ಪದ್ಯ ೨೩: ಅರ್ಜುನನು ಪರಿಜನರನ್ನು ಹೇಗೆ ನೋಡಿದನು?

ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿ ವಚನ
ಸ್ಫುರದ ಮಂದ ಸ್ನೇಹದಲಿ ನೋಡಿದನು ಪರಿಜನವ (ಅರಣ್ಯ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಧೌಮ್ಯ, ಯುಧಿಷ್ಠಿರ, ರೋಮಶ, ಭೀಮರಿಗೆ ಬಹು ಸಂಭ್ರಮದಿಂದ ಅರ್ಜುನನು ನಮಸ್ಕರಿಸಿದನು. ಮುನಿಗಳಿಗೆ ಕೈಮುಗಿದು ವಂದಿಸಿದನು. ತನಗೆ ನಮಸ್ಕರಿಸಿದ ನಕುಲನೇ ಮೊದಲಾದವರನ್ನು ಹರಸಿದನು, ಮಧುರ ವಚನ ಪೂರ್ವಕ ಗಾಢ ಸ್ನೇಹದಿಂದ ಬಂಧುಜನರನ್ನು ನೋಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಉಬ್ಬು: ಹಿಗ್ಗು; ಧರಣಿಪ: ರಾಜ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ಕೈಮುಗಿ: ನಮಸ್ಕರಿಸು; ಮುನಿ: ಋಷಿ; ಹರಸು: ಆಶೀರ್ವದಿಸು; ಹೊರವಂಟು: ತೆರಳಿ; ಆದಿ: ಮುಂತಾದ; ಮಧುರ: ಸವಿ; ಪ್ರೀತಿ: ಒಲವು; ವಚನ: ನುಡಿ; ಮಂದ: ದಟ್ಟ, ಗಟ್ಟಿ; ಸ್ನೇಹ: ಮಿತ್ರ; ನೋಡು: ವೀಕ್ಷಿಸು; ಪರಿಜನ: ಬಂಧುಜನ;

ಪದವಿಂಗಡಣೆ:
ಅರಸ +ಕೇಳ್+ಉಬ್ಬಿನಲಿ +ಧೌಮ್ಯನ
ಧರಣಿಪನ +ರೋಮಶನ +ಭೀಮನ
ಚರಣದಲಿ+ ಮೈಯಿಕ್ಕಿ +ಕೈಮುಗಿದ್+ಎರಗಿ+ ಮುನಿಜನಕೆ
ಹರಸಿದನು +ಹೊರವಂಟ+ ನಕುಲಾ
ದ್ಯರನು+ ಮಧುರ +ಪ್ರೀತಿ +ವಚನ
ಸ್ಫುರದ +ಮಂದ +ಸ್ನೇಹದಲಿ +ನೋಡಿದನು +ಪರಿಜನವ

ಅಚ್ಚರಿ:
(೧) ಮೈಯಿಕ್ಕು, ಕೈಮುಗಿದೆರಗು – ಸಮನಾರ್ಥಕ ಪದ

ಪದ್ಯ ೧೬: ಯುಧಿಷ್ಠಿರನು ಯಾರ ಚರಿತೆಯನ್ನು ತಿಳಿದನು?

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧತೀರ್ಥ ತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಶರ್ಯಾತಿ ಚ್ಯವನ ಸಂವಾದ ಸಂಗತಿಯ (ಅರಣ್ಯ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪ್ರಭಾಸತೀರ್ಥಕ್ಕೆ ಧರ್ಮಜನು ಬಂದಾಗ ಅಲ್ಲಿ ಯಾದವರನ್ನು ನೋಡಿದರು. ಅನೇಕ ತೀರ್ಥಗಳಲ್ಲಿ ಸ್ನಾನ ಮಾಡಿದನು. ರೋಮಶರು ಧರ್ಮಜನಿಗೆ ಗಯನ ಚರಿತ್ರೆಯನ್ನು ಚ್ಯವನ ಶರ್ಯಾತಿ ಸಂವಾದದ ವಿಷಯವನ್ನೂ ತಿಳಿಸಿದರು.

ಅರ್ಥ:
ಬಂದನು: ಆಗಮಿಸು; ಅವನಿಪ: ರಾಜ; ಅವನಿ: ಭೂಮಿ; ವಂದನೆ: ನಮಸ್ಕರಿಸು; ಬಳಿಕ: ನಂತರ; ವೃಂದ: ಗುಂಪು; ದರ್ಶನ: ನೋಟ; ಬಹು: ಬಹಳ; ವಿಧ: ರೀತಿ; ತೀರ್ಥ: ಪವಿತ್ರವಾದ ಜಲ; ತೀರ: ದಡ; ಮಿಂದು: ಮುಳುಗು; ಚರಿತ: ಕಥೆ; ನಲವು: ಸಂತೋಷ; ಸಂವಾದ: ಸಂಭಾಷಣೆ; ಸಂಗತಿ: ವಿಚಾರ;

ಪದವಿಂಗಡಣೆ:
ಬಂದನ್+ಅವನಿಪನ್+ಆ+ ಪ್ರಭಾಸದ
ವಂದನೆಗೆ +ಬಳಿಕಲ್ಲಿ+ ಯಾದವ
ವೃಂದ +ದರ್ಶನವಾಯ್ತು +ಬಹುವಿಧ+ತೀರ್ಥ +ತೀರದಲಿ
ಮಿಂದನ್+ಆತಗೆ+ ಗಯನ+ ಚರಿತವನ್
ಅಂದು +ರೋಮಶ +ಹೇಳಿದನು +ನಲ
ವಿಂದ +ಶರ್ಯಾತಿ +ಚ್ಯವನ +ಸಂವಾದ +ಸಂಗತಿಯ

ಅಚ್ಚರಿ:
(೧) ರೋಮಶ, ಶರ್ಯಾತಿ, ಚ್ಯವ, ಗಯ – ಹೆಸರುಗಳ ಪರಿಚಯ

ಪದ್ಯ ೪: ಮುನಿವರ್ಯರು ಭೀಷ್ಮನ ಮಾತಿಗೆ ಏನು ಹೇಳಿದರು?

ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿನಿಕರ (ಸಭಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರಿಸುತ್ತಾ, ಮುನಿಶ್ರೇಷ್ಠರಲ್ಲಿ ಹಿರಿಯರಾದ ವ್ಯಾಸ, ನಾರದ, ರೋಮಶ ಮೊದಲಾದವರು ಇಲ್ಲೇ ಇರುವರು, ಅವರಲ್ಲೇ ಕೇಳು ಶ್ರೀಕೃಷ್ಣನು ಪೂಜಾರ್ಹನೇ ಎಂದು ಹೇಳಲು, ಅಲ್ಲಿ ನೆರೆದಿದ್ದ ಸಮಸ್ತ ಮುನಿಸಮೂಹವು, ಭೀಷ್ಮನು ಆಡಿದ ಮಾತು ಸಮಂಜಸವಾಗಿದೆ, ಈ ಸಮಸ್ತ ಚರಾಚರವಸ್ತುಗಳಲ್ಲೂ ವಾಸುದೇವನೇ ಪೂಜೆಗೆ ಅರ್ಹನಾದವನು ಎಂದರು.

ಅರ್ಥ:
ಆದಿ: ಮೊದಲಾದ; ಸಮಸ್ತ: ಎಲ್ಲಾ; ಮುನಿ: ಋಷಿ; ಅರುಹ: ಅರ್ಹ, ಯೋಗ್ಯ; ಬೆಸ: ಕೇಳುವುದು, ಅಪ್ಪಣೆ; ಲೇಸ: ಸರಿ; ಆಡಿದೆ: ಮಾತಾಡಿದೆ; ಬಳಿಕ: ನಂತರ; ಚರ: ಚಲಿಸುವವನು; ಅಚರ: ಚಲಿಸದಲ್ಲದ; ಪೂಜ್ಯ: ಅದರಣೀಯವಾದುದು; ಸಕಲ: ಎಲ್ಲಾ; ನಿಕರ: ಗುಂಪು;

ಪದವಿಂಗಡಣೆ:
ವ್ಯಾಸ +ನಾರದ +ರೋಮಶ+ಆದಿಗಳ್
ಈ+ ಸಮಸ್ತ+ ಮುನೀಂದ್ರರಿದೆ+ಯೀ
ಕೇಶವನು +ಪೂಜಾರುಹನೆ+ಯೆಂದ್+ಇವರ+ ಬೆಸಗೊಳ್ಳೈ
ಲೇಸನಾಡಿದೆ+ ಭೀಷ್ಮ +ಬಳಿಕ+ಏನ್
ಈ +ಸಮಸ್ತ +ಚರಾಚರದೊಳ್+ಈ
ವಾಸುದೇವನೆ +ಪೂಜ್ಯನೆಂದುದು +ಸಕಲ+ ಮುನಿನಿಕರ

ಅಚ್ಚರಿ:
(೧) ಈ ಕಾರದಿಂದ ಶುರು ಮತ್ತು ಕೊನೆಗೊಳ್ಳುವ ೨, ೫ ಸಾಲು
(೨) ವ್ಯಾಸ, ವಾಸುದೇವ – ೧, ೬ ಸಾಲಿನ ಮೊದಲ ಪದ
(೩) ಸಮಸ್ತ, ಸಕಲ – ಸಮನಾರ್ಥಕ ಪದ
(೪) ಸಮಸ್ತ – ೨, ೫ ಸಾಲಿನ ೨ ಪದ