ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೪೯: ಯಾರಿಗೆ ಇಹಪರ ಲೋಕದಲ್ಲಿ ಸ್ಥಾನವಿಲ್ಲ?

ಆದಡೆಲೆ ಮುರವೈರಿ ಕೇಳಿದಿ
ರಾದ ಬಾಂಧವರನಿಬರನು ತಾ
ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ
ಈ ದುರಂತಕ್ಕೇನುಗತಿಯಪ
ವಾದವಾವಂಗಾದುದಾತನ
ವೈದಿಕನು ಇಹಪರಕೆ ಬಾಹಿರನೆಂದನಾ ಪಾರ್ಥ (ಭೀಷ್ಮ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಹಾಗಾದರೆ ಶ್ರೀಕೃಷ್ಣ, ನನ್ನೆದುರು ನಿಂತ ಬಾಂಧವರನ್ನು ಕೊಂದ ಪಾತಕೆ ಎಂದು ಲೋಕವು ನನ್ನನ್ನು ಬಯ್ಯುವುದಿಲ್ಲವೇ? ಈ ಪರಿಣಾಮದಿಂದ ನನಗೇನು ಗತಿ? ಯಾರು ಲೋಕಾಪವಾದವನ್ನು ಹೊರುತ್ತಾನೋ ಅವನು ಅವಿದಿಕ ಅವನಿಗೆ ಇಹಪರ ಲೋಕದಲ್ಲಿ ಸ್ಥಾನವಿಲ್ಲ.

ಅರ್ಥ:
ಆದಡೆ: ಹಾಗಾದರೆ; ಮುರವೈರಿ: ಕೃಷ್ಣ; ಕೇಳು: ಆಲಿಸು; ಇದಿರು: ಎದುರು; ಬಾಂಧವ: ಸಂಬಂಧಿಕರು; ಅನಿಬರು: ಅಷ್ಟು ಜನ; ಕಾದು: ಹೋರಾಡು; ಕೊಂದು: ಕೊಲ್ಲು; ಪಾತಕ: ಪಾಪ; ಲೋಕ: ಜಗತ್ತು; ದುರಂತ: ದುಃಖದಿಂದ ಕೊನೆಗೊಂಡ; ಗತಿ: ಗಮನ, ಸ್ಥಿತಿ; ಅಪವಾದ: ನಿಂದೆ, ಆರೋಪ; ವೈದಿಕ: ವೇದಗಳನ್ನು ಬಲ್ಲವನು; ಇಹಪರ: ಈ ಲೋಕ ಮತ್ತು ಪರ ಲೋಕ; ಬಾಹಿರ: ಹೊರಗಿನವ;

ಪದವಿಂಗಡಣೆ:
ಆದಡ್+ಎಲೆ +ಮುರವೈರಿ +ಕೇಳ್+ಇದಿ
ರಾದ +ಬಾಂಧವರ್+ಅನಿಬರನು +ತಾ
ಕಾದಿ +ಕೊಂದನು +ಪಾರ್ಥ +ಪಾತಕನ್+ಎನ್ನದೇ +ಲೋಕ
ಈ +ದುರಂತಕ್+ಏನುಗತಿ+ಅಪ
ವಾದವ್+ಆವಂಗ್+ಆದುದ್+ಆತನ
ವೈದಿಕನು+ ಇಹಪರಕೆ+ ಬಾಹಿರನೆಂದನಾ+ ಪಾರ್ಥ

ಅಚ್ಚರಿ:
(೧) ಅರ್ಜುನನ ಗೊಂದಲ – ಬಾಂಧವರನಿಬರನು ತಾ ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ