ಪದ್ಯ ೧೦೦: ಊರ್ವಶಿಯು ದೂತನಿಗೆ ಏನೆಂದು ಹೇಳಿದಳು?

ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ (ಅರಣ್ಯ ಪರ್ವ, ೮ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಊರ್ವಶಿಯು ಚಿತ್ರಸೇನನಿಗೆ, ನೀನು ಇಲ್ಲಿಗೆ ಬಂದಿರುವುದೇನು ಹುಡುಗಾಟವಲ್ಲ ತಾನೆ? ರಾಜನು ಹೇಳಿದ ಕರ್ತವ್ಯಕ್ಕಾಗಿ ಇಲ್ಲಿಗೆ ಬಂದೆಯೋ, ನಿನ್ನದೇನಾದರೂ ಕೆಲಸವಿದೆಯೋ? ನೀವು ಯಾವ ಕಾರ್ಯಕ್ಕಾಗಿ ಬಂದಿರಿ ಎಂದು ಕೇಳಲು, ಚಿತ್ರಸೇನನು ನಾಚಿಕೆಗೊಂಡು ನಸುನಗುತ್ತಾ ನಮಸ್ಕರಿಸುತ್ತಾ ಹೀಗೆ ಹೇಳಿದನು.

ಅರ್ಥ:
ಅಣಕ: ಕುಚೋದ್ಯ; ರಾಯ: ರಾಜ; ಅಟ್ಟು: ಕಳುಹಿಸು; ಮಣಿಹ: ಉದ್ಯೋಗ; ಕಾರ್ಯ: ಕೆಲಸ; ಗತಿ: ಸಂಚಾರ; ಕುಣಿಕೆ: ಜೀರುಗುಣಿಕೆ; ಕರ್ತವ್ಯ: ಕೆಲಸ; ಗುಣ: ನಡತೆ; ಭರಿತ: ತುಂಬಿದ; ಹೇಳು: ತಿಳಿಸು; ನಸುನಗೆ: ಹಸನ್ಮುಖ; ಕುಣಿ: ನರ್ತಿಸು; ಮುಖ: ಆನನ; ಮಾನಿನಿ: ಹೆಂಗಸು, ಸ್ತ್ರೀ; ವೆಂಟಣಿಸು: ನಮಸ್ಕರಿಸು; ಲಜ್ಜೆ: ನಾಚಿಕೆ, ಸಂಕೋಚ; ನುಡಿ: ಮಾತಾಡು; ದೂತ: ಸೇವಕ; ಮಾತು: ವಾಣಿ;

ಪದವಿಂಗಡಣೆ:
ಅಣಕವಲ್ಲಿದು +ರಾಯನ್+ಅಟ್ಟಿದ
ಮಣಿಹವೋ +ನಿಜಕಾರ್ಯಗತಿಗಳ
ಕುಣಿಕೆಯೋ +ಕರ್ತವ್ಯವ್+ಆವುದು+ ನಿಮಗೆ+ ನಮ್ಮಲ್ಲಿ
ಗುಣಭರಿತ+ ಹೇಳೆನಲು+ ನಸುನಗೆ
ಕುಣಿಯೆ+ ಮುಖದಲಿ +ಮಾನಿನಿಗೆ +ವೆಂ
ಟಣಿಸಿ+ ಲಜ್ಜಾಭರದಿ+ ನುಡಿದನು+ ದೂತನ್+ಈ+ ಮಾತ

ಅಚ್ಚರಿ:
(೧) ನಕ್ಕನು ಎಂದು ಹೇಳಲು – ನಸುನಗೆ ಕುಣಿಯೆ ಮುಖದಲಿ