ಪದ್ಯ ೨೭: ಭೀಷ್ಮರು ಕರ್ಣನ ಮಾತಿನಿಂದ ನೋವ ಪಟ್ಟರೇ?

ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ (ದ್ರೋಣ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನು ಕರ್ಣನ ಮಾತನ್ನು ಕೇಳಿ, ನಿನ್ನ ಮಾತುಗಳಿಂದ ನನ್ನ ಮನಸ್ಸಿಗೆ ಶ್ರೀಕೃಷ್ಣನಾಣೆಗೂ ಸ್ವಲ್ಪವೂ ನೋವಾಗಿಲ್ಲ. ಮಗನೇ ಕರ್ಣ, ನನ್ನ ಜೀವವು ಕೌರವನಿಗಾಗಿ ಕನಿಕರ ಪಡುತ್ತದೆ, ಏನು ಹೇಳಲಿ, ಕೌರವನ ಬಂಧುವನಾರೊ ಅವನೇ ನನ್ನ ಜೀವ, ನಾನು ನೊಂದೆನೆಂಬ ಭಯ ನಿನಗೆ ಬೇಡ, ಹೇಗಾದರೂ ಮಾಡಿ ಕೌರವನನ್ನುಳಿಸು ಎಂದು ಭೀಷ್ಮರು ಹೇಳಿದರು.

ಅರ್ಥ:
ನೋವು: ಬೇನೆ; ಮನ: ಮನಸ್ಸು; ರಾಜೀವಲೋಚನ: ಕಮಲದಂತ ಕಣ್ಣುಳ್ಳವನು (ಕೃಷ್ಣ); ಆಣೆ: ಪ್ರಮಾಣ; ಮಗ: ಸುತ; ಜೀವ: ಪ್ರಾಣ; ಕರಗು: ಕನಿಕರ ಪಡು; ಬಂಧು: ಸಂಬಂಧಿ; ದೆಸೆ: ದಿಕ್ಕು; ಭಯ: ಅಂಜಿಕೆ; ಬೇಡ: ತ್ಯಜಿಸು; ಪರಿ: ರೀತಿ; ಉಳುಹು: ಬದುಕು, ಜೀವಿಸು; ಹದ: ಸ್ಥಿತಿ;

ಪದವಿಂಗಡಣೆ:
ನೋವು +ಮನದೊಳಗ್+ಉಳ್ಳಡಾ +ರಾ
ಜೀವಲೋಚನನ್+ಆಣೆ +ಮಗನೇ
ಜೀವ +ಕೌರವನಲ್ಲಿ+ ಕರಗುವುದ್+ಏನ +ಹೇಳುವೆನು
ಆವನ್+ಆತನ +ಬಂಧುವ್+ಆತನೆ
ಜೀವವ್+ಎನ್ನಯ +ದೆಸೆಯ +ಭಯ +ಬೇಡ್
ಆವ+ ಪರಿಯಿಂದ್+ಅವನನ್+ಉಳುಹುವ +ಹದನ +ಮಾಡೆಂದ

ಅಚ್ಚರಿ:
(೧) ಭೀಷ್ಮರ ಮನವಿ – ಆವ ಪರಿಯಿಂದವನನುಳುಹುವ ಹದನ ಮಾಡೆಂದ
(೨) ಜೀವ ಪದದ ಬಳಕೆ – ೨,೩, ೫ ಸಾಲಿನ ಮೊದಲ ಪದ

ಪದ್ಯ ೫: ಸೈರಂಧ್ರಿಯು ಯಾರನ್ನು ನೆನೆವುತ್ತಾ ಚಲಿಸಿದಳು?

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವೆಯಿದಕೇ ಕಷ್ಟವೆಂಬುದು
ಕೋವಿದರ ಮತ ಶಿವಶಿವಾ ರಾ
ಜೀವಲೋಚನ ಕೃಷ್ಣ ಬಲ್ಲೆಯೆನುತ್ತ ಗಮಿಸಿದಳು (ವಿರಾಟ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ದೇವಿ ನಿಮ್ಮ ಆಜ್ಞೆಯನ್ನು ನಡೆಸಲಾರೆ ಎಂದು ಹೇಳಿದರೂ ಬಲವಂತವನ್ನು ಮಾಡುವುದು ಯಾವ ಧರ್ಮ? ನೀವು ಮಾಡಿದ ಆಜ್ಞೆಯಂತೆ ನಡೆಯುವುದು ನಿಮ್ಮ ತಮ್ಮನಿಗೆ ಸಾವನ್ನು ತರುತ್ತದೆ, ಈ ಬಲವಂತದ ಪೆಟ್ಟು ಬಲುದೊಡ್ಡದು, ಆದುದರಿಂದಲೇ ತಿಳಿದವರು ಹೇಳುತ್ತಾರೆ, ಸೇವೆಯು ಬಹುಕಷ್ಟಕರವೆಂದು, ಶಿವ ಶಿವಾ ಕೃಷ್ಣ ಇದರ ಪರಿಣಾಮವನ್ನು ನೀನೇ ಬಲ್ಲೆ ಎಂದು ಹೇಳುತ್ತಾ ಸೈರಂಧ್ರಿಯು ಕೀಚಕನ ಮನೆಯ ಕಡೆಗೆ ನಡೆದಳು.

ಅರ್ಥ:
ನೇಮಿಸು: ಅಪ್ಪಣೆ ಮಾಡು, ಗೊತ್ತು ಮಾಡು; ಅರಿ: ತಿಳಿ; ಧರ್ಮ: ಧಾರಣೆ ಮಾಡಿದುದು; ಹದ: ಸ್ಥಿತಿ; ಸಾವು: ಮರಣ; ತಹುದು: ತರುವುದು; ಬದ್ಧ: ಕಟ್ಟಿದ, ಬಿಗಿದ; ವಿಘಾತ: ನಾಶ, ಧ್ವಂಸ; ಬಲುಹು: ಬಲ, ಶಕ್ತಿ; ಸೇವೆ: ಊಳಿಗ; ಕಷ್ಟ: ತೊಂದರೆ; ಕೋವಿದ: ಪಂಡಿತ; ಮತ: ಅಭಿಪ್ರಾಯ; ರಾಜೀವಲೋಚನ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಲ್ಲೆ: ತಿಳಿದಿರುವೆ; ಗಮಿಸು: ತೆರಳು;

ಪದವಿಂಗಡಣೆ:
ದೇವಿ +ನೇಮಿಸಲ್+ಅರಿಯೆನ್+ಎಂದೊಡ್
ಇದಾವ +ಧರ್ಮವು +ಶಿವ +ಶಿವ್+ಈ+ ಹದ
ಸಾವನ್+ಅವರಿಗೆ+ ತಹುದು+ ಬದ್ಧ+ವಿಘಾತಿಯಿದು +ಬಲುಹು
ಸೇವೆಯಿದಕೇ+ ಕಷ್ಟವೆಂಬುದು
ಕೋವಿದರ+ ಮತ +ಶಿವಶಿವಾ+ ರಾ
ಜೀವಲೋಚನ +ಕೃಷ್ಣ +ಬಲ್ಲೆ+ಎನುತ್ತ +ಗಮಿಸಿದಳು

ಅಚ್ಚರಿ:
(೧) ಪಂಡಿತರ ಮಾತು – ಸೇವೆಯಿದಕೇ ಕಷ್ಟವೆಂಬುದು ಕೋವಿದರ ಮತ

ಪದ್ಯ ೧೫: ಯಮನು ಕೃಷ್ಣನಿಗೆ ಏನು ಹೇಳಿದ?

ದೇವ ನೀನೇ ಬಲ್ಲೆ ಮಾಯಾ
ಕೋವಿದನು ನೀನರಿಯದುದನಾ
ವಾವತೆರದಿಂ ತಿಳಿವೆವೀ ಪಾಂಡವರ ಜೀವನಕೆ
ಆವತೆರದಿಂದುಳಿವು ಘಟಿಸುವು
ದಾವ ಬಗೆಯನು ಬಲ್ಲಿರೆನೆ ರಾ
ಜೀವಲೋಚನ ನಗುತ ಬಳಿಕಿಂತೆಂದನಾ ಯಮಗೆ (ಅರಣ್ಯ ಪರ್ವ, ೨೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯಮನು ಶ್ರೀಕೃಷ್ಣನಿಗೆ ತಿಳಿಸುತ್ತಾ, ದೇವ ಮಾಯಾ ಪಂಡಿತನಾದ ನೀನೇ ಬಲ್ಲೆ. ಪಾಂಡವರು ಬದುಕಿ ಉಳಿಯುವುದು ಹೇಗೆ ಎಂಬುದು ನಿನಗೆ ಗೊತ್ತು ಎನ್ನಲು ಶ್ರೀಕೃಷ್ಣನು ನಗುತ್ತಾ ಹೀಗೆ ಹೇಳಿದನು.

ಅರ್ಥ:
ದೇವ: ಒಡೆಯ; ಬಲ್ಲೆ: ತಿಳಿದಿರುವೆ; ಮಾಯ: ಗಾರುಡಿ, ಇಂದ್ರಜಾಲ; ಕೋವಿದ: ಪಂಡಿತ; ಅರಿ: ತಿಳಿ; ತೆರದಿ: ರೀತಿ; ತಿಳಿಸು: ಹೇಳು; ಜೀವ: ಪ್ರಾಣ; ಉಳಿವು: ಜೀವಿಸು; ಘಟಿಸು: ನಡೆಯುವುದು; ಬಗೆ: ರೀತಿ; ಬಲ್ಲಿರಿ: ತಿಳಿದಿರುವಿರಿ; ರಾಜೀವಲೋಚನ: ಕಮಲದಂತ ಕಣ್ಣುಳ್ಳವ; ನಗುತ: ಹರ್ಷಿತನಾಗಿ; ಬಳಿಕ: ನಂತರ; ಯಮ: ಕಾಲ;

ಪದವಿಂಗಡಣೆ:
ದೇವ+ ನೀನೇ +ಬಲ್ಲೆ +ಮಾಯಾ
ಕೋವಿದನು +ನೀನರಿಯದುದನಾವ್
ಆವತೆರದಿಂ+ ತಿಳಿವೆವ್+ಈ +ಪಾಂಡವರ +ಜೀವನಕೆ
ಆವತೆರದಿಂದ್+ಉಳಿವು+ ಘಟಿಸುವುದ್
ಆವ +ಬಗೆಯನು +ಬಲ್ಲಿರ್+ಎನೆ +ರಾ
ಜೀವಲೋಚನ +ನಗುತ +ಬಳಿಕಿಂತೆಂದನಾ +ಯಮಗೆ

ಅಚ್ಚರಿ:
(೧) ದೇವ, ರಾಜೀವಲೋಚನ, ಮಾಯಾಕೋವಿದ – ಕೃಷ್ಣನನ್ನು ಕರೆದ ಪರಿ