ಪದ್ಯ ೨೮: ಪಾಂಡವರ ಸ್ತ್ರೀಯರು ರಣರಂಗಕ್ಕೆ ಹೇಗೆ ಹೋದರು?

ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು
ತೆರಳಿತೇಳಕ್ಷೋಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ (ಗದಾ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ, ಸಾತ್ಯಕಿ, ಪಾಂಡವರು ಅವರ ಸಾರಥಿಗಳು, ಯುಯುತ್ಸು, ದಾರುಕರು, ಪಾಂಡವರ ಏಳು ಅಕ್ಷೋಹಿಣೀ ಸೈನ್ಯದ ಸಮಸ್ತ ಕ್ಷತ್ರಿಯರ ಪತ್ನಿಯರೂ ರೋದನ ಗಾಯನ ಮಾಡುತ್ತಾ, ಹೊಟ್ಟೆಯನ್ನು ಬಡಿದುಕೊಳ್ಳುವುದೇ ತಾಳವನ್ನಾಗಿಸಿಕೊಂಡು ರಣರಂಗಕ್ಕೆ ಹೋದರು.

ಅರ್ಥ:
ಮುರಮಥನ: ಕೃಷ್ಣ; ಧರಣಿಪತಿ: ರಾಜ; ನರ: ಅರ್ಜುನ; ಸಾರಥಿ: ಸೂತ; ತೆರಳು: ಹೊರದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ಅರಸಿ: ರಾಣಿ; ರೋದನ: ಅಳಲು, ದುಃಖ; ಸರ: ಉಲಿ, ಧ್ವನಿ; ಗಾನ: ಹಾಡು; ಜಠರ: ಹೊಟ್ಟೆ; ತಾಡನ: ಹೊಡೆತ; ತಾಳ:ಅಳತೆ, ಗೇಣು; ಮೇಳ: ಗುಂಪು;

ಪದವಿಂಗಡಣೆ:
ಮುರಮಥನ +ಸಾತ್ಯಕಿ+ ಯುಧಿಷ್ಠಿರ
ಧರಣಿಪತಿ +ನರ +ಭೀಮ +ಮಾದ್ರೇ
ಯರುಗಳ್+ಐವರ +ಸಾರಥಿಗಳು +ಯುಯುತ್ಸು +ದಾರುಕರು
ತೆರಳಿತ್+ಏಳಕ್ಷೋಣಿಯ +ನೃಪರ್
ಅರಸಿಯರು +ದ್ರೌಪದಿಯ +ರೋದನ
ಸರದ +ಗಾನದ +ಜಠರತಾಡನ +ತಾಳಮೇಳದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ನೃಪರರಸಿಯರು ದ್ರೌಪದಿಯ ರೋದನ ಸರದ ಗಾನದ ಜಠರತಾಡನ ತಾಳಮೇಳದಲಿ

ಪದ್ಯ ೪: ಕೃಷ್ಣನ ಯೋಚನೆಗೆ ಕಾರಣವೇನು?

ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ (ಅರಣ್ಯ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶ್ರೀ ಕೃಷ್ಣನು ಬಹುವಾಗಿ ಚಿಂತೆಯಲ್ಲಿ ಮುಳುಗಿ ಹೋದನು. ಈ ಚಿಂತೆಯು ಏಕಮುಖದಲ್ಲಿ ಪಾಂಡವರ ಸಂಕಟಕ್ಕೆ ಮರುಗುವುದು ಒಂದು ಕಾರಣವಾದರೆ, ಭೂಭಾರವನ್ನು ತಗ್ಗಿಸಲು ಅವತರಿಸಿ ರಾಕ್ಷಸರನ್ನು ಕೊಂದು, ಈಗ್ ಪಾಂಡವ ಕೌರವರ ನಡುವೆ ದ್ವೇಷವನ್ನುಂಟುಮಾಡಿ ದುಷ್ಟಕ್ಷತ್ರಿಯರ ಸಂಹಾರ ಮಾಡಿಸುವುದು ಇನ್ನೊಂದು ಕಾರಣ ಎಂದು ವೈಶಂಪಾಯನರು ತಿಳಿಸಿದರು.

ಅರ್ಥ:
ಹಿರಿದು: ದೊಡ್ಡ; ಹರಿ: ಕೃಷ್ಣ; ಚಿಂತಿಸು: ಯೋಚಿಸು; ವ್ಯತಿಕರ: ಆಪತ್ತು, ಕೇಡು, ಸಂದರ್ಭ; ಅರಿ: ತಿಳಿ; ಮುಗುದೆ: ಮುಗ್ದೆ; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಭಾರ: ಹೊರೆ; ರೋದನ: ಅಳಲು; ಧರಣಿ: ಭೂಮಿ; ಮೈಗೊಂಡು: ಶರೀರವನ್ನು ಪಡೆದು; ದೈತ್ಯ: ರಾಕ್ಷಸ; ಒರಸು: ನಾಶಮಾಡು; ಬಳಿಕ: ನಂತರ; ಉಳಿದ: ಮಿಕ್ಕ; ನೃಪ: ರಾಜ; ಕದಡು: ಕಲುಕು; ಭೂಪಾಲ: ರಾಜ;

ಪದವಿಂಗಡಣೆ:
ಹಿರಿದು +ಹರಿ +ಚಿಂತಿಸಿದನ್+ಈ+ ವ್ಯತಿ
ಕರವನ್+ಅರಿಯದ +ಮುಗುದರ್+ಇದನ್
ಆರ್+ಅರಿವರೈ +ವಿಶ್ವಂಭರಾ +ಭಾರಾಪ+ರೋದನಕೆ
ಧರಣಿಯಲಿ +ಮೈಗೊಂಡು +ದೈತ್ಯರನ್
ಒರಸಿದನು +ಬಳಿಕುಳಿದ +ಪಾಂಡವ
ಕುರುನೃಪರ+ ಕದಡಿಸಿದನ್+ಎಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಪಾಂಡವರ ಗುಣವನ್ನು ವರ್ಣಿಸುವ ಪರಿ – ವ್ಯತಿಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ