ಪದ್ಯ ೯: ದೂತರನ್ನು ರಾಜನು ಹೇಗೆ ಸನ್ಮಾನಿಸಿದನು?

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ (ವಿರಾಟ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜನು ಈ ಸುದ್ದಿಯನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ಕಣ್ಣುಗಳು ಅರಳಿದವು. ದೇಹವು ಅತೀವ ರೋಮಾಂಚನಗೊಂಡಿತು, ಹರ್ಷದ ಭರದಲ್ಲಿ ಮನಸ್ಸು ದಿಕ್ಕುತೋಚದಂತಾಯಿತು. ಸುದ್ದಿಯನ್ನು ಕೇಳಿ ಸಂಪೂರ್ಣ ಹರ್ಷದಿಂದ ದೂತರಿಗೆ ಹೇರಳವಾಗಿ ಉಡುಗೊರೆಗಳನ್ನು ನೀಡಿದನು. ದೂತರು ರಾಜನ ಓಲಗವನ್ನೇ ಸೂರೆಗೊಂಡರು.

ಅರ್ಥ:
ಕೇಳು: ಆಲಿಸು; ಮಿಗೆ: ಮತ್ತು, ಅಧಿಕ; ಹಿಗ್ಗು: ಹರ್ಷಿಸು; ತನು: ದೇಹ; ಪುಳಕಾಳಿ: ರೋಮಾಂಚನ; ತಳಿತ: ಚಿಗುರು; ಹರುಷ: ಸಂತಸ; ಬಹಳ: ತುಂಬ; ದಾಳಿ: ಆಕ್ರಮಣ; ಮನ: ಮನಸ್ಸು; ಮುಂದುಗೆಡು: ದಿಕ್ಕು ತೋಚದಂತಾಗು; ಕಂಗಳು: ಕಣ್ಣು; ಅರಳು: ಅಗಲವಾಗು, ಸಂತೋಷಗೊಳ್ಳು; ಲಾಲಿಸು: ಅಕ್ಕರೆಯನ್ನು ತೋರಿಸು; ಸರ್ವಾಂಗ: ಎಲ್ಲಾ; ಆಳೆ: ಪೋಷಿಸು; ಜನಪ: ರಾಜ; ಪಸಾಯ: ಉಡುಗೊರೆ; ದೂತಾಳಿ: ಸೇವಕರ ಗುಂಪು; ಸುಲಿ: ಬಿಚ್ಚು, ತೆಗೆ; ರಾಯ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಕೇಳಿ+ ಮಿಗೆ +ಹಿಗ್ಗಿದನು +ತನು +ಪುಳ
ಕಾಳಿ+ ತಳಿತುದು +ಬಹಳ +ಹರುಷದ
ದಾಳಿಯಲಿ +ಮನ +ಮುಂದುಗೆಟ್ಟುದು +ಕಂಗಳ್+ಅರಳಿದವು
ಲಾಲಿಸುತ +ಸರ್ವಾಂಗ +ಹರುಷದೊಳ್
ಆಳೆ +ಜನಪ +ಪಸಾಯಿತವ +ದೂ
ತಾಳಿಗಿತ್ತನು +ಸುಲಿದರ್+ಅವದಿರು +ರಾಯನ್+ಓಲಗವ

ಅಚ್ಚರಿ:
(೧) ಪುಳುಕಾಳಿ, ದಾಳಿ, ದೂತಾಳಿ – ಪ್ರಾಸ ಪದಗಳು
(೨) ರಾಜನ ಹರ್ಷದ ಸ್ಥಿತಿಯನ್ನು ಹೇಳುವ ಪರಿ – ಕೇಳಿ ಮಿಗೆ ಹಿಗ್ಗಿದನು ತನು ಪುಳಕಾಳಿ ತಳಿತುದು ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು

ಪದ್ಯ ೪೩: ಮಲ್ಲಯುದ್ಧದ ಯಾವ ವರಸೆಗಳನ್ನು ಇಬ್ಬರೂ ಪ್ರದರ್ಶಿಸಿದರು?

ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು (ಕರ್ಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಹಸ್ತಗಳಿಂದ ಕತ್ತುಗಳನ್ನು ಹಿಡಿದುದನ್ನು ಬಿಡಿಸಿಕೊಳ್ಳುವ, ನೇರವಾಗಿ ತೋಳಿನಿಂದ ತಿವಿದುದನ್ನು ತಪ್ಪಿಸುವ, ಕೈಯನ್ನು ಕೆಳಗಿಳಿಸಿ ಕಾಲುಹಿಡಿಯಲು ತವಕಿಸುವ, ಲಗಡಿಯನ್ನುಪಯೋಗಿಸಿ ಹಿಡಿಯಲು ಆತುರಪಡುವ, ಅಂತರ ಲಗಡಿಯಿಂದ ಲಾಲಿಸುವ, ಡೊಕ್ಕರಣೆಗಳ ಬಿಗಿಯನ್ನು ಬಿಗಿಯಲೆತ್ನಿಸುವ ಬಿನ್ನಾಣಗಳನ್ನು ಇಬ್ಬರೂ ತೋರಿಸಿದರು.

ಅರ್ಥ:
ತೆಗೆ: ಹೊರಹಾಕು; ಗಳಹತ್ತ: ಮಲ್ಲಯುದ್ಧದ ಪಟ್ಟು; ಕೊರಳು: ಕತ್ತು; ಬಿಗಿ: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ತೋರಹತ್ತ: ದಪ್ಪನಾದ ಕೈಯುಳ್ಳವನು, ರಣಧೀರ; ಹೊಗು: ಪ್ರವೇಶಿಸು; ವಂಚಿಸು: ಮೋಸ; ತಳ: ಕೆಳಭಾಗ; ತವಕ: ಕಾತುರ, ಕುತೂಹಲ; ಲಗಡಿ: ಕುಸ್ತಿಯ ಒಂದು ವರಸೆ; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಲಾಲಿಸು: ಆರೈಕೆ ಮಾಡು;
ಡೊಕ್ಕರ: ಗುದ್ದು; ಬಿಗುಹು: ಗಟ್ಟಿ, ಬಂಧಿಸು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಬಿನ್ನಾಣ: ಸೊಬಗು; ಹೆಣಗು: ಹೋರಾಡು, ಕಾಳಗ ಮಾಡು

ಪದವಿಂಗಡಣೆ:
ತೆಗೆದು +ಗಳಹತ್ತದಲಿ +ಕೊರಳನು
ಬಿಗಿಯೆ +ಬಿಡಿಸುವ+ ತೋರಹತ್ತದ
ಹೊಗುತೆಯನು +ವಂಚಿಸುವ +ತಳಹತ್ತದಲಿ+ ತವಕಿಸುವ
ಲಗಡಿಯಲಿ +ಲಟಕಟಿಸುವ್+ಅಂತರ
ಲಗಡಿಯಲಿ +ಲಾಲಿಸುವ+ ಡೊಕ್ಕರ
ಣೆಗಳ +ಬಿಗುಹಿನ+ ಬಿಡೆಯ +ಬಿನ್ನಾಣದಲಿ+ ಹೆಣಗಿದರು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಗುಹಿನ ಬಿಡೆಯ ಬಿನ್ನಾಣದಲಿ
(೨) ಲ ಕಾರದ ಜೋಡಿ ಪದ – ಲಗಡಿಯಲಿ ಲಟಕಟಿಸುವ, ಲಗಡಿಯಲಿ ಲಾಲಿಸುವ