ಪದ್ಯ ೧೮: ಏನನ್ನು ತೋರುವೆನೆಂದು ಬೇಡನು ಕರೆದನು?

ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಕರಡಿಯ
ಮಿಂಡವಂದಿನ ಲಾವಣಿಗೆಯ ಲುಲಾಯಲಾಲನೆಯ
ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ
ಹಿಂಡುಗಳ ತೋರಿಸುವೆನೇಳೆಂದನಿಲಜನ ಕರೆದ (ಅರಣ್ಯ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ನೋಡಿದರೂ ಹೋದರೂ ಆ ಮೃಗಗಳು ಹಿಂದೆ ಸರಿಯುವುದಿಲ್ಲ. ಹುಲಿ ಕರಡಿಗಳ ಹಿಂಡುಗಳ ಗರ್ವ, ಕಾದುಕೋಣಗಳ ಗುಂಪು, ಮೊಲಗಳ ಚಲನೆ, ನವಿಲು, ಹಾವುಗಳು ಜೊತೆ ಜೊತೆ ಇರುವುದು, ಖಡ್ಗಮೃಗದ ಹಿಂಡುಗಳನ್ನು ತೋರುತ್ತೇನೆ ಮೇಲೇಳು ಎಂದು ಬೇಡನು ಭೀಮಸೇನನನ್ನು ಕರೆದನು.

ಅರ್ಥ:
ಕಂಡು: ನೋಡು; ಮೃಗ: ಪ್ರಾಣಿ; ಮೈ: ತನು, ದೇಹ; ತೆಗೆ: ಈಚೆಗೆ ತರು, ಹೊರತರು; ಇಕ್ಕೆ: ನೆಲೆ; ಬೀಡು; ಹಿಂಡು: ಗುಂಪು; ಹೊಳಹು: ಸ್ವರೂಪ, ಲಕ್ಷಣ; ಹುಲಿ: ವ್ಯಾಘ್ರ; ಕರಡಿ: ಮೈಎಲ್ಲಾ ಕೂದಲುಳ್ಳಪ್ರಾಣಿ; ಮಿಂಡ:ಹರೆಯದ, ಪ್ರಾಯದ; ಲಾವಣಿಗೆ: ಗುಂಪು, ಸಮೂಹ; ಲುಲಾಯ: ಕೋಣ, ಮಹಿಷ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ತೊಂಡು: ಉದ್ಧಟತನ, ದುಷ್ಟತನ; ಮೊಲ: ತೊಂಡ: ಆಳು; ತುಂಟತನ, ತುಂಟ; ನವಿಲು: ಮಯೂರ; ಮಂಡಳಿ: ಗುಂಪು; ಮೇಳ: ಸೇರುವಿಕೆ, ಕೂಡುವಿಕೆ; ಖಡ್ಗಿ: ಘೇಂಡಾಮೃಗ; ಹಿಂಡು: ಗುಂಪು; ತೋರಿಸು: ನೋಡು, ಗೋಚರಿಸು; ಅನಿಲಜ: ಭೀಮ; ಕರೆ: ಬರೆಮಾಡು;

ಪದವಿಂಗಡಣೆ:
ಕಂಡ +ಮೃಗ +ಮೈದೆಗೆಯದ್+ಇಕ್ಕೆಯ
ಹಿಂಡು +ಹೊಳಹಿನ +ಹುಲಿಯ +ಕರಡಿಯ
ಮಿಂಡವಂದಿನ+ ಲಾವಣಿಗೆಯ +ಲುಲಾಯ+ಲಾಲನೆಯ
ತೊಂಡು +ಮೊಲನ +ತೊಂಡಕು +ನವಿಲಿನ
ಮಂಡಳಿಯ +ಮೇಳವದ+ ಖಡ್ಗಿಯ
ಹಿಂಡುಗಳ +ತೋರಿಸುವೆನ್+ಏಳೆಂದ್+ಅನಿಲಜನ +ಕರೆದ

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಾವಣಿಗೆಯ ಲುಲಾಯ ಲಾಲನೆಯ
(೨) ಅರಣ್ಯದಲ್ಲಿ ಕಾಣುವ ವಿಶೇಷತೆ: ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ

ಪದ್ಯ ೧: ಕೃಷ್ಣನನ್ನು ಇಂದ್ರಪ್ರಸ್ಥದಲ್ಲಿ ಹೇಗೆ ಸ್ವಾಗತಿಸಲಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವಪುರಿಗೆ ಲಕ್ಷ್ಮೀ
ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿಂಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ (ಸಭಾ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಶ್ರೀಕೃಷ್ಣನು ಜರಾಸಂಧನ ವಧೆಯ ನಂತರ ಭೀಮಾರ್ಜುನರ ಜೊತೆ ಇಂದ್ರಪ್ರಸ್ಥಕ್ಕೆ ಬಂದನು. ಅವನನ್ನು ಸ್ತ್ರೀಸಮೂಹದ ಕಡೆಗಣ್ಣ ಮಿಂಚಿನ ಮಾಲೆಗಳು ಸ್ವಾಗತಿಸಿದವು. ಅರಳಿನ ಮಳೆಯನ್ನು ಅವನ ಮೇಲೆ ಸುರಿಸಿದರು. ಇಂತಹ ಸ್ವಾಗತದ ಮಧ್ಯೆ ಕೃಷ್ಣನು ಅರಮನೆಯನ್ನು ಸೇರಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಪುರಿ: ಊರು; ಲೋಲ: ಪ್ರೀತಿ; ಬಿಜಯಂಗೈ: ದಯಮಾಡಿಸು; ಗಡಣ: ಗುಂಪು, ಸಮೂಹ; ಬಾಲೆ: ಸ್ತ್ರೀ; ಕಡೆ: ಕೊನೆ; ಕಣ್ಣು: ನಯನ; ಮಿಂಚು: ಹೊಳಪು, ಕಾಂತಿ; ಮಾಲೆ: ಸರ; ಲಾಜಾಭಿವರುಷ: ಅರಳಿನ ಮಳೆ, ಹೂವು/ಪುಷ್ಪದ ಮಳೆ; ಲಾಲನೆ: ಅಕ್ಕರೆ ತೋರಿಸುವುದು; ರಚನೆ:ನಿರ್ಮಾಣ, ಸೃಷ್ಟಿ; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡವಪುರಿಗೆ+ ಲಕ್ಷ್ಮೀ
ಲೋಲ +ಬಿಜಯಂಗೈದು +ಭೀಮಾರ್ಜುನರ +ಗಡಣದಲಿ
ಬಾಲೆಯರ +ಕಡೆಗಣ್ಣ +ಮಿಂಚಿನ
ಮಾಲೆಗಳ +ಲಾಜಾಭಿವರುಷದ
ಲಾಲನೆಯ +ರಚನೆಯಲಿ +ಹೊಕ್ಕನು +ರಾಜಮಂದಿರವ

ಅಚ್ಚರಿ:
(೧) ಸ್ವಾಗತಿಸಲು ಹೂವಿನ ಮಾಲೆಯನ್ನು ಹಾಕುವುದು ವಾಡಿಕೆ, ಆದರೆ ಕೃಷ್ಣನ ಸ್ವಾಗತಕ್ಕೆ ಬಾಲೆಯರ ಕಡೆಗಣ್ಣಿನ ಕಾಂತಿಯ ಮಾಲೆ ಎಂದು ಕುಮಾರವ್ಯಾಸ ಹೇಳುತ್ತಾನೆ
(೨) ಜೋಡಿ ಪದಗಳು: ಲಕ್ಷ್ಮೀ ಲೋಲ; ಮಿಂಚಿನ ಮಾಲೆಗಳ; ಲಾಜಾಭಿವರುಷದ ಲಾಲನೆಯ; ಬಿಜಯಂಗೈದು ಭೀಮಾರ್ಜುನರ
(೩) ಪಾಲ,ಲೋಲ; ಬಾಲೆ, ಮಾಲೆ – ಪ್ರಾಸ ಪದಗಳು