ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ

ಪದ್ಯ ೭೬: ಆನೆಗಳ ಕಾಲ್ತುಳಿತವು ಹೇಗಿತ್ತು?

ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ (ಭೀಷ್ಮ ಪರ್ವ, ೪ ಸಂಧಿ, ೭೬ ಪದ್ಯ)

ತಾತ್ಪರ್ಯ:
ಆನೆಗಳ ಪಡೆಯೋ, ಕೃಷ್ಣಪಕ್ಷದ ಚಂದ್ರನ ಮುಂಚೂಣೀಯೋ, ಮೋಡಗಳೋ, ಆನೆಗಳ ಮದಕ್ಕೆ ಮುತ್ತುತ್ತಿರುವ ದುಂಬಿಗಳೋ, ಸುರಿಯುವ ಮದಧಾರೆಯೋ, ಹೊಸದಾಗಿ ಸೃಷ್ಟಿಯಾದ ಸಮುದ್ರವೋ, ತಿಳಿಯಲಿಲ್ಲ. ಆನೆಗಳ ಕಾಲ್ತುಳಿತದ ಧೂಳು ಮದಧಾರೆಯನ್ನು ನಿಲ್ಲಿಸಿತು, ಮದಧಾರೆಯು ಧೂಳನ್ನು ನುಂಗಿತು, ಹೀಗೆ ಧೂಳು ಮದಧಾರೆಗಳು ಹೆಣಗಿದವು.

ಅರ್ಥ:
ಪಡೆ: ಸೈನ್ಯ, ಗುಂಪು; ಹೀನ: ಕೆಟ್ಟದು; ಇಂದು: ಚಂದ್ರ; ಇರುಳು: ರಾತ್ರಿ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಮುಗಿಲು: ಆಗಸ; ಮದ: ಮತ್ತು, ಅಮಲು, ಸೊಕ್ಕು; ತುಂಬಿ: ದುಂಬಿ; ವಾರಿ: ನೀರು; ವಾರಾಶಿ: ಸಮುದ್ರ; ಅಡಸು: ಬಿಗಿಯಾಗಿ ಒತ್ತು; ಪದ: ಪಾದ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧೂಳು: ಮಣ್ಣಿನ ಕಣ; ಕುಡಿ: ಪಾನಮಾಡು; ಧಾರೆ: ವರ್ಷ; ರೇಣು: ಧೂಳು, ಹುಡಿ; ಅಡಗಿಸು: ಮುಚ್ಚು; ಹೆಣಗು: ಹೋರಾಡು;

ಪದವಿಂಗಡಣೆ:
ಪಡೆಯೊ +ಹೀನ್+ಇಂದುವಿನ್+ಇರುಳ +ಮುಂ
ಗುಡಿಯೊ+ ಮುಗಿಲೋ +ಮದದ +ತುಂಬಿಯೊ
ಬಿಡುಮದದ +ವಾರಿಗಳೊ +ಹೊಸ +ವಾರಾಶಿಯೋ +ಮೇಣು
ಅಡಸಿ +ಪದಹತ+ಧೂಳಿಮದವನು
ಕುಡಿದುದಾ +ಮದಧಾರೆ +ರೇಣುವನ್
ಅಡಗಿಸಲು +ಮದಧೂಳಿಗಳು+ ಹೆಣಗಿದುವು +ತಮ್ಮೊಳಗೆ

ಅಚ್ಚರಿ:
(೧) ಕೃಷ್ಣಪಕ್ಷದ ಚಂದ್ರ ಎಂದು ಹೇಳಲು – ಹೀನೇಂದುವಿನಿರುಳ
(೨) ಉಪಮಾನದ ಪ್ರಯೋಗ – ಪಡೆಯೊ ಹೀನೇಂದುವಿನಿರುಳ ಮುಂಗುಡಿಯೊ ಮುಗಿಲೋ ಮದದ ತುಂಬಿಯೊಬಿಡುಮದದ ವಾರಿಗಳೊ ಹೊಸ ವಾರಾಶಿಯೋ

ಪದ್ಯ ೧೮: ಬಾಣಗಳನ್ನು ಹೇಗೆ ಬಿಡುತ್ತಿದ್ದರು?

ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನದ
ನಾಣೆಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ (ಭೀಷ್ಮ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೂಳು ಮುಸುಕಿದ್ದ ಸೂರ್ಯನನ್ನು ಮಸೆಯಲು ಬಂದ ಸಾಣೆಯೋ, ನಕ್ಷತ್ರ ರತ್ನಗಳಲ್ಲಿರುವ ಆಣಿಯನ್ನು ತೆಗೆಯಲು ಬ್ರಹ್ಮನು ಸೃಷ್ಟಿಸಿದ ಸಲಾಕೆಗಳೋ ಎಂಬಮ್ತೆ ಬಾಣಗಳು ತುಂಬಲು, ಆಕಾಶವೇ ಕಾಣಿಸಲಿಲ್ಲ. ದಿಕ್ಕುಗಳ ಅಂಚು ಮುಗಿಯುವಂತೆ ಬಾಣಗಳನ್ನು ಬಿಡುತ್ತಿದ್ದ ಬಿಲ್ಲುಗಾರರ ಜಾಣ್ಮೆಯನ್ನು ನೋಡಿ ಮಹಾ ಧನುರ್ಧರರು ನಾಚಿದರು.

ಅರ್ಥ:
ರೇಣು: ಧೂಳು, ಹುಡಿ; ಹತ್ತು: ಏರು; ರವಿ: ಸೂರ್ಯ; ಮಸೆ: ಹರಿತ, ಚೂಪು; ಸಾಣೆ: ಉಜ್ಜುವ ಕಲ್ಲು; ಭಗಣ: ಸಮೂಹ; ರತ್ನ: ಮಣಿ; ಆಣೆ: ಅಂಗಾಲಿನ ಗಂಟು; ಕಮಲಭವ: ಬ್ರಹ್ಮ; ಸೃಜಿಸು: ಹುಟ್ಟಿಸು, ನಿರ್ಮಿಸು; ಸಲಾಕೆ: ಈಟಿ, ಭರ್ಜಿ; ಕಾಣು: ತೋರು; ಅಭ್ರ:ಮೋಡ, ಆಕಾಶ; ಅಮಮ: ಅಬ್ಭಾ; ದಿಕ್ಕು: ದಿಶೆ; ಏಣು: ಅಂಚು, ಕೊನೆ; ಮುರಿ: ಸೀಳು; ಹೊಕ್ಕು: ಸೇರು; ಬಿಲುಜಾಣರು: ಬಿಲ್ಲುಗಾರ; ಉರವಣೆ: ಆತುರ, ಅವಸರ; ಲಜ್ಜಿಸು: ನಾಚಿಕೊಳ್ಳು; ಲೋಕ: ಜಗತ್ತು; ಧನುರ್ಧರ: ಬಿಲ್ಲುಗಾರ;

ಪದವಿಂಗಡಣೆ:
ರೇಣು +ಹತ್ತಿದ +ರವಿಯ +ಮಸೆಯಲು
ಸಾಣೆಗಿಕ್ಕಿತೊ +ಭಗಣ+ರತ್ನದನ್
ಆಣೆಗಳೆಯಲು +ಕಮಲಭವ +ಸೃಜಿಸಿದ +ಸಲಾಕೆಗಳೊ
ಕಾಣೆನ್+ಅಭ್ರವನ್+ಅಮಮ +ದಿಕ್ಕುಗಳ್
ಏಣು +ಮುರಿಯಲು +ಹೊಕ್ಕೆಸುವ+ ಬಿಲು
ಜಾಣರ್+ಉರವಣೆ +ಲಜ್ಜಿಸಿತು +ಲೋಕದ +ಧನುರ್ಧರರ

ಅಚ್ಚರಿ:
(೧) ಉಪಮಾನದ ಪ್ರಯೋಗ – ರೇಣು ಹತ್ತಿದ ರವಿಯ ಮಸೆಯಲು ಸಾಣೆಗಿಕ್ಕಿತೊ ಭಗಣರತ್ನದ
ನಾಣೆಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
(೨) ಸಾಣೆ, ಆಣೆ, ಕಾಣೆ – ಪ್ರಾಸ ಪದಗಳು

ಪದ್ಯ ೨: ಜಗತ್ತು ಏಕೆ ಕೆಂಪಾಗಿಕಾಣುತ್ತಿತ್ತು?

ಭರದಿನೈತಂದಖಿಳ ಭೂಮೀ
ಶ್ವರರ ಘನ ಚತುರಂಗ ಪದಹತ
ಧರಣಿ ನಿರ್ಗತ ರೇಣು ಪಟಲ ಪರಾಗ ಸಂಗದಲಿ
ಅರುಣಮಯವಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ (ಆದಿ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಅತ್ಯಂತ ಆಸಕ್ತಿಯಿಂದ ವೇಗವಾಗಿ ಬಂದ ಎಲ್ಲಾ ರಾಜರ ಚತುರಂಗ ಸೈನ್ಯಗಳ ತುಳಿತದಿಂದೆದ್ದ ಧೂಳಿನಿಂದ ಜಗತ್ತೆಲ್ಲವು ಕೆಂಪಾಗಿ ಕಾಣುವಂತಾಗಿತ್ತು. ದ್ರೌಪದಿಯನ್ನು ಸೌಂದರ್ಯವನ್ನು ನೆನೆದು ಭೂಮಿಯ ಮೇಲಿನ ಎಲ್ಲಾ ಚರಾಚರರುಗಳ ಮುಖದಲ್ಲಿ ಸಂತೋಷವು ಮೂಡಿತೊ ಎಂಬಂತೆ ಇದು ಕಾಣಿಸುತ್ತಿತ್ತು.

ಅರ್ಥ:
ಭರ: ವೇಗ, ಆಸಕ್ತಿ, ಹೆಚ್ಚಳ; ಅಖಿಳ: ಎಲ್ಲ, ಸಮಗ್ರ; ಭೂಮಿ: ಅವನಿ, ಧರಿತ್ರಿ; ಭೂಮೀಶ್ವರ: ರಾಜ, ನೃಪ; ಘನ: ಉತ್ತಮ, ಶ್ರೇಷ್ಠ; ಚತುರಂಗ: ಸೈನ್ಯ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧರಣಿ: ಭೂಮಿ; ನಿರ್ಗತ: ಹೋದ; ರೇಣು: ಧೂಳು, ಪರಾಗ; ಪಟಲ:ಗುಂಪು, ಸಮೂಹ; ಪರಾಗ: ಧೂಳು, ಪುಡಿ; ಸಂಗ: ಜೊತೆ; ಅರುಣ: ಕೆಂಪು; ಜಗ: ಲೋಕ, ಪ್ರಪಂಚ; ಸರಸಿ: ಸರೋವರ; ಸರಸಿಜ: ಕಮಲ; ಅಕ್ಷಿ: ಕಣ್ಣು, ನಯನ; ನೆನೆ: ಜ್ಞಾಪಿಸು; ಚರಾಚರ: ಸ್ಥಾವರ ಮತ್ತು ಜಂಗಮ ಜಗತ್ತು; ಮುಖ: ವದನ; ರಾಗ:ಸಂತೋಷ, ಪ್ರೀತಿ; ಉಬ್ಬರಿಸು: ಅತಿಶಯ, ಅಧಿಕವಾಗು;

ಪದವಿಂಗಡನೆ:
ಭರದಿನೈತಂದ್+ಅಖಿಳ+ ಭೂಮೀ
ಶ್ವರರ+ ಘನ +ಚತುರಂಗ+ ಪದಹತ
ಧರಣಿ+ ನಿರ್ಗತ +ರೇಣು +ಪಟಲ +ಪರಾಗ +ಸಂಗದಲಿ
ಅರುಣಮಯವಾಯ್ತ್+ ಅಖಿಳ+ ಜಗದಲಿ
ಸರಸಿಜಾಕ್ಷಿಯ +ನೆನೆದು +ಸಚರಾ
ಚರದ +ಮುಖದಲಿ+ ರಾಗರಸ+ವುಬ್ಬರಿಸಿದಂದದಲಿ

ಅಚ್ಚರಿ:
(೧) ಧೂಳಿನ ಕೆಂಪನ್ನು ಎಲ್ಲಾ ಜೀವ ಮತ್ತು ನಿರ್ಜೀವಿಗಳ ಸಂತೋಷ ಎಂಬಂತೆ ವರ್ಣಿಸಿರುವುದು
(೨) ರೇಣು, ಪರಾಗ – ಧೂಳು ಅರ್ಥದ ಸಮಾನಾರ್ಥಕ ಪದಗಳು
(೩) ಧರಣಿ, ಭೂಮಿ – ಸಮಾನಾರ್ಥಕ ಪದ
(೪) ಅಖಿಳ – ೧, ೪ ಸಾಲಿನಲ್ಲಿ ಬಳಸಿರುವು ಪದ