ಪದ್ಯ ೮: ಧರ್ಮಜನು ವ್ಯಾಸರನ್ನು ಹೇಗೆ ಬರೆಮಾಡಿಕೊಂಡನು?

ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ (ಅರಣ್ಯ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಅಲ್ಲಿ ನೆರೆದಿದ್ದ ಋಷಿಮುನಿಗಳು ವ್ಯಾಸರನ್ನು ನೋಡಿ, ಹಾ ಭಗವಂತ, ಮಹಾದೇವ, ಇವರಾರು, ಇವರು ಮಹಾ ಮುನಿಗಳಂತೆ ತೋರುತ್ತಿರುವವರು ಎಂದು ತಿಳಿದು ಅಲ್ಲಿದ್ದ ಮುನಿಗಳ ಗುಂಪು ಎದ್ದು ನಿಂತರು. ಧರ್ಮಜನು ವ್ಯಾಸರ ಬಳಿ ತೆರಳಿ ಮುಖಾಮುಖಿಯಾದನು. ಪ್ರೇಮದಿಂದ ರೋಮಾಂಚನಗೊಂಡು, ಸಂತಸದ ಕಣ್ಣೀರಿನ ಹನಿಯನ್ನು ಹೊರಹಾಕುತ್ತಾ, ಸತ್ಯವೇ ಭಾವವಾಗಿದ್ದ ಧರ್ಮಜನು ವ್ಯಾಸರ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮಹಾ: ಶ್ರೇಷ್ಠ; ಮುನಿ: ಋಷಿ; ಈಶ್ವರ: ಒಡೆಯ, ಪ್ರಭು; ಸ್ತೋಮ: ಗುಂಪು; ಎದ್ದು: ಮೇಲೇಳು; ನಂದನ: ಮಗ; ಇದಿರು: ಎದುರು; ಪ್ರೇಮ: ಒಲವು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಸಲಿಲ: ನೀರು; ನಯನ: ಕಣ್ಣು; ರೋಮ: ಕೂದಲು; ಹರ್ಷ: ಸಂತಸ; ಸತ್ಯ: ನಿಜ; ಭಾವ: ಭಾವನೆ; ಭೂಮಿಪತಿ: ರಾಜ; ಮೈಯಿಕ್ಕು: ನಮಸ್ಕರಿಸು; ವರ: ಶ್ರೇಷ್ಠ; ಚರಣ: ಪಾದ;

ಪದವಿಂಗಡಣೆ:
ಹಾ +ಮಹಾದೇವಾ+ಇದಾರು +ಮ
ಹಾ +ಮುನೀಶ್ವರರ್+ಎನುತ+ ಮುನಿಪ
ಸ್ತೋಮವ್+ಎದ್ದುದು +ಧರ್ಮನಂದನನ್+ಅವರಿಗ್+ಇದಿರಾಗಿ
ಪ್ರೇಮ +ಪುಳಕದ +ನಯನ +ಸಲಿಲದ
ರೋಮಹರ್ಷದ+ ಸತ್ಯಭಾವದ
ಭೂಮಿಪತಿ+ ಮೈಯಿಕ್ಕಿದನು +ಮುನಿವರನ +ಚರಣದಲಿ

ಅಚ್ಚರಿ:
(೧) ರೋಮಾಂಚನದ ವರ್ಣನೆ – ಪ್ರೇಮ ಪುಳಕದ ನಯನ ಸಲಿಲದ ರೋಮಹರ್ಷದ
(೨) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು ಪದದ ಬಳಕೆ
(೩) ಮ ಕಾರದ ಸಾಲು ಪದಗಳು – ಮಹಾದೇವಾಯಿದಾರು ಮಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು