ಪದ್ಯ ೨೫: ವ್ಯಾಸರು ಏನೆಂದು ಉಪದೇಶಿಸಿದರು?

ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನಪರಂಜ್ಯೋತಿಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ (ದ್ರೋಣ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ವ್ಯಾಸರು ಉತ್ತರಿಸುತ್ತಾ, ಧರ್ಮಜ ಕೇಳು, ಹುಟ್ಟು ಸಾವಿಗೆ ಬೀಜ, ಸಾವು ಹುಟ್ಟಿನ ಬೀಜ, ತೋರಿ ಅಡಗುವ ದೇಹದ ರಂಜನೆಯ ಸೌಖ್ಯವನ್ನು ನೆಚ್ಚಿ ಕೆಡಬೇಡ. ಘನಪರಂಜ್ಯೋತಿ ಸ್ವರೂಪದ ಬ್ರಹ್ಮವನ್ನು ಧ್ಯಾನಿಸುವುದನ್ನು ಮರೆತು ಮೋಹದ ಬಂಧನಕ್ಕೆ ಮರುಳಾಗುವರೇ? ನೀನಾರು ಎನ್ನುವುದನ್ನು ವಿಚಾರಿಸಿ ಅರಿತುಕೋ ಎಂದು ಉಪದೇಶಿಸಿದರು.

ಅರ್ಥ:
ಜನನ: ಹುಟ್ಟು; ಲಯ: ನಾಶ; ಮರಣ: ಸಾವು; ಬೀಜ: ಉತ್ಪತ್ತಿ ಸ್ಥಾನ, ಮೂಲ; ತೋರು: ಕಾಣಿಸು; ಕೆಡುವು: ಹಾಳು; ತನು: ದೇಹ; ರಂಜನೆ: ಮೆರುಗು, ಕಾಂತಿ; ಸೌಖ್ಯ: ಸುಖ; ಮಾರು: ವಿಕ್ರಯಿಸು; ಮನ: ಮನಸ್ಸು; ಘನ: ಶ್ರೇಷ್ಠ; ಪರಂಜ್ಯೋತಿ: ದಿವ್ಯವಾದ ತೇಜಸ್ಸುಳ್ಳವನು, ಪರಮಾತ್ಮ; ಸ್ವರೂಪ: ನಿಜವಾದ ರೂಪ, ಸ್ವಂತ ಆಕೃತಿ; ನೆನಹು: ನೆನಪು; ಮರೆ: ನೆನಪಿನಿಂದ ದೂರವಾಗು; ಮೋಹ: ಪ್ರೀತಿ, ಭ್ರಾಂತಿ, ಭ್ರಮೆ; ಬಂಧನ: ಕಟ್ಟು, ಸಂಕೋಲೆ; ಮರುಳು: ಬುದ್ಧಿಭ್ರಮೆ, ಹುಚ್ಚು; ಅರಿ: ತಿಳಿ;

ಪದವಿಂಗಡಣೆ:
ಜನನವೇ +ಲಯ+ಬೀಜ +ಮರಣವೆ
ಜನನ+ ಬೀಜವು +ತೋರಿ +ಕೆಡುವ್
ಈ+ತನುವಿನ್+ಅಭಿರಂಜನೆಯ+ ಸೌಖ್ಯಕೆ +ಮಾರದಿರು +ಮನವ
ಘನ+ಪರಂಜ್ಯೋತಿ+ಸ್ವರೂಪದ
ನೆನಹ +ಮರೆದ್+ಈ+ ಮೋಹಮಯ +ಬಂ
ಧನದೊಳಗೆ+ ಮರುಳಹರೆ+ ಮಗನೇ +ನಿನ್ನನರಿಯೆಂದ

ಅಚ್ಚರಿ:
(೧) ಜನನ ಮರಣದ ಚಕ್ರವನ್ನು ವಿವರಿಸುವ ಪರಿ – ಜನನವೇ ಲಯಬೀಜ ಮರಣವೆ ಜನನ ಬೀಜವು
(೨) ವ್ಯಾಸರ ನುಡಿಮುತ್ತು – ಕೆಡುವೀತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ; ಘನಪರಂಜ್ಯೋತಿಸ್ವರೂಪದನೆನಹ ಮರೆದೀ ಮೋಹಮಯ ಬಂಧನದೊಳಗೆ ಮರುಳಹರೆ

ಪದ್ಯ ೧: ದ್ರೋಣರು ಭೀಷ್ಮರಿಗೆ ಏನು ಹೇಳಿದರು?

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವ ಸೇನೆಯಲ್ಲಿ ಎಲ್ಲೆಲ್ಲೂ ಭಯವು ಆವರಿಸಿತ್ತು, ಎದುರಿನಲ್ಲಿ ಬಂದವನು ಅರ್ಜುನನೇ ಎಂದು ದ್ರೋಣ, ಭೀಷ್ಮರಿಗೆ ತಿಳಿಯಿತು, ದ್ರೋಣರು ಭೀಷ್ಮರಿಗೆ, “ಈ ಯುದ್ಧದಲ್ಲಿ ನಮಗೆ ಜಯವುಂಟಾಗುವುದಿಲ್ಲ, ಈಗ ತೋರುತ್ತಿರುವ ಅಪಶಕುನಗಳು ಈ ಸಂಶಯಕ್ಕೆ ಎಡೆಗೊಡುತ್ತದೆ, ನಮಗೆ ಶತಪ್ರತಿಶತ ಸೋಲಾಗುತ್ತದೆ” ಎಂದರು.

ಅರ್ಥ:
ಭಯ: ಅಂಜಿಕೆ; ಭಾರ: ಹೊರೆ, ತೂಕ; ಮಹೀಪತಿ: ರಾಜ; ಕೇಳು: ಆಲಿಸು; ಸೇನೆ: ಸೈನ್ಯ; ಅರಿ: ತಿಳಿ; ಜಯ: ಗೆಲುವು; ಜೋಡಿಸು: ಕೂಡಿಸು; ಸಂಶಯ: ಅನುಮಾನ; ಸುಳಿವು: ಕುರುಹು; ಉತ್ಪಾತ: ಅಪಶಕುನ; ಶತವಿದು: ಖಂಡಿತವಾಗಿಯು; ಲಯ: ಅಳಿವು, ನಾಶ; ಬೀಜ: ಮೂಲ; ಚಿತ್ತವಿಸು: ಗಮನವಿಡು;

ಪದವಿಂಗಡಣೆ:
ಭಯವು+ ಭಾರವಿಸಿತ್ತು +ಜನಮೇ
ಜಯ +ಮಹೀಪತಿ +ಕೇಳು +ಕುರು +ಸೇ
ನೆಯಲಿ +ಭೀಷ್ಮ+ದ್ರೋಣರ್+ಅರಿದರು +ಪಾರ್ಥನೆಂಬುದನು
ಜಯವು +ಜೋಡಿಸಲ್+ಅರಿಯದಿದು+ ಸಂ
ಶಯದ +ಸುಳಿವ್+ಉತ್ಪಾತ +ಶತವಿದು
ಲಯದ+ ಬೀಜವು +ಭೀಷ್ಮ +ಚಿತ್ತವಿಸೆಂದನಾ +ದ್ರೋಣ

ಅಚ್ಚರಿ:
(೧) ಜಯ, ಸಂಶಯ, ಭಯ, ಲಯ – ಪ್ರಾಸ ಪದಗಳು
(೨) ಅರಿದರು, ಅರಿಯದಿದು – ಅರಿ ಪದದ ಬಳಕೆ
(೩) ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಪರಿ – ಸಂಶಯದ ಸುಳಿವುತ್ಪಾತ ಶತವಿದು ಲಯದ ಬೀಜವು

ಪದ್ಯ ೩೧: ಯಾವುದರಲ್ಲಿ ಯಾವುದು ಲೀನವಾಯಿತು?

ಆ ಮಹಾಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾಮರುತ್ತಿನಲಾ ಬಹಳ ಬಹಿರಾವರಣದಲಿ ಪವನ
ವ್ಯೋಮಕಾ ತದಹಂ ಮಹತ್ತು ವಿ
ರಾಮ ವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಂತರ ಆ ಮಹಾ ಜಲರಾಶಿಯು ಅಗ್ನಿಯಲ್ಲಿ ಹೋಮವಾಯಿತು, ಅಗ್ನಿಯು ವಾಯುವಿನಲ್ಲಿ, ವಾಯುವ ಆಕಾಶದಲ್ಲಿ, ಆಗಸವು ಅಹಂತತ್ತ್ವದಲ್ಲಿ, ಅಹಂ ತತ್ತ್ವವು ಮಹತತ್ತ್ವದಲ್ಲಿ ಮತ್ತು ಮಹತ್ತು ಮಾಯೆಯಲ್ಲಿ ಅಡಗಿತು, ಮಾಯೆಯು ಪರಮಾತ್ಮನಲ್ಲಿ ಲಯವಾಯಿತು ಎಂದು ಮಾರ್ಕಂಡೇಯ ಮುನಿಯು ವಿವರಿಸಿದನು.

ಅರ್ಥ:
ಮಹಾ: ದೊಡ್ಡ; ಜಲ: ನೀರು; ಅಗ್ನಿ: ಬೆಂಕಿ; ಮುಖ: ಆನನ; ಹೋಮ: ಯಜ್ಞ; ಅಡಗು: ಮರೆಯಾಗು, ಮುಚ್ಚು; ಮರುತ: ಗಾಳಿ; ಬಹಳ: ತುಂಬ; ಬಹಿರ: ಹೊರಗೆ; ಆವರಣ: ಮುಸುಕು, ಹೊದಿಕೆ; ಪವನ: ವಾಯು; ವ್ಯೋಮ: ಆಗಸ; ಅಹಂ: ಅಹಂಕಾರ; ಮಹತ್ತು: ಹಿರಿದು, ಶ್ರೇಷ್ಠವಾದುದು; ವಿರಾಮ: ಬಿಡುವು, ವಿಶ್ರಾಂತಿ; ಪ್ರಕೃತಿ: ನೈಜವಾದುದು; ಮಾಯ: ಗಾರುಡಿ, ಇಂದ್ರಜಾಲ;ಕಾಮಿನಿ: ಹೆಣ್ಣು; ಪರಮಾತ್ಮ: ಭಗವಮ್ತ; ಲಯ: ನಾಶ, ಲೀನ; ಮುನಿಪ: ಋಷಿ;

ಪದವಿಂಗಡಣೆ:
ಆ +ಮಹಾಜಲಕ್+ಅಗ್ನಿ+ ಮುಖದಲಿ
ಹೋಮವಾಯ್ತು +ತದಗ್ನಿ+ಅಡಗಿದುದ್
ಆ+ಮರುತ್ತಿನಲ್+ಆ+ಬಹಳ+ ಬಹಿರಾವರಣದಲಿ +ಪವನ
ವ್ಯೋಮಕ+ಆ+ ತದ್+ಅಹಂ+ ಮಹತ್ತು+ ವಿ
ರಾಮ+ ವಾ +ಪ್ರಕೃತಿಯಲಿ+ ಮಾಯಾ
ಕಾಮಿನಿಗೆ +ಪರಮಾತ್ಮನಲಿ+ ಲಯವೆಂದನಾ+ ಮುನಿಪ

ಅಚ್ಚರಿ:
(೧) ಮಾಯಯು ಅಡಗಿದ ಪರಿ – ಮಾಯಾಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ

ಪದ್ಯ ೮: ದೇವತೆಗಳು ಯಾವ ಸ್ಥಿತಿಯಲ್ಲಿದ್ದರು?

ಭಯದ ಬಾಹೆಯಲಪಸದರ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯಲಿ ರಾಗದ ತಡಿಯ ಸಂಕಟದ
ದಯೆಯ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರ
ತೆಯ ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ದೇವೇಂದ್ರನು ದೇವತೆಗಳ ಸ್ಥಿತಿಯನ್ನು ವರ್ಣಿಸುತ್ತಾ, ಭಯ ಹೊರಗೆ ಆವರಿಸಿದೆ, ನೀಚರ ದಾಳಿಯಿಂದ ನಾಶವಾಗುವುದೆಂಬ ದುಮ್ಮಾನ ತುಂಬಿದೆ. ಅಮೋದ ಪ್ರಮೋದಗಳ ಅಂಚಿನಲ್ಲೇ ಸಮ್ಕಟ ತುಂಬಿದೆ. ದೈನ್ಯವು ಆವರಿಸಿದೆ, ಹೃದಯ ಭೀತಿಯಿಂದ ನಡುಗುತ್ತಿದೆ, ಕಣ್ಣಿರು ಹರಿಯುತ್ತಿವೆ, ದೈತ್ಯರನ್ನು ಹೇಗೆ ಗೆಲ್ಲುವುದೆಂಬ ಆಲೋಚನೆ ಹೊಳೆಯುತ್ತಿಲ್ಲ, ಇದು ದೇವತೆಗಳ ಸ್ಥಿತಿ, ನೀನೇ ನೋಡು ಎಂದು ಇಂದ್ರನು ಹೇಳಿದನು.

ಅರ್ಥ:
ಭಯ: ಅಂಜಿಕೆ, ಹೆದರಿಕೆ; ಬಾಹೆ: ಪಕ್ಕ, ಪಾರ್ಶ್ವ; ಅಪಸದ: ನೀಚ, ಕೀಳಾದವ; ನಿಶ್ಚಯ: ನಿರ್ಧಾರ; ದುಮ್ಮಾನ: ದುಃಖ; ವಿಘಾತಿ: ಹೊಡೆತ, ವಿರೋಧ; ಲಯ: ಹಾಳು; ಲಾವಣಿಗೆ: ಗುಂಪು, ಸಮೂಹ; ರಾಗ: ಒಲಮೆ, ಪ್ರೀತಿ; ತಡಿ: ಎಲ್ಲೆ, ಮಿತಿ; ಸಂಕಟ: ತೊಂದರೆ; ದಯೆ: ಕೃಪೆ, ಕರುಣೆ; ಪಾಡು: ಸ್ಥಿತಿ; ಹೃದಯ: ಎದೆ; ಕಂಪನ: ನಡುಗು; ನಯನ: ಕಣ್ಣು; ಒರತೆ: ನೀರು ಜಿನುಗುವ ತಗ್ಗು; ಬಗೆ: ರೀತಿ; ಕೊರತೆ: ನ್ಯೂನ್ಯತೆ; ಜಯ: ಗೆಲುವು; ಜೋಡಿ: ಕೂಡಿದ; ದೇವರು: ಸುರರು; ನೋಡು: ವೀಕ್ಷಿಸು; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಭಯದ +ಬಾಹೆಯಲ್+ಅಪಸದರ+ ನಿ
ಶ್ಚಯದ+ ದುಮ್ಮಾನದ +ವಿಘಾತಿಯ
ಲಯದ +ಲಾವಣಿಗೆಯಲಿ +ರಾಗದ +ತಡಿಯ +ಸಂಕಟದ
ದಯೆಯ +ಪಾಡಿನ +ಹೃದಯ +ಕಂಪದ
ನಯನದ್ + ಒರತೆಯ +ಬಗೆಯ +ಕೊರ
ತೆಯ +ಜಯದ +ಜೋಡಿಯ +ದೇವರಿದೆ+ ನೋಡೆಂದನ್+ಅಮರೇಂದ್ರ

ಅಚ್ಚರಿ:
(೧) ಭಯ, ಲಯ, ನಿಶ್ಚಯ – ಪ್ರಾಸ ಪದ
(೨) ಭಯದ ಸ್ಥಿತಿಯನ್ನು ವರ್ಣಿಸುವ ಪರಿ – ದಯೆಯ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರತೆಯ ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ

ಪದ್ಯ ೯೬: ಯಾರನ್ನು ಗಾಯಕರೆನ್ನಬಹುದು?

ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ರಾಗ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು (ಉದ್ಯೋಗ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ತಾಳ, ಲಯ, ಧ್ವನಿ ಭೇದಗಳನ್ನೊಳಗೊಂಡು, ಶುದ್ಧಸ್ಥಾಯಿಯಲ್ಲಿ ನಾನಾ ವಿಧವಾದ ದೇಶೀ ರಚನೆಗಳನ್ನರಿತು, ಸಹಕಾರಿ ವಾದ್ಯಗಳನ್ನು ಉಪಯೋಗಿಸುವುದನ್ನರಿತು ಶಾಸ್ತ್ರೀಯ ಸಂಗೀತದ ವರಸೆಗಳ ಲಯವನ್ನರಿತವನೇ ಗಾಯಕ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ತಾಳ: ಹಾಡುವಾಗ ಯಾ ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಕೈ ಗಳಿಂದ ಹಾಕುವ ಪೆಟ್ಟು; ಬೊಂಬಾಳ:ನಾಲ್ಕು ಧ್ವನಿ ಭೇದಗಳಲ್ಲಿ ಒಂದು; ಮಿಶ್ರ: ಸೇರುವಿಕೆ; ಹೇಳಿಕೆ: ತಿಳಿಸುವಿಕೆ ; ಶುದ್ಧ: ತಪ್ಪಿಲ್ಲದ; ರಾಯ: ರಾಜ; ಸಾಳಗ: ಒಂದು ವಾದ್ಯ; ಸಂಕೀರ್ಣ: ಸೇರಿಕೊಂಡಿರುವುದು; ದೇಸಿ: ಒಂದು ದೇಶದಲ್ಲಿ ಪರಂಪರಾನುಗತವಾಗಿ ಬಂದಿರುವ ಸಂಸ್ಕೃತಿ, ಆಚಾರ; ವಿವಿಧ: ಹಲವಾರು; ರಚನೆ: ಸೃಷ್ಟಿ; ಮೇಳ: ಸಂಗೀತಗಾರ, ವಾದ್ಯಗಾರ ಯಾ ನರ್ತಕರ ಗುಂಪು ; ಅರಿ: ತಿಳಿ; ವಾದ್ಯ: ಸಂಗೀತದ ಸಾಧನ; ಸಾಧನ: ಅಭ್ಯಾಸ; ಏಳಿಗೆ: ಮೇಲೇಳು, ಮುಂದುವರಿ; ಸಂಪೂರ್ಣ: ಎಲ್ಲಾ; ಮಾರ್ಗ: ದಾರಿ; ಸೂಳು:ಆವೃತ್ತಿ, ಬಾರಿ, ಸರದಿ; ಲಯ: ಸಂಗೀತದಲ್ಲಿ ತಾಳ, ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ; ಮಾನ: ಗಣನೆ, ಎಣಿಕೆ; ಗಾಯಕ: ಹಾಡುಗಾರ, ಸಂಗೀತಗಾರ; ರಾಗ: ಹೊಂದಿಸಿದ ಸ್ವರಗಳ ಮೇಳೈಕೆ;

ಪದವಿಂಗಡಣೆ:
ತಾಳ+ಲಯ +ಬೊಂಬಾಳ +ಮಿಶ್ರದ
ಹೇಳಿಕೆಯನಾ +ರಾಗ +ಶುದ್ಧದ
ಸಾಳಗದ +ಸಂಕೀರ್ಣ +ದೇಸಿಯ +ವಿವಿಧ +ರಚನೆಗಳ
ಮೇಳವರಿವುತ+ ವಾದ್ಯ +ಸಾಧನದ್
ಏಳಿಗೆಯ +ಸಂಪೂರ್ಣ +ಮಾರ್ಗದ
ಸೂಳುಗಳ +ಲಯಮಾನವರಿದವನ್+ಅವನೆ+ ಗಾಯಕನು

ಅಚ್ಚರಿ:
(೧) ಏಳಿಗೆ, ಹೇಳಿಕೆ – ಪ್ರಾಸ ಪದ

ಪದ್ಯ ೩೮: ಶತ್ರುರಾಜರನ್ನು ಹೇಗೆ ನಾಶಮಾಡಬಹುದು?

ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತಕ್ರೀಡೆಯಲಿ ಮಜ್ಜನದ ಸಮಯದಲಿ
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ (ಆದಿ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶತ್ರುರಾಜರನ್ನು ಮಲಗಿರುವಾಗ, ಅಗ್ನಿಯಲ್ಲಿ, ವಿಹಾರಕಾಲದಲ್ಲಿ, ಬೇಟೆಯಾಡುವಾಗ, ಊಟದಲ್ಲಿ, ಆಟದಲ್ಲಿ, ಸುರತಕ್ರೀಡೆಯಲ್ಲಿ, ಸ್ನಾನಮಾಡುವಾಗ, ಜಯವನ್ನು ಸಂಭ್ರಮಿಸುವಾಗ, ಆಸ್ಥಾನದಲ್ಲಿ, ಮರೆತಿರುವ ಸಮಯದಲ್ಲಿ, ವಾರಸ್ತ್ರೀಯರಿಂದ ನಾಶಮಾಡಬಹುದು.

ಅರ್ಥ:
ಶಯನ: ನಿದ್ರೆ, ಮಲಗು; ವಹ್ನಿ: ಅಗ್ನಿ, ಶಿಖಿ; ವೈಹಾಳಿ: ವಿಹಾರ; ಬೇಟೆ: ಶಿಕಾರಿ; ಊಟ: ಆಹಾರ; ಕೇಳಿ: ವಿನೋದ, ಕ್ರೀಡೆ; ಸುರತ: ಸಂಭೋಗ, ಕೂಟ; ಮಜ್ಜನ: ಸ್ನಾನ; ಸಮಯ: ಕಾಲ; ಜಯ: ವಿಜಯ, ಗೆಲುವು; ಜೋಕೆ: ಎಚ್ಚರ; ಓಲಗ: ದರ್ಬಾರು; ಮರವೆ: ಜ್ಞಾಪಕವಿಲ್ಲದ; ವಾರಸ್ತ್ರೀ: ದಾಸಿ, ವೇಶ್ಯ; ಲಯ: ಅಂತ್ಯ;

ಪದವಿಂಗಡನೆ:
ಶಯನದಲಿ +ವಹ್ನಿಯಲಿ +ವೈಹಾ
ಳಿಯಲಿ +ಬೇಟೆಯಲ್+ಊಟದಲಿ+ ಕೇ
ಳಿಯಲಿ +ಸುರತ+ಕ್ರೀಡೆಯಲಿ +ಮಜ್ಜನದ+ ಸಮಯದಲಿ
ಜಯದ+ ಜೋಕೆಯಲ್+ಓಲಗದ+ ಮರ
ವೆಯಲಿ +ವಾರಸ್ತ್ರೀಯರುಗಳಲಿ
ಲಯವನ್+ಐದಿಸಬಹುದು +ಚಿತ್ತೈಸ್+ಎಂದನಾ+ ಶಕುನಿ

ಅಚ್ಚರಿ:
(೧) ೧೨ ರೀತಿಯಲ್ಲಿ ಶತ್ರುರಾಜರನ್ನು ನಾಶಮಾಡುವ ಬಗೆಯನ್ನು ವಿವರಿಸಿರುವುದು
(೨) ಳಿಯಲಿ – ೨, ೩ ಸಾಲಿನ ಮೊದಲ ಪದ