ಪದ್ಯ ೫: ಶೌನಕಾದಿಮುನಿಗಳು ಏಕೆ ಧನ್ಯರಾದೆವೆಂದು ಹೇಳಿದರು?

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ (ಆದಿ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಶೌನಕಾದಿಮುನಿಗಳು, ಶಿವ ಶಿವಾ ಇದೆಂತಹ ಸುಕೃತ! ರೋಮಹರ್ಷಣಿಯೇ ಈ ಹಿಂದೆ ನಾವು ಮಾಡಿದ ಸೋಮಯಾಗವೇ ಮೊದಲಾದವುಗಳಲ್ಲಿ ಸೋಮಪಾನವನ್ನು ಮಾಡಿ ಬೆಳೆಸಿದ ಪುಣ್ಯವೃಕ್ಷಕ್ಕೆ ಮಹಾಭಾರತ ಕಥಾಮೃತವು ರಮಣೀಯವಾದ ಫಲವೇ ಸರಿ, ನಮ್ಮ ಪುಣ್ಯಕ್ಕೆ ಎಲ್ಲೆಯಿಲ್ಲ. ನಾವು ಧನ್ಯರಾದೆವೆಂದು ಮುನಿಗಳು ಹೇಳಿದರು.

ಅರ್ಥ:
ಪಾನ: ಕುಡಿಯುವಿಕೆ, ಕುಡಿತ; ಫಲ: ಪ್ರಯೋಜನ; ಅಮೃತ: ಸುಧೆ; ನಿಸ್ಸೀಮ: ಪರಿ ಮಿತಿಯಿಲ್ಲದುದು; ಪುಣ್ಯ: ಸದಾಚಾರ; ಧನ್ಯ: ಪುಣ್ಯವಂತ; ಸ್ತೋಮ: ಗುಂಪು; ಮುನಿ: ಋಷಿ;

ಪದವಿಂಗಡಣೆ:
ಹಾ +ಮಹಾದೇವ+ಆಯಿದೆಂತೈ
ರೋಮಹರ್ಷಣಿ+ ನಾವು +ಮಾಡಿದ
ಸೋಮಪಾನಾದಿಗಳ+ ಪುಣ್ಯಸ್ತೋಮ +ತರುಗಳಿಗೆ
ಈ +ಮಹಾಭಾರತ +ಕಥಾಮೃತ
ರಾಮಣೀಯಕ +ಫಲವಲಾ +ನಿ
ಸ್ಸೀಮ +ಪುಣ್ಯರು+ ಧನ್ಯರಾವ್+ಎಂದುದು +ಮುನಿಸ್ತೋಮ

ಅಚ್ಚರಿ:
(೧) ಪುಣ್ಯಸ್ತೋಮ, ಮುನಿಸ್ತೋಮ – ಸ್ತೋಮ ಪದದ ಬಳಕೆ

ಪದ್ಯ ೧೮: ಅರ್ಜುನನು ಏನು ಯೋಚಿಸಿ ಮಂಚದಿಂದ ಕೆಳಗಿಳಿದ?

ಹಾ ಮಹಾದೇವಿ ಯಿವಳಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ (ಅರಣ್ಯ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಓಹೋ! ಈ ದೇವಿಯು ಇಂದ್ರನ ಸಭೆಯಲ್ಲಿ ರಮಣೀಯವಾಗಿ ನೃತ್ಯವನ್ನು ಮಾಡಿ ರಂಜಿಸಿದಳಲ್ಲವೇ! ಇವಳು ಚಂದ್ರವಂಶಕ್ಕೆ ತಾಯಿಯಲ್ಲವೇ! ಇವಳು ಅಭಿವಂದನೆಗೆ ಯೋಗ್ಯಳು, ಶಿವ ಶಿವಾ ಇಲ್ಲಿವೆ ಬಂದಿದ್ದಾಳೆ ಎಂದು ಯೋಚಿಸುತ್ತಾ ಅರ್ಜುನನು ಮಣಿಮಂಚದಿಂದ ಕೆಳಗಿಳಿದನು.

ಅರ್ಥ:
ಸುತ್ರಾಮ: ಇಂದ್ರ; ಓಲಗ: ದರ್ಬಾರು; ನರ್ತನ: ನೃತ್ಯ; ರಾಮಣೀಯಕ: ಚೆಲುವು; ರಚನೆ: ನಿರ್ಮಿಸು; ರಂಜಿಸು: ಶೋಭಿಸು; ಸಭೆ: ದರ್ಬಾರು; ಮಹಿಳೆ: ಸ್ತ್ರೀ; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ನಿರಾಮಯ: ನೆಮ್ಮದಿ, ಸಂತೋಷ; ಶಶಿ: ಚಂದ್ರ; ವಂಶ: ಕುಲ; ಜನನಿ: ತಾಯಿ; ಸನಾಮ: ಶ್ರೇಷ್ಠವಾದ ಹೆಸರು; ಮಣಿ: ರತ್ನ; ಮಂಚ: ಪಲ್ಲಂಗ; ಇಳಿ: ಕೆಳಕ್ಕೆ ಬಾ;

ಪದವಿಂಗಡಣೆ:
ಹಾ +ಮಹಾದೇವಿ +ಇವಳಾ +ಸು
ತ್ರಾಮನ್+ಓಲಗದೊಳಗೆ +ನರ್ತನ
ರಾಮಣೀಯಕ+ ರಚನೆಯಲಿ+ ರಂಜಿಸಿದಳ್+ಆ +ಸಭೆಯ
ಈ+ ಮಹಿಳೆ+ಅಭಿವಂದನೀಯೆ +ನಿ
ರಾಮಯದ +ಶಶಿವಂಶ +ಜನನಿ +ಸ
ನಾಮೆಯಲ್ಲಾ+ ಶಿವ+ಎನುತ +ಮಣಿ+ಮಂಚದಿಂದ್+ಇಳಿದ

ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರಾಮಣೀಯಕ ರಚನೆಯಲಿ ರಂಜಿಸಿದಳಾ
(೨) ಊರ್ವಶಿಯನ್ನು ಹೊಗಳುವ ಪರಿ – ಈ ಮಹಿಳೆಯಭಿವಂದನೀಯೆ ನಿರಾಮಯದ ಶಶಿವಂಶ ಜನನಿ ಸನಾಮೆಯಲ್ಲಾ

ಪದ್ಯ ೯೫: ಗಾಯಕರ ಲಕ್ಷಣವೇನು?

ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಪರೆಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಗಳೊಳು ಸ
ನಾಮ ನೆನಿಸುವನವನೆ ಗಾಯಕನರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಮೂರು ಸ್ಥಾಯಿಗಳಾದ ಮಂದ್ರ, ಮಧ್ಯಮ, ತಾರ ಇವುಗಳಲ್ಲಿ ಸಪ್ತಸ್ವರಗಳನ್ನು ಹಾಡುವಾಗ ಸ್ವಲ್ಪವೂ ತಪ್ಪದೆ, ಸ್ವರದ ವಿಸ್ತಾರ ಮತ್ತು ತಿರುವುಗಳನ್ನು ಸರಿಯಾಗಿ ನಿರ್ವಹಿಸುವವನೂ, ಮಧುರ ಶಾರೀರವುಳ್ಳವನೂ, ಉತ್ತಮ ಮನೋಧರ್ಮವನ್ನುಳ್ಳ ಸುಂದರ ಗಾನದಲ್ಲಿ ಪ್ರಸಿದ್ಧನೂ ಆದವನು ಗಾಯಕರೆಂದು ಕರೆಯಬಹುದು ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಗ್ರಾಮ: ಸಂಗೀತದ ಸಪ್ತಸ್ವರಗಳಲ್ಲಿ ಷಡ್ಜ, ಮಧ್ಯಮ ಮತ್ತು ಗಾಂಧಾರವೆಂಬ ಮೂರು ಗುಂಪು; ಮೂರು: ತ್ರಿ; ಸಂಚರಣೆ: ಸಂಚಾರ, ಓಡಾಡುವಿಕೆ; ಸೀಮೆ: ಸರಹದ್ದು; ನೇಮ: ನಿಯಮ, ವ್ರತ; ತಪ್ಪದೆ: ಬಿಡದೆ, ಹಾದಿ ಬೇರೆ ಹೋಗದೆ; ಹರಣ:ಜೀವ, ಪ್ರಾಣ, ಕಿತ್ತುಕೊಳ್ಳುವುದು; ಭರಣ:ವಹಿಸುವುದು, ಧರಿಸುವುದು, ಕಾಪಾಡುವುದು; ಪರೆಪು: ವಿಸ್ತಾರ, ಹರಡು ; ತಿರುಪು: ಸುತ್ತುವುದು, ತಿರುಗಾಟ; ಕೋಮಲ:ಮಧುರ; ಶಾರೀರ: ಕಾಯ, ಶರೀರ, ಧ್ವನಿ; ಹೃದಯ: ವಕ್ಷ, ಎದೆ; ರಾಮಣೀಯಕ: ಮನೋಹರವಾದ; ರಚನೆ: ಸೃಷ್ಟಿ; ಸನಾಮ: ಶ್ರೇಷ್ಠವಾದ ಹೆಸರು, ಪ್ರಸಿದ್ಧ; ಗಾಯಕ: ಹಾಡುಗಾರ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗ್ರಾಮ +ಮೂರರ +ಸಂಚರಣೆಗಳ
ಸೀಮೆಯಲಿ +ಸರಿಗಮಪದನಿಗಳ
ನೇಮ +ತಪ್ಪದೆ +ಹರಣ+ಭರಣದ +ಪರೆಪು +ತಿರುಪುಗಳ
ಕೋಮಲಿತ +ಶಾರೀರ +ಹೃದಯದ
ರಾಮಣೀಯಕ +ರಚನೆಗಳೊಳು +ಸ
ನಾಮ +ನೆನಿಸುವನವನೆ+ ಗಾಯಕನ್+ಅರಸ +ಕೇಳೆಂದ

ಅಚ್ಚರಿ:
(೧) ಸಂಗೀತದ ಸಪ್ತಸ್ವರವನ್ನು ತಂದಿರುವ ರೀತಿ – ಸರಿಗಮಪದನಿ
(೨) ‘ಸ’ ಕಾರದ ತ್ರಿವಳಿ ಪದ – ಸಂಚರಣೆಗಳ ಸೀಮೆಯಲಿ ಸರಿಗಮಪದನಿ
(೩) ಜೋಡಿ ಪದ – ಹರಣ ಭರಣ, ಪೆರಪು ತಿರುಪು