ಪದ್ಯ ೬೯: ಮಂದೇಹರುಗಳೆಂಬುವರು ಯಾರು?

ವರಕುಮಾರಕ ನೀನು ಕೇಳೈ
ಪಿರಿಯಲೋಕಾಲೋಕವೆಂಬಾ
ಗಿರಿಯ ಬಳಸಿದ ಕಾಳಕತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣದ್ವೀಪವದರೊಳು
ನೆರೆದ ಮಂದೇಹರುಗಳೆಂಬ
ಚ್ಚರಿಯದಲಿ ಸರಸಿರುಹ ಸಂಭವನಿಂದ ಜನಿಸಿದರು (ಅರಣ್ಯ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಎಲೈ ಶ್ರೇಷ್ಠನಾದ ಅರ್ಜುನನೇ ಕೇಳು, ದೊಡ್ಡದಾದ ಲೋಕಾಲೋಕವೆಂಬ ಗಿರಿಯತ್ತಣ ಕಾಳಕತ್ತಲೆಯಲ್ಲಿ ಅರುಣ ದ್ವೀಪವಿದೆ. ಅದರಲ್ಲಿ ಬ್ರಹ್ಮನಿಂದ ಜನಿಸಿದ ಮಂದೇಹರೆಂಬ ಆಶ್ಚರ್ಯಕರರಾದ ಅಸುರರಿದ್ದಾರೆ.

ಅರ್ಥ:
ವರ: ಶ್ರೇಷ್ಠ; ಕುಮಾರ: ಮಗ; ಕೇಳು: ಆಲಿಸು; ಪಿರಿಯ: ದೊಡ್ಡ; ಲೋಕ: ಜಗತ್ತು; ಗಿರಿ: ಬೆಟ್ಟ; ಬಳಸು: ಆವರಿಸು; ಕಾಳಕತ್ತಲೆ: ಅಂಧಕಾರ; ಮೆರೆ:ಹೊಳೆ, ಪ್ರಕಾಶಿಸು; ಧರೆ: ಭೂಮಿ; ಅರುಣ: ಕೆಂಪು; ದ್ವೀಪ: ನೀರಿನಿಂದ ಆವರಿಸಿದ ಭೂಮಿ; ನೆರೆದ: ಒಟ್ಟುಗೂಡು; ಅಚ್ಚರಿ: ಆಶ್ಚರ್ಯ; ಸರಸಿರುಹ: ಕಮಲ; ಸಂಭವ: ಹುಟ್ಟು; ಜನಿಸು: ಹುಟ್ಟು; ಸರಸಿರುಹಸಂಭವ: ಬ್ರಹ್ಮ;

ಪದವಿಂಗಡಣೆ:
ವರ+ಕುಮಾರಕ +ನೀನು +ಕೇಳೈ
ಪಿರಿಯ+ಲೋಕಾಲೋಕವೆಂಬಾ
ಗಿರಿಯ +ಬಳಸಿದ+ ಕಾಳಕತ್ತಲೆಯೊಳಗೆ +ಮೆರೆದಿಪ್ಪ
ಧರೆಯೊಳ್+ಅರುಣ+ದ್ವೀಪವ್+ಅದರೊಳು
ನೆರೆದ+ ಮಂದೇಹರುಗಳೆಂಬ್
ಅಚ್ಚರಿಯದಲಿ +ಸರಸಿರುಹ ಸಂಭವನಿಂದ +ಜನಿಸಿದರು

ಅಚ್ಚರಿ:
(೧) ಅರುಣ ದ್ವೀಪ, ಲೋಕಾಲೋಕ ಗಿರಿ – ಸ್ಥಳಗಳ ವಿವರ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು

ಪದ್ಯ ೫೩: ಕ್ಷೀರಸಾಗರವನ್ನು ಯಾವ ದ್ವೀಪವು ಸುತ್ತುವರೆದಿದೆ?

ನಳಿನನಾಭನ ದುಗ್ಧಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ (ಅರಣ್ಯ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕ್ಷೀರಸಾಗರವನ್ನು ಸುತ್ತುವರಿದಿರವ ಪುಷ್ಕರ ದ್ವೀಪದ ಹೊರಗೆ ಸಿಹಿನೀರಿನ ಸಮುದ್ರವಿದೆ. ಅದರಾಚೆ ಭೂಲೋಕದ ಕೋಟೆಯೋ ಎಂಬಂತೆ ಲೋಕಾಲೋಕ ಪರ್ವತವಿದೆ. ಅಲ್ಲಿಂದ ಬ್ರಹ್ಮಾಂಡದ ಕೊನೆಯವರೆಗೂ ಅಂಧಕಾರವಿದೆ.

ಅರ್ಥ:
ನಳಿನ: ತಾವರೆ; ನಳಿನನಾಭ: ವಿಷ್ಣು; ದುಗ್ಧ: ಹಾಲು, ಕ್ಷೀರ; ಶರಧಿ: ಸಮುದ್ರ; ಬಳಸು: ಆವರಿಸು; ಪುಷ್ಕರ: ತಾವರೆ, ಕಮಲ; ಹೊರವಳಯ: ಆಚೆ; ಮೆರೆ: ಶೋಭಿಸು; ವಾರಾಶಿ: ಸಮುದ್ರ; ಇಳೆ: ಭೂಮಿ; ಕೋಟೆ: ದುರ್ಗ; ಬೆಳೆ: ವೃದ್ಧಿಸು; ಪರ್ವತ: ಗಿರಿ; ತಿಮಿರ: ಅಂಧಕಾರ; ಪರ್ಯಂತ: ವರೆಗೂ; ಸ್ವಾದ: ಸವಿ, ರುಚಿ; ಉದ: ನೀರು;

ಪದವಿಂಗಡಣೆ:
ನಳಿನನಾಭನ +ದುಗ್ಧ+ಶರಧಿಯ
ಬಳಸಿಕೊಂಡಿಹ +ಪುಷ್ಕರದ +ಹೊರ
ವಳಯದಲಿ +ಮೆರೆದಿಪ್ಪುದಾ+ ಸ್ವಾದೋದ +ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ

ಅಚ್ಚರಿ:
(೧) ವಾರಾಶಿ, ಶರಧಿ – ಸಮನಾರ್ಥಕ ಪದ