ಪದ್ಯ ೧೮: ಜಯದ್ರಥನು ದ್ರೌಪದಿಯನ್ನು ಹೇಗೆ ಹಂಗಿಸಿದನು?

ಆಹಹ ಪಾತಿವ್ರತ್ಯವತಿಸ
ನ್ನಿಹಿತವಲ್ಲಾ ನಿನಗೆ ಹಲಬರ
ಮಹಿಳೆ ಸತಿಯೆನಿಸುವೊಡೆ ಸೂಳೆಯರೇಕ ಪುರುಷರಲಿ
ವಿಹರಿಸುವರೇ ಲೋಕಧರ್ಮದ
ರಹಣಿ ರಹಿಸುವುದೈಸಲೇ ನಮ
ಗಿಹುದು ಮತವಲ್ಲದಿರೆ ಮಾಣಲೆನುತ್ತ ಮುರಿದೆದ್ದ (ಅರಣ್ಯ ಪರ್ವ, ೨೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಹಾ ನಿನಗೆ ಪಾತಿವ್ರತ್ಯವು ಬಹಳ ಹತ್ತಿರವೆಂದು ಕಾಣಿಸುತ್ತದೆ. ಹಲವರ ಹೆಂಡತಿ ಪತಿವ್ರತೆಯೆಂದೊಪ್ಪಿದರೆ ವೇಶ್ಯೆಯರು ಏಕ ಪುರುಷನೊಡನೆ ವಿಹರಿಸುವಳೇ? ಲೋಕದ ಮಾರ್ಗವೇ ಸರಿಯೆಂದು ನನ್ನ ಅಭಿಪ್ರಾಯ, ಹಾಗಲ್ಲದಿದ್ದರೆ ಇರಲಿ ಬಿಡು ಎನ್ನುತ್ತಾ ಮೇಲೆದ್ದನು.

ಅರ್ಥ:
ಪಾತಿವ್ರತ್ಯ: ಗರತಿ, ಗಂಡನಿಗೆ ವಿಧೇಯಳಾದವಳು; ಅತಿ: ತುಂಬ; ಸನ್ನಿಹಿತ: ಹತ್ತಿರ; ಹಲಬರು: ಬಹಳ; ಮಹಿಳೆ: ಹೆಣ್ಣು; ಸತಿ: ಹೆಂಡತಿ; ಸೂಳೆ: ವೇಶ್ಯೆ; ಪುರುಷ: ಗಂಡು; ವಿಹರಿಸು: ಓಡಾಡು; ಲೋಕ: ಜಗತ್ತು; ಧರ್ಮ: ಧಾರಣೆ ಮಾಡಿದುದು; ರಹಣಿ: ಹೊಂದಿಕೆ; ರಹಿ: ರೀತಿ, ವೈಭವ; ಐಸಲೇ: ಅಲ್ಲವೇ; ಮತ: ವಿಚಾರ; ಮಾಣ್: ಅಥವ; ಮುರಿ: ಸೀಳು;

ಪದವಿಂಗಡಣೆ:
ಆಹಹ+ ಪಾತಿವ್ರತ್ಯವ್+ಅತಿ+ಸ
ನ್ನಿಹಿತವಲ್ಲಾ+ ನಿನಗೆ +ಹಲಬರ
ಮಹಿಳೆ +ಸತಿ+ಎನಿಸುವೊಡೆ+ ಸೂಳೆಯರ್+ಏಕ+ ಪುರುಷರಲಿ
ವಿಹರಿಸುವರೇ+ ಲೋಕಧರ್ಮದ
ರಹಣಿ +ರಹಿಸುವುದ್+ ಐಸಲೇ +ನಮ
ಗಿಹುದು +ಮತವ್+ಅಲ್ಲದಿರೆ +ಮಾಣಲ್+ಎನುತ್ತ +ಮುರಿದೆದ್ದ

ಅಚ್ಚರಿ:
(೧) ದ್ರೌಪದಿಯನ್ನು ಹಂಗಿಸುವ ಪರಿ – ಹಲಬರ ಮಹಿಳೆ ಸತಿಯೆನಿಸುವೊಡೆ ಸೂಳೆಯರೇಕ ಪುರುಷರಲಿ ವಿಹರಿಸುವರೇ

ಪದ್ಯ ೨೧: ದುರ್ಯೋಧನನು ದುಶ್ಯಾಸನನಿಗೆ ಏನೆಂದು ಆಜ್ಞಾಪಿಸಿದನು?

ಅಹುದಲೇ ಬಳಿಕೇನು ನೀನ ತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಕರ್ಣನ ಮಾತನ್ನು ಸಮರ್ಥಿಸುತ್ತಾ, ಕರ್ಣ ವಿಶಾಲಬುದ್ಧಿಯುಳ್ಳ ನಿನ್ನ ಮಾತು ಸರಿಯಾಗಿದೆ, ಈ ದುರಭಿಮಾನಿಗಳಾದ ಪಾಂಡವರ ಮೋಸಗಳು ನಿನಗೇನು ಗೊತ್ತು, ಅವರ ದುರ್ಮಾರ್ಗಗಳು ಅವರಿಗೇ ಇರಲಿ, ಎಂದು ದುಶ್ಯಾಸನನ್ನು ಕರೆದು ದಾಸಿಯರ ಭವನದಲ್ಲಿ ಸಹಾರರು, ಅವರ ವೇಳೆಗಳನ್ನು ಸರದಿಗಳನ್ನು ಗೊತ್ತುಪಡಿಸುವವರು ಬರಲಿ, ಈ ಹೆಣ್ಣನ್ನು ದಾಸಿಯರ ಭವನಕ್ಕೆ ನೂಕೆಂದು ದುರ್ಯೋಧನನು ದುಶ್ಯಾಸನನಿಗೆ ಆಜ್ಞಾಪಿಸಿದನು.

ಅರ್ಥ:
ಬಳಿಕ: ನಂತರ; ಬಹಳ: ತುಂಬ; ಮತಿ: ಬುದ್ಧಿ; ಕುಹಕ: ಮೋಸ, ವಂಚನೆ; ಕೋಟಿ: ವರ್ಗ, ಕೊನೆ; ಬಲ್ಲೆ: ತಿಳಿ; ವೃಥ: ಸುಮ್ಮನೆ; ಅಭಿಮಾನಿ: ಪ್ರೀತಿಯುಳ್ಳವನು; ರಹಣಿ: ಹೊಂದಿಕೆ, ಕ್ರಮ; ಸಾಕು: ಕೊನೆ, ಅಂತ್ಯ; ತೊತ್ತು: ದಾಸ; ಸಹಚರ: ಅನುಚರ, ಸೇವಕ; ಸೂಳಾಯತ: ಓಲೆಯಕಾರ; ಕರೆ: ಬರೆಮಾಡು; ಮಹಿಳೆ: ಸ್ತ್ರೀ; ನೂಕು: ತಳ್ಳು; ನೇಮಿಸು: ಅಜ್ಞಾಪಿಸು;

ಪದವಿಂಗಡಣೆ:
ಅಹುದಲೇ+ ಬಳಿಕೇನು +ನೀನ್+ಅತಿ
ಬಹಳ +ಮತಿಯೈ +ಕರ್ಣ +ನೀನ್+ಈ
ಕುಹಕ+ ಕೋಟಿಯನೆತ್ತ+ ಬಲ್ಲೆ +ವೃಥ+ಅಭಿಮಾನಿಗಳ
ರಹಣಿ+ ಸಾಕಂತಿರಲಿ+ ತೊತ್ತಿರ
ಸಹಚರರ+ ಸೂಳಾಯಿತರ+ ಕರೆ
ಮಹಿಳೆಯನು +ನೂಕೆಂದು +ದುಶ್ಯಾಸನಗೆ+ ನೇಮಿಸಿದ

ಅಚ್ಚರಿ:
(೧) ದುರ್ಯೋಧನನು ಪಾಂಡವರನ್ನು ನೋಡುವ ಪರಿ – ಕುಹಕ ಕೋಟಿಯನೆತ್ತ ಬಲ್ಲೆ, ವೃಥಾಭಿಮಾನಿಗಳ ರಹಣಿ