ಪದ್ಯ ೫೦: ನಹುಷನು ಮುಂದೆ ಯಾವ ಪ್ರಶ್ನೆಯನ್ನು ಕೇಳಿದನು?

ಆಯಿತಿದು ದಮವಾವುದೈ ಸ್ವಾ
ಧ್ಯಾಯವೆಂಬುದದೇನು ಸತ್ಯದ
ಕಾಯವಾವುದಹಿಂಸೆ ಪರಿತೋಷಂಗಳಿಂದೇನು
ರಾಯ ಹೇಳಿದರರಿವ ನಿಜಗುಣ
ದಾಯತವನೆನೆ ಧರ್ಮವತಿ ರಮ
ಣೀಯವೆನೆ ನಹುಷಂಗೆ ವಿವರಿಸಿದನು ಮಹೀಪಾಲ (ಅರಣ್ಯ ಪರ್ವ, ೧೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸರಿ, ಬ್ರಾಹ್ಮಣ್ಯದ ಬಗ್ಗೆ ನಿನ್ನ ವಿಚಾರ ತಿಳಿಯಿತು, ದಮ, ಸ್ವಾಧ್ಯಾಯ, ಸತ್ಯದ ತಿರುಳು, ಅಹಿಂಸೆ, ಸಂತೋಷ ಇವುಗಳೇನು? ಇವುಗಳ ಗುಣ ವಿಸ್ತಾರವನ್ನು ತಿಳಿಸು ಎಂದು ನಹುಷನು ಕೇಳಲು, ಧರ್ಮಜನು ಅತಿರಮಣೀಯವಾದ ಧರ್ಮ ವಿಚಾರವನ್ನು ಹೇಳಿದನು.

ಅರ್ಥ:
ಆಯಿತು: ತಿಳಿಯಿತು, ಸರಿ; ದಮ: ಇಂದ್ರಿಯ ನಿಗ್ರಹ, ಸಂಯಮ; ಸ್ವಾಧ್ಯಾಯ: ತಾನೇ ಸ್ವಂತವಾಗಿ ಓದಿ ತಿಳಿಯುವ ಜ್ಞಾನ; ಸತ್ಯ: ನಿಜ; ಕಾಯ: ದೇಹ; ಅಹಿಂಸೆ: ತೊಂದರೆ ಕೊಡದ; ಪರಿತೋಷ: ಸಂತುಷ್ಟಿ, ಅಧಿಕವಾದ ಆನಂದ; ರಾಯ: ಒಡೆಯ; ಹೇಳು: ತಿಳಿಸು; ಗುಣ: ನಡತೆ; ಆಯತ:ನೆಲೆ; ಧರ್ಮ: ಧಾರಣೆ ಮಾಡಿದುದು; ರಮಣೀಯ: ಸುಂದರವಾದ, ಚೆಲುವಾದ; ವಿವರಿಸು: ತಿಳಿಸು; ಮಹೀಪಾಲ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ಆಯಿತಿದು +ದಮವ್ +ಆವುದೈ+ ಸ್ವಾ
ಧ್ಯಾಯ+ವೆಂಬುದದೇನು+ ಸತ್ಯದ
ಕಾಯವಾವುದ್+ಅಹಿಂಸೆ +ಪರಿತೋಷಂಗಳಿಂದೇನು
ರಾಯ +ಹೇಳಿದರ್+ಅರಿವ +ನಿಜಗುಣದ್
ಆಯತವನ್+ಎನೆ +ಧರ್ಮವತಿ +ರಮ
ಣೀಯವೆನೆ+ ನಹುಷಂಗೆ +ವಿವರಿಸಿದನು +ಮಹೀಪಾಲ

ಅಚ್ಚರಿ:
(೧)ಧರ್ಮವತಿ ರಮಣೀಯವೆನೆ – ಪದದ ಬಳಕೆ

ಪದ್ಯ ೧೦೪: ಊರ್ವಶಿಯು ತನ್ನ ಚಿತ್ತದಲ್ಲಿ ಯಾರ ಚಿತ್ರವನ್ನು ಬಿಡಿಸಿದಳು?

ರಾಯನಟ್ಟಿದ ನೇಮಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವನಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಅರಣ್ಯ ಪರ್ವ, ೮ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತಿಗೆ ಊರ್ವಶಿಯು, ಇದು ದೇವೇಂದ್ರನ ಆಜ್ಞೆಯಲ್ಲವೇ? ನಿನ್ನ ಮಾತು ಅತೀವ ಮಧುರವಾಗಿದೆ, ನೀನು ರಚಿಸಿರುವ ಈ ಸಂಯೋಗವು ಅತ್ಯಂತ ಮನೋಹರವಾದುದು, ಇದು ಹೆಚ್ಚಿನ ಅನುಭಾವವಾಯಿತು, ನೀನು ಇನ್ನು ತೆರಳು ಎಂದು ಹೇಳಿ ತನ್ನ ಚಿತ್ತಪಟದಲ್ಲಿ ಅರ್ಜುನನ ಚಿತ್ರವನ್ನು ಬಿಡಿಸಿದಳು.

ಅರ್ಥ:
ರಾಯ: ರಾಜ; ಅಟ್ಟು: ಕಳಿಸು; ನೇಮ: ನಿಯಮ, ಆಜ್ಞೆ; ಗಡ: ಅಲ್ಲವೆ; ಕಮನೀಯ: ಮನೋಹರ, ಸುಂದರ; ನುಡಿ: ಮಾತು; ರಮಣೀಯ: ಸುಂದರವಾದ, ಚೆಲುವಾದ; ರಚನೆ: ನಿರ್ಮಾಣ; ಮಹಾ: ದೊಡ್ಡ, ಶ್ರೇಷ್ಠ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ಹೋಗು: ತೆರಳು; ಅಬುಜಾಯತಾಕ್ಷಿ: ಕಮಲದಂತ ಕಣ್ಣಿರುವ; ಅಕ್ಷಿ: ಕಣ್ಣು; ಅಬುಜ: ಕಮಲ; ಆಯತ: ಅಗಲ; ಮಹೋತ್ಸವ: ಸಮಾರಂಭ; ನಾರಾಯಣ: ವಿಷ್ಣು; ಮೈದುನ: ತಂಗಿಯ ಗಂಡ; ಬರೆ: ಲಿಖಿಸು; ಚಿತ್ತ: ಮನಸ್ಸು; ಭಿತ್ತಿ: ಮುರಿ, ಸೀಳು;

ಪದವಿಂಗಡಣೆ:
ರಾಯನ್+ಅಟ್ಟಿದ +ನೇಮ+ಗಡ +ಕಮ
ನೀಯವಲ್ಲಾ +ನಿನ್ನ +ನುಡಿ +ರಮ
ಣೀಯತರವಿದು +ನಿನ್ನ +ರಚನೆ +ಮಹಾನುಭಾವನಲೆ
ಆಯಿತಿದು+ ನೀ ಹೋಗ್+ಎನುತಲ್ +ಅಬುಜ
ಆಯತಾಕ್ಷಿ+ ಮಹೋತ್ಸವದಿ+ ನಾ
ರಾಯಣನ +ಮೈದುನನ+ ಬರೆದಳು +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ಅರ್ಜುನನನ್ನು ನಾರಾಯಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನಿಗೆ ಮನಸ್ಸನ್ನು ನೀಡಿದಳು ಎಂದು ಹೇಳುವ ಪರಿ – ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ
(೩) ರಮಣೀಯ, ಕಮನೀಯ – ಪ್ರಾಸ ಪದಗಳು

ಪದ್ಯ ೪೭: ಅರ್ಜುನನ ಸಮುದ್ರತೀರಕ್ಕೆ ಹೋಗುವಾಗ ದಾಳಿ ಹೇಗಿತ್ತು?

ಅಲ್ಲಿ ಸಾಗರ ತೀರ ಪರಿಯಂ
ತೆಲ್ಲಿಗಜಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಸಿ ತೆರಳಿಚಿದನು ಮಹಾಧನವ (ಸಭಾ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕೇತುಮಾಲದ ಕಾಡುಗಳನ್ನು ಬಿಟ್ಟು ಸಮುದ್ರತೀರದವರೆಗೆ ಅಕ್ಕ ಪಕ್ಕ, ಗುಹೆ,ಮೂಲೆ ಅಲ್ಲಿಂದ ಮುಂದಕ್ಕೆ ಚಾಚಿದ ಎಲ್ಲಾ ಪ್ರದೇಶಗಳಲ್ಲಿ ಗಜ, ಕುದುರೆ, ಮಣಿಗಣ, ಧನಗಳು ಎಲ್ಲೆಲ್ಲಿವೆಯೋ ಅಲ್ಲಿಗೆ ಹೊಕ್ಕು ಹುಡುಕಿ ಬಾಚಿದನು.

ಅರ್ಥ:
ಸಾಗರ: ಸಮುದ್ರ; ತೀರ: ದಡ; ಪರಿಯಂತ: ತನಕ, ವರೆಗೆ; ಗಜ: ಆನೆ; ಹಯ: ಕುದುರೆ; ಸುದತಿ: ಸ್ತ್ರೀ; ಮಣಿ: ವೈಢೂರ್ಯ; ಬಹು: ಬಹಳ; ಧನ: ಐಶ್ವರ್ಯ; ರಮಣೀಯ: ಸುಂದರವಾದ; ಸಾಧಿಸಿ: ದೊರಕಿಸಿಕೊಳ್ಳು; ಕುಹರ: ಗುಹೆ, ಗವಿ; ಕೋಣೆ:ಕೊಠಡಿ; ಬಾಗು: ಮೂಲೆ, ಸಂದುಗೊಂದು; ಹೊಕ್ಕು:ಸೇರು; ತೆರಳು: ಹೋಗು; ತೆರಳಿಚು: ಹಿಂದಿರುಗಿಸು;

ಪದವಿಂಗಡಣೆ:
ಅಲ್ಲಿ +ಸಾಗರ +ತೀರ +ಪರಿಯಂತ್
ಎಲ್ಲಿ+ಗಜ+ಹಯವೆಲ್ಲಿ+ ಸುದತಿಯರ್
ಎಲ್ಲಿ +ಮಣಿಗಣವೆಲ್ಲಿ+ ಬಹುಧನವೆಲ್ಲಿ+ರಮಣೀಯ
ಅಲ್ಲಿಗಲ್ಲಿಗೆ +ನಡೆದು +ಸಾಧಿಸಿ
ಕೆಲ್ಲೆ +ಕುಹರದ +ಕೋಣೆ +ಬಾಗುಗಳ್
ಎಲ್ಲವನು +ಹೊಕ್ಕರಸಿ+ ತೆರಳಿಚಿದನು +ಮಹಾಧನವ

ಅಚ್ಚರಿ:
(೧) ಎಲ್ಲಿ – ೨,೩; ಅಲ್ಲಿ: ೧,೪ ಸಾಲಿನ ಮೊದಲ ಪದ
(೨) ಅರ್ಜುನನನ್ನು ರಮಣೀಯ ಎಂದು ಕರೆದಿರುವುದು