ಪದ್ಯ ೨೭: ಹನುಮನು ತನ್ನ ಪರಿಚಯವನ್ನು ಹೇಗೆ ಮಾಡಿಕೊಂಡನು?

ನಾವು ಹಿಂದಣ ಯುಗದ ರಾಘವ
ದೇವನೋಲೆಯಕಾರರಾ ಸು
ಗ್ರೀವ ಮಿತ್ರರು ಪವನನಿಂದಂಜನೆಗೆ ಜನಿಸಿದೆವು
ನಾವು ನಿಮ್ಮೊಡ ಹುಟ್ಟಿದರು ಸಂ
ಭಾವಿಸಿತು ನಿಮ್ಮಿಷ್ಟವೆನೆ ನಗು
ತಾ ವೃಕೋದರನೆರಗಿದನು ಕಲಿಹನುಮನಂಘ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನಿಗೆ ತನ್ನ ಪರಿಚಯವನ್ನು ನೀಡುತ್ತಾ, ನಾವು ತ್ರೇತಾಯುಗದಲ್ಲಿ ಅವತರಿಸಿದ ರಾಮನ ಸೇವಕ, ವಾನರ ರಾಜನಾದ ಸುಗ್ರೀವನ ಮಿತ್ರ. ವಾಯುವಿನಿಂದ ಅಂಜನೆಯಲ್ಲಿ ಜನಿಸಿದವ, ನಿನಗೆ ನಾನು ಅಣ್ಣ, ನಿನ್ನ ಇಷ್ಟವು ನೆರವೇರುತ್ತದೆ ಎಂದು ಹೇಳಲು ಅತೀವ ಸಂತಸಗೊಂಡ ಭೀಮನು ಹನುಮನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಹಿಂದಣ: ಹಿಂದಿನ, ಪೂರ್ವ; ಯುಗ: ಸಮಯದ ಗಣನೆಯ ಪ್ರಕಾರ; ರಾಘವದೇವ: ರಾಮ; ಓಲೆಯಕಾರ: ಸೇವಕ; ಮಿತ್ರ: ಸ್ನೇಹಿತ; ಜನಿಸು: ಹುಟ್ಟು; ಸಂಭಾವಿಸು: ಉಂಟಾಗು; ಇಷ್ಟ: ಆಸೆ; ವೃಕೋದರ: ತೋಳದ ಹೊಟ್ಟೆಯುಳ್ಳವ (ಭೀಮ); ಕಲಿ: ಶೂರ; ಅಂಘ್ರಿ: ಪಾದ;

ಪದವಿಂಗಡಣೆ:
ನಾವು +ಹಿಂದಣ+ ಯುಗದ +ರಾಘವ
ದೇವನ್+ಓಲೆಯಕಾರರ್+ಆ+ ಸು
ಗ್ರೀವ +ಮಿತ್ರರು +ಪವನನಿಂದ್+ಅಂಜನೆಗೆ +ಜನಿಸಿದೆವು
ನಾವು +ನಿಮ್ಮೊಡ +ಹುಟ್ಟಿದರು +ಸಂ
ಭಾವಿಸಿತು+ ನಿಮ್ಮಿಷ್ಟವೆನೆ+ ನಗುತ
ಆ+ ವೃಕೋದರನ್+ಎರಗಿದನು +ಕಲಿ+ಹನುಮನ್+ಅಂಘ್ರಿಯಲಿ

ಅಚ್ಚರಿ:
(೧) ರಾಮನ ಭಂಟನೆಂದು ಹೇಳುವ ಪರಿ – ನಾವು ಹಿಂದಣ ಯುಗದ ರಾಘವದೇವನೋಲೆಯಕಾರರ್