ಪದ್ಯ ೩೪: ಯಾವುದು ಇಹಪರಲೋಕಕೆ ಸಾಧನ?

ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತೆ ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಪಾಂಡವರನ್ನು ಉಚಿತವಾಗಿ ಸತ್ಕರಿಸು, ನಿನ್ನ ಮಕ್ಕಳ ದುರಾಶೆ, ದುರ್ವರ್ತೆನೆಗಳನ್ನು ಅವರು ನೆನಪಿಡುವವರಲ್ಲ. ಅವರು ಐವರೂ ಉತ್ತಮರು. ಅವರಿಗೆ ಕೇಡನ್ನು ಬಯಸಬೇಡ. ದುಷ್ಟರು ಮಾಡಿದ ದುಷ್ಕೃತಕ್ಕೆ ತಕ್ಕ ಫಲವಾಯಿತು. ಇಹಕ್ಕೂ ಪರಲೋಕಕ್ಕೂ ಧರ್ಮದ ಮಾರ್ಗದಿ ನಡೆವುದೇ ಸಾಧನ ಎಂದು ವ್ಯಾಸರು ನುಡಿದರು.

ಅರ್ಥ:
ನೃಪ: ರಾಜ; ಕಾಣಿಸು: ತೋರು; ಅನಿಬರ: ಅಷ್ಟುಜನ; ಉಪಚರಿಸು: ಸಲಹು, ಸತ್ಕರಿಸು; ಮಕ್ಕಳು: ಪುತ್ರರು; ಕೃಪಣ: ದೈನ್ಯದಿಂದ ಕೂಡಿದುದು, ದುಷ್ಟ; ಅರಿ: ತಿಳಿ; ಉತ್ತಮ: ಶ್ರೇಷ್ಠ; ಉಪಹತಿ: ಹೊಡೆತ, ತೊಂದರೆ; ನೆನೆ: ಜ್ಞಾಪಿಸು; ದುರ್ಜನ: ದುಷ್ಟ; ಅಪಕೃತಿ: ಅಪಕಾರ; ಫಲ: ಪ್ರಯೋಜನ; ಧರ್ಮ: ಧಾರಣೆ ಮಾಡಿದುದು; ರಪಣ: ಆಸ್ತಿ, ಐಶ್ವರ್ಯ; ಇಹಪರ: ಈ ಲೋಕ ಮತ್ತು ಪರಲೋಕ; ಕೇಳು: ಆಲಿಸು;

ಪದವಿಂಗಡಣೆ:
ನೃಪನ+ ಕಾಣಿಸಿಕೊಂಬುದ್+ಅನಿಬರನ್
ಉಪಚರಿಸುವುದು +ನಿನ್ನ+ ಮಕ್ಕಳ
ಕೃಪಣತೆಯನ್+ಆರೈವರಲ್+ಅವರ್+ಐವರ್+ಉತ್ತಮರು
ಉಪಹತಿಯ +ನೆನೆಯದಿರು+ ದುರ್ಜನರ್
ಅಪಕೃತಿಗೆ+ ಫಲವಾಯ್ತೆ+ ಧರ್ಮವೆ
ರಪಣವ್+ಇಹ+ಪರಲೋಕಕ್+ಎಲೆ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ನೀತಿ ನುಡಿ – ಧರ್ಮವೆ ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ
(೨) ಒಂದೇ ಪದವಾಗಿ ರಚನೆ – ಕೃಪಣತೆಯನಾರೈವರಲ್ಲವರೈವರುತ್ತಮರು

ಪದ್ಯ ೩೦: ಭೀಮನ ಪೌರುಷದ ನುಡಿಗಳು ಹೇಗಿದ್ದವು?

ಸಾಯಲಾರದೆ ಸುಭಟವರ್ಗವ
ಕಾಯಲಿರಿಸಿದೆ ಭಟರ ತಲೆಗಳು
ಬೀಯವಾದವು ಮತ್ತೆ ರಪಣವ ತೋರಿನಾ ರಣಕೆ
ರಾಯ ರಂಗವನೆತ್ತ ಬಲ್ಲೆ ನಿ
ಜಾಯುಧವ ಹಿಡಿ ನಿನ್ನ ಬಿರುದಿನ
ಬಾಯಲೆರೆವುದು ಮಧುವನೆನುತುರವಣಿಸಿದನು ಭೀಮ (ಅರಣ್ಯ ಪರ್ವ, ೨೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಾಯುವುದಕ್ಕೆ ಹೆದರಿ, ಯೋಧರನ್ನು ನನ್ನ ಮುಂದೆ ನಿಲ್ಲಿಸಿ ಓಡಿಹೋದೆ, ಅವರೆಲ್ಲರೂ ಈಗ ಸತ್ತಿದಾರೆ, ಈಗ ಯುದ್ಧವನ್ನು ಯಾರ ಮೇಲೆ ಮಾಡಲಿ ಎಂದು ಹೇಳು, ರಾಜರನ್ನು ಪರಾಭವಿಸುವ ನಿನ್ನ ಆಯುಧವನ್ನು ಹಿಡಿ, ಬಿರುದುಗಳಿಂದ ಹೊಗಳಿಸಿಕೊಳ್ಳುವ ನಿನ್ನ ಬಾಯಿಗೆ ಮದ್ಯವನ್ನೆರೆಯಬೇಕು ಎಂದು ಹೇಳುತ್ತಾ ಭೀಮನು ಮುನ್ನಡೆದನು.

ಅರ್ಥ:
ಸಾವು: ಮರಣ; ಸುಭಟ: ವೀರ, ಪರಾಕ್ರಮಿ; ವರ್ಗ: ಗುಂಪು; ಕಾಯು: ರಕ್ಷಿಸು; ಭಟ: ಸೈನಿಕ; ತಲೆ: ಶಿರ; ಬೀಯ: ಉಣಿಸು, ಆಹಾರ; ಮತ್ತೆ: ಪುನಃ; ರಪಣ:ಸಾಮರ್ಥ್ಯ; ತೋರು: ಪ್ರದರ್ಶಿಸು; ರಣ: ಯುದ್ಧ; ರಾಯ: ಒಡೆಯ, ರಾಜ; ರಂಗ: ಯುದ್ಧಭೂಮಿ; ಬಲ್ಲೆ: ತಿಳಿ; ಆಯುಧ: ಶಸ್ತ್ರ; ಹಿಡಿ: ಗ್ರಹಿಸು; ಬಿರುದು: ಗೌರವ ಸೂಚಕ ಪದ; ಬಾಯಿ: ಮುಖವ ಅವಯವ; ಎರೆ: ಸುರಿ, ಹೊಯ್ಯು; ಮಧು: ಜೇನು, ಹೆಂಡ; ಉರವಣಿಸು: ಉತ್ಸಾಹದಿಂದಿರು, ಆತುರಿಸು;

ಪದವಿಂಗಡಣೆ:
ಸಾಯಲಾರದೆ +ಸುಭಟ+ವರ್ಗವ
ಕಾಯಲಿರಿಸಿದೆ +ಭಟರ+ ತಲೆಗಳು
ಬೀಯವಾದವು+ ಮತ್ತೆ +ರಪಣವ +ತೋರಿನಾ+ ರಣಕೆ
ರಾಯ +ರಂಗವನೆತ್ತ+ ಬಲ್ಲೆ +ನಿ
ಜಾಯುಧವ +ಹಿಡಿ +ನಿನ್ನ +ಬಿರುದಿನ
ಬಾಯಲೆರೆವುದು+ ಮಧುವನ್+ಎನುತ್+ಉರವಣಿಸಿದನು +ಭೀಮ

ಅಚ್ಚರಿ:
(೧) ಸಾಯಲಾರದೆ, ಕಾಯಲಿರಿಸದೆ – ಪ್ರಾಸ ಪದಗಳು

ಪದ್ಯ ೨೮: ಧರ್ಮಜನು ದ್ರೌಪದಿಯನ್ನು ಹೇಗೆ ಉಪಚರಿಸಿದನು?

ಉಪಚರಿಸಿ ರಕ್ಷೋಘ್ನಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು (ಅರಣ್ಯ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮರಾಯನು ದ್ರೌಪದಿಗೆ ಉಪಚಾರ ಮಾಡಿ, ಧೌಮ್ಯರಿಂದ ರಕ್ಷೋಘ್ನ ಸೂಕ್ತದ ಜಪವನ್ನು ಮಾಡಿಸಿ, ದ್ರೌಪದಿಯ ಸುಕ್ಷೇಮಕ್ಕಾಗಿ ಗೋದಾನ, ಭೂದಾನಗಳನ್ನು ಸಂಕಲ್ಪಿಸಿದನು. ಒಂದೆರಡು ಗಳಿಗೆಗಳಲ್ಲಿ ದ್ರೌಪದಿಯು ಆಕೆಯ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಳು, ಜನಮೇಜಯ ಕೇಳು, ಸತ್ಯ ಪರಿಪಾಲನೆಗಾಗಿ ಐಶ್ವರ್ಯವನ್ನು ಕಳೆದುಕೊಂಡ ಪಾಂಡವರರನ್ನು ದ್ರೌಪದಿಯು ಕಣ್ತೆರೆದು ನೋಡಿದಳು.

ಅರ್ಥ:
ಉಪಚರಿಸು: ಆರೈಕೆ ಮಾಡು; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ವಚನ: ಮಾತು, ನುಡಿ; ರಪಣ: ಐಶ್ವರ್ಯ; ರಚಿಸು: ನಿರ್ಮಿಸು; ಧನ: ಐಶ್ವರ್ಯ; ಗೋ: ಗೋವು; ಭೂಮಿ: ಇಳೆ; ದಾನ: ಚತುರೋಪಾಯಗಳಲ್ಲಿ ಒಂದು; ನೃಪತಿ: ರಾಜ; ಕೇಳು: ಆಲಿಸು; ಗಳಿಗೆ: ಸಮಯ; ಉಪಹರಿಸು: ನಿವಾರಿಸು; ಮೂರ್ಛೆ: ಜ್ಞಾನತಪ್ಪಿದ ಸ್ಥಿತಿ; ಸತ್ಯ: ದಿಟ; ವ್ಯಪಗತೈಶ್ವರ್ಯ: ನಾಶವಾದ ಐಶ್ವರ್ಯ; ಕಂಡು: ನೋಡು; ಕಾಂತೆ: ಚೆಲುವೆ; ಕಂದೆರೆ: ಕಣ್ಣನ್ನು ಬಿಟ್ಟು, ಅಗಲಿಸು;

ಪದವಿಂಗಡಣೆ:
ಉಪಚರಿಸಿ +ರಕ್ಷೋಘ್ನ+ಸೂಕ್ತದ
ಜಪವ +ಮಾಡಿಸಿ +ವಚನ +ಮಾತ್ರದ
ರಪಣದಲಿ +ರಚಿಸಿದನು +ಗೋಧನ +ಭೂಮಿ+ದಾನವನು
ನೃಪತಿ + ಕೇಳ್+ ಒಂದೆರಡು +ಗಳಿಗೆಯೊಳ್
ಉಪಹರಿಸಿದುದು +ಮೂರ್ಛೆ +ಸತ್ಯ
ವ್ಯಪಗತ್+ಐಶ್ವರ್ಯರನು+ ಕಂಡಳು +ಕಾಂತೆ +ಕಂದೆರೆದು

ಅಚ್ಚರಿ:
(೧) ದ್ರೌಪದಿಯು ಯಾರನ್ನು ನೋಡಿದಳೆಂದು ಹೇಳುವ ಪರಿ – ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು

ಪದ್ಯ ೭: ಯುಧಿಷ್ಠಿರನು ಎಷ್ಟು ಧನವನ್ನು ಹೂಡಿದನು?

ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು (ಸಭಾ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಶಕುನಿಯು ಗೆದ್ದ ನಂತರ ಯುಧಿಷ್ಠಿರನನ್ನು ನೋಡಿ, ಧರ್ಮಜ ನಿನ್ನ ಕಾಯಿಗಳು ಸೋತವು. ನಿನ್ನನ್ನು ಅನುಸರಿಸಿ ನಿನ್ನ ತಮ್ಮಂದಿರೂ ಕಾಡಿಗೆ ಹೋಗಬೇಕಷ್ಟೆ. ಇನ್ನೂ ಒಡ್ಡುವ ಹಾಗಿದ್ದರೆ ಅದನ್ನು ಹೇಳು ಎಂದು ಶಕುನಿಯು ಕೇಳಲು, ನೂರುಕೋಟಿ (ಪದ್ಮ ಸಂಖ್ಯೆ)ಯ ಧನವನ್ನು ಒಡ್ಡಿದನು.

ಅರ್ಥ:
ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸೋಲು: ಪರಾಭವ; ಸೋಲು: ಅಪಜಯ; ಸಾರಿ: ಸಲ, ಸರತಿ, ಬಾರಿ; ವನ: ಕಾಡು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ ; ನುಡಿ: ಮಾತಾಡು; ಧನ: ಐಶ್ವರ್ಯ; ಭೂರಮಣ: ರಾಜ; ಹೇಳು: ತಿಳಿಸು; ರೇಖೆ: ಗೆರೆ; ಭಾರಿ: ಅತಿಶಯವಾದ, ಅಧಿಕವಾದ; ಪದ್ಮ: ನೂರುಕೋಟಿ; ಸಂಖ್ಯೆ: ಲೆಕ್ಕ; ಭೂರಿ: ದೊಡ್ಡ; ರಪಣ: ಆಸ್ತಿ, ಐಶ್ವರ್ಯ; ನಗುತ: ಮಂದಸ್ಮಿತ; ಸೂನು: ಮಗ;

ಪದವಿಂಗಡಣೆ:
ಸಾರಿ +ಸೋತವು +ಸೋಲು +ನಿನಗನು
ಸಾರಿ +ನೀವೈವರು+ ವನಾಂತಕೆ
ಸಾರಿ +ಸಾಕಿನ್+ಒಡ್ಡಲ್+ಆಪರೆ+ ಮತ್ತೆ +ನುಡಿ +ಧನವ
ಭೂರಮಣ +ಹೇಳೆನಲು +ರೇಖೆಯ
ಭಾರಿ+ಒಡ್ಡಕೆ +ಪದ್ಮ +ಸಂಖ್ಯೆಯ
ಭೂರಿ +ಧನವಿದೆ+ ರಪಣವೆಂದನು+ ನಗುತ +ಯಮಸೂನು

ಅಚ್ಚರಿ:
(೧) ಸಾರಿ – ೧-೩ ಸಾಲಿನ ಮೊದಲ ಪದ
(೨) ಭಾರಮಣ, ಭಾರಿ, ಭೂರಿ – ಪದಗಳ ಬಳಕೆ

ಪದ್ಯ ೩: ಶಕುನಿಯ ವ್ಯಂಗ್ಯ ನುಡಿಗೆ ಧರ್ಮಜನ ಉತ್ತರವೇನು?

ಎಲವೊ ಸೌಬಲ ವಿತ್ತವೀಸರ
ಲಳಿದುದೇ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ (ಸಭಾ ಪರ್ವ, ೧೫ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮನಂದನನು ಶಕುನಿಗೆ ಉತ್ತರಿಸುತ್ತಾ, ಎಲವೋ ಶಕುನಿ ನನ್ನ ಐಶ್ವರ್ಯ ಇಷ್ಟಕ್ಕೆ ತೀರಿತೆಂದು ತಿಳಿದೆಯಾ? ನಮ್ಮ ಅಂತಃಸತ್ವವು ನೀನು ನಕ್ಕ ಮಾತ್ರಕ್ಕೆ ಬರಡಾಗುವುದೇ? ಕಾಯಿ ಹೂಡು, ದಾಳವನ್ನು ಹಾಕು. ಒಂದಾಟಕ್ಕೆ ಒಂದು ಕೋಟಿ ಹಣವನ್ನೊಡ್ಡಿದ್ದೇನೆ ಎಂದು ಕೂಗಿದನು.

ಅರ್ಥ:
ಸೌಬಲ: ಶಕುನಿ; ವಿತ್ತ: ಐಶ್ವರ್ಯ; ಅಳಿ: ನಾಶ; ನಗು: ಸಂತಸ; ಡಿಳ್ಳ: ದಿಗಿಲು, ಭಯ; ರಪಣ: ಜೂಜಿನಲ್ಲಿ ಒಡ್ಡುವ ಪಣ, ಐಶ್ವರ್ಯ; ಬಹಳ: ತುಂಬಾ; ಭಂಡಾರ: ಬೊಕ್ಕಸ, ಖಜಾನೆ; ಸುಳಿಸು: ತಿರುಗಿಸು, ಬೀಸು; ಹಾಸಂಗಿ: ಜೂಜಿನ ದಾಳ; ಮೋಹರ: ಯುದ್ಧ, ಕಾಳಗ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ರೇಖೆ: ಗೆರೆ; ಬಳಿ: ಹತ್ತಿರ; ಧನ: ದುಡ್ಡು, ಐಶ್ವರ್ಯ; ಒದರು: ಹೇಳು; ಭೂಪ: ರಾಜ;

ಪದವಿಂಗಡಣೆ:
ಎಲವೊ +ಸೌಬಲ +ವಿತ್ತವ್+ಈಸರಲ್
ಅಳಿದುದೇ +ನೀ +ನಗುವವೋಲ್+
ನಮ್ಮೊಳಗು+ ಡಿಳ್ಳವೆ +ರಪಣವಿದೆಲಾ +ಬಹಳ+ ಭಂಡಾರ
ಸುಳಿಸು +ಹಾಸಂಗಿಗಳ+ ಮೋಹರ
ಗೊಳಿಸು +ಸಾರಿಯನ್+ಒಂದು +ರೇಖೆಯ
ಬಳಿಯಲ್+ಒಂದೇ +ಕೋಟಿ +ಧನವೆಂದ್+ಒದರಿದನು +ಭೂಪ

ಅಚ್ಚರಿ:
(೧) ಧರ್ಮಜನ ದಿಟ್ಟ ನುಡಿ – ನೀ ನಗುವವೋಲ್ನಮ್ಮೊಳಗು ಡಿಳ್ಳವೆ

ಪದ್ಯ ೨: ಶಕುನಿ ಏಕೆ ಗಹಗಹಿಸಿದನು?

ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ (ಸಭಾ ಪರ್ವ, ೧೫ ಸಂಧಿ, ೨ ಪದ್ಯ)

ತಾತ್ಪರ್ಯ:
ಶಕುನಿಯು ಧರ್ಮರಾಯನ ಸ್ಥಿತಿಯನ್ನು ನೋಡಿ ಹಂಗಿಸುತ್ತಾ, ಎಲೈ ಧರ್ಮನಂದನ ನಿನ್ನ ನಗುಮುಖದ ಸೊಂಪು ಸೀದುಹೋಗಿ ಕಪ್ಪಾಗಿದೆ. ನಿನ್ನ ತಮ್ಮಂದಿರಿಗೆ ಬಂದಿರುವ ರೋಷಾಗ್ನಿಯ ಹೆಚ್ಚಳವೂ ಕಡಿಮೆಯಾಗಿಲ್ಲ. ಆದರೆ ಸಹಾಯವಿಲ್ಲದೆ ಭಯವು ಹೋಗುವುದಿಲ್ಲ. ನಿನಗಾದರೋ ಕ್ಷತ್ರಿಯಧರ್ಮದ ಸಂಗವು ಬಿಡುವುದಿಲ್ಲ. ಆದ್ದರಿಂದ ಈ ಪಗಡೆಕಾಯಿಯನ್ನು ತೆಗೆದಿಡಲೇ? ಎಂದು ಶಕುನಿಯು ವ್ಯಂಗವಾಗಿ ಧರ್ಮಜನನ್ನು ಕೇಳಿದನು.

ಅರ್ಥ:
ತೆಗೆ: ಈಚೆಗೆ ತರು, ಹೊರತರು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಗೆಮೊಗ: ಸಂತಸ; ಸಿರಿ: ಐಶ್ವರ್ಯ; ಸೀದು: ಸುಟ್ಟು ಕರಕಲಾಗು; ಕರಿ: ಕಪ್ಪು; ಉಗುಳು: ಹೊರಹಾಕು; ಅನುಜ: ಸಹೋದರ; ಇಂಗಿತ: ಆಶಯ, ಅಭಿಪ್ರಾಯ; ರೋಷ: ಕೋಪ; ಪಾವಕ: ಅಗ್ನಿ, ಬೆಂಕಿ; ಸೊಗಸು: ಚೆಲುವು; ಬೀಯ: ವ್ಯಯ, ಹಾಳು, ನಷ್ಟ; ರಪಣ: ಜೂಜಿನಲ್ಲಿ ಒಡ್ಡುವ ಪಣ, ಐಶ್ವರ್ಯ; ಬೆಗಡು:ಭಯ, ಅಂಜಿಕೆ, ಬೆರಗಾಗು; ನೋವು: ಬೇನೆ, ಶೂಲೆ; ಕ್ಷತ್ರ: ರಾಜ; ಧರ್ಮ: ಧಾರಣ ಮಾಡಿದುದು, ನಿಯಮ; ತಗಹು: ಅಡ್ಡಿ, ತಡೆ, ನಿರ್ಬಂಧ; ಸಾಯದು: ಮಡಿಯದು; ಗಹಗಹಿಸು: ಗಟ್ಟಿಯಾಗಿ ನಗು;

ಪದವಿಂಗಡಣೆ:
ತೆಗೆವೆನೇ+ ಸಾರಿಗಳ +ನಿನ್ನೀ
ನಗೆಮೊಗದ+ ಸಿರಿ+ ಸೀದು +ಕರಿಯಾಯ್ತ್
ಉಗುಳುತಿದೆ+ ನಿನ್+ಅನುಜರ್+ಇಂಗಿತ +ರೋಷ+ಪಾವಕನ
ಸೊಗಸು +ಬೀಯದು +ರಪಣವಿಲ್ಲದ
ಬೆಗಡು+ ನೋಯದು +ಕ್ಷತ್ರಧರ್ಮದ
ತಗಹು +ಸಾಯದು +ನಿನಗೆನುತ+ ಗಹಗಹಿಸಿದನು +ಶಕುನಿ

ಅಚ್ಚರಿ:
(೧) ಧರ್ಮಜನ ಮುಖವನ್ನು ಹೋಲಿಸುವ ಪರಿ – ನಿನ್ನೀ ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ
(೨) ಅನುಜರ ಕೋಪವನ್ನು ಹೇಳುವ ಪರಿ – ನಿನ್ನನುಜರಿಂಗಿತ ರೋಷಪಾವಕನ ಸೊಗಸು ಬೀಯದು

ಪದ್ಯ ೧೪: ಕುಂತಿ ಹೇಗೆ ವಿಪ್ರನಲ್ಲಿ ಧೈರ್ಯವನ್ನು ತುಂಬಿದಳು?

ಐಸಲೇ ನಿಮಗಾದ ಗಸಣಿಯಿ
ದೇಸರಾಪತ್ತಂಜಬೇಡ ಮ
ಹಾಸುರನ ಬಾಣಸದ ಬೀಯಕೆ ರಪಣವುಂಟೆಮಗೆ
ಏಸು ಕಂಡುಗದಕ್ಕಿಯೋಗರ
ವೈಸ ನೀನಳವಡಿಸು ಮೇಲುಂ
ಟೇಸು ಸಾಧನವನಿತುವನು ಸವೆಸೆಂದಳಾ ಕುಂತಿ (ಆದಿ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬ್ರಾಹ್ಮಣನು ಹೇಳಿದ ವ್ಯಥೆಯ ಕಥೆಗೆ ಕುಂತಿಯು ನಸುನಕ್ಕು, ಅಯ್ಯೋ ಇಷ್ಟೆನ, ನಿಮಗಾದ ಕಷ್ಟ ಯಾವಮಹ, ಆ ಮಹಾಸುರನಿಗೆ ಕೊಡಬೇಕಾದ ಕೂಳಿನ ವೆಚ್ಚವನ್ನು ಭರಿಸಲು ನನಗೆ ಔಷದಗೊತ್ತಿದೆ. ಎಷ್ಟು ಖಂಡುಗದ ಅನ್ನ ಮಾಡಿಸಬೇಕೊ ಮಾಡಿಸು, ಅದಕ್ಕೆ ಸಾಧನಗಳನ್ನು ಅಳವಡಿಸು.

ಅರ್ಥ:
ಐಸಲೆ:ಅಷ್ಟೆ, ಅಲ್ಲವೆ; ಗಸಣಿ: ತೊಂದರೆ, ಕೋಟಲೆ; ಏಸು: ಎಷ್ಟು; ಆಪತ್ತು: ತೊಂದರೆ; ಅಂಜು: ಭಯ; ಮಹಾಸುರ: ಅಸುರ, ರಾಕ್ಷಸ; ಬಾಣಸು: ಅಡುಗೆ, ಪಾಕ; ಬೀಯ: ಆಹಾರ, ತೌಡನ್ನು ತೆಗೆದ ಅಕ್ಕಿ; ರಪಣ: ರಕ್ಷಿಸುವ ಸಾಧನ; ಕಂಡು: ತುರಿಕೆ; ಓಗರ: ಅನ್ನ, ಪಕ್ವವಾದದ್ದು; ಅಳವಡಿಸು: ಹೊಂದಿಸು; ಸಾಧನ: ಸಾಮಗ್ರಿ, ಸಲಕರಣೆ; ಸವೆ: ಕಟ್ಟು, ನಿರ್ಮಿಸು;

ಪದವಿಂಗಡನೆ:
ಐಸಲೇ +ನಿಮಗಾದ +ಗಸಣಿಯಿದ್
ಏಸರ್+ಆಪತ್ತ್+ಅಂಜಬೇಡ+ ಮ
ಹಾಸುರನ+ ಬಾಣಸದ+ ಬೀಯಕೆ+ ರಪಣ+ವುಂಟ್+ಎಮಗೆ
ಏಸು+ ಕಂಡುಗದ್+ಅಕ್ಕಿ+ಯೋಗರವ್
ಐಸ+ ನೀನ್+ಅಳವಡಿಸು +ಮೇಲುಂಟ್
ಏಸು+ ಸಾಧನವನ್+ಇತುವನು +ಸವೆಸ್+ಎಂದಳಾ +ಕುಂತಿ

ಅಚ್ಚರಿ:
(೧) ಐಸ, ಏಸು – ಪದಗಳಿಂದ ೫ ಸಾಲುಗಳ ಪ್ರಾರಂಭ
(೨) ಸಾಧನವ ಸವೆಸು, ಬಾಣಸದ ಬೀಯಕೆ – ಸ, ಬ ಕಾರದ ಜೋಡಿ ಪದಗಳು