ಪದ್ಯ ೨೮: ಯುಧಿಷ್ಠಿರನ ಮನಸ್ಥಿತಿ ಹೇಗಾಯಿತು?

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೀತೋಭಾವ ಭಂಗಿಗಳ (ಸಭಾ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಆಶ್ಚರ್ಯವು ಹೆಚ್ಚಾಯಿತು, ಮನಸ್ಸನ್ನು ಆವರಿಸಿದ ದುಗುಡವು ಅವನ ತಲೆಯ ಮುಂಭಾಗವನ್ನು ಹಿಡಿಯಿತು, ಜ್ಞಾನದ ಸೆರಗು ಕಳಚಿತು, ನಡುಬೀದಿಯಲ್ಲಿ ಮಾನವು ಅಪಹರಣವಾಯಿತು. ದುರಾದೃಷ್ಟವು ಅವನನ್ನು ಆಕ್ರಮಿಸಿತು. ಅವನ ರಾಜ್ಯಲಕ್ಷ್ಮಿಯ ತುರುಬನ್ನು ಶತ್ರುವು ಹಿಡಿದನು. ಅವನ ಅರಿವಿನ ಭಾವಗಳ ಬಗೆಯನ್ನು ನಾನು ತಿಳಿಯೆ ಜನಮೇಜಯ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಬೆರಗು: ಆಶ್ಚರ್ಯ; ಬೆಳೆದು: ಹೆಚ್ಚಾಗು; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ, ನಡುಕ; ಮರುಕ: ಬೇಗುದಿ, ಅಳಲು; ಮುಂದಲೆ: ತಲೆಯ ಮುಂಭಾಗ; ಅರಿವು: ತಿಳುವಳಿಕೆ; ಸೆರಗು: ಬಟ್ಟೆಯ ತುದಿಯ ಭಾಗ; ಹಾರು: ಎಗರು, ಜಿಗಿ; ಲಜ್ಜೆ: ಬೆಳಗು: ಹೊಳಪು, ಕಾಂತಿ; ಬೀದಿ: ಮಾರ್ಗ, ದಾರಿ; ಬಿಟ್ಟಬೀದಿ: ನಡುರಸ್ತೆ; ಉರುಬು: ಅತಿಶಯವಾದ ವೇಗ; ಅಪದೆಸೆ: ದುರದೃಷ್ಟ; ತುರುಬು: ಕೂದಲಿನ ಗಂಟು, ಮುಡಿ; ಕೈ: ಹಸ್ತ; ಹಗೆ: ವೈರಿ; ಅರಿ: ತಿಳಿ; ಅರಸ: ರಾಜ; ವಿರಸ: ಸತ್ವವಿಲ್ಲದ, ವಿರೋಧ; ಚೇತಸ್ಸು: ಪ್ರಜ್ಞೆ, ಬುದ್ಧಿ ಶಕ್ತಿ; ಭಂಗಿ: ಠೀವಿ, ಗತ್ತು;

ಪದವಿಂಗಡಣೆ:
ಬೆರಗು +ಬೆಳೆದುದು +ಮನದ +ಮಿಡುಕಿನ
ಮರುಕ +ಮುಂದಲೆ+ಕೊಟ್ಟುದ್+ಅರಿವಿನ
ಸೆರಗು +ಹಾರಿತು +ಲಜ್ಜೆ +ಬೆಳಗಿತು+ ಬಿಟ್ಟಬೀದಿಯಲಿ
ಉರುಬಿತ್+ಅಪದೆಸೆ +ರಾಜ್ಯಲಕ್ಷ್ಮಿಯ
ತುರುಬು +ಕೈದೊಳಸಾಯ್ತು +ಹಗೆಗ್
ಆನ್+ಅರಿಯೆನ್+ಅರಸನ+ ವಿರಸ +ಚೀತೋಭಾವ +ಭಂಗಿಗಳ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿ: ಅರಿವಿನ ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
(೨) ಅರಸ, ವಿರಸ – ಪ್ರಾಸ ಪದ
(೩) ರಾಜ್ಯವು ಕಳಚಿತು ಎಂದು ಹೇಳಲು – ರಾಜ್ಯಲಕ್ಷ್ಮಿಯ ತುರುಬು ಕೈದೊಳಸಾಯ್ತು ಹಗೆಗ್

ಪದ್ಯ ೧೨: ಧರ್ಮಜನು ಯಾರನ್ನು ಪಣಕ್ಕಿಟ್ಟನು?

ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಕಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರಿದಕಿ
ನ್ನೆನ್ನನಿಕ್ಕಿಯೆ ದ್ಯೂತವಿಜಯವ ಸಾಧಿಸುವೆನೆಂದ (ಸಭಾ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ದುಃಖಭರಿತನಾದನು. ಅವನು ತನ್ನ ರಾಜ್ಯಲಕ್ಷ್ಮಿಯು ಬೆನ್ನನ್ನು ನೋಡಿ, ಆಕೆ ತನ್ನಿಂದ ದೂರ ಹೋಗುತ್ತಿರುವುದನ್ನು ಕಂಡನು. ಅವನ ಉನ್ನತಿಯು ಕಳಚಿಹೋಯಿತು. ವೈಭವವು ಇಲ್ಲವಾಗಲು ಅವನು ಏನು ತಾನೆ ಮಾಡಿಯಾನು? ಆದರೂ ಅವನು ನನ್ನ ವಿರೋಧಿಗಳು ನನ್ನನ್ನು ಕಡೆಗಣಿಸಿ ಅವಹೇಳನೆಯ ಮಾತನ್ನಾಡಿದನು. ಇನ್ನು ನನ್ನನ್ನೇ ಪಣವಾಗಿಟ್ಟು ಜೂಜನ್ನು ಗೆಲ್ಲುತ್ತೇನೆ ಎಂದು ನಿಶ್ಚಯಿಸಿದನು.

ಅರ್ಥ:
ಖಿನ್ನ: ಖೇದ, ವಿಷಾದ, ನೊಂದ; ರಾಜ್ಯ: ರಾಷ್ಟ್ರ; ಲಕ್ಷ್ಮಿ: ಐಶ್ವರ್ಯ; ಬೆನ್ನ: ಹಿಂಭಾಗ; ಕಂಡು: ನೋಡು; ಕಳಚು: ಬೇರ್ಪಡಿಸು, ಬೇರೆಮಾಡು; ಹೋದ: ತೆರಳು; ನಿಜ: ದಿಟ; ಉನ್ನತಿ: ಹೆಚ್ಚಳ; ಅವನೀಶ್ವರ: ರಾಜ; ಮುರಿ: ಸೀಳು; ಮಹಿಮೆ: ಷ್ಠತೆ, ಔನ್ನತ್ಯ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ವಿರೋಧಿ: ಶತ್ರು, ವೈರಿ; ಭಂಗಿಸು: ನಾಶಮಾಡು, ಸೋಲಿಸು; ನುಡಿ: ಮಾತಾಡು; ಇಕ್ಕಿ: ಇಡು; ದ್ಯೂತ: ಜೂಜು; ವಿಜಯ: ಗೆಲುವು; ಸಾಧಿಸು: ಪಡೆ, ದೊರ ಕಿಸಿಕೊಳ್ಳು;

ಪದವಿಂಗಡಣೆ:
ಖಿನ್ನನಾದನು +ರಾಜ್ಯಲಕ್ಷ್ಮಿಯ
ಬೆನ್ನ +ಕಂಡನು +ಕಳಚಿ +ಹೋದ +ನಿಜ
ಉನ್ನತಿಯಲ್+ಅವನೀಶನಿದ್ದನು +ಮುರಿದ +ಮಹಿಮೆಯಲಿ
ಇನ್ನು+ ಪಣವೇನೋ+ ವಿರೋಧಿಗಳ್
ಎನ್ನ +ಭಂಗಿಸಿ +ನುಡಿದರ್+ಇದಕಿನ್
ಎನ್ನನ್+ಇಕ್ಕಿಯೆ +ದ್ಯೂತ+ವಿಜಯವ +ಸಾಧಿಸುವೆನೆಂದ

ಅಚ್ಚರಿ:
(೧) ಸೋಲುತ್ತಿರುವುದನ್ನು ವಿವರಿಸುವ ಪರಿ – ರಾಜ್ಯಲಕ್ಷ್ಮಿಯ ಬೆನ್ನ ಕಂಡನು
(೨) ಧರ್ಮರಾಯನ ನೋವು – ಹೋದ ನಿಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ