ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ

ಪದ್ಯ ೪೫: ದ್ರೋಣನ ಆಕ್ರಮಣ ಹೇಗಿತ್ತು?

ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೂರ್ಯ ಕಿರಣಗಳ ದಾಳಿಯನ್ನು ಕತ್ತಲು ಎದುರಿಸೆ ನಿಲ್ಲಬಹುದೇ? ದ್ರೋಣನ ಅಮೋಘವಾದ ಬಾಣಗಳ ಮಳೆಯಿಂದ ಪಾಂಡವವೀರರ ಮೈಗಳು ರಕ್ತಮಯವಾದವು. ನಿರಂತರ ಬಾಣಗಳ ಪ್ರಯೋಗಕ್ಕೆ ಪಾಂಡವರು ಈಡಾದರೇ? ಧೃತರಾಷ್ಟ್ರ ಕೇಳು ನಿನ್ನ ಪರಾಕ್ರಮಿಗಳೆದುರು ನಿಲ್ಲುವರು ಯಾರು?

ಅರ್ಥ:
ತರಹರಿಸು: ತಡಮಾಡು, ಸೈರಿಸು; ತಿಮಿರ: ರಾತ್ರಿ; ಭಾನು: ಸೂರ್ಯ; ರಶ್ಮಿ: ಕಿರಣ; ಮುಂದೆ: ಎದುರು; ನೂನ: ಕೊರತೆ, ಭಂಗ; ಶರ: ಬಾಣ; ವರ್ಷ: ಮಳೆ; ನಾದ: ಧ್ವನಿ, ಶಬ್ದ; ಸುಭಟ: ಪರಾಕ್ರಮಿ; ಒಡಲು: ದೇಹ; ನಿರಂತರ: ಸದಾ; ನಿಶಿತ: ಹರಿತ; ಶರ: ಬಾಣ; ಸಂಧಾನ: ಸೇರು, ಒಡಂಬಡಿಕೆ; ಇವದಿರು: ಇಷ್ಟು ಜನ; ಲಕ್ಷ್ಯ: ಗುರುತು, ಚಿಹ್ನೆ; ಆನೆ: ಪರಾಕ್ರಮಿಗಳು, ಗಜ; ಇದಿರು: ಎದುರು; ಕೇಳು: ಆಲಿಸು;

ಪದವಿಂಗಡಣೆ:
ಏನು +ತರಹರಿಸುವುದು +ತಿಮಿರವು
ಭಾನು+ರಶ್ಮಿಯ+ ಮುಂದೆ+ ದ್ರೋಣನ
ನೂನ +ಶರ+ವರ್ಷದಲಿ+ ನಾದವು +ಸುಭಟರ್+ಒಡಲುಗಳು
ಆ +ನಿರಂತರ +ನಿಶಿತ+ಶರ +ಸಂ
ಧಾನಕ್+ಇವದಿರು +ಲಕ್ಷ್ಯವೇ +ನಿ
ನ್ನಾನೆಗಳಿಗ್+ಇದಿರಾವನೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಏನು ತರಹರಿಸುವುದು ತಿಮಿರವು ಭಾನುರಶ್ಮಿಯ ಮುಂದೆ

ಪದ್ಯ ೩೦: ಭೀಷ್ಮರು ಅರ್ಜುನನಿಗೆ ಏನು ಹೇಳಿದರು?

ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಮೂದಲಿಸಲು ನಮನ್ನೇಕೆ ಆರಿಸಿದೆ, ನಾವಾದರೋ ವಯೋವೃದ್ಧರು, ನಮಗೆ ಬಿರುದು ಗಿರುದಿನ ಯಾವ ಆಸೇಯೂ ಇಲ್ಲ, ನೀವಾದರೋ ಯುವಕರು, ವೀರರು, ಯುದ್ಧದ ಭರಕ್ಕೆ ನೀವಿರುವಾಗ ನಿಮ್ಮ ಸೈನ್ಯ ನಾಯಕರಿಲ್ಲದಂತಾಗಲು ಹೇಗೆ ಸಾಧ್ಯ ಹೇಳು ಎಂದು ಭೀಷ್ಮರು ಹೇಳಿದರು.

ಅರ್ಥ:
ವೃದ್ಧ: ವಯಸ್ಸಾದ; ಬಿರುದು: ಗೌರವ ಸೂಚಕ ಪದ; ಲಾವಣಿ: ಜನಪದ ಹಾಡುಗಳ ಒಂದು ಪ್ರಕಾರ; ಜವ್ವನ: ಯೌವ್ವನ; ಭಂಟ: ವೀರ, ಪರಾಕ್ರಮಿ; ರಣ: ಯುದ್ಧಭೂಮಿ; ಧುರಭರ: ಜೋರಾದ ಯುದ್ಧ; ನಿರ್ನಾಯಕ: ನಿರ್ಣಯ ಮಾಡುವ, ನಿರ್ಧಾರ; ಸೇನಾವಳಿ: ಸೈನ್ಯ; ಮೂದಲೆ: ಹಂಗಿಸು; ಲಕ್ಷ್ಯ: ಗುರುತು;

ಪದವಿಂಗಡಣೆ:
ನಾವು +ವೃದ್ಧರು +ಬಿರುದು +ಗಿರುದಿನ
ಲಾವಣಿಗೆ +ನಮಗೇಕೆ +ಹೇಳೈ
ನೀವಲೈ +ಜವ್ವನದ +ಭಂಟರು +ರಣದ +ಧುರಭರಕೆ
ನೀವಿರಲು +ನಿರ್ನಾಯಕವೆ +ಸೇ
ನಾವಳಿ +ಮಹಾದೇವ +ಮೂದಲೆಗ್
ಆವು +ಲಕ್ಷ್ಯವೆ +ಹೇಳು +ಫಲುಗುಣ+ ಎಂದನಾ +ಭೀಷ್ಮ

ಅಚ್ಚರಿ:
(೧) ಆಡು ಪದದ ಬಳಕೆ – ಬಿರುದು ಗಿರುದು;

ಪದ್ಯ ೩೮: ಭೀಷ್ಮನು ಏನೆಂದು ಬೇಡಿದನು?

ದೇವ ನಿಮ್ಮಯ ಖಾತಿ ಪರಿಯಂ
ತಾವು ಲಕ್ಷ್ಯವೆ ಜೀಯ ನೊರಜಿನ
ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ
ದೇವ ಮುನಿಗಳ ನಗೆಯ ನೋಡದಿ
ದಾವುದುಚಿತವ ಮಾಡಿದಿರಿ ಮಹಿ
ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ (ಭೀಷ್ಮ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ದೇವ ನನ್ನನ್ನು ಲಕ್ಷಿಸಿ ಕೋಪಗೊಳ್ಳುವರೇ? ನಾನದಕ್ಕೆ ಈಡ್? ದೇವಗಿರಿಯು ತನ್ನ ಮೇಲೆರಗಿದ ನೊರಜಿನ ಮೇಲೆ ಕೋಪಗೊಳ್ಳುವುದೇ ಆದರೆ ಹೇ ಶ್ರೀಕೃಷ್ಣಾ ನಿನ್ನನ್ನು ನೋಡಿ ನನಗೆ ನಗು ಬರುತ್ತಿದೆ. ನನ್ನಮ್ತಹ ಕ್ಷುಲ್ಲಕನ ಮೇಲೆ ಸಿಟ್ಟಾದಿರಲ್ಲಾ, ಇದನ್ನು ಕಂಡು ದೇವರ್ಷಿಗಳಾದ್ ನಾರದರೇ ಮೊದಲಾದವರು ನಗುತ್ತಿದ್ದಾರೆ, ನಿನ್ನ ಹಿರಿಮೆ ಗಾಂಭೀರ್ಯಗಳನ್ನು ನೀನು ಮರೆತು ಬಿಟ್ಟೆ ಎಂದು ಭೀಷ್ಮನು ನುಡಿದನು.

ಅರ್ಥ:
ದೇವ: ಭಗವಂತ; ಖಾತಿ: ಕೋಪ; ಪರಿ: ರೀತಿ; ಲಕ್ಷ್ಯ: ಗುರುತು; ಜೀಯ: ಒಡೆಯ; ನೊರಜು: ಸಣ್ಣ ಕೀಟ; ಅಂತರ: ವ್ಯತ್ಯಾಸ; ಸಂಭಾವನೆ: ಅಭಿಪ್ರಾಯ; ಮುನಿ: ಋಷಿ; ನಗೆ: ನಗುವಿಕೆ, ಅಪಹಾಸ್ಯ; ನೋಡು: ವೀಕ್ಷಿಸು; ಉಚಿತ: ಸರಿಯಾದ; ನಗೆ: ಸಂತಸ; ಮಹಿ: ಭೂಮಿ;

ಪದವಿಂಗಡಣೆ:
ದೇವ +ನಿಮ್ಮಯ +ಖಾತಿ +ಪರಿಯಂ
ತಾವು+ ಲಕ್ಷ್ಯವೆ +ಜೀಯ +ನೊರಜಿನ
ದೇವಗಿರಿಯಂತರವೆ+ ಸಂಭಾವನೆಯೆ+ ನನ್ನೊಡನೆ
ದೇವ +ಮುನಿಗಳ +ನಗೆಯ +ನೋಡದಿದ್
ಆವುದ್+ಉಚಿತವ +ಮಾಡಿದಿರಿ +ಮಹಿ
ಮಾವಲಂಬವ+ ಮರೆದುದಕೆ+ ನಗೆ+ ಬಂದುದ್+ಎನಗೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೊರಜಿನ ದೇವಗಿರಿಯಂತರವೆ
(೨) ಕೃಷ್ಣನನ್ನು ಹೊಗಳುವ ಪರಿ – ಮಹಿಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ

ಪದ್ಯ ೧೦: ನಾರದರು ಅರ್ಜುನನಿಗೆ ಏನು ಹೇಳಿದರು?

ಲಕ್ಷ್ಯವಿಲ್ಲದೆ ತೊಡಚುವರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನಂಬುಗಳೆ
ಶಿಕ್ಷೆ ರಕ್ಷೆಗೆ ಬಾಣವೊಂದೇ
ಲಕ್ಷ್ಯವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ (ಅರಣ್ಯ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ತಕ್ಕ ಗುರಿಯಿಲ್ಲದೆ ಹೂಡುವುದಕ್ಕೆ ಇದೇನು ಕೆಲಸಕ್ಕೆ ಬಾರದ ಬಾಣವೇ? ನೀನು ಮಹಾ ಶ್ರಮದಿಂದ ಸಂಪಾದಿಸಿದ ಶಸ್ತ್ರಗಳಿವು, ಎಣಿಸಿ ಇಡುವ ರಾಶಿಗೆ ಸೇರಿದ ಬಾಣಗಳಲ್ಲ. ಶತ್ರುಗಳನ್ನು ಶಿಕ್ಷಿಸಲೂ, ತನ್ನನ್ನು ರಕ್ಷಿಸಿಕೊಳ್ಲಲೂ ಸಮರ್ಥವಾದ ಅಸ್ತ್ರಗಳಿವು ಇದನ್ನು ನೀನು ತಿಳಿದು ಕೊಳ್ಳಲಾಗಲಿಲ್ಲವಲ್ಲಾ ಎಂದು ನನಗೆ ಬೇಸರವಾಗುತ್ತಿದೆ ಎಂದು ನಾರದರು ಹೇಳಿದರು.

ಅರ್ಥ:
ಲಕ್ಷ್ಯ: ಗುರುತು, ಚಿಹ್ನೆ; ತೊಡಚು: ಸೇರಿಸು, ಹೊಂದಿಸು; ನಿರ್ಲಕ್ಷ್ಯ: ಅಸಡ್ಡೆ, ಅನಾದರ; ಶರ: ಬಾಣ; ಅರ್ಜಿಸು: ಸಂಪಾದಿಸು; ದಕ್ಷ: ಚತುರ, ಜಾಣ; ಗಣನೆ: ಲೆಕ್ಕ; ಗುತ್ತಿನಂಬು: ಒಂದು ಬಗೆಯ ಬಾಣ; ಶಿಕ್ಷೆ: ದಂಡನೆ; ರಕ್ಷೆ: ಕಾಪಾಡು; ಅರಿ: ತಿಳಿ; ವಿಲಕ್ಷ್ಯ: ನೋಡದಿರುವುದು; ಮುನಿ: ಋಷಿ; ನುಡಿ: ಮಾತಾಡು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು;

ಪದವಿಂಗಡಣೆ:
ಲಕ್ಷ್ಯವಿಲ್ಲದೆ +ತೊಡಚುವರೆ+ ನಿ
ರ್ಲಕ್ಷ್ಯ+ಶರವೇ+ ನೀನ್+ಉಪಾರ್ಜಿಸಿದ್
ಅಕ್ಷಯವಲೇ+ ಪಾರ್ಥ+ ಗಣನೆಯ+ ಗುತ್ತಿನಂಬುಗಳೆ
ಶಿಕ್ಷೆ +ರಕ್ಷೆಗೆ+ ಬಾಣವೊಂದೇ
ಲಕ್ಷ್ಯವಿದು +ನೀನ್+ಅರಿಯದುದಕೆ+ ವಿ
ಲಕ್ಷ್ಯನಾದೆನು +ನಾನ್+ಎನುತ +ಮುನಿ +ನುಡಿದ್+ಅರ್ಜುನಗೆ

ಅಚ್ಚರಿ:
(೧) ಅರ್ಜುನನಿಗೆ ಬಯ್ಯುವ ಪರಿ – ನೀನರಿಯದುದಕೆ ವಿಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ
(೨) ನಿರ್ಲಕ್ಷ್ಯ, ವಿಲಕ್ಷ್ಯ, ಲಕ್ಷ್ಯ – ಪ್ರಾಸ ಪದಗಳ ಬಳಕೆ

ಪದ್ಯ ೬: ಗುರುಗಳು ತೋರಿಸಿದ ಲಕ್ಷ್ಯವನ್ನು ಯಾರು ಭೇದಿಸಿದರು?

ಕಾಣಬಾರದು ಲಕ್ಷ್ಯವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದಿರೈ ಹೂಣಿಸಿದಿರೈ ಹೂಡಿದಂಬಿನಲಿ
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯೆಂಬೀ ಗುರುವಿನಣಕವ
ನಾಣೆಯಿಟ್ಟವೊಲೆಚ್ಛು ಲಕ್ಷ್ಯವ ಕೆಡಹಿದನು ಪಾರ್ಥ (ಆದಿ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಗುರುಗಳು ಸಿದ್ಧಪಡಿಸಿದ ಲಕ್ಷ್ಯವು ಕಠಿಣವಾಗಿತ್ತು, ಅದು ಸುಲಭದಿ ಜಾಣರಾದ ಬಿಲ್ಲುಗಾರರಿಗೂ ಕಾಣತ್ತಿರಲಿಲ್ಲ, ಇದು ನಿಮಗೆ ಕಂಡರೆ ಬಿಲ್ಲಿಗೆ ಹೆದೆಯೇರಿಸಿ ಗುರಿ ಯಿಡಿ. ಎಲೈ ಕರ್ಣ ಮುಂತಾದ ಪ್ರಸಿದ್ಧ ಬಿಲ್ಲುಗಾರರೆ, ನಿಮಗೆ ಇದು ಕಾಣದೆ ಎಂದು ಗುರುಗಳು ಅಣಕಿಸುತ್ತಿರಲು, ಅರ್ಜುನನು ಪ್ರತಿಜ್ಞೆಮಾಡಿ ಅದರಂತೆ ಲಕ್ಷ್ಯವನ್ನು ಭೇದಿಸಿದನು.

ಅರ್ಥ:
ಕಾಣಬಾರದು: ಗೋಚರಿಸಲಾಗದು; ಲಕ್ಷ್ಯ: ಗುರಿ; ಅಗ್ಗದ: ಕಡಿಮೆ, ಅಲ್ಪ, ಹಗುರ, ಶ್ರೇಷ್ಠತೆ, ಉತ್ತಮ; ಜಾಣ: ಚತುರ, ಬುದ್ಧಿವಂತ; ಭಟ: ಶೂರ, ಪರಾಕ್ರಮೆ; ಕಟ್ಟು: ಹೂಡು, ರಚಿಸು; ದೊರೆಯದು: ಸಿಗದು; ಹೂಣಿಸು: ಹೊಂದಿಸು, ಸಜ್ಜುಗೊಳಿಸು, ಗುರಿಯಿಡು; ಹೂಡಿಸು:ತೊಡಗಿಸು, ಹೊಗವನ್ನು ಹೇರಿ ಎಳೆಯಲು ತೊಡಗಿಸು; ಅಂಬಿ: ದೋಣಿ, ನಾವೆ; ಕಾಣಿರೆ: ಕಾಣಿಸುವುದಿಲ್ಲವೆ; ಶ್ರೇಣಿ: ಪಂಕ್ತಿ, ಸಾಲು; ಅಣಕ: ಕುಚೋದ್ಯ, ಅಪಹಾಸ್ಯ; ಆಣೆ: ಪ್ರತಿಜ್ಞೆ;ಎಚ್ಚು: ಬಳಿ, ಸವರು, ಸರಿಪಡಿಸು; ಕೆಡಹು: ಕೆಳಕ್ಕೆ ಬೀಳಿಸು, ಬೀಳು;

ಪದವಿಂಗಡನೆ:
ಕಾಣಬಾರದು+ ಲಕ್ಷ್ಯವ್+ಅಗ್ಗದ
ಜಾಣ+ ಭಟರಿಗೆ+ ಕಟ್ಟಿ+ದೊರೆಯಿದು
ಕಾಣಿಸಿದಿರೈ+ ಹೂಣಿಸಿದಿರೈ +ಹೂಡಿದಂಬಿನಲಿ
ಕಾಣಿರೇ +ಕರ್ಣಾದಿ +ಸುಭಟ
ಶ್ರೇಣಿ+ಯೆಂಬೀ+ ಗುರುವಿನ್+ಅಣಕವನ್
ಆಣೆಯಿಟ್ಟವೊಲ್+ಎಚ್ಛು +ಲಕ್ಷ್ಯವ+ ಕೆಡಹಿದನು +ಪಾರ್ಥ

ಅಚ್ಚರಿ:
(೧) ಕಾಣ, ಕಾಣಿ – ಪದಗಳ ಬಳಕೆ (೧,೩,೪ ಸಾಲಿನ ಮೊದಲ ಪದಗಳು)
(೨) ಣ ಗುಣಿತಾಕ್ಷರಗಳುಳ್ಳ ಪದಗಳು: ಕಾಣ, ಕಾಣಿ, ಜಾಣ, ಆಣೆ, ಶ್ರೇಣಿ, ಹೂಣಿಸು
(೩) ಮೊದಲ ಮತ್ತು ಕೊನೆಸಾಲುಗಳಲ್ಲಿ, ಲಕ್ಷ್ಯ ಪದದ ಬಳಕೆ
(೪) ರೈ ಇಂದ ಕೊನೆಗೊಳ್ಳುವ ಪದಗಳ ಬಳಕೆ: ಕಾಣಿಸಿದಿರೈ, ಹೂಣಿಸಿದಿರೈ
(೫) ಭಟ – ೨ ಬಾರಿ ಪ್ರಯೋಗ (೨, ೪ ಸಾಲು)

ಪದ್ಯ ೫: ಒಳ್ಳೆಯ ಬಿಲ್ಲುಗಾರನಾರು ಎಂದು ತಿಳಿಯಲು ದ್ರೋಣರು ಏನು ಮಾಡಿದರು?

ಇನಿಬರೊಳು ಬಿಲುಗಾರನಾರ
ರ್ಜುನನೊ ಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊ ಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ(ಆದಿ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡವರು ಮತ್ತು ಕೌರವರಲ್ಲಿ ಯಾರು ಶ್ರೇಷ್ಠ ಬಿಲ್ಲುಗಾರ,ಅರ್ಜುನನೊ,ಕರ್ಣನೊ, ಭೀಮನೊ ದುರ್ಯೋಧನನೊ, ನಕುಲ ಸಹದೇವರೊ ಅಥವ ದುಶ್ಯಾಸನಾದಿಗಳೊ, ಇವರ ಕಣ್ಣುಗಳು ಮನಸ್ಸಿನ ಕೈಯಲ್ಲಿ (ನಿಯಂತ್ರಣದಲ್ಲಿ) ಇವೆಯೊ ಅಥವ ಕಣ್ಣುಗಳ ಅಧೀನದಲ್ಲಿದೆಯೋ ಎನ್ನುವುದನ್ನು ಪರೀಕ್ಶಿಸಲು ಒಂದು ಲಕ್ಶ್ಯ ವನ್ನು ಗುರು ದ್ರೋಣರು ಒಂದು ವೃಕ್ಷ ದಲ್ಲಿ ರಚಿಸಿದರು.

ಅರ್ಥ:
ಇನಿಬ: ಇಬ್ಬರಲ್ಲಿ ; ಬಿಲು: ಛಾಪ, ಧನುಸ್ಸು;ಮೇಣ್:ಅಥವ;ಕಂಗಳ್: ಕಣ್ಣು, ಲೋಚನ; ಕಾಣಬೇಕು: ಗೋಚರಿಸು; ಲಕ್ಷ್ಯ: ಗುರಿ, ವೃಕ್ಶ: ಮರ, ತರು; ಕೈ: ಕರ, ಹಸ್ತ; ಮನ: ಮನಸ್ಸು, ಚಿತ್ತ; ಆದಿ: ಮೊದಲಾದವರು;

ಅಚ್ಚರಿ:
(೧) ಹೆಸರುಗಳನ್ನು ಹೇಳುವಾಗ ಜೋಡಿಯಾಗಿ ಹೇಳುವುದು ವಾಡಿಕೆ, ಉದಾ: ಹಗಲು ಇರುಳು, ಹೀಗೆ ಇಲ್ಲಿ ಕರ್ಣ,ಅರ್ಜುನ, ಭೀಮ ದುರ್ಯೋಧನ, ನಕುಲ ಸಹದೇವ, ಹೆಸರುಗಳ ಬಳಕೆಯಾಗಿರುವುದು
(೨) ಕಂಗಳೊ ಪದದ ಬಳಕೆ ೨ ಬಾರಿ (೪,೫ ಸಾಲು)
(೩) ಬುದ್ದಿ ಯಾರ ಕೈಗೆ ಕೊಟ್ಟಿದ್ದೀಯ? ಎಂದು ಸಾಮಾನ್ಯವಾಗಿ ಹೇಳುವುದು ಉಂಟು, ಇಲ್ಲಿ ಕಣ್ಣು ಏನನ್ನು ನೋಡುತ್ತದೆ ಅದು ಮನಸ್ಸಿನ ಅಧೀನದಲ್ಲಿದೆಯೋ ಅಥವ ಕಣ್ಣಿನ ಅಧೀನದಲ್ಲಿದೆಯೋ ಎಂದು ಸುಂದರವಾಗಿ ವರ್ಣಿಸಲಾಗಿದೆ.
(೪) ಕ್ಷ ಪದದ ಬಳಕೆ: ವೃಕ್ಷ, ಲಕ್ಷ;
(೫) ೪ ಪದ ಕಣ್ಣು, ಕಾಣು ಎನ್ನುವುದನ್ನೆ ವರ್ಣಿಸುತ್ತದೆ: ಕಂಗಳೋ ಲೋಚನವೆ ಕಂಗಳೊ ಕಾಣಬೇಕು