ಪದ್ಯ ೨೧: ಶಲ್ಯನೆದುರು ಯಾರು ಬಂದು ನಿಂತರು?

ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ (ಶಲ್ಯ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೈರಿಸೇನೆಯು ಒಮ್ಮುಖವಾಗಿ ಅತಿವೇಗದಿಂದ ನುಗ್ಗಿತು. ಗರ್ಜಿಸುತ್ತಾ ಚತುರತೆಯಿಂದ ದಾಳಿ ಮಾಡುತ್ತಾ ಆಚೀಚೆಗೆ ಹಾರುತ್ತಾ ಗತ್ತನ್ನು ತೋರಿಸಿತು. ಭೀಮನ ಸೇನೆಯ ಬೆಂಬಲದಿಂದ ಧರ್ಮಜನು ಮುಂದುವರಿದನು. ನಕುಲ ಸಹದೇವರ ಜೋಡಿ ರಥಗಳು ಶಲ್ಯನ ಮುಂದಕ್ಕೆ ಬಂದು ನಿಂತವು.

ಅರ್ಥ:
ಕವಿ: ಆವರಿಸು; ಸೂಠಿ: ವೇಗ; ರಿಪು: ವೈರಿ; ನಿವಹ: ಗುಂಪು; ನಿಬ್ಬರ: ಅತಿಶಯ, ಹೆಚ್ಚಳ; ಅಬ್ಬರ: ಆರ್ಭಟ; ಶರ: ಬಾಣ; ಲವಣಿ: ಕಾಂತಿ; ಲಾವಣಿ: ಗೇಣಿ; ಲಂಬ: ದೊಡ್ಡದಾದ; ಲಂಘನ: ಹಾರುವಿಕೆ, ಜಿಗಿತ; ಪವನಜ: ಭೀಮ; ಪಡಿಬಲ: ವೈರಿಸೈನ್ಯ; ಔಕು: ಒತ್ತು; ಅವನಿಪತಿ: ರಾಜ; ಸವಡಿ: ಜೊತೆ, ಜೋಡಿ; ರಥ: ಬಂಡಿ; ಸಮ್ಮುಖ: ಎದುರು; ಬಿಟ್ಟವು: ಬಿಡು; ಭೂಪತಿ: ರಾಜ;

ಪದವಿಂಗಡಣೆ:
ಕವಿದುದ್+ಒಂದೇ +ಸೂಠಿಯಲಿ +ರಿಪು
ನಿವಹ +ನಿಬ್ಬರದ್+ಅಬ್ಬರದ +ಶರ
ಲವಣಿಗಳ +ಲಾವಣಿಗೆಗಳ +ಲಂಬನದ +ಲಂಘನದ
ಪವನಜನ+ ಪಡಿಬಲದಲ್+ಔಕಿದನ್
ಅವನಿಪತಿ+ ಸಹದೇವ +ನಕುಲರ
ಸವಡಿರಥ +ಸಮ್ಮುಖಕೆ +ಬಿಟ್ಟವು +ಮಾದ್ರ+ಭೂಪತಿಯ

ಅಚ್ಚರಿ:
(೧) ಲ ಕಾರದ ಸಾಲು ಪದಗಳು – ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
(೨) ಅವನಿಪತಿ, ಭೂಪತಿ – ಸಮಾನಾರ್ಥಕ ಪದಗಳು

ಪದ್ಯ ೨೬: ಸಭೆಯು ಹೇಗೆ ಪ್ರಕಾಶಮಾನವಾಗಿತ್ತು?

ಕವಿದು ವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳಮುತ್ತುಗಳ ಚಂದ್ರಿಕೆ
ಜವಳಿಸಿದ ವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ (ಸಭಾ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಒಂದು ಭಾಗದಲ್ಲಿ ನಸುಗೆಂಪು ಬೆಳಕಿನ ಕಾಂತಿಯು ಹೊರಹೊಮ್ಮುತ್ತಿತ್ತು, ಮಗದೊಂದು ಕಡೆ ನೀಲಿ ಬಣ್ಣದ ಹವಳಗಳಿಂದ ಹೊರಹೊಮ್ಮುತ್ತಿದ್ದ ಕಾಂತಿ, ಇವೆರಡರ ಪ್ರಕಾಶದಿಂದ ಗೋಡೆಗಳು ಬೆಳಗುತ್ತಿದ್ದವು. ಮುತ್ತುಗಳ ಕಾಂತಿಯ ಬೆಳದಿಂಗಳು ಇನ್ನೊಂದು ಕಡೆ, ಇವು ಮೂರು ಜಡೆಯ ಕೂದಲುಗಳಂತೆ ಬೆರೆತು ಸಭೆ ಪ್ರಜ್ವಲಿಸುತ್ತಿತ್ತು.

ಅರ್ಥ:
ಕವಿ: ಆವರಿಸು; ಅರುಣ: ಕೆಂಪು ಬಣ್ಣ; ಅಂಶ: ಭಾಗ; ಲಹರಿ: ರಭಸ, ಆವೇಗ, ಕಾಂತಿ; ಲವಣಿ: ಕಾಂತಿ; ಲಾವಣಿಗೆ: ಆಕರ್ಷಣೆ; ಮುತ್ತಿಗೆ; ಚ್ಛವಿ: ಕಾಂತಿ; ದೀಧಿತಿ: ಹೊಳಪು, ಕಾಂತಿ, ಕಿರಣ; ಝಳಪಿಸು: ಹೊಳಪು; ದೆಸೆ: ದಿಕ್ಕು; ಭಿತ್ತಿ: ಮುರಿ, ಒಡೆ; ತಿವಿದು: ಚುಚ್ಚು; ಮುತ್ತು: ಬೆಲೆಬಾಳುವ ರತ್ನ; ಚಂದ್ರಿಕೆ: ಬೆಳದಿಂಗಳು; ಜವಳಿಸು: ಜೋಡಿಸು; ಔಕು: ತಳ್ಳು; ಅವಿರಳ: ದಟ್ಟವಾದ; ಮಣಿ: ರತ್ನ; ಕಿರಣ: ಕಾಂತಿ; ವೇಣಿ: ಕೂದಲು; ಬಂಧ: ಕಟ್ಟು; ಬಂಧುರ: ಚೆಲುವಾದುದು, ಸುಂದರವಾದುದು;

ಪದವಿಂಗಡಣೆ:
ಕವಿದುವ್+ಅರುಣಾಂಶುಗಳ+ ಲಹರಿಯ
ಲವಣಿ +ಲಾವಣಿಗೆಯಲಿ +ನೀಲ
ಚ್ಛವಿಯ+ ದೀಧಿತಿ+ ಝಳಪಿಸಿತು +ದೆಸೆದೆಸೆಯ +ಭಿತ್ತಿಗಳ
ತಿವಿದವ್+ಎಳ+ಮುತ್ತುಗಳ +ಚಂದ್ರಿಕೆ
ಜವಳಿಸಿದವ್ +ಒಂದೊಂದನ್+ಔಕಿದವ್
ಅವಿರಳಿತ +ಮಣಿ +ಕಿರಣ+ ವೇಣೀ +ಬಂಧ +ಬಂದುರದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ
(೨) ಲ ಕಾರದ ತ್ರಿವಳಿ ಪದ – ಲಹರಿಯ ಲವಣಿ ಲಾವಣಿಗೆಯಲಿ