ಪದ್ಯ ೬: ಭೀಮನು ಏಕೆ ಬೇಸತ್ತನು?

ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ (ಭೀಷ್ಮ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಭೀಮನು ಯುದ್ಧದಲ್ಲಿ ಆನೆಗಳನ್ನು ಕೊಂದು ಕೊಂದು ಬೇಸತ್ತನು. ದುಶ್ಯಾಸನನು ಎದುರಿಸಿದರೂ ಲೆಕ್ಕಿಸದೆ ಬೇಸತ್ತು ಕೋಪಗೊಂಡು, ರಾಜ್ಯ ಲೋಭದ ಬುದ್ಧಿಯು ಮರಣದಿಂದಲೇ ಫಲಿಸಬೇಕು, ದುರ್ಯೋಧನನು ಯುದ್ಧಕ್ಕೆ ಬರಲಿ ಕರೆಯಿರಿ ಎಂದು ಗದೆಯನ್ನು ತೂಗಿ ಗರ್ಜಿಸಿದನು.

ಅರ್ಥ:
ಕಲಹ: ಯುದ್ಧ; ಕರಿಘಟೆ: ಆನೆಗಳ ಗುಂಪು; ಹೊಯ್ದು: ಹೊಡೆದು; ಅಲಸು: ಬಳಲಿಕೆ; ಅನುಜ: ತಮ್ಮ; ಮುಂಕೊಳಿಸು: ಎದುರಿಸು; ಕಳುಹು: ತೆರಳು; ಬೇಸರ: ಬೇಜಾರು; ಅನಿಲಸುತ: ವಾಯುಪುತ್ರ; ಮಸಗು:ಹರಡು, ತಿಕ್ಕು; ನೆಲ: ಭೂಮಿ; ಲೋಭಿ: ಕೃಪಣ, ಜಿಪುಣ; ಬುದ್ಧಿ: ತಿಳಿವು, ಅರಿವು; ಮರಣ: ಸಾವು; ಫಲಿಸು: ಕೈಗೂಡು; ಬವರ: ಕಾಳಗ, ಯುದ್ಧ; ಗದೆ: ಒಂದು ಬಗೆಯ ಆಯುಧ, ಮುದ್ಗರ; ತೂಗು:ತೂಗಾಡಿಸು;

ಪದವಿಂಗಡಣೆ:
ಕಲಹದೊಳು +ಕರಿಘಟೆಯ +ಹೊಯ್ +ಹೊ
ಯ್ದ್+ಅಲಸಿ +ಕೌರವನ್+ಅನುಜನನು +ಮುಂ
ಕೊಳಿಸಿ +ಕೊಳ್ಳದೆ +ಕಳುಹಿ +ಬೇಸರುತ್+ಅನಿಲಸುತ +ಮಸಗಿ
ನೆಲನ +ಲೋಭಿಯ +ಬುದ್ಧಿ +ಮರಣಕೆ
ಫಲಿಸಬೇಹುದು +ಕರೆ+ ಸುಯೋಧನ
ನಿಲಲಿ+ ಬವರಕ್ಕೆನುತ +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಭೀಮನ ಖಾರವಾದ ಮಾತು – ನೆಲನ ಲೋಭಿಯ ಬುದ್ಧಿ ಮರಣಕೆ ಫಲಿಸಬೇಹುದು ಕರೆ ಸುಯೋಧನ

ಪದ್ಯ ೮೧: ಅಂತಃಪುರದ ಮೇಲ್ವಿಚಾರಕನ ಲಕ್ಷಣಗಳೇನು?

ಪಲಿತಕಾಯ ಕುರೂಪಿಯನು ನಿ
ರ್ಮಲನ ಲೋಭಿಯ ಸಾವಧಾನಿಯ
ಸಲೆ ಜಿತೇಂದ್ರಿಯನಿಂಗಿತಾಕಾರ ಪ್ರಭೇದಕನ
ಮಲಿನನನು ಕಡುಶುಚಿಯನಬಲಾ
ವಳಿಯ ಸುಯಿಧಾನಕ್ಕೆ ನಿಲಿಸುವು
ದಿಳೆಯೊಳಗ್ಗಳ ಜಾಣ್ಮೆಯುಂಟೇ ಭೂಪ ನಿನಗೆಂದ (ಸಭಾ ಪರ್ವ, ೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ವಯೋವೃದ್ಧನೂ, ಕುರೂಪಿಯೂ, ನಿರ್ಮಲನೂ, ಲೋಭಿಯೂ, ಸಮಾಧಾನವುಳ್ಳವನೂ, ಜಿತೇಂದ್ರಿಯನು ಆಕಾರವನ್ನು ನೋಡಿ ಇಂಗಿತವನ್ನರಿಯಬಲ್ಲನೂ, ಅತ್ಯಂತ ಶುಚಿಯಾದವನೂ, ಈ ಲಕ್ಷಣಗಳುಳ್ಳ ವ್ಯಕ್ತಿಯನ್ನು ಹೆಂಗಸರ ರಕ್ಷಣೆಗೆ ಅಂತಃಪುರದ ಮೇಲ್ವಿಚಾರಣೆಗೆ ನಿಲ್ಲಿಸುವುದು ಅತ್ಯಂತ ಯೋಗ್ಯ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಪಲಿತ: ವೃದ್ಧಾಪ್ಯ; ಕಾಯ: ದೇಹ; ಕುರೂಪಿ: ಸೌಂದರ್ಯಹೀನತೆ; ನಿರ್ಮಲ: ಶುದ್ಧ, ಶುಭ್ರ; ಲೋಭಿ: ಕೃಪಣ, ಜಿಪುಣ; ಸಾವಧಾನಿ: ಸಮಾಧಾನಿ; ಸಲೆ:ಒಂದೇ ಸಮನೆ, ಸದಾ; ಜಿತೆಂದ್ರಿಯ: ಇಂದ್ರಿಯವನ್ನು ಗೆದ್ದವನು; ಇಂಗಿತ: ಆಶಯ, ಅಭಿಪ್ರಾಯ; ಆಕಾರ: ರೂಪ; ಪ್ರಭೇದ:ಒಡೆಯುವಿಕೆ; ಮಲಿನ:ಕೊಳೆ, ಹೊಲಸು; ಕಡು: ತುಂಬ; ಶುಚಿ: ಶುಭ್ರ, ನಿರ್ಮಲ; ಅಬಲ: ಹೆಂಗಸು; ಆವಳಿ: ಗುಂಪು, ಸಮೂಹ; ಸುಯಿಧಾನ: ರಕ್ಷಣೆ; ನಿಲಿಸು: ನೇಮಿಸು; ಇಳೆ: ಭೂಮಿ; ಅಗ್ಗ:ಶ್ರೇಷ್ಠತೆ; ಜಾಣ್ಮೆ: ಬುದ್ಧಿ; ಭೂಪ: ರಾಜ;

ಪದವಿಂಗಡಣೆ:
ಪಲಿತ+ಕಾಯ +ಕುರೂಪಿಯನು +ನಿ
ರ್ಮಲನ +ಲೋಭಿಯ +ಸಾವಧಾನಿಯ
ಸಲೆ +ಜಿತೇಂದ್ರಿಯನ್+ಇಂಗಿತಾಕಾರ+ ಪ್ರಭೇದಕನ
ಮಲಿನನನು+ ಕಡು+ಶುಚಿಯನ್+ಅಬಲಾ
ವಳಿಯ +ಸುಯಿಧಾನಕ್ಕೆ+ ನಿಲಿಸುವುದ್
ಇಳೆಯೊಳಗ್+ಅಗ್ಗಳ+ ಜಾಣ್ಮೆ+ಯುಂಟೇ +ಭೂಪ +ನಿನಗೆಂದ

ಅಚ್ಚರಿ:
(೧) ಶುಚಿ, ನಿರ್ಮಲ – ಸಮನಾರ್ಥಕ ಪದ
(೨) ಪಲಿತಕಾಯ, ಕುರೂಪಿ, ಶುಚಿ, ಜಿತೇಂದ್ರಿಯ, ಲೋಭಿ, ಸಾವಧಾನಿ, ಇಂಗಿತ ಪ್ರಭೇದಕ – ಅಂತಃಪುರದ ಮೇಲ್ವಿಚಾರಕನ ಲಕ್ಷಣಗಳು