ಪದ್ಯ ೧೦: ಶಕುನಿ ಧೃತರಾಷ್ಟ್ರನಿಗೆ ಹೇಗೆ ಉತ್ತರಿಸಿದನು?

ಈ ಕುಮಾರಕರಲ್ಲಲೇ ಕುಂ
ತೀಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲಡೊಂಬೇಕೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶಕುನಿಯು ಧೃತರಾಷ್ಟ್ರನ ಮಾತುಗಳನ್ನು ಕೇಳಿ, ಎಲೈ ರಾಜನೇ ನಿಮ್ಮ ಮಕ್ಕಳೇನೂ ಬೀದಿ ಕರುಗಳಾಗಿಲ್ಲವಲ್ಲಾ, ಕುಂತಿಯ ಮಕ್ಕಳಿಗೆ ಕಷ್ಟ ಬಂದರೆ ಮಹಾಸತ್ವರೂ ಸಜ್ಜನರೂ ಆದ ನೀವೇಕೆ ಅಳಬೇಕು? ಕೌರವನಲ್ಲಿ ಲವಮಾತ್ರವಾದರೂ ಅನ್ಯಾಯವಿದೆಯೇ ಎಂದು ವಿಚಾರಿಸಿ, ಶೋಕವನ್ನು ಬಿಡಿ, ಡಂಭಾಚಾರವೇಕೆ ಎಂದು ಕೇಳಿದನು.

ಅರ್ಥ:
ಕುಮಾರ: ಮಕ್ಕಳು; ನವೆ: ಕೊರಗು; ಸಾಕು: ನಿಲ್ಲಿಸು; ಅಳಲು: ದುಃಖಿಸು; ಸತ್ವ: ಸಾತ್ವಿಕ ಗುಣ; ಸಜ್ಜನ: ಒಳ್ಳೆಯ ಜನ; ಕ್ಷಿತಿಪತಿ: ರಾಜ; ಅನ್ಯಾಯ: ಸರಿಯಿಲ್ಲದುದು; ಲವ: ಅಲ್ಪ, ಸ್ವಲ್ಪ; ವಿಚಾರಿಸು: ವಿಮರ್ಶಿಸು; ಶೋಕ: ದುಃಖ; ಬಿಡು: ತ್ಯಜಿಸು; ಬಯಲು: ಬರಿದಾದ, ವ್ಯರ್ಥವಾದ; ಡೊಂಬ: ವಂಚಕ;

ಪದವಿಂಗಡಣೆ:
ಈ +ಕುಮಾರಕರ್+ಅಲ್ಲಲೇ +ಕುಂ
ತೀ+ಕುಮಾರರು +ನವೆವುತಿದ್ದರೆ
ಸಾಕು +ಸಾಕ್+ಅಳಲೇಕೆ +ಸತ್ವಾಧಿಕರು+ ಸಜ್ಜನರು
ಈ +ಕುರು+ಕ್ಷಿತಿಪತಿಯೊಳ್+ಅನ್ಯಾ
ಯೈಕ+ ಲವವುಂಟೇ +ವಿಚಾರಿಸಿ
ಶೋಕವನು +ಬಿಡಿ +ಬಯಲಡೊಂಬ್+ಏಕೆಂದನಾ +ಶಕುನಿ

ಅಚ್ಚರಿ:
(೧) ಧೃತರಾಷ್ಟ್ರನ ಶೋಕವನ್ನು ವಿವರಿಸುವ ಪರಿ – ಬಯಲಡೊಂಬೇಕೆಂದನಾ ಶಕುನಿ
(೨) ಕೌರವರು ಸಜ್ಜನರೆಂದು ಹೇಳುವ ಪರಿ – ಈ ಕುರುಕ್ಷಿತಿಪತಿಯೊಳನ್ಯಾಯೈಕ ಲವವುಂಟೇ