ಪದ್ಯ ೪೯: ಭೀಮನು ಯಾವ ಭಾಗಕ್ಕೆ ಹೊಡೆಯಲು ಯೋಚಿಸಿದನು?

ಕೊಡಹಿದನು ತನುಧೂಳಿಯನು ಧಾ
ರಿಡುವ ರುಧಿರವ ಸೆರಗಿನಲಿ ಸಲೆ
ತೊಡೆತೊಡೆದು ಕರ್ಪುರದ ಕವಳವನಣಲೊಳಳವಡಿಸಿ
ತೊಡೆಯ ಹೊಯ್ದಾರುವ ಮುರಾರಿಯ
ನೆಡೆಯುಡುಗದೀಕ್ಷಿಸುತ ದೂರಕೆ
ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ (ಗದಾ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನು ಧೂಳಿಯನ್ನು ಕೊಡವಿಕೊಂಡು, ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತವನ್ನು ಸೆರಗಿನಲ್ಲಿ ಒರೆಸಿಕೊಂಡು ಕರ್ಪೂರ ವೀಳೆಯವನ್ನು ಹಾಕಿಕೊಂಡನು. ಶ್ರೀಕೃಷ್ಣನು ಅಬ್ಬರಿಸುತ್ತಾ ತೊಡೆ ತಟ್ಟುವುದನ್ನು ಕಂಡು, ಭೀಮನು ದೂರಕ್ಕೆ ಹೋಗಿದ್ದ ಗದೆಯನ್ನು ಹಿಡಿದು ಕೌರವನ ತೊಡೆಗೆ ಹೊಡೆಯುವ ಲೆಕ್ಕಾಚಾರವನ್ನು ಹಾಕಿದನು.

ಅರ್ಥ:
ಕೊಡಹು: ಅಲ್ಲಾಡಿಸು, ಹೊರಹಾಕು; ತನು: ದೇಹ; ಧೂಳು: ಮಣ್ಣಿನ ಪುಡಿ; ಧಾರಿಡು: ಹೆಚ್ಚಾಗಿ ಹರಿದ; ರುಧಿರ: ರಕ್ತ; ಸೆರಗು: ಬಟ್ಟೆಯ ಅಂಚು; ಸಲೆ: ಒಂದೇ ಸಮನೆ; ತೊಡೆ: ಲೇಪಿಸು, ಬಳಿ, ಸವರು; ಕರ್ಪುರ: ಸುಗಂಧ ದ್ರವ್ಯ; ಕವಳ: ತುತ್ತು, ತಾಮ್ಬೂಲ; ಅಳವಡಿಸು: ಸರಿಮಾಡು, ಹೊಂದಿಸು; ತೊಡೆ: ಊರು, ಜಂಘೆ; ಹೊಯ್ದು: ಹೊಡೆ; ನೆಡೆ: ಗಮನ, ಚಲನೆ; ಈಕ್ಷಿಸು: ನೋಡು; ದೂರ: ಆಚೆ; ಸಿಡಿ: ಸ್ಫೋಟ, ಚಿಮ್ಮು; ಗದೆ: ಮುದ್ಗರ; ತುಡುಕು: ಹೋರಾಡು, ಸೆಣಸು; ನೃಪತಿ: ರಾಜ; ಲಾಗಿಸು: ಹೊಡೆ;

ಪದವಿಂಗಡಣೆ:
ಕೊಡಹಿದನು +ತನು+ಧೂಳಿಯನು +ಧಾ
ರಿಡುವ +ರುಧಿರವ +ಸೆರಗಿನಲಿ +ಸಲೆ
ತೊಡೆತೊಡೆದು +ಕರ್ಪುರದ +ಕವಳವನ್+ಅಣಲೊಳ್+ಅಳವಡಿಸಿ
ತೊಡೆಯ +ಹೊಯ್ದಾರುವ+ ಮುರಾರಿಯ
ನೆಡೆಯುಡುಗದ್+ಈಕ್ಷಿಸುತ +ದೂರಕೆ
ಸಿಡಿದ +ಗದೆಯನು +ತುಡುಕಿ +ನೃಪತಿಯ+ ತೊಡೆಗೆ +ಲಾಗಿಸಿದ

ಅಚ್ಚರಿ:
(೧) ತೊಡೆ ಪದದ ಬಳಕೆ – ತೊಡೆತೊಡೆದು, ತೊಡೆಯ, ತೊಡೆಗೆ

ಪದ್ಯ ೨೨: ಭೂರಿಶ್ರವನ ತಲೆಯನ್ನು ಯಾರು ಕಡೆದರು?

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.

ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;

ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ

ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು