ಪದ್ಯ ೧೭: ಪದ್ಮವ್ಯೂಹದ ರಚನೆ ಹೇಗಿತ್ತು?

ನಿಲಿಸಿದನು ರಾವುತರನಾ ಹೊರ
ವಳಯದಲಿ ರಾವುತರು ಮುರಿದರೆ
ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ
ತೊಳಗಿದವು ತೇರುಗಳು ತೇರಿನ
ದಳಕೆ ತಾನೊತ್ತಾಗಿ ರಣದ
ಗ್ಗಳೆಯರಿದ್ದುದು ರಾಯನೊಡಹುಟ್ಟಿದರು ಸಂದಣಿಸಿ (ದ್ರೋಣ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೊರವಲಯದಲ್ಲಿ ರಾವುತರನ್ನು ನಿಲ್ಲಿಸಿದನು. ರಾವುತರು ಹಿಮ್ಮೆಟ್ಟಿದರೆ ಆನೆಗಳು ಭದ್ರ ಕೋಟೆಯಂತೆ ಹಿಂದೆ ಬೆಂಬಲವಾಗುವವು, ಆನೆಗಳ ಹಿಂದೆ ರಥಗಳು ನಿಂತವು. ರಥಗಳ ಹಿಂದೆ ರಣಶ್ರರಲ್ಲಿ ಶ್ರೇಷ್ಠರಾದ ಕೌರವನ ತಮ್ಮಂದಿರಿದ್ದರು.

ಅರ್ಥ:
ನಿಲಿಸು: ಸ್ಥಿರವಾಗಿರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊರವಳಯ: ಆಚೆ; ಮುರಿ: ಸೀಳು; ಒಗ್ಗು: ಗುಂಪು, ಸಮೂಹ; ದಂತಿಘಟೆ: ಆನೆಯ ಗುಂಪು; ಗಜ: ಆನೆ; ಸೇನೆ: ಸೈನ್ಯ; ಗಡ: ದುರ್ಗ; ತೊಳಗು:ಕಾಂತಿ, ಪ್ರಕಾಶ; ತೇರು: ಬಂಡಿ; ದಳ: ಸೈನ್ಯ; ರಣ: ಯುದ್ಧರಂಗ; ಅಗ್ಗ: ಶ್ರೇಷ್ಠ; ಅರಿ: ತಿಳಿ; ರಾಯ: ರಾಜ; ಒಡಹುಟ್ಟು: ಜೊತೆಗೆ ಹುಟ್ಟಿದ; ಸಂದಣಿಸು: ಗುಂಪು ಗೂಡು;

ಪದವಿಂಗಡಣೆ:
ನಿಲಿಸಿದನು+ ರಾವುತರನಾ +ಹೊರ
ವಳಯದಲಿ +ರಾವುತರು +ಮುರಿದರೆ
ನಿಲುವುದ್+ಒಗ್ಗಿನ +ದಂತಿಘಟೆ +ಗಜಸೇನೆಗ್+ಅಡಹಾಗಿ
ತೊಳಗಿದವು +ತೇರುಗಳು +ತೇರಿನ
ದಳಕೆ +ತಾನೊತ್ತಾಗಿ +ರಣದ್
ಅಗ್ಗಳೆ+ಅರಿದುದು +ರಾಯನ್+ಒಡಹುಟ್ಟಿದರು +ಸಂದಣಿಸಿ

ಅಚ್ಚರಿ:
(೧) ದಂತಿ, ಗಜ – ಸಮಾನಾರ್ಥಕ ಪದ

ಪದ್ಯ ೧೮: ಸುಪ್ರತೀಕ ಗಜವು ಹೇಗೆ ಶತ್ರುಸೈನ್ಯವನ್ನು ನಾಶಮಾಡಿತು?

ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಂದರ ಗಿರಿಯು ಸಮುದ್ರದ ತೆರೆಗಳನ್ನು ನಿಗ್ರಹಿಸಿದಂತೆ ಶತ್ರುಸೈನ್ಯವನ್ನು ಆ ಗಜವು ಅರೆದು ಹಾಕಿತು. ಸೈನ್ಯವು ನುಗ್ಗು ನುಸಿಯಾಯಿತು ಚತುರಂಗ ಸೈನಯ್ವು ಚದುರಿ ಓಡಿತು, ರಾಜ, ಎಷ್ಟು ಶತ್ರುಸೈನ್ಯವು ನಾಶವಾಯಿತೋ ಯಾರು ಬಲ್ಲರು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮುರಿ: ಸೀಳು; ಗಿರಿ: ಬೆಟ್ಟ; ಪಯೋಧಿ: ಸಮುದ್ರ; ತೆರೆ: ಅಲೆ; ತುಳಿ: ಮೆಟ್ಟು; ರಿಪು: ವೈರಿ; ಮೋಹರ: ಯುದ್ಧ; ಅರೆ: ನುಣ್ಣಗೆ ಮಾಡು; ನುಗ್ಗು: ತಳ್ಳು; ನುಸಿ: ಹುಡಿ, ಧೂಳು; ಅಖಿಳ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ತೆರಳು: ಹೊರದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊರಳು:ತಿರುವು, ಬಾಗು; ಒಡೆ: ಸೀಳು, ಬಿರಿ; ಗಜ: ಆನೆ; ಆವಳಿ: ಸಾಲು; ಜರಿ: ಓಡಿಹೋಗು, ಪಲಾಯನ ಮಾಡು, ಅಳುಕು; ಅಳಿ: ನಾಶ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುರಿದು +ಮಂದರ+ಗಿರಿ +ಪಯೋಧಿಯ
ತೆರೆಗಳನು +ತುಳಿವಂತೆ +ರಿಪು +ಮೋ
ಹರವನ್+ಅರೆದುದು +ನುಗ್ಗು+ನುಸಿಯಾಯ್ತ್+ಅಖಿಳ +ತಳತಂತ್ರ
ತೆರಳಿದರು +ರಾವುತರು +ರಥಿಕರು
ಹೊರಳಿ+ಒಡೆದುದು +ಗಜದಗ್ + ಆವಳಿ
ಜರಿದುದ್+ಅಳಿದುದನ್+ಆರು +ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಮಂದರಗಿರಿ ಪಯೋಧಿಯ ತೆರೆಗಳನು ತುಳಿವಂತೆ
(೨) ನುಗ್ಗುನುಸಿ, ತುಳಿ, ಒಡೆ, ಜರಿ, ಅಳಿ – ನಾಶವನ್ನು ಸೂಚಿಸುವ ಪದಗಳ ಬಳಕೆ

ಪದ್ಯ ೬೮: ತಿಗುಳರು ಹೇಗೆ ಆಕ್ರಮಣ ಮಾಡಿದರು?

ಅಳವನರಿಯದೆ ಕೆಣಕಿತಹ ಮುಂ
ಕೊಳಿಸಿ ಕದನವ ಕೋಡ ಕೈಯವ
ರಳವಿತೊಟ್ಟರೆ ನೋಡಿ ಸಿಡಿಮಿಡಿಗೊಂಡು ಕೆಲಸಿಡಿವ
ಗೆಲಿದರುತ್ಸಾಹಿಸುವ ಸಿಲುಕಿದ
ರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು (ಭೀಷ್ಮ ಪರ್ವ, ೪ ಸಂಧಿ, ೬೮ ಪದ್ಯ)

ತಾತ್ಪರ್ಯ:
ತಮ್ಮ ಮಿತಿಯನ್ನರಿಯದೆ ಶತ್ರುಗಳನ್ನು ಕೆಣಕುವರು, ಅವರು ಬಲವಾಗಿ ವಿರೋಧಿಸಿ ಕಾದಿದರೆ ನೋಡಿ ಸಿಡಿಮಿಡಿಗೊಂಡು ಪಕ್ಕಕ್ಕೆ ಸರಿಯುವರು. ಗೆದ್ದರೆ ಉತ್ಸಾಹಕ್ಕೆ ಮಿತಿಯಿಲ್ಲ, ಸಿಕ್ಕಿಬಿದ್ದರೆ ಆಳುವರು, ಸೋತು ಓಡಿಹೋದರೆ ತಮ್ಮ ಬಿಡಾರದಲ್ಲಿ ನಿಂತು ಬಿಡುವರು, ವೀರರಾದ ತಿಗುಳ ಅಶ್ವಾರೋಹಿಗಳಿಗೆ ಹೋಲಿಕೆಯೇ ಇಲ್ಲ.

ಅರ್ಥ:
ಅಳವು: ಶಕ್ತಿ, ಸಾಮರ್ಥ್ಯ; ಅರಿ: ತಿಳಿ; ಕೆಣಕು: ರೇಗಿಸು, ಪ್ರಚೋದಿಸು; ಮುಂಕೊಳು: ಮುಂದೆ ಹೋಗು; ಕದನ: ಯುದ್ಧ; ಕೋಡು: ತಂಪು, ಶೈತ್ಯ; ಕೈ: ಹಸ್ತ; ನೋಡು: ವೀಕ್ಷಿಸು; ಸಿಡಿಮಿಡಿ: ಅಸಹನೆ, ಕೋಪ; ಸಿಡಿ: ಚಿಮ್ಮು; ಗೆಲಿದು: ಜಯಿಸು; ಉತ್ಸಾಹ: ಹುರುಪು, ಆಸಕ್ತಿ; ಸಿಲುಕು: ಬಂಧನಕ್ಕೊಳಗಾಗು; ಅಳು:ರೋದಿಸು, ದುಃಖಿಸು; ಕೆಡು: ಹಾಳು; ಓಡು: ಧಾವಿಸು; ಪುರ: ಊರು; ನಿಲು: ನಿಲ್ಲು; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ವೀರ: ಪರಾಕ್ರಮಿ; ಒದಗು: ದೊರೆತುದು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಅಳವನ್+ಅರಿಯದೆ +ಕೆಣಕಿತಹ +ಮುಂ
ಕೊಳಿಸಿ +ಕದನವ +ಕೋಡ +ಕೈ+ಅವರ್
ಅಳವಿತೊಟ್ಟರೆ +ನೋಡಿ +ಸಿಡಿಮಿಡಿಗೊಂಡು+ ಕೆಲಸಿಡಿವ
ಗೆಲಿದರ್+ಉತ್ಸಾಹಿಸುವ +ಸಿಲುಕಿದರ್
ಅಳುವ +ಕೆಟ್ಟೋಡಿದರೆ+ ಪುರದಲಿ
ನಿಲುವ +ನಿರುಪಮ+ವೀರರೊದಗಿತು+ ತಿಗುಳ+ರಾವುತರು

ಅಚ್ಚರಿ:
(೧) ತಿಗುಳರ ಯುದ್ಧ ರೀತಿ – ಗೆಲಿದರುತ್ಸಾಹಿಸುವ ಸಿಲುಕಿದರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು

ಪದ್ಯ ೬೭: ಗೌಳದ ರಾವುತರು ಹೇಗೆ ಆಕ್ರಮಣ ಮಾಡಿದರು?

ಕವಿದು ಮುಂದಲೆವಿಡಿದು ರಾವ್ತರ
ತಿವಿದು ಜೀವವ ಕಳಚಿ ಕೆಲಬಲ
ದವರ ಕೆಡೆಹೊಯ್ದಹಿತಘಾಯವ ನೋಟದೊಡೆಹೊಯ್ದು
ಸವಗ ತುಂಡಿಸೆ ಜೋಡು ಖಂಡಿಸೆ
ನವರುಧಿರದೊರವೇಳೆ ಮಹದಾ
ಹವದೊಳೋರಂತೊದಗಿದರು ಗೌಳವದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ಗೌಳರಾವುತರು ಮುನ್ನುಗ್ಗಿ ವಿರೋಧಿರಾವುತರ ಮುಂದಲೆ ಹಿಡಿದು, ತಲ ಕತ್ತರಿಸಿ ಕೊಂದು ಅಕ್ಕಪಕ್ಕದವರು ಬೀಳುವಂತೆ ಹೊಡೆದು, ಶತ್ರುಗಳನ್ನೀಕ್ಷಿಸಿ ಅವರ ಹೊಡೆತದಿಂದ ತಮ್ಮ ಕವಚವು ಕತ್ತರಿಸಿ, ಅಂಗರಕ್ಷೆಯು ಮುರಿದು, ಹೊರ ರಕ್ತವು ಚಿಮ್ಮಿ ಹರಿಯಲು ರಣದಲ್ಲಿ ಸಾಲಾಗಿ ಮಲಗಿದರು.

ಅರ್ಥ:
ಕವಿ: ಆವರಿಸು; ಮುಂದಲೆ: ತಲೆಯ ಮುಂಭಾಗ; ರಾವ್ತರು: ಅಶ್ವಾರೋಹಿ; ತಿವಿ: ಚುಚ್ಚು; ಜೀವ: ಪ್ರಾಣ; ಕಳಚು: ಬೀಳು; ಕೆಲಬಲ: ಅಕ್ಕಪಕ್ಕ, ಎಡಬಲ; ಕೆಡೆ: ಬೀಳು, ಕುಸಿ; ಹೊಯ್ದು: ಹೊಡೆದು; ಅಹಿತ: ವೈರಿ, ಶತ್ರು; ಘಾಯ: ಪೆಟ್ಟು; ನೋಟ: ದೃಷ್ಟಿ; ಸವಗ: ಕವಚ; ತುಂಡಿಸು: ಸೀಳು, ಕತ್ತರಿಸು; ಜೋಡು: ಜೊತೆ; ಖಂಡಿಸು: ಕಡಿ, ಕತ್ತರಿಸು; ನವ: ಹೊಸ; ರುಧಿರ: ರಕ್ತ; ಏಳು: ಮೇಲೆ ಬಂದು; ಆಹವ: ಯುದ್ಧ; ಓರಂದ: ಒಂದೇ ರೀತಿ, ಸಮನೆ; ಒದಗು: ಲಭ್ಯ, ದೊರೆತುದು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಕವಿದು +ಮುಂದಲೆವಿಡಿದು +ರಾವ್ತರ
ತಿವಿದು +ಜೀವವ+ ಕಳಚಿ+ ಕೆಲಬಲ
ದವರ +ಕೆಡೆಹೊಯ್ದ್+ಅಹಿತ+ಘಾಯವ +ನೋಟದೊಡೆ+ಹೊಯ್ದು
ಸವಗ+ ತುಂಡಿಸೆ +ಜೋಡು +ಖಂಡಿಸೆ
ನವ+ರುಧಿರದೊರವ್ + ಏಳೆ +ಮಹದ್
ಆಹವದೊಳ್+ಓರಂತ್+ಒದಗಿದರು +ಗೌಳವದ+ ರಾವುತರು

ಅಚ್ಚರಿ:
(೧) ಕವಿ, ತಿವಿ; ತುಂಡಿಸೆ, ಖಂಡಿಸೆ – ಪ್ರಾಸ ಪದಗಳು

ಪದ್ಯ ೨೦: ಕರ್ಣನ ದಾನದ ಪರಿ ಹೇಗಿತ್ತು?

ದೇವಗುರುವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧಸೌಗಂಧ ಭಾವಿತ ಯಕ್ಷ ಕರ್ದಮವ (ಕರ್ಣ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ದೇವತೆಗಳು, ಆಚಾರ್ಯರು, ಬ್ರಾಹ್ಮಣರಿಗೆ ಕರ್ಣನು ಭಕ್ತಿಯಿಂದ ಕಾಣಿಕೆಯನ್ನು ನೀಡಿದನು. ಶಸ್ತ್ರಾಸ್ತ್ರಗಳನ್ನು ಬರೆಮಾಡಿ ರಥಗಳಲ್ಲಿ ತುಂಬಿಸಿದನು. ರಾವುತರು, ಮಾವುತರು, ಯೋಧರು, ರಥಿಕರಿಗೆ ಸುಗಂಧಪೂರಿತ ಅನುಲೇಪನಗಳನ್ನು ನೀಡಿದನು.

ಅರ್ಥ:
ದೇವ: ಸುರರು, ದೇವತೆಗಳು; ಗುರು: ಆಚಾರ್ಯ; ವಿಪ್ರ: ಬ್ರಾಹ್ಮಣ; ಬಹು: ಬಹಳ; ಸಂಭಾವನೆ: ಗೌರವಧನ; ಶಸ್ತ್ರ: ಆಯುಧ; ಆವಳಿ: ಸಮೂಹ; ತರಿಸು: ಬರೆಮಾದು; ತುಂಬಿಸು: ಪೂರ್ಣ; ವರೂಥ:ತೇರು, ರಥ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಆರೋಹಿಕ: ಮಾವುತರು; ಭಟ: ಸೈನಿಕ; ರಥಿಕ: ಸೂತ, ರಥವನ್ನುಓಡಿಸುವವ, ರಥಿ; ಚೆಲ್ಲು: ಹರಡು, ನೀಡು; ವಿವಿಧ: ಹಲವಾರು; ಸೌಗಂಧ: ಪರಿಮಳ; ಭಾವಿತ: ಪೂರಿತ; ಕರ್ದಮ: ಸುಗಂಧವನ್ನು ಬೆರೆಸಿದ ನೀರು;

ಪದವಿಂಗಡಣೆ:
ದೇವ+ಗುರು+ವಿಪ್ರರಿಗೆ+ ಬಹು +ಸಂ
ಭಾವನೆಯ +ಮಾಡಿದನು +ಶಸ್ತ್ರಾ
ಸ್ತ್ರ+ಆವಳಿಯ +ತರಿಸಿದನು +ತುಂಬಿಸಿದನು +ವರೂಥದಲಿ
ರಾವುತರಿಗ್+ಆರೋಹಕರಿಗೆ+ ಭ
ಟಾವಳಿಗೆ+ ರಥಿಕರಿಗೆ+ ಚೆಲ್ಲಿದ
ನಾ +ವಿವಿಧ+ಸೌಗಂಧ +ಭಾವಿತ +ಯಕ್ಷ +ಕರ್ದಮವ

ಅಚ್ಚರಿ:
(೧) ಸಂಭಾವನೆ ಸ್ವೀಕರಿಸಿದವರು – ದೇವ, ಗುರು, ವಿಪ್ರ, ರಾವುತರು, ಆರೋಹಕ, ಭಟ, ರಥಿಕ

ಪದ್ಯ ೨೭: ರಾಜ ಸಭೆಯಲ್ಲಿ ಮತ್ತಾರು ಇದ್ದರು?

ಮಾವುತರು ಚಿತ್ರಕರು ಮಲ್ಲರು
ರಾವುತರು ಶಿಲ್ಪಿಗರು ಮಾಯಾ
ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು
ದ್ರಾವಕರು ಜೂಜಾಳಿಗಳು ವರ
ದಾವಣಿಯರು ವಿದೇಶಿಗಳು ಮೃಗ
ಜೀವಿಗಳು ಶಾಕುನಿಕರೆಸೆದರು ರಾಜಸಭೆಯೊಳಗೆ (ಉದ್ಯೋಗ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಯನ ಸಭೆಯಲ್ಲಿ ಮಾವುತರು, ಚಿತ್ರಕಲಾನಿಪುಣರು, ಜಟ್ಟಿಗಳು, ರಾವುತರು, ಶಿಲ್ಪಿಗಳು, ಇಂದ್ರಜಾಲವನ್ನು ಬಲ್ಲವರು, ಕಣ್ಣು ಕಾಲುಗಳಿಲ್ಲದ ಅಂಗವಿಕಲರು, ಮೂಕರು, ಗಿಡ್ಡರು, ಕಳ್ಳರು, ಜೂಜುಕೋರರು, ವ್ಯಾಪಾರಿಗಳು, ವಿದೇಶದವರು, ಬೇಟೆಗಾರರು, ಶಕುನವನ್ನು ಬಲ್ಲವರು ಇದ್ದರು.

ಅರ್ಥ:
ಮಾವುತ: ಆನೆಯನ್ನು ನಡೆಸುವವನು; ಚಿತ್ರಕರು: ಚಿತ್ರವನ್ನು ಬರೆಯುವವ; ಮಲ್ಲ: ಕುಸ್ತಿಪಟು; ರಾವುತ: ಕುದುರೆ ಸವಾರ; ಶಿಲ್ಪಿ: ಕೆತ್ತನೆ ಕಲಾವಿದ; ಮಾಯಾಕೋವಿದ: ಇಂದ್ರಜಾಲ ಪಂಡಿತರು; ಕರ್ಣ: ಕಿವಿ; ಅಂಘ್ರಿ: ಪಾದ; ವಿಕಳರು: ಊನರಾದವರು; ಮೂಕ: ಮಾತು ಬರೆದೆಯಿರುವವ; ವಾಮ: ಗಿಡ್ಡ, ಕುಳ್ಳ; ದ್ರಾವಕ:ಕಳ್ಳ, ಚೋರ; ಜೂಜಾಳಿ: ಒತ್ತೆ ಇಟ್ಟು ಆಡುವವರು; ದಾವಣಿ:ದನಕರುಗಳನ್ನು ಕಟ್ಟುವ ಹಗ್ಗವನ್ನು ಮಾಡುವವ; ವಿದೇಶಿ: ಪರದೇಶಿಯರು; ಮೃಗಜೀವಿ: ಬೇಟೆಗಾರ; ಶಾಕುನಿಕರು: ಶಕುನವನ್ನು ಹೇಳುವವ; ಸಭೆ: ಪರಿಷತ್ತು;

ಪದವಿಂಗಡಣೆ:
ಮಾವುತರು +ಚಿತ್ರಕರು +ಮಲ್ಲರು
ರಾವುತರು +ಶಿಲ್ಪಿಗರು +ಮಾಯಾ
ಕೋವಿದರು +ಕರ್ಣಾಂಘ್ರಿವಿಕಳರು+ ಮೂಕ +ವಾಮನರು
ದ್ರಾವಕರು +ಜೂಜಾಳಿಗಳು +ವರ
ದಾವಣಿಯರು +ವಿದೇಶಿಗಳು+ ಮೃಗ
ಜೀವಿಗಳು+ ಶಾಕುನಿಕರೆಸೆದರು+ ರಾಜಸಭೆಯೊಳಗೆ

ಅಚ್ದರಿ:
(೧) ೧೬ ರೀತಿಯ ಜನರನ್ನು ಪಟ್ಟಿಮಾಡಿರುವುದು