳೆಯವು ನಮ್ಮನ್ನು ಬಿಟ್ಟುಹೋಗುತ್ತದೆ. ಬಳಿಕ ಮಂತ್ರಬೀಜದಿಂದ ನಮಗೆ ಮಕ್ಕಳಾಗುವರು ಎಂದು ಹೇಳಿದನು.

ಅರ್ಥ:
ಲೋಲಲೋಚನೆ: ಚಂಚಲವಾದ ಕಣ್ಣುಳ್ಳ, ಸ್ತ್ರೀ; ದೃಢ: ಗಟ್ಟಿ; ಪತಿವ್ರತೆ: ಸಾಧ್ವಿ, ಗರತಿ; ದುಃಖ: ದುಗುಡ; ದಿವ್ಯ: ಶ್ರೇಷ್ಠ; ಗಣ: ಗುಂಪು; ಓಲಗ: ಸೇವೆ, ದರ್ಬಾರು; ದುಷ್ಕೃತಿ: ಕೆಟ್ಟ ಕೆಲಸ; ಪಾಳೆಯ: ಬೀಡು, ಶಿಬಿರ; ಬಳಿಕ: ನಂತರ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ವಿಶಾಲ: ದೊಡ್ಡ; ಬೀಜ: ಉತ್ಪತ್ತಿ ಸ್ಥಾನ, ಮೂಲ, ಕಾರಣ; ಸಂತತಿ: ಮಕ್ಕಳು; ಕಾಂತೆ: ಪ್ರಿಯತಮೆ; ಕೇಳು: ಆಲಿಸು;

ಪದವಿಂಗಡಣೆ:
ಲೋಲಲೋಚನೆ+ ದೃಢ+ಪತಿವ್ರತೆ
ಏಳು+ ದುಃಖಿಸಬೇಡ +ಭೃಗು +ಜಾ
ಬಾಲಿ +ಜಮದಗ್ನ್ಯಾದಿ+ ದಿವ್ಯ+ ಮುನೀಂದ್ರ +ಗಣವಿದೆಲ
ಓಲಗಿಸುವುದು +ದುಷ್ಕೃತಿಗೆ +ನಿ
ಪ್ಪಾಳೆಯವು +ಬಳಿಕಹುದು +ಮಂತ್ರ +ವಿ
ಶಾಲ +ಬೀಜದಿನ್+ಅಹುದು +ಸಂತತಿ +ಕಾಂತೆ +ಕೇಳೆಂದ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಲೋಲಲೋಚನೆ, ದೃಢಪತಿವ್ರತೆ, ಕಾಂತೆ;

ಪದ್ಯ ೧: ಗಾಂಧಾರಿಯು ಕೃಷ್ಣನಿಗೆ ಯಾರನ್ನು ತೋರಿಸಲು ಕೇಳಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು (ಗದಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಗಾಂಧಾರಿಯು ಕೃಷ್ಣನನ್ನು ಕರೆದು ತನ್ನ ಮನಸ್ಸಿನ ದುಃಖವನ್ನು ಅವನೆದುರು ತೋಡಿಕೊಂಡಳು, ತಂದೆ ಕೃಷ್ಣಾ ಯುದ್ಧ ಸರ್ಪದ ವಿಷದ ಬೆಂಕಿಯಿಂದ ದಹಿಸಿದ ಮೃತರಾಜರನ್ನು ನನಗೆ ತೋರಿಸು ಎಂದು ಕೇಳಿದಳು.

ಅರ್ಥ:
ಧರಿತ್ರೀಪಾಲ: ರಾಜ; ಕರೆದು: ಬರೆಮಾಡು; ನಯ: ಪ್ರೀತಿ; ಲೋಲಲೋಚನೆ: ಅತ್ತಿತ್ತ ಅಲುಗಾಡುವ, ಪ್ರೀತಿ ಕಣ್ಣುಳ್ಳ; ನುಡಿ: ಮಾತಾಡು; ಅಂತಸ್ತಾಪ: ಮನಸ್ಸಿನ ದುಃಖ; ಶಿಖಿ: ಬೆಂಕಿ; ಜಡಿ: ಕೂಗು, ಧ್ವನಿಮಾಡು; ಏಳು: ಮೇಲೇಳು; ತಂದೆ: ಪಿತ; ಕದನ: ಯುದ್ಧ; ವ್ಯಾಳ: ಸರ್ಪ; ವಿಷ: ಗರಲ; ದಗ್ಧ: ದಹಿಸಿದುದು, ಸುಟ್ಟುದು; ಧರಣೀಪಾಲ: ರಾಜ; ವರ್ಗ: ಗುಂಪು; ತೋರಿಸು: ಕಾಣಿಸು; ತರಳೆ: ಹೆಣ್ಣು; ಕೈಮುಗಿದು: ನಮಸ್ಕೈರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೃಷ್ಣನ +ಕರೆದು +ನಯದಲಿ
ಲೋಲಲೋಚನೆ +ನುಡಿದಳ್+ಅಂತಸ್ತಾಪ+ಶಿಖಿ +ಜಡಿಯೆ
ಏಳು +ತಂದೆ +ಮುಕುಂದ +ಕದನ
ವ್ಯಾಳ+ವಿಷ+ನಿರ್ದಗ್ಧ+ಧರಣೀ
ಪಾಲ+ವರ್ಗವ +ತೋರಿಸೆಂದಳು +ತರಳೆ +ಕೈಮುಗಿದು

ಅಚ್ಚರಿ:
(೧) ಲೋಲಲೋಚನೆ, ತರಳೆ; ಧರಿತ್ರೀಪಾಲ, ಧರಣೀಪಾಲ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಕದನ ವ್ಯಾಳವಿಷನಿರ್ದಗ್ಧಧರಣೀಪಾಲವರ್ಗವ ತೋರಿಸೆಂದಳು ತರಳೆ

ಪದ್ಯ ೨೩: ಕೀಚಕನು ದ್ರೌಪದಿಯನ್ನು ಏನು ಬೇಡಿದ?

ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ತನ್ನನು ಮರಳಲೀಯವು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳುಹೆಂದ (ವಿರಾಟ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಸದ್ಗತಿ ಸುಟ್ಟು ಹೋಗಲಿ, ಯಮದೂತರು ಈಗಲೇ ಬರಲಿ, ಬಂಧುಗಳು ನನ್ನನ್ನು ದೂರಕ್ಕೆ ಕಳಿಸಲಿ, ನನ್ನವರೆನ್ನುವವರು ತೊಲಗಿ ಹೋಗಲಿ, ನನ್ನ ರಾಣಿಯರು ನನ್ನನ್ನು ತ್ಯಜಿಸಲಿ, ತರುಣಿ, ನಿನಗೆ ನಾನೊಲಿದಿದ್ದೇನೆ, ಮದನನ ಬಾಣಗಳು ನನ್ನನ್ನು ಹಿಂದಕ್ಕೆ ಕಳಿಸುವುದಿಲ್ಲ. ಚಂಚಲ ನಯನೆ, ಕಠಿಣವಾದ ಮಾತುಗಳನ್ನಾಡದೆ ನನ್ನನ್ನು ಉಳಿಸು ಎಂದು ಕೀಚಕನು ಬೇಡಿದನು.

ಅರ್ಥ:
ಮೇಲೆ: ಪರಲೋಕ, ಎತ್ತರ; ಸದ್ಗತಿ: ಮೋಕ್ಷ; ಬೆಂದು: ಬೇಯು, ಸುಟ್ಟು; ಕಾಲ: ಸಮಯ; ಐತರು: ಬಂದು ಸೇರು; ಬಂಧು: ನೆಂಟ, ಸಂಬಂಧಿಕ; ಏಳಿಸು: ಎಚ್ಚರಿಸು; ತನ್ನವರು: ಸಂಬಂಧಿಕರು; ತೊಲಗು: ಹೊರಹೋಗು; ರಾಣಿ: ಅರಸಿ; ಬಿಡು: ತೊರೆ; ಬಾಲೆ: ಹೆಣ್ಣು; ಒಲಿ: ಪ್ರೀತಿಸು; ಕಾಮ: ಮನ್ಮಥ; ಕೋಲು: ಬಾಣ; ಮರಳು: ಸುತ್ತು, ತಿರುಗು; ಲೋಲಲೋಚನೆ: ಅತ್ತಿತ್ತ ಅಲುಗಾಡುವ (ಸುಂದರ) ಕಣ್ಣುಗಳುಳ್ಳ; ಬಿರು: ಒರಟು, ಗಟ್ಟಿ; ನುಡಿ: ಮಾತು; ಉಳುಹು: ಬದುಕಿಸು;

ಪದವಿಂಗಡಣೆ:
ಮೇಲೆ+ ಸದ್ಗತಿ+ ಬೆಂದು +ಹೋಗಲಿ
ಕಾಲನವರ್+ಐತರಲಿ +ಬಂಧುಗ
ಳೇಳಿಸಲಿ+ ತನ್ನವರು +ತೊಲಗಲಿ+ ರಾಣಿಯರು+ ಬಿಡಲಿ
ಬಾಲೆ +ನಿನಗಾನ್+ಒಲಿದೆ+ ಕಾಮನ
ಕೋಲು +ತನ್ನನು +ಮರಳಲೀಯವು
ಲೋಲಲೋಚನೆ +ಬಿರುಬ +ನುಡಿಯದೆ +ತನ್ನನುಳುಹೆಂದ

ಅಚ್ಚರಿ:
(೧) ದ್ರೌಪದಿಯನ್ನು ಲೋಲಲೋಚನೆ, ಬಾಲೆ ಎಂದು ಕರೆದಿರುವುದು

ಪದ್ಯ ೨೬: ದ್ರೌಪದಿಯು ಎಲ್ಲಿ ಮೂರ್ಛೆ ಹೋದಳು?

ಗಾಳಿಗೆರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ (ಅರಣ್ಯ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಗಾಳಿಗೆ ಮುರಿದು ಬಿದ್ದ ಬಾಳೆಯಗಿಡದಂತೆ ದ್ರೌಪದಿಯು ನೆಲಕ್ಕೊರಗಿದಳು, ಮೇಲುಸಿರು ಬಿಡುತ್ತಾ ಮೂರ್ಛೆ ಹೋದಳು. ರಾತ್ರಿಯೆಲ್ಲಾ ಅವಳು ಹಾಗೆಯೇ ಇದ್ದಳು. ಬೆಳಗಾದ ಮೇಲೆ ಭೀಮ ನಕುಲ ಧರ್ಮಜರು ಆಕೆಯನ್ನು ಹುಡುಕಿದರು.

ಅರ್ಥ:
ಗಾಳಿ: ವಾಯು; ಎರಗು: ಬಾಗು; ಕದಳಿ: ಬಾಳೆ; ಲೋಲ: ಅತ್ತಿತ್ತ ಅಲುಗಾಡುವ; ಲೋಚನ: ಕಣ್ಣು; ಥಟ್ಟು: ಪಕ್ಕ, ಕಡೆ; ಕೆಡೆ: ಬೀಳು, ಕುಸಿ; ಮೇಲುಸಿರು: ಏದುಸಿರು, ಜೋರಾದ ಉಸಿರಾಟ; ಬಲು: ಬಹಳ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮುದ್ರಿಸು: ಗುರುತುಮಾಡು; ಚೇತನ: ಚೈತನ್ಯ, ಪ್ರಜ್ಞೆ; ಬಾಲೆ: ಹುಡುಗಿ; ಬೆಳಗು: ಮುಂಜಾವ; ತೆಗೆ: ಹೊರತರು; ಗಾಳಿ: ವಾಯು; ಬಿರುವಳೆ: ಬಿರುಸಾದ ಮಳೆ; ಅರಸು:ಹುಡುಕು; ಕಂಡು: ನೋಡು; ಬೆಸ: ಕೆಲಸ;

ಪದವಿಂಗಡಣೆ:
ಗಾಳಿಗ್+ಎರಗಿದ +ಕದಳಿ+ಯಂತಿರೆ
ಲೋಲಲೋಚನೆ +ಥಟ್ಟು+ಕೆಡೆದಳು
ಮೇಲ್+ಉಸಿರ+ ಬಲು+ ಮೂರ್ಛೆಯಲಿ+ ಮುದ್ರಿಸಿದ+ ಚೇತನದ
ಬಾಲೆಯಿರೆ +ಬೆಳಗಾಯ್ತು +ತೆಗೆದುದು
ಗಾಳಿ +ಬಿರುವಳೆ+ ಭೀಮ+ನಕುಲ+ ನೃ
ಪಾಲರ್+ಅರಸಿದರ್+ಈಕೆಯನು +ಕಂಡವರ +ಬೆಸಗೊಳುತ

ಅಚ್ಚರಿ:
(೧) ಮೂರ್ಛಿತಳಾದಳು ಎಂದು ಹೇಳಲು – ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
(೨) ಉಪಮಾನದ ಪ್ರಯೋಗ – ಗಾಳಿಗೆರಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು

ಪದ್ಯ ೧: ಪಾಂಡವರು ಎಲ್ಲೆಲ್ಲಿ ತಿರುಗಾಡಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲವತಿಗಳ ತೀರದಲಿ ತೊಳಲಿದರು ಬೇಸರದೆ (ಅರಣ್ಯ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರು ದ್ರೌಪದಿಯ ಜೊತೆ ಕಾಡಿನ ಸೀಮೆಯ ವಿಸ್ತಾರದಲ್ಲಿ ನೆಡೆದಾಡುತ್ತಾ, ಪರ್ವತ, ಕಣಿವೆ, ಕಾಡು, ನದೀ ತೀರಗಳಲ್ಲಿ ಬೇಸರಿಸದೆ ತಿರುಗಾಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಕುಮಾರ: ಮಕ್ಕಳು; ಅಟವಿ: ಕಾಡು; ಪಾಳೆಯ: ಸೀಮೆ; ಪರುಠವ: ವಿಸ್ತಾರ, ಹರಹು; ಪದಯುಗ: ಪಾದದ್ವಯ, ಎರಡು ಪಾದಗಳು; ಪರಿಭಮ: ತಿರುಗು; ಲೋಲಲೋಚನೆ: ಚಂಚಲ ಕಣ್ಣುಳ್ಳವಳು, ಸುಂದರಿ (ದ್ರೌಪದಿ); ಸಹಿತ: ಜೊತೆ; ಕುಲ: ಗುಂಪು, ಸಮೂಹ; ಶೈಲ: ಬೆಟ್ಟ; ವಿಪನ: ಕಾಡು; ಕೂಲ: ದಡ, ತಟ; ತೀರ: ದಡ; ತೊಳಲು: ಅಲೆದಾಡು, ತಿರುಗಾಡು; ಬೇಸರ: ಬೇಜಾರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡುಕುಮಾರರ್+ಅಟವಿಯ
ಪಾಳಿಯಲಿ +ಪರುಠವಿಸಿದರು +ಪದಯುಗ +ಪರಿಭ್ರಮವ
ಲೋಲಲೋಚನೆ +ಸಹಿತ +ತತ್ಕುಲ
ಶೈಲದಲಿ +ತದ್ವಿಪಿನದಲಿ +ತ
ತ್ಕೂಲವ್+ಅತಿಗಳ +ತೀರದಲಿ +ತೊಳಲಿದರು +ಬೇಸರದೆ

ಅಚ್ಚರಿ:
(೧) ವಿಪಿನ, ಅಟವಿ – ಸಮನಾರ್ಥಕ ಪದ
(೨) ದ್ರೌಪದಿಯನ್ನು ಲೋಲಲೋಚನೆ ಎಂದು ಕರೆದಿರುವುದು
(೩) ತ ಕಾರದ ಸಾಲು ಪದ – ತತ್ಕುಲಶೈಲದಲಿ ತದ್ವಿಪಿನದಲಿ ತತ್ಕೂಲವತಿಗಳ ತೀರದಲಿ ತೊಳಲಿದರು